ನಾನು ಕಂಡಂತ ಜನಮಿಡಿತ ಸಂಪಾದಕರು ಜಿ.ಎಂ.ಆರ್.ಆರಾಧ್ಯ | ಪಾಪು ಗುರು ಅವರ ಲೇಖನ
ಸುಮಾರು 1992 ರ ಇಸವಿ ಈಗಿನ ಜನತಾವಾಣಿ ಕಛೇರಿ ಆಗ ಹಂಚಿನ ಮನೆಯಲ್ಲಿ ಪತ್ರಿಕೆ ಪ್ರಕಟವಾಗುತ್ತಿತ್ತು .ಆಗ ನಾನಿನ್ನು ಹದಿನೈದು ವರ್ಷದ ಹುಡುಗ ಎಲ್ಲಾ ಪತ್ರಿಕೆಗಳನ್ನು ಕೈಯಲ್ಲಿಡಿದು ಕೊಂಡುˌಈಗಿನ ಹಳೇ ಬಸಸ್ಟಾಂಡ್ನಲ್ಲಿ ಆಗ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು ಅಲ್ಲೇ ನಿಲ್ಲುತ್ತಿದ್ದವು. ನಾನು ಒಂದೊಂದೆ ಬಸ್ಸುಗಳನ್ನು ಹತ್ತಿ ಇಳಿದು ಪತ್ರಿಕೆಗಳನ್ನು ಮಾರುತಿದ್ದೆ. ಪತ್ರಿಕೆ ಬೇಕಾದಾಗ ಜನತಾವಾಣಿ ಕಛೇರಿಗೆ ಹೋಗುತ್ತಿದ್ದೆ.
ಹೆಚ್ಚು ಪತ್ರಿಕೆಗಳನ್ನು ಮಾರುತಿದ್ದರಿಂದ ಸಂಪಾದಕರಾದ ಷಡಕ್ಷರಪ್ಪನವರ ಪ್ರೀತಿಗೆ ಪಾತ್ರನಿಗಿದ್ದೆ .ಅವರು ಆಗಾಗ ಬಂದು ಹೋಗು ಅಂತ ಹೇಳುತ್ತಿದ್ದರು. ನಾನು ಶಾಲೆ ಬಿಟ್ಟ ನಂತರ ಜನತಾವಾಣಿ ಕಛೇರಿಗೆ ಆಗಾಗ ಹೋಗುತ್ತಿದ್ದೆ ನನಗೆ ಪತ್ರಿಕೆಗೆ ಯಾವ ರೀತಿ ಸುದ್ದಿಗಳನ್ನು ಸಂಗ್ರಹಿಸುತ್ತಾರೆ ˌ ಪತ್ರಿಕೆ ಹೇಗೆ ಮುದ್ರಣಗೊಳ್ಳತ್ತೆ ಎಂಬುದನ್ನು ನೋಡುವುದೇ ಒಂದು ವಿಸ್ಮಯವಾಗಿ ಕಾಣುತ್ತಿತ್ತು. ಕೆಲವೊಂದು ಸಂದರ್ಭದಲ್ಲಿ ಹೆಚ್ಚು ಪತ್ರಿಕೆಗಳು ಮಾರಟವಾಗುತ್ತಿದ್ದವು.ಇದಕ್ಕೆ ಕಾರಣವೇನು ಎಂದು ನನ್ನಲ್ಲಿ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿದ್ದೆ. ಒಮ್ಮೆ ಷಡಕ್ಷರಪ್ಪನವರಿಗೆ ಕೇಳೀಯೇ ಬಿಟ್ಟೆ . ಸಾರ್ ನಿನ್ನೆ ಇನ್ನೂರು ಪ್ರತಿಗಳನ್ನು ಮಾರಿದೆ ಎಲ್ಲರೂ ತೆಗೆದುಕೊಂಡರು ಇನ್ನೂ ಬೇಕಾಗಿತ್ತು ಅಂತ ಹೇಳಿ ˌ ಸಾರ್ ಏನು ವಿಷಯವಿತ್ತು ಅಂತ ಕೇಳಿದೆ. ಆಗ ಅವರು ಅಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತೋರಿಸಿ ಅವರು ಹೊಸದಾಗಿ ಬಂದ ನಮ್ಮ ಪತ್ರಿಕೆಯ ಮುಖ್ಯ ವರದಿಗಾರರು ಆರಾಧ್ಯ ಅಂತ ತೋರಿಸಿದರು. ನಾನು ಅವರನ್ನು ದೂರದಿಂದಲೇ ನೋಡಿದೆ ಅಲ್ಲಿಂದ ಪತ್ರಿಕೆ ಮಾರುವುದರ ಜೊತೆಗೆ ಅದರಲ್ಲಿ ಪ್ರಕಟಗೊಂಡ ವಿಶೇಷ ಲೇಖನಗಳನ್ನು ಓದುತ್ತಿದ್ದೆ.
