ರಾಷ್ಟ್ರಪತಿ ಅವರನ್ನು ದೇಶದ ಜನತೆ ನೇರವಾಗಿ ಆಯ್ಕೆ ಮಾಡುವ ವ್ಯವಸ್ಥೆ ಜಾರಿಗೆ ಬರಬಾರದೇಕೆ?
ರಾಷ್ಟ್ರದ ಪ್ರಪ್ರಥಮ ಪ್ರಜೆಯನ್ನು ರಾಷ್ಟ್ರದ ಜನತೆ ನೇರವಾಗಿ ಚುನಾಯಿಸುವ ವ್ಯವಸ್ಥೆ ಜಾರಿಗೆ ಬಂದರೆ ಹೇಗೆ….? ಹೀಗೊಂದು ಚಿಂತನೆ ಮಾಡಿ ನೋಡಿ.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರ ಹುದ್ದೆಗಳು , ಎಷ್ಟೋ ಸಂದರ್ಭಗಳಲ್ಲಿ ಉಪರಾಷ್ಟ್ರಪತಿ ಹಾಗೂ ಉಪರಾಜ್ಯಪಾಲರ ಹುದ್ದೆಗಳು ಸಂವಿಧಾನಾತ್ಮಕವಾಗಿ ಇವೆಯೇ ಹೊರತು ನಿಜಕ್ಕೂ ಪರಿಣಾಮಕಾರಿ ಆಡಳಿತ ವ್ಯವಸ್ಥೆಗೆ ಸಹಕಾರಿಯಾಗುವಂತಹ ಅಧಿಕಾರ ಅವರುಗಳಿಗೆ ಇಲ್ಲ ಎಂಬುದನ್ನು ಒಪ್ಪಲೇಬೇಕು. ನಮ್ಮಲ್ಲಿ ಮೇಲ್ಕಾಣಿಸಿದ ಹುದ್ದೆಗಳಿಗೆ ಸಮರ್ಥರು ಇರುವರಾದರೂ ರಾಜಕೀಯವಾಗಿ ಇವರುಗಳನ್ನು ಇಂತಹ ಸ್ಥಾನಗಳಿಗೆ ತರಲು ಜನಪ್ರತಿನಿಧಿಗಳು ಒಪ್ಪುವುದಿಲ್ಲ. ದಾವಣಗೆರೆಯಂತಹ ನಗರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಅಲೋಕ್ ಕುಮಾರ್,ಲಾಭೂರಾಂ, ಸಂದೀಪ್ ಪಾಟೀಲ್ ಅವರಂತಹ ದಕ್ಷ ಅಧಿಕಾರಿಗಳನ್ನೇ ಬಹುಕಾಲ ಇಟ್ಟುಕೊಳ್ಳಲು ಜನಪ್ರತಿನಿಧಿಗಳು ಸಿದ್ಧರಿರಲಿಲ್ಲ. ಅಂಥದ್ದರಲ್ಲಿ ದಕ್ಷ ಹಾಗೂ ಸಮರ್ಥ ವ್ಯಕ್ತಿಗಳನ್ನು ಉನ್ನತ ಹುದ್ದೆಗಳಲ್ಲಿ ಇವರು ಕೂರಿಸುವರೇ?
ನೆನಪಿರಬಹುದು, ರಾಷ್ಟ್ರಪತಿ ಚುನಾವಣೆಗೆ ಅಂದು ಟಿ.ಎನ್. ಶೇಷನ್ ಸ್ಪರ್ಧಿಸಿದ್ದರು. ಆದರೆ ಠೇವಣಿ ಕಳೆದುಕೊಂಡರು. ಏಕೆಂದರೆ ರಾಷ್ಟ್ರಪತಿಯವರನ್ನು ಆಯ್ಕೆ ಮಾಡಿದ್ದು ರಾಷ್ಟ್ರದ ಜನತೆಯಲ್ಲ ಅಲ್ಲವೇ? ಒಂದು ವೇಳೆ ರಾಷ್ಟ್ರದ ಜನತೆಯೇ ಮತ ಚಲಾಯಿಸಿ ಆಯ್ಕೆ ಮಾಡುವ ವ್ಯವಸ್ಥೆ ಇದ್ದಿದ್ದರೆ ಅಂದು ಟಿ.ಎನ್. ಶೇಷನ್ ವಿರುದ್ಧ ಸ್ಪರ್ಧಿಸಿ ಜಯಗಳಿಸಿದ ಅಭ್ಯರ್ಥಿಗೆ ಠೇವಣಿ ಸಿಗುತ್ತಿರಲಿಲ್ಲ ಅಲ್ಲವೇ?
ನ್ಯಾ. ಸಂತೋಷ್ ಹೆಗ್ಡೆ, ನ್ಯಾ. ವೆಂಕಟಾ ಚಲಯ್ಯ, ಕಿರಣ್ಬೇಡಿ, ನ್ಯಾ. ಸಲ್ಡಾನ ಅಥವಾ ನಿವೃತ್ತ ದಕ್ಷ ಜನರಲ್, ಏರ್ಚೀಫ್ ಮಾರ್ಷಲ್ ಅಥವಾ ಅಡ್ಮಿರಲ್ಗಳನ್ನಾಗಲೀ ರಾಷ್ಟ್ರಪತಿ, ಉಪರಾಷ್ಟ್ರಪತಿ ಅಥವಾರಾಜ್ಯಪಾಲರ ಹುದ್ದೆಗೆ ಇಂಥವರುಗಳನ್ನು ನೇಮಿಸಲು ಮುಂದಾಗಬಾರದೇಕೆ?
ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆಹಾಗೂ ಇದೊಂದು ಸುಂದರ ಆಡಳಿತ ವ್ಯವಸ್ಥೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅಮೇರಿಕದಲ್ಲಿ ಕಟ್ಟಿಗೆ ಒಡೆಯುವ ಕುಟುಂಬದ ಅಬ್ರಹಾಂ ಲಿಂಕನ್ ಅಧ್ಯಕ್ಷರಾಗಿದ್ದರು. ಟೀ ಮಾರುತ್ತಿದ್ದ ನರೇಂದ್ರ ಮೋದಿ ಭಾರತದ ಪ್ರಧಾನಿಯಾದರು. ಆದರೆ ತಳಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ಥಿತಿ ಸುಧಾರಿಸಲೇ ಬೇಕಿದೆ.
ಸಾವಿರ ಜನ ಮತದಾರರಿದ್ದಾರೆ ಎಂದಿಟ್ಟುಕೊಳ್ಳಿ. ಹತ್ತು ಅಭ್ಯರ್ಥಿಗಳ ಪೈಕಿ ಒಬ್ಬರಿಗೆ 150, ಮತ್ತಿಬ್ಬರಿಗೆ ತಲಾ 125, ಉಳಿದವರಿಗೆ 100ರಷ್ಟು ಮತ್ತೆ ಕೆಲವರಿಗೆ ಇದಕ್ಕೂ ಕಡಿಮೆ ಮತಗಳು ಲಭಿಸುತ್ತವೆ. ಆಗ 150ಮತ ಪಡೆದ ವ್ಯಕ್ತಿ ಆಯ್ಕೆಯಾಗುತ್ತಾರೆ. ಇದರರ್ಥ ಪರೋಕ್ಷವಾಗಿ ಉಳಿದ 850 ಮಂದಿಯ ಅಭಿಪ್ರಾಯ ಇವರ ವಿರುದ್ಧ ಎಂದಲ್ಲವೇ? ಕಡೇಪಕ್ಷ ಚಲಾಯಿಸಲ್ಪಟ್ಟ ಮತಗಳಲ್ಲಿ ಶೇ.50ರಷ್ಟನ್ನಾದರೂ ಪಡೆಯುವ ಅಭ್ಯರ್ಥಿ ಮಾತ್ರ ಜಯಗಳಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಆಗಷ್ಟೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಿಜವಾದ ಅರ್ಥ ಇರುತ್ತದೆ.
ಡಾ. ಶಿವರಾಂ ಕಾರಂತ್ ಅವರ ವ್ಯಕ್ತಿತ್ವದ ಬಗ್ಗೆ, ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ. ಅನೇಕ ವರ್ಷಗಳ ಕೆಳಗೆ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಅಂದಾಜು 70 ಸಾವಿರ ಮತಗಳನ್ನು, ಜನತಾ ಪಕ್ಷದಿಂದ ಸ್ಪರ್ಧಿಸಿದ್ದನಟ ಅನಂತನಾಗ್ರವರು 60 ಸಾವಿರ ಮತಗಳನ್ನು ಹಾಗೂ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು 79 ಸಾವಿರ ಮತಗಳನ್ನು ಪಡೆದಿದ್ದರು. ಇದರರ್ಥ ಶಿವರಾಂ ಕಾರಂತ್ ಹಾಗೂ ಅನಂತ್ನಾಗ್ ಅವರುಗಳ ಒಟ್ಟು ಮತಗಳ ಸಂಖ್ಯೆ 1 ಲಕ್ಷದ 30 ಸಾವಿರ. ಆದರೆ, 79 ಸಾವಿರ ಮತಗಳನ್ನು ಪಡೆದ ಅಭ್ಯರ್ಥಿ ಚುನಾಯಿತರಾದರು. ಇದು ತಾಂತ್ರಿಕ ಗೆಲುವೇ ಹೊರತು ನೈತಿಕವಾಗಿ ಅಲ್ಲ. ಒಂದು ವೇಳೆ ಮೊದಲ ಸ್ಥಾನ ಪಡೆದ ಅಭ್ಯರ್ಥಿ ಹಾಗೂ 2ನೇ ಸ್ಥಾನ ಪಡೆದ ಅಭ್ಯರ್ಥಿಯ ನಡುವೆ ನೇರ ಹಣಾಹಣಿ ಇದ್ದಿದ್ದರೆ ಫಲಿತಾಂಶ ಬೇರೆಯದೇ ಆಗಿರುತ್ತಿತ್ತಲ್ಲವೇ? ಇದು ಒಂದು ಉದಾಹರಣೆ ಅಷ್ಟೆ.
ನನ್ನ ಮಾತಿನ ಅರ್ಥ ಇಷ್ಟೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತೇಕ ಪ್ರಜೆಗಳ ಇಚ್ಛೆ ಅಥವಾ ಆಯ್ಕೆಯೇ ಪ್ರಧಾನವಾಗ ಬೇಕಲ್ಲವೇ? ನಮಗೆ ಕೇವಲ ಸಂಖ್ಯಾ ಬಲದ ಚುನಾವಣೆ ಬೇಕೆ ರಾಷ್ಟ್ರಪತಿಯಂತಹ ಅತ್ಯುನ್ನತ ಹುದ್ದೆಗೆ ರಾಷ್ಟ್ರದ ಜನತೆಯೇ ನೇರವಾಗಿ ಮತ ಚಲಾಯಿಸಿ ಆಯ್ಕೆ ಮಾಡುವಂತಹ ವ್ಯವಸ್ಥೆ ಏಕೆ ಜಾರಿಗೆಬರಬಾರದು ಎಂಬುದಷ್ಟೆ.