3 ಕಿ.ಮೀ. ಶವ ಸಾಗಿಸಿದ್ದಕ್ಕೆ 2,500 ಬಿಲ್ ಪ್ರಕರಣ; ಪೋಲೀಸರ ಬೇಜವಾಬ್ದಾರಿ ವರ್ತನೆ

ಆಸ್ಪತ್ರೆಯಿಂದ ಮೂರು ಕಿ.ಮೀ. ದೂರದ ಸ್ಥಳಕ್ಕೆ ಅಂಬುಲೆನ್ಸ್‍ನಲ್ಲಿ ಶವ ಸಾಗಿಸಲು ಬಡ ವ್ಯಕ್ತಿಯಿಂದ ಎರಡೂವರೆ ಸಾವಿರ.ಶುಲ್ಕ ವಿಧಿಸಿ ಅಮಾನವೀಯವಾಗಿ ವರ್ತಿಸಿದ ಎಸ್.ಎಲ್.ವಿ. ಅಂಬುಲೆನ್ಸ್ ಸರ್ವಿಸ್ ವಿರುದ್ಧ ಯುವಕನೊಬ್ಬ ಅಕ್ರೋಶ ವ್ಯಕ್ತಪಡಿಸಿದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೂಕ್ತ ಬಿಲ್ ನೀಡದೆ 2,500 ಶುಲ್ಕ ಕಿತ್ತುಕೊಳ್ಳುವ ಚಾಲಕ ಅದನ್ನು ಪ್ರಶ್ನೆ ಮಾಡುವ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾನೆ. ಬಡ ವ್ಯಕ್ತಿಯ ಪುತ್ರ ಮೃತಪಟ್ಟಿದ್ದು ,ಶುಲ್ಕ ಕಡಿಮೆ ಮಾಡಿಕೊಳ್ಳುವಂತೆ ಕೇಳಿದರೊ ಸ್ವಲ್ಪವೂ ಮಾನವೀಯತೆ ತೋರದೆ ದುಡ್ಡು ಕೊಡು, ದುಡ್ಡು ಕೊಡು
ಎನ್ನುವ ದರ್ಪದ ಮಾತುಗಳನ್ನಾಡಿ ಹಣವನ್ನು ಚಾಲಕ ಪಡೆದುಕೊಳ್ಳುತ್ತಾನೆ. ಬಳಿಕ ಬಿಲ್ ಅನ್ನು ಯುವಕನಿಂದ ಕಸಿದು ಕೊಳ್ಳುವ ಭರದಲ್ಲಿ ಅದನ್ನು ಹರಿದುಹಾಕಿದ್ದಾನೆ. ನಂತರ ಮತ್ತೊಂದು ಬಿಲ್ ನೀಡಿದ್ದು ಅದರಲ್ಲಿ ಸರಿಯಾದ ಮಾಹಿತಿಯನ್ನೇ ನಮೂದಿಸಿಲ್ಲ.
ಆರು ನಿಮಿಷಗಳ ಈ ವೀಡಿಯೋ ವಾಟ್ಸಪ್,ಫೇಸುಬುಕ್, ಟ್ವಿಟರ್, ಯೂಟ್ಯೂಬ್‍ಗಳಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿದೆ.
“ನನ್ನ ಸ್ನೇಹಿತ ಮೃತಪಟ್ಟಿದ್ದಾನೆ. ಆಸ್ಪತ್ರೆಯಲ್ಲಿ ಶವ ನೀಡಲು ಹತ್ತು ಸಾವಿರ ರೂ.ಕೇಳಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಿಗೆ ಐನೂರು ರೂ.ಕೂಡುವಂತೆÀ ಚಾಲಕ ಕೇಳಿದ.ಬಳಿಕ ಗೇಟ್ ತೆರೆದ ವ್ಯಕ್ತಿಗೆ ಐನೂರು ರೂ ಕೊಡಬೇಕು ಎಂದು ಕೇಳಿದ. ಅಂಬುಲೆನ್ಸ್‍ನಲ್ಲಿ ಶವವನ್ನು ಹಾಕಿಕೂಂಡು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆ ಶವ ಇಳಿಸಿದ ಬಳಿಕ ಸರಿಯಾದ ಬಟ್ಟೆ ಧರಿಸಲು ಹಣವಿಲ್ಲದ ಬಡ ವ್ಯಕ್ತಿಯಿಂದ 2,500 ರೂ.ಕೇಳುತ್ತಿದ್ದಾನೆ.
ಇಂತಹ ಅನ್ಯಾಯವನ್ನು ಸಾರ್ವಜನಿಕರು ಪ್ರಶ್ನೆ ಮಾಡಲೇಬೇಕು” ಎನ್ನುವ ಯುವಕನ ಆಕ್ರೋಶದ ಮಾತುಗಳು ಮನಕಲುಕುವಂತಿವೆ.
“3 ಕಿ.ಮೀ. ದೂರಕ್ಕೆ ಒಂದು ಮಿತಿಯಷ್ಟು ಹಣ ಕೇಳಬೇಕಲ್ಲವೇ?
ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಕೇಳುತ್ತಿದ್ದಾನೆ.ಏಕೆ ಅಷ್ಟುಶುಲ್ಕ ಎಂದಿದ್ದಕ್ಕೆ, ಬೆಂಗಳೂರಿನಲ್ಲಿ ಪ್ರತಿಯೊಂದಕ್ಕೂ ಹಣ ಕೊಡಬೇಕು ಎಂದು ಚಾಲಕ ಹೇಳುತ್ತಿದ್ದಾನೆ“ ಎಂದು ಯುವಕ ವಿವರಿಸಿದ್ದಾನೆ.

ಕೆಎ 05 0254 ವಾಹನ ಸಂಖ್ಯೆಯ ಟೆಂಪೋ ಟ್ರಾವೆಲರ್ ಚಾಲಕನ ಅಮಾನವೀಯ ವರ್ತನೆಯ ಕುರಿತು ಯುವಕ ಹಿಂದಿಯಲ್ಲಿ ವಿವರಿಸುತ್ತಿದ್ದರೆ, ಹಣ ಕೊಡು ಮೊದಲು ಎಂದು ಚಾಲಕ ಜೋರು ಮಾಡುತ್ತಿದ್ದಾನೆ. ಮೃತ ವ್ಯಕ್ತಿಯ ಹೆಸರು ಮುನೇಶ್ವರ್ ವಿಶಾಲ್ ಎಂದು ಹೇಳಲಾಗಿದ್ದು, ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.
ಇಂತಹ ಅಮಾನವೀಯತೆಯನ್ನು ವಿರೋಧಿಸಬೇಕು: ಶವ ಸಾಗಿಸಿದ್ದಕ್ಕೆ ಆತ ಕೇಳಿದಷ್ಟು ಹಣವನ್ನು ನಾನು ಕೊಡುತ್ತೇನೆ. ಆದರೆ, ಬಡವರಿಂದ ಈ ರೀತಿ ಹಣ ಸುಲಿಗೆ ಮಾಡುವ ಇಂತಹ ವ್ಯವಸ್ಥೆಯ ವಿರುದ್ಧ ಜನ ಹೋರಾಡಬೇಕು. ಇದು ಬಡ ವ್ಯಕ್ತಿಯ ಶವಕ್ಕೆ ಮಾಡುತ್ತಿರುವ ಅವಮಾನ ಎಂದು ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ತಾವರೆಕೆರೆ ಮುಖ್ಯ ರಸ್ತೆ ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಎಸ್.ಎಲ್.ವಿ. ಅಂಬುಲೆನ್ಸ್
ಸರ್ವಿಸಸ್‍ಗೆ ಸೇರಿದೆ ಮೇಲ್ಕಾಣಿಸಿದ ವಾಹನ.
ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಗಮನಕ್ಕೆ ಬಂದಿದೆ. ಆದರೆ ಇದುವರೆಗೂ ಯಾರೂಬ್ಬರೂ ಪೊಲೀಸರನ್ನು ಸಂಪರ್ಕಿಸಿಲ್ಲ. ದೂರು ನೀಡಿದರೆ ಪರಿಶೀಲನೆ ನಡೆಸುತ್ತೇವೆ ಎಂದು ಆಗ್ನೇಯ ವಿಭಾಗ ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಅಂಬ್ಯುಲೆನ್ಸ್ ನ ಸಂಖ್ಯೆ, ಅದರ ಚಾಲಕನ ಅಮಾನವೀಯ ವರ್ತನೆ ವೀಡಿಯೋದಲ್ಲಿ ಸ್ಪಷ್ಟವಾಗಿ ಕಂಡರೂ ಸಹ ಬೇಜವಾಬ್ದಾರಿ ಪ್ರತಿಕ್ರಿಯೆ ನೀಡಿದ್ದಾರೆ ಆಗ್ನೇಯ ವಿಭಾಗ ಡಿಸಿಪಿ ಡಾ.ಬೋರಲಿಂಗಯ್ಯ.
ಮೇಲಿನ ಘಟನೆಯಲ್ಲಿ ಅ ಯುವಕ ಬಡ ವ್ಯಕ್ತಿಯೊಬ್ಬರ ಪರವಾಗಿ ಗಂಟಲು ಹರಿದುಕೊಳ್ಳುವಂತೆ ಮಾತನಾಡುತ್ತಿದ್ದರೂ ಮತ್ತು ಅಂಬುಲೆನ್ಸ್ ಚಾಲಕ ಈ ಯುವಕನಿಗೆ ಹೊಡೆಯಲು ಮುಂದಾದಾಗ ಯುವಕನಿಗೆ ಸಹಾಯ ಮಾಡಲು ಅಥವಾ ಆತನಿಗೆ ಬೆಂಬಲವಾಗಿ ನಿಲ್ಲಲು ಅಲ್ಲಿದ್ದ ಯಾವೊಬ್ಬ ನಾಗರೀಕನೂ ಮುಂದಾಗದಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಸಾಮಾಜಿಕ ನ್ಯಾಯಕ್ಕಾಗಿ ಇಂತಹ ಯುವಕರು ಹೋರಾಟಕ್ಕೆ ಮುಂದಾದರೆ ಕನಿಷ್ಟ ನೈತಿಕ ಬೆಂಬಲವನ್ನಾದರೂ ನೀಡಬೇಕಲ್ಲವೇ?
ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ಉಪವಾಸ ಕುಳಿತಾಗ ಅವರನ