ನಿಜ ಮಾನವತ್ವ ಮೆರೆದ ಸಾಧಕ,ತ್ರಿವಿಧದಾಸೋಹಿ, ಸಂತರ ಸಂತ ಅಮರ

ಸಾರ್ಥಕ ಎನ್ನುವಂತಹ 111 ವರ್ಷಗಳನ್ನು ಪೂರೈಸಿ’ ನಾಡಿನ ಅಷ್ಟೇ ಅಲ್ಲ ವಿಶ್ವದ ಕಾವಿಧಾರಿಗಳು ಹಾಗೂ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡ ಎಲ್ಲರೂ ಹೇಗೆ ಬಾಳಿ ಬದುಕಬೇಕು ಎಂಬುದನ್ನು ಮಾಡಿ ತೋರಿಸಿದವರು ವಿಶ್ವಮಾನವ ಡಾ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು .ವಯೋಸಹಜ ಸಮಸ್ಯೆಗಳಿಂದ ಇಂದು ದೈಹಿಕವಾಗಿ ಮಾತ್ರ ನಮ್ಮನ್ನು ಅಗಲಿರುವ ಅವರು ಕೋಟಿ ಕೋಟಿ ಜನಮನದಲ್ಲಿ ಸದಾ ಜೀವಂತವಾಗಿರುತ್ತಾರೆ.

ಅವರ ಜೀವಿತದ ಅವಧಿಯಲ್ಲಿ “ಭಾರತ ರತ್ನ” ಗೌರವ ಅವರಿಗೆ ಸಲ್ಲಲಿಲ್ಲ ಎಂಬ ನಮ್ಮ ಕೊರಗನ್ನು ಹೊರತುಪಡಿಸಿದರೆ “ವಿಶ್ವರತ್ನ “ರಾದ ಅವರಿಗೆ ಅದು ಯಾವ ಲೆಕ್ಕವೂ ಆಗಿರಲಿಲ್ಲ. ಜಾತಿಗೊಂದು ಮಠ ಕಟ್ಟಿ, ಶಾಲೆಯನ್ನು ಹುಟ್ಟು ಹಾಕಿ ಮೈತುಂಬ ಜಾತೀಯತೆಯನ್ನೇ ಕಟ್ಟಿಕೊಂಡು ಡಂಬಾಚಾರದ ಕೆಲ ಕಾವಿಧಾರಿಗಳು ಸಿದ್ಧಗಂಗಾ ಶ್ರೀಗಳ ಪಾರ್ಥಿವ ಶರೀರದ ಆಚೆ ಈಚೆ ಇನ್ನು ಕುಳಿತದ್ದು ನನ್ನ ಮೈಯುರಿಸಿಯಿತು. ಪಕ್ಷಭೇದ ಮರೆತು ಸಿದ್ದಗಂಗಾ ಶ್ರೀಗಳಿಗೆ ನಮನ ಸಲ್ಲಿಸಲು ಆಗಮಿಸಿದ್ದ ರಾಜಕೀಯ ಮುಖಂಡರುಗಳು ಸಹ ಆಚೀಚೆ ದುಃಖತಪ್ತರಾಗಿ ಕುಳಿತದ್ದು ಸಹ ನನಗೇನೂ ಅವರುಗಳ ನೈಜ ಕಾಳಜಿ ಅಂದು ಅನ್ನಿಸಲೇ ಇಲ್ಲ. ಏಕೆಂದರೆ ಯಾವ ಯಾವ ಸಂದರ್ಭಗಳಲ್ಲಿ ಇವರುಗಳು ಹೇಗೆ ಹೇಗೆ ವರ್ತಿಸಿದರು ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಪ್ರತಿ ವ್ಯಕ್ತಿಯ ಹುಟ್ಟು ಅರ್ಜಿ ಹಾಕಿ ಇಂಥದ್ದೇ ಜಾತಿಯಲ್ಲಿ ಹುಟ್ಟಬೇಕು ಎಂಬುದು ಆಗಿರುವುದಿಲ್ಲ, ಹಾಗಾಗಿ ಪ್ರಬುದ್ಧತೆಯ ವಯೋಮಾನದಲ್ಲಿ ಎಲ್ಲರೂ ನಮ್ಮವರೇ ಎಂಬ ಭಾವನೆ ಬೆಳೆಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರುವವರು ಮಾತ್ರ ಕೋಟಿಗೊಬ್ಬರು. ಈ ಕೋಟಿಗೊಬ್ಬರಲ್ಲಿ ನಮ್ಮ ಸಿದ್ಧಗಂಗೆಯ ಸಿರಿ ಡಾ. ಶಿವಕುಮಾರ ಶ್ರೀಗಳು ಒಬ್ಬರು .

