ಕೇವಲ ತೋರುಗಾಣಿಕೆಗೆ ಪಶು ಪಕ್ಷಿ ಪ್ರೀತಿ ಬೇಡ

ಅಂದು ಅಕ್ಟೋಬರ್ 6 /2018 ಮಂಗಳವಾರ ಸಂಜೆ ಸುಮಾರು 5 ಗಂಟೆ ಸಮಯ.ವಿದ್ಯಾನಗರದ ಪಾರ್ಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಗ್ರಂಥಸರಸ್ವತಿ ಪ್ರತಿಭಾರಂಗ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲ್ಪಟ್ಟ ಸಾಧಕರೊಂದಿಗೆ ಸಂವಾದ ಮತ್ತು ಕವಿಗೋಷ್ಠಿಗೆ ಹೊರಟಿದ್ದೆ, ಪಾರ್ಕಿನ ಮುಂಭಾಗದ ಮನೆಯೊಂದರ ಮುಂದೆ ಪಶು ಪಕ್ಷಿ ನೀರು ಸಂಗ್ರಹಣಾ ತೊಟ್ಟಿಯನ್ನು ಗಮನಿಸಿದೆ. ಅದರಲ್ಲಿ ತುಂಬಾ ಕಲುಷಿತ ನೀರಿರುವುದನ್ನು ಗಮನಿಸಿದೆ. ಆದರೆ ಅಷ್ಟೇನು ಅದರ ಬಗ್ಗೆ ಯೋಚಿಸದೆ ಮುನ್ನೆಡೆದೆ. ಈ ಘಟನೆ ನಡೆದು ವಾರದ ನಂತರ ಅದೆ ರಸ್ತೆಯಲ್ಲಿ ಸ್ನೇಹಿತೆಯೊಬ್ಬಳ ಮನೆಗೆ ಹೊರಟಿದ್ದೆ, ಮತ್ತೆ ಆ ತೊಟ್ಟಿಯ ಕಡೆ ಗಮನ ಹೋಯಿತು ಅದು ಅಂದಿನ ಸ್ಥಿತಿಯಲ್ಲೇ ಇತ್ತು ಹಾಗಾಗಿ ಸ್ವಲ್ಪ ಕುತೂಹಲ ಮೂಡಿತು. ಕೆಲ ಹಿರಿಯರಲ್ಲಿ ಆ ತೊಟ್ಟಿಯ ಬಗ್ಗೆ ವಿಚಾರಿಸಿದೆ ಆಗ ತಿಳಿದ ವಿಷಯ ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್ ಈ ತೊಟ್ಟಿಗಳನ್ನು ಪಶು ಪಕ್ಷಿಗಳಿಗೆ ನೀರಿನ ವ್ಯವಸ್ಥೆಗಾಗಿ ನಿರ್ಮಿಸಿ ಆಸಕ್ತರ ಮನೆ ಮುಂದೆ ಇರಿಸಿದ್ದಾಗಿ ಆ ತೊಟ್ಟಿಗಳ ಶುದ್ಧತಾ ಕಾರ್ಯನಿರ್ವಹಣೆ ಅವರದ್ದೇ ಆಗಿರುವುದೆಂದು ತಿಳಿಸಿದರು. ವಿಷಯ ಕೇಳಿ ಬಹಳ ಬೇಸರವಾಯಿತು. ಪಶುಪಕ್ಷಿಗಳ ಬಗ್ಗೆ ಕರುಣಜೀವ ಕಲ್ಯಾಣ ಟ್ರಸ್ಟ್ ತೋರಿದ ಮಾನವೀಯತೆಗೆ ನನ್ನದೊಂದು ನಮನ.

