ಹಠಕ್ಕೆ ಬಿದ್ದು ಸರ್ಕಾರಿ ಕಾಲೇಜು ಸೇರಿದ ಈಕೆ ನಮಗೆ ಮಾದರಿ ಆಗಬಾರದೇಕೆ?

ಇನ್ನೇನು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳುತ್ತಿವೆ. ಮೊನ್ನೆ ತಾನೆ ಹತ್ತನೇ ತರಗತಿ ಫಲಿತಾಂಶವು ಹೊರಬಿದ್ದಿದೆ. ಮಕ್ಕಳ ಮನಸು ಈಗ ಗೊಂದಲದ ಗೂಡು. ಹೌದು, ಹತ್ತನೇ ತರಗತಿಯ ನಂತರ ಯಾವ ಕಾಲೇಜು, ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಮಕ್ಕಳು ಒಂದಿಷ್ಟು ಪೇಚಾಡುವುದು ಸರ್ವೇ ಸಾಮಾನ್ಯ. ಮಕ್ಕಳ ಮನಸ್ಥಿತಿ ಹಾಗೂ ವಿದ್ಯಾಭ್ಯಾಸದ ಗುಣಮಟ್ಟವನ್ನು ಆಧರಿಸಿ ಅವರಿಗೆ ಆಸಕ್ತಿ ಇರುವ ಮತ್ತು ಅನುಕೂಲವಾಗುವ ತರಬೇತಿಗಳನ್ನು ಕೊಡಿಸುವಲ್ಲಿ ಪೋಷಕರು ಗಮನ ಹರಿಸಬೇಕು. ಹಾಗೆಯೇ ಮಕ್ಕಳು ಕೂಡ ತಮ್ಮ ತಮ್ಮ ಸ್ನೇಹಿತರು ದೊಡ್ಡ ದೊಡ್ಡ ಶಾಲಾ ಕಾಲೇಜುಗಳಿಗೆ ಅಡ್ಮಿಷನ್ ಆಗುತ್ತಿದ್ದಾರೆ ಎಂದು ಪೋಷಕರ ಮೇಲೆ ಒತ್ತಡ ಹೇರಬಾರದು. ಮಕ್ಕಳು ಒಂದು ವಿಷಯವನ್ನು ಸರಿಯಾಗಿ ತಿಳಿಯಬೇಕು,ಅದೇನೆಂದರೆ ತಾನು ಓದಲಿರುವ ಶಾಲೆ ಅಥವಾ ಕಾಲೇಜಿನ ಗುಣಮಟ್ಟವನ್ನು ಲೆಕ್ಕಿಸದೆ, ತನ್ನ ವಿಧ್ಯಭ್ಯಾಸದ ಗುಣಮಟ್ಟ ಹೇಗಿದೆ, ಮತ್ತು ಅದಕ್ಕಾಗಿ ತಾನು ಮಾಡಬೇಕಿರುವ ಕೆಲಸವೇನು? ಎನ್ನುವುದು.