ಹಿರಿಯರು ಹೇಳಿದ್ದಾರೆ “ಒಂದು ವರ್ಷ ಸುಖವಾಗಿರಲು ಭತ್ತ ಬೆಳೆದರೆ ಸಾಕಂತೆ. ನೂರು ವರ್ಷ ಸುಖವಾಗಿರಲು ತೆಂಗು ಬೆಳೆದರೆ ಸಾಕಂತೆ “.ಆದರೆ ತಲತಲಾಂತರವೂ ಸಮಾಜ ಸದೃಢವಾಗಿ ಹಾಗೂ ನೆಮ್ಮದಿಯಿಂದ ಇರಲು ಪ್ರತಿ ವ್ಯಕ್ತಿಗೆ ಅಕ್ಷರ ದಾಸೋಹದ ಜತೆಗೆ ಅನ್ನ ದಾಸೋಹವನ್ನು ನಡೆಸಿ ಲಕ್ಷ ಲಕ್ಷ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿ ಅಕ್ಷರ ದಾಸೋಹಕ್ಕೆ ಹೊಸ ಭಾಷ್ಯವನ್ನೇ ಬರೆದವರು ಡಾ ಶಿವಕುಮಾರ ಶ್ರೀಗಳು.
ದೇವರು ಎಂಬ ಶಬ್ದವನ್ನು ಮೀರಿದ ಪದಗಳಲ್ಲಿ ಅವರನ್ನು ಕರೆಯಬಹುದೇನೋ? ಅವರನ್ನು ವಿಶ್ವಚೇತನ ಎನ್ನಲೇ, ದಾಸೊಹ ಸಿರಿ ಎನ್ನಲೇ, ದೀನದಲಿತರ ದೀಪವನ್ನಲೆ, ದಿವ್ಯ ಮಾನವ ಎನ್ನೆಲೆ, ವಿಶ್ವರತ್ನ ಎನ್ನೆಲೆ, ಕಾರುಣ್ಯದ ಕಣ್ಣು ಎನ್ನಲೇ, ಮಹಾಮಾನವತಾವಾದಿ ಎನ್ನಲೇ, ಅಮೋಘ ಸಮಾಜ ಸುಧಾರಕ ಎನ್ನಲ್ಲೇ, ಸಾಧು ಸಂತರ ಕಣ್ಮಣಿ ಎನ್ನಲೇ, ಮನುಷ್ಯತ್ವದ ಪ್ರತಿರೂಪ ಎನ್ನಲೇ, ಏನೆಂದು ಕರೆಯಲಿ?