ಅಲ್ಲಿಂದ ಆರಾಧ್ಯರವರು ಬರೆಯುತ್ತಿದ್ದ ಪ್ರತಿಯೊಂದು ಲೇಖನಗಳು ನನ್ನ ಮನಸಿನ ಮೇಲೆ ಅಗಾಧ ಪರಿಣಾಮ ಬೀರಿದವು. ನಂತರ ಅವರ ಸಾರಥ್ಯದಲ್ಲಿ ನನಗೆ ಇಸವಿ ನೆನಪಿಲ್ಲ ಬೆಳ್ಳಿತೆರೆ 61 ಎಂಬ ಕಾರ್ಯಕ್ರಮದಲ್ಲಿ ನಾನು ಓಡಾಡಿದ್ದು ಹಾಗೂ ಅವರ ಬೆಳ್ಳಿತೆರೆ ಪುಸ್ತಕವನ್ನು ಓದಿದ್ದುˌಡಾ.ರಾಜ್ ಕುಮಾರರನ್ನು ಹತ್ತಿರದಿಂದ ನೋಡಿದ್ದು ಖುಷಿಪಟ್ಟಿದ್ದು ಅಬ್ಬಾ ಆ ನೆನಪುಗಳೇ ಅಮರ.
ಅವರು ಸುಮಾರು ಏಳೆಂಟು ವರ್ಷ ಜನತಾವಾಣಿಯಲ್ಲಿ ಕೆಲಸ ನಿಭಾಯಿಸಿರಬಹುದು. ಆ ಸಮಯದಲ್ಲಿ ಜನತಾವಾಣಿಯಲ್ಲಿ ಬಂದ ಅವರ ಲೇಖನಗಳಂತೂ ಮನೋಜ್ಞವೇ ಸರಿ. ಆಗ ಇವರ ಲೇಖನ ˌವರದಿಗಳನ್ನು ಹಾಗೂ ತರಂಗದ ಸಂತೋಷಕುಮಾರ ಗುಲ್ವಾಡಿಯವರ ಸಂಪಾದಕೀಯದೊಂದಿಗೆ ತುಲನೆ ಮಾಡಿ ಆರಾಧ್ಯರವರ ಬರಹಕ್ಕೆ ಅಭಿಮಾನಿಯಾದೆ. ಆನಂತರದ ದಿನಗಳಲ್ಲಿ ಜನತಾವಾಣಿಯನ್ನು ಬಿಟ್ಟು 1997 ರಲ್ಲಿ ಜನಮಿಡಿತ ಎಂಬ ಹೊಸ ದಿನ ಪತ್ರಿಕೆಯನ್ನು ಆರಂಭಿಸಿ ˌ ಆ ಪತ್ರಿಕೆಯಲ್ಲಿ ಅವರು ಸಂಪಾದಕೀಯ ಬರಹದಿಂದಲೇ ಬ್ರಷ್ಟರನ್ನು ˌರಾಜಕಾರಣಿಗಳನ್ನು ಅವರ ಲೇಖನಿಯಿಂದ ತಿವಿಯುತಿದ್ದುದ್ದನ್ನು ನಾ ಓದುತ್ತಾ ಬಂದೆ. ಅಲ್ಲದೇ ಅಷ್ಟೇ ನಿಷ್ಟುರವಾಗಿ ಬರೆದು ಜಿಲ್ಲಾಧಿಕಾರನ್ನೇ ಎದುರಿಸಿ ಬರೆದ ಸಂಪಾದಕೀಯ ಹಾಗೂ ವರದಿಗಳು ಮತ್ತು ಲೇಖನಗಳು ಇವರನ್ನು ದಿಟ್ಟ ಪತ್ರಕರ್ತರೆಂದು ದಾವಣಗೆರೆಯ ಎಲ್ಲಾ ಓದುಗರು ಹಾಗೂ ಜನರು ಒಪ್ಪಿಕೊಂಡರು ಮತ್ತು ಅಪ್ಪಿಕೊಂಡರು. ಆಗ ಜನಮಿಡಿತ ಪತ್ರಿಕೆಗಳು ದಿನಕ್ಕೆ ಎರಡೆರಡು ಸಲ ಮುದ್ರಣಗೊಂಡವು. ನಾನಂತೂ ಬಹಳ ಅಭಿಮಾನದಿಂದ ರಸ್ತೆಗಳಲ್ಲಿ ಕೂಗಿ ಮಾರಿದ್ದು ಸಂಪಾದಕರಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ. ಇಷ್ಟೆಲ್ಲಾ ಆದರೂ ನಾನು ಅವರನ್ನು ಬೇಟಿ ಮಾಡಲಿಲ್ಲ ಕಾರಣ ಅವರು ನನ್ನನ್ನು ಗುರುತಿಸುವಂತೆ ಬೆಳೆಯಬೇಕು ಎಂಬ ನನ್ನ ಮನದಾಸೆಯಾಗಿತ್ತು. ಅದು ನೇರವೇರಿದ್ದು ನನ್ನ “ಮುಳ್ಳೆಲೆಯ ಮದ್ದು“ ಪುಸ್ತಕ ಬಿಡುಗಡೆ ಸಮಯದಲ್ಲಿ. ಆ ಸಂದರ್ಭಕ್ಕಾಗಿ ನಾನು ಇಪತ್ತು ವರ್ಷ ಕಾಯಬೇಕಾಯಿತು.ಎಷ್ಟು ವಿಪರ್ಯಾಸ..!