ಕರುಣಾ ಜೀವ ಕಲ್ಯಾಣ ಟ್ರಸ್ಟ್ ನವರು ಪಶುಪಕ್ಷಿಗಳ ಮೇಲಿನ ಕಾಳಜಿಗಾಗಿ ಆ ತೊಟ್ಟಿಗಳನ್ನು ನಿರ್ಮಿಸಿದರು ಆದರೆ ಅದರ ನಿರ್ವಹಣೆಯ ಜವಾಬ್ದಾರಿ ತೆಗೆದುಕೊಂಡ ಕೆಲ ಮಾಹಾನುಭಾವರು ಹೀಗೆ ಅಸಡ್ಡೆ ತೋರಿರುವುದು ಅದೆಷ್ಟು ಸರಿ ! ಕೇವಲ ತೋರಿಕೆಗೆ ಪಶುಪಕ್ಷಿಗಳ ಮೇಲೆ ಪ್ರೀತಿ, ಕಾಳಜಿ ಇರುವಂತೆ ತೋರಿಸಿಕೊಳ್ಳುವುದು ಅದೆಷ್ಟು ನ್ಯಾಯ. ಆ ಜವಾಬ್ದಾರಿ ನಿರ್ವಹಿಸಲಿಕ್ಕಾಗದಿದ್ದಲ್ಲಿ ಸುಮ್ಮನಿದ್ದುಬಿಡಬೇಕು ಅಲ್ಲವೆ? ಈ ತೋರಿಕೆಯ ಅಗತ್ಯವೇನಿದೆ, ನಿಜವಾದ ಕಾಳಜಿ ಇರುವವವರಿಗಾದರು ಆ ಅವಕಾಶ ಕೊಡಬೇಕಲ್ಲವೇ? ದೊಡ್ಡಸ್ತಿಕೆಗೆ ಆಸಕ್ತಿ ಇರುವವರಂತೆ ಮುಖವಾಡ ಧರಿಸಿ ಬದುಕುವುದು ಒಂದು ಬದುಕೆ? ಹೆಚ್ಚೆಂದರೆ ಆ ಶುದ್ಧತಾ ಕಾರ್ಯಕ್ಕೆ 5 ರಿಂದ 10 ನಿಮಿಷ ಸಮಯ ಹಿಡಿಯಬಹುದು, ಇಂತಹ ಸಣ್ಣ ಜವಾಬ್ದಾರಿ ನಿರ್ವಹಿಸಲಾಗದಿದ್ದವರು ನಮ್ಮ ಪ್ರಕೃತಿ, ಭಾಷೆ, ದೇಶದ ಏಳಿಗೆಯ ಬಗ್ಗೆ ಚಿಂತಿಸಲು ಇನ್ನೆಲ್ಲಿಯ ಸಮಯವಿದೆ ಇವರಿಗೆ.

ಈ ವಿಷಯದಲ್ಲಿ ಸೃಜನಶೀಲತೆ ತೋರಿದ ಕಾಲೇಜ್ ಒಂದರ ಕುರಿತು ಹೇಳಲೆ ಬೇಕೆನಿಸಿದ ಸಂಗತಿ, ವಿದ್ಯಾನಗರದ ವ್ಯಾಪ್ತಿಯಲ್ಲಿರುವ ನೂತನ್ ಕಾಲೇಜ್ ಹೆಸರು ನಿಮಗೆಲ್ಲ ಚಿರಪರಿಚಿತ. ಅಂದು ಬೆಳಿಗ್ಗೆ ಯಾವುದೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ಸಾಗುತ್ತಿದ್ದೆ ತಕ್ಷಣ ಗಮನ ಸೆಳೆದ ದೃಶ್ಯ ಆ ಕಾಲೇಜಿನ ಪಿಯೂನ್ ಇರಬಹುದು ಆತ, ಇಷ್ಟು ಹೊತ್ತು ನಾನು ಮೇಲೆ ಹೇಳಿದ ಆತೊಟ್ಟಿಯನ್ನು ಆತ ಶುಚಿಗೊಳಿಸಿ ಶುದ್ಧ ನೀರನ್ನು ಅದರೊಳಗೆ ತುಂಬಿಸುವ ಕೆಲಸದಲ್ಲಿ ಮಗ್ನನಾಗಿದ್ದ ಒಂದು ಕ್ಷಣ ಆತನ ಬಗ್ಗೆ ಗೌರವದ ಭಾವ ಮೂಡಿತು. ಆತನ ಪ್ರಾಮಾಣಿಕ ಕಾರ್ಯ ತತ್ಪರತೆಗೆ ಮನಸು ಹಗುರಾಗಿ ನಗುವೊಂದು ತುಟಿಯಂಚಲಿ ಸುಳಿದಾಡಿತು. ವಿದ್ಯಾನಗರದ ಪಾರ್ಕಿನ ಮನೆಯ ಮುಂದಿನ ತೊಟ್ಟಿಗೂ, ಈ ಕಾಲೇಜಿನ ಮುಂದಿರುವ ತೊಟ್ಟಿಗೂ ಅದೆಷ್ಟು ವ್ಯತ್ಯಾಸವಲ್ಲವೇ ಎನಿಸಿ ಮುನ್ನೆಡೆದೆ. ನನ್ನ ಕಾಳಜಿ ಇಷ್ಟೇ ಈ ಸಮಾಜಕ್ಕೆ ನಮ್ಮಿಂದ ಏನಾದರು ಒಳ್ಳೆಯದನ್ನ ಮಾಡಲು ಸಾದ್ಯವಾದರೆ ಮಾಡೋಣ ಇಲ್ಲದಿದ್ದಲ್ಲಿ ನಿರ್ಲಕ್ಷ್ಯದ ನಿಟ್ಟಿನಲ್ಲಿ ಪರರಿಗೆ ತೊಂದರೆ ಕೊಡದೆ ಇರಲು ಪ್ರಯತ್ನಿಸೋಣ ಎನ್ನುವುದು.

Leave a Reply

Your email address will not be published. Required fields are marked *