ದೇಶ ಕಂಡ ಅಪ್ರತಿಮ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಿದ್ಧಗಂಗೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಚಟುವಟಿಕೆಗಳನ್ನು ಕಂಡು ಆಡಿದ ಮಾತುಗಳು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತವೆ .ಸಿದ್ಧಗಂಗೆಯ ಮಹಿಮೆಯ ಕುರಿತು ಅಲ್ಲಿ ನಡೆಯುತ್ತಿರುವ ಅಕ್ಷರ ಹಾಗೂ ಅನ್ನದಾಸೋಹದ ಕುರಿತು ನಾನು ಈವರೆಗೆ ಸಾಕಷ್ಟು ಕೇಳಿ ತಿಳಿದಿದ್ದೆ ಆದರೆ ಇಂದು ಈ ನೆಲವನ್ನು ಸ್ಪರ್ಶಿಸಿ ನಾನು ಪಾವನ ನಾಗಿದ್ದೇನೆ ಶಿವಕುಮಾರ ಶ್ರೀಗಳ ಪಾದಗಳನ್ನು ಸ್ಪರ್ಶಿಸಿ ಪುನೀತನಾಗಿದ್ದೇನೆ ಎಂದಿದ್ದರು. ಅವರ ಮುಂದಿನ ಸಾಲುಗಳು ಬಹುಶಃ ವಾಜಪೇಯಿ ಅವರಿಂದ ಮಾತ್ರ ಬರಲು ಸಾಧ್ಯವೇನೋ?.
“ಉತ್ತರ ಮೆ ಗಂಗಾ ಹೈ
ದಕ್ಷಿಣ್ ಮೇ ಸಿದ್ದ ಗಂಗಾ ಹೈ “
ಅಂದರೆ ಉತ್ತರ ಭಾರತದಲ್ಲಿ ಗಂಗಾ ಎಷ್ಟು ಪವಿತ್ರವೋ ದಕ್ಷಿಣ ಭಾರತದಲ್ಲಿ ಸಿದ್ಧಗಂಗೆಯು ಅಷ್ಟೇ ಪವಿತ್ರ. ಈ ಎರಡು ಕ್ಷೇತ್ರಗಳನ್ನು ಸ್ಪರ್ಶಿಸಿರುವ ನಾನು ಅದೆಷ್ಟು ಪವಿತ್ರ ಎಂದು ಅವರು ಪ್ರಶ್ನಿಸಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ .
ದೇಶ ಕಂಡ ಮಹಾನ್ ವಿಜ್ಞಾನಿ ಹಾಗೂ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸಿದ್ಧಗಂಗೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಶಿವಕುಮಾರ ಶ್ರೀಗಳ ಪಾದವನ್ನು ಹಿಡಿದವರು ಸುಮಾರು ಮೂರ್ನಾಲ್ಕು ನಿಮಿಷಗಳ ಕಾಲ ಬಿಟ್ಟಿರಲೇ ಇಲ್ಲ ಎಂದರೆ ಅಂತಹ ಕಲಾಂ ಶಿವಕುಮಾರ ಶ್ರೀಗಳ ಪಾದದಲ್ಲಿ ಕಂಡಿದ್ದಾದರೂ ಏನಿರಬಹುದು?

ಇಂದಿನ ಹೊಲಸು ರಾಜಕೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಕಲುಷಿತ ಅವ್ಯವಸ್ಥೆಯನ್ನು ಕಂಡು ಶ್ರೀಗಳು ನೊಂದುಕೊಂಡಿದ್ದು ಸತ್ಯ ಹಾಗೆಂದು ಅವರು ಎಂದೂ ವಿದ್ಯಾರ್ಥಿಗಳ ವಿಷಯದಲ್ಲಿ ನೊಂದುಕೊಂಡವರಲ್ಲ. ಜಾತಿ ಮತ ಪಂಥಗಳ ಸೋಂಕು ಹತ್ತಿಸಿಕೊಂಡವರಲ್ಲ. ಮೇಲು ಕೀಳೆಂದು ಅವರ ಬಳಿ ಸುಳಿಯಲೇ ಇಲ್ಲ. ಬಗಲಲ್ಲಿ ಜೋಳಿಗೆ ಹಿಡಿದು ಭಿಕ್ಷಾಟನೆ ನಡೆಸಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ತಮ್ಮನ್ನೇ ನಂಬಿಕೊಂಡು ಬಂದ ಮಕ್ಕಳನ್ನು ಪ್ರೀತಿಯಿಂದ ಕಳಕಳಿಯಿಂದ ಸಾಕಿ ಸಲಹಿದ ಮಹಾನ್ ಚೇತನವದು. ವರ್ಷಕ್ಕೆ ಹನ್ನೆರಡರಿಂದ ಹದಿನೈದು ಸಾವಿರದಷ್ಟು ಮಕ್ಕಳು ಮಠದಲ್ಲಿ ಉಚಿತ ಪ್ರಸಾದ ಸೇವಿಸಿ ಅಕ್ಷರಾಭ್ಯಾಸ ಮಾಡಿದ್ದಾರೆಂದರೆ ಈವರೆಗೆ ಅಂಥವರು ಗಳ ಸಂಖ್ಯೆ ಲಕ್ಷ ಲಕ್ಷವೇ ಸರಿ. ಆ ಶಿಸ್ತು ಪ್ರಸಾದಕ್ಕೆ ಮೊದಲು ನಡೆಯುವ ಪ್ರಾರ್ಥನೆ ಬಹುಶಃ ಇನ್ನೇಲ್ಲೂ ಕಾಣಲು ಸಾಧ್ಯವಿಲ್ಲವೇನೋ? ಕಳಕಳಿಯ ಸರ್ಕಾರವೊಂದು ಮುಂದೆಂದೂ ಮಾಡಲು ಅಸಾಧ್ಯವೇನೋ ಎನ್ನುವಂತಹ ಕಾರ್ಯವನ್ನು ಜೀವಿತದ ಕಡೆಯ ಉಸಿರಿರುವವರೆಗೂ ಮಾಡಿದವರು ಸಿದ್ಧಗಂಗೆಯ ಶ್ರೀಗಳು. ಬಹುಶ ಉಸಿರು ನಿಂತ ಬಳಿಕವೂ ಅನ್ನದಾಸೋಹ ನಿಲ್ಲಬಾರದು ಎಂಬ ಕಾರಣದಿಂದ ತಮ್ಮ ನಿಧನದ ಬಳಿಕವೂ ಅನ್ನದಾಸೊಹಕ್ಕೆ ಯಾವುದೇ ಕೊರತೆ ಇರಬಾರದು ಎಂಬ ಸೂಚನೆಯನ್ನು ಮಠದ ವ್ಯವಸ್ಥಾಪಕರಿಗೆ ನೀಡಿದ್ದರು .ಅಕಸ್ಮಾತ್ ವಿದ್ಯಾರ್ಥಿಗಳು ಪ್ರಸಾದ ಸೇವಿಸುವುದಕ್ಕೂ ಮೊದಲು ನಾನು ದೇಹತ್ಯಾಗ ಮಾಡಿದರೆ ಅವರುಗಳ ಪ್ರಸಾದ ಮುಗಿಯುವ ತನಕವೂ ವಿಷಯವನ್ನು ಪ್ರಕಟಿಸಬೇಡಿ ಎಂದು ತಿಳಿಸಿದ್ದರೆಂದರೆ ಆ ಜೀವಕ್ಕೆ ತನ್ನ ವಿದ್ಯಾರ್ಥಿಗಳ ಮೇಲೆ ಅದೆಷ್ಟು ಕಳಕಳಿ ಹಾಗೂ ಕಾಳಜಿ ಇತ್ತು ಎಂಬುದನ್ನು ಒಮ್ಮೆ ಊಹಿಸಿ ನೋಡಿ.
ಅಗಲಿರುವ ಹಿರಿಯ ಚೇತನ ಮತ್ತೆ ಹಿಂದಿರುಗಲಾರದು ಎಂಬುದು ಸತ್ಯ. ಆದರೆ ನುಡಿದಂತೆ ನಡೆದು ನಡೆದಾಡುವ ದೇವರೆಂದೇ ಭಕ್ತರ ಬಾಯಲ್ಲಿ ಕರೆಸಿಕೊಂಡ ಸಿದ್ಧಗಂಗೆ ಶ್ರೀಗಳ ಕಾರ್ಯಕ್ಕೆ ಎಂದೂ ಸಾವಿಲ್ಲ.