ಇದು ಹಠಕ್ಕೆ ಬಿದ್ದು ದ್ವಿತೀಯ ಪಿಯುಸಿ ಯಲ್ಲಿ ಸರ್ಕಾರಿ ಕಾಲೇಜಿಗೆ ಸೇರಿ ಶೇ.91% ಅಂಕ ಗಳಿಸಿದ ಕೆಳ ಮಧ್ಯಮ ವರ್ಗದವ ವಿದ್ಯಾರ್ಥಿನಿಯ ಯಶೋಗಾಥೆ.
ಹೌದು,ಯಾರೋ ಬೆರಳೆಣಿಕೆ ಸಂಖ್ಯೆಯ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದನ್ನೇ ಬಂಡವಾಳ ಮಾಡಿಕೊಂಡು ತಮ್ಮದೇ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಮುಗಿಬೀಳುವ ಖಾಸಗಿ ಕಾಲೇಜುಗಳ ಜಾಹೀರಾತಿಗೆ ಮರುಳಾಗಿ ಲಕ್ಷ ಲಕ್ಷ ರೂಪಾಯಿ ಶುಲ್ಕ ಹಾಗೂ ದೇಣಿಗೆ ಕೊಟ್ಟು ತಮ್ಮ ಮಕ್ಕಳನ್ನು ಈ ಶಾಲೆಗಳಿಗೆ ಸೇರಿಸಲು ಹಾತೊರಿಯುವ ಪೋಷಕರು ಮತ್ತು ಇಂಥ ಕಾಲೇಜುಗಳಲ್ಲಿ ಓದುವುದೇ ಒಂದು ಪ್ರತಿಷ್ಠೆ ಎಂದು ಭಾವಿಸಿರುವ ವಿದ್ಯಾರ್ಥಿಗಳು ಈ ಲೇಖನವನ್ನು ಪೂರ್ಣವಾಗಿ ಒದಲೇ ಬೇಕು.
ನಮ್ಮ ಈ ಬರಹದ ನಾಯಕಿ ಪ್ರೌಢ ಶಿಕ್ಷಣವನ್ನು ದಾವಣಗೆರೆ ಯ ಸೋಮೇಶ್ವರ ವಿದ್ಯಾಲಯದಲ್ಲಿ ಪಡೆದು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಯನ್ನು ಮೋತಿವೀರಪ್ಪ ಸರ್ಕಾರೀ ಕಾಲೇಜಿನಲ್ಲಿ ಮಗಿಸಿದ ಪೂಜಾ.
ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಮೇಶ್ವರ ಶಾಲೆಯ ವಿದ್ಯಾರ್ಥಿನಿ ಪೂಜಾಳನ್ನು ಮಾದರಿಯಾಗಿಟ್ಟುಕೊಳ್ಳಬಹುದು. ಕಳೆದ ಎರಡು ವರ್ಷಗಳ ಹಿಂದೆ ಪೂಜಾ ಸೋಮೇಶ್ವರ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ 93% ಪರ್ಸೆಂಟ್ ಅಂಕಗಳನ್ನು ಪಡೆದು ತೇರ್ಗಡೆಯಾದರು .ಪುಷ್ಪಲತಾ ಹಾಗೂ ನಾಗೇಶ್ ದಂಪತಿಗಳ ಹಿರಿಯ ಮಗಳಾದ ಪೂಜಾ ತಂದೆ ತಾಯಿ ಖಾಸಗಿ ಕಾಲೇಜುಗಳಿಗೆ ಸೇರಲು ಅನುಮತಿ ನೀಡಿದರೂ ಸಹ, ಅದನ್ನು ನಿರಾಕರಿಸಿ ಸರ್ಕಾರಿ ( ಮೋತಿ ವೀರಪ್ಪ) ಕಾಲೇಜಿಗೆ ಪ್ರವೇಶ ಪಡೆದರು .ಅತ್ಯಂತ ಕಠಿಣ ಶ್ರಮ ಮತ್ತು ಶ್ರದ್ಧೆಯಿಂದ ದ್ವಿತೀಯ ಪಿಯುಸಿಯಲ್ಲಿ 91% ಪರ್ಸೆಂಟೇಜ್ ಅಂಕ ಗಳಿಸಿ ಹೆತ್ತವರಿಗೆ ಮತ್ತು ತಾನು ಓದುತ್ತಿರುವ ಕಾಲೇಜಿಗೆ ಹಾಗೂ ಶಿಕ್ಷಕ ವೃಂದದವರಿಗೆ ಹೆಮ್ಮೆ ತಂದುಕೊಟ್ಟಿದ್ದಾರೆ. ಸರ್ಕಾರಿ ಕಾಲೇಜಿನಲ್ಲಿಯೇ ಓದಿ, ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿ ಇಂದಿನ ಮಕ್ಕಳಿಗೆ ಮಾದರಿಯಾಗಿದ್ದಾರೆ. ತಂದೆ ತಾಯಿ ಇಬ್ಬರೂ ಜ್ಯೋತಿ ಗ್ಯಾಸ್ ಏಜೆನ್ಸಿಯಲ್ಲಿ ಕೂಲಿ ಕಾರ್ಮಿಕರು. ತಮ್ಮ ವಿನಯ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಮನೆಯ ಸ್ಥಿತಿಗತಿಯನ್ನು ತುಂಬಾ ಸೂಕ್ಷ್ಮವಾಗಿ ಅರಿತುಕೊಂಡ ಪೂಜಾ ತನಗೆ ಐಷಾರಾಮಿ ಕಾಲೇಜಿನಲ್ಲಿ ಓದುವ ಆಸೆ ಇಲ್ಲ,ಬದಲಾಗಿ ಸರ್ಕಾರಿ ಕಾಲೇಜಿನಲ್ಲಿಯೇ ಓದಿ ಹೆಚ್ಚು ಅಂಕಗಳೊಂದಿಗೆ ತೇರ್ಗಡೆಯಾಗಿ ನನ್ನ ಕನಸುಗಳನ್ನು ನನಸಾಗಿಸುತ್ತೇನೆಂಬ ಆತ್ಮವಿಶ್ವಾಸವನ್ನು ದೃಢಪಡಿಸಿದ್ದರು .

ಇಂದು ಆ ಕನಸು ನನಸಾಗಿಸಿ ಹೆಮ್ಮೆಯ ಪ್ರತೀಕವಾಗಿದ್ದಾರೆ. ಮುಂದೆ ಏರೋನಾಟಿಕ್ಸ್ ಇನ್ ಎಂಜಿನೀಯರಿಂಗ್ ಓದಲು ಆಸಕ್ತಿ ಇರುವುದಾಗಿ ತಂದೆ ತಾಯಂದಿರಲ್ಲಿ ವ್ಯಕ್ತಪಡಿಸಿದ್ದಾರೆ. ಪೋಷಕರು ಆಕೆಯ ಇಚ್ಛೆಗೆ ಸಂಪೂರ್ಣ ವಾಗಿ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಪೂಜಾಳ ವಿದ್ಯಾಭಾಸ ಹೀಗೆ ಉನ್ನತ ಮಟ್ಟದಲ್ಲಿ ಸಾಗಲಿ, ಆಕೆಯ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾರ್ಥಿಸೋಣ. ಇಂದಿನ ಎಲ್ಲಾ ಮಕ್ಕಳು ಪೂಜಾಳ ದಿಟ್ಟ ನಿರ್ಧಾರವನ್ನು ವಿದ್ಯಾಭ್ಯಾಸದೆಡೆಗಿನ ಹಸಿವನ್ನು ಗಮನದಲ್ಲಿಟ್ಟುಕೊಂಡು ತಾವು ಕೂಡ ಆಕೆಯಂತೆ ಮಾದರಿ ಮಕ್ಕಳಾಗಲು ಪ್ರಯತ್ನಿಸಬೇಕು .ಪೋಷಕರು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರದೇ ಅವರವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸುವಲ್ಲಿ ಜಾಗರೂಕತೆಯನ್ನು ವಹಿಸಬೇಕು. ಪುಷ್ಪಲತಾ ನಾಗೇಶ್ ದಂಪತಿಗಳು ಕಾರ್ಮಿಕರಾಗಿದ್ದರು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಅವರಿಗೆ ಮತ್ತು ಮಾದರಿ ವಿದ್ಯಾರ್ಥಿನಿ ಪೂಜಾಳಿಗೆ ನನ್ನ ಅಭಿನಂದನೆಗಳು .

ಜನಮಿಡಿತಕ್ಕಾಗಿ
ಶ್ರೀಮತಿ- ಸುನಿತಾಪ್ರಕಾಶ್
ದಾವಣಗೆರೆ

Leave a Reply

Your email address will not be published. Required fields are marked *