ಈ ರೀತಿ ಗಟ್ಟಿ ಪತ್ರಕರ್ತರಾಗಿದ್ದಕ್ಕೆ ಬಹು ಮುಖ್ಯ ಕಾರಣ ಇವರು ಲಂಕೇಶ್ ರವರ ಶಿಷ್ಯರಾಗಿದ್ದರು ಎಂಬುದು ನಾ ಇತ್ತೀಚೆಗೆ ತಿಳಿದುಕೊಂಡೆ.
ಒಬ್ಬ ಪತ್ರಕರ್ತ ಅಂದರೆ ಹೀಗೆ ಇರಬೇಕು ಎಂಬ ನನ್ನ ಕಲ್ಪನೆಗೆ ಇವರೇ ಮಾದರಿ ವ್ಯಕ್ತಿ.ಅಲ್ಲದೇ ಅವರ ಶಿಸ್ತು ˌಪ್ರತಿಭೆಗಳನ್ನು ಪ್ರೋತ್ಸಹಿಸುವ ಪರಿˌ ವಿಷಯ ವಸ್ತುವನ್ನು ಅಧ್ಯಯನ ಮಾಡುವ ಪರಿ ಹಾಗೂ ಅವರ ಬರವಣಿಗೆ ಶೈಲಿ ನನ್ನ ಮೇಲೆ ಖಂಡಿತ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.
ಅಂತಹ ಧೀಮಂತ ಪರ್ತಕತ್ರರ “ಜನ ಮಿಡಿತ” ದಿನಪತ್ರಿಕೆ ದ್ವಿದಶಮಾನನೋತ್ಸವ ಜನವರಿ 5ರಂದು ನಡೆಯುತ್ತಿದ್ದು ˌಅದರಲ್ಲಿ ಸಾಕಷ್ಟು ಯುವಪ್ರತಿಭೆಗಳನ್ನು ಪ್ರೋತ್ಸಹಿಸುವ ಹಾಗೂ ಪ್ರತಿಭಾವಂತರನ್ನು ಸನ್ಮಾನಿಸುತ್ತಿರುವ ಅವರ ಕಾರ್ಯಕ್ಕೆ ನನ್ನ ಮನ ತುಂಬಿ ಬಂದಿದೆ..ಅವರು ಇನ್ನೂ ಗಟ್ಟಿತನದ ಬರಹಗಳಿಂದ ನಿರಂತರವಾಗಿ ಪತ್ರಿಕೆ ಹೊರತರಲಿ.ಹಾಗೂ ಯುವ ಪರ್ತಕತ್ರರಿಗೆ ಮಾದರಿಯಾಗಲಿ. ಅವರ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿ ˌನನ್ನ ಭಾವನೆಗಳನ್ನು ಈ ಅಕ್ಷರರೂಪದಲ್ಲಿ ವ್ಯಕ್ತಪಡಿಸಿರುವೆ.
ಆರಾಧ್ಯರವರನ್ನು ಇನ್ನೂ ಮುಂದೆ ನನ್ನ ಗುರುಗಳನ್ನಾಗಿ ಒಪ್ಪಿಕೊಂಡಿರುವೆ.
ಆರಾಧ್ಯ ಸಾರ್ ನಿಮಗೆ ನನ್ನ ತುಂಬು ಹೃದಯದ ಅನಂತ ಅನಂತ ಅಭಿನಂದನೆಗಳು.
ಪಾಪು ಗುರು . ದಾವಣಗೆರೆ.
9844187574