ಸಾವಿನಲ್ಲೂ ಸಾರ್ಥಕತೆ ಕಂಡುಕೊಂಡ ಅತೀ ವಿರಳರಲ್ಲಿ ವಿರಳ ನಮ್ಮ ಈ ಶ್ರೀಗಳು. ಕಾವಿ ಹಾಗೂ ಖಾದಿ ಧರಿಸಿರುವ ಮಂದಿ ಶ್ರೀಗಳ ಕಳಕಳಿ ಹಾಗೂ ಅಂತಃಕರಣದ ಶೇ. ಹತ್ತರಷ್ಟು ಗುಣಗಳನ್ನು ಮೈಗೂಡಿಸಿಕೊಂಡರೆ ಸಾಕು ನಾಡು ಸುಭಿಕ್ಷವಾದೀತು. ಪರಮಪೂಜ್ಯರ ಆತ್ಮಕ್ಕೆ ಚಿರಶಾಂತಿ ಕೊಡು ಎಂದು ಭಗವಂತನನ್ನು ಬೇಡುವುದು ಒಂದೇ, ಚಿರಶಾಂತಿ ಯಲ್ಲಿ ನೀವು ಇದ್ದೇ ಇರುತ್ತೀರಿ ಎಂದು ನಂಬುವುದು ಒಂದೇ.
ಕಡೆಗೆ ನಿಮ್ಮನ್ನು ಬೇಡುವುದು ಇಷ್ಟೇ ನಿಮ್ಮ ಸದ್ಗುಣಗಳ ಒಂದು ಅಂಶವನ್ನಾದರೂ ನಮ್ಮ ಮೇಲೆ ಕೃಪೆ ತೋರಿ ಎಂಬುದು .

-ಜಿ. ಎಂ. ಆರ್. ಆರಾಧ್ಯ

Leave a Reply

Your email address will not be published. Required fields are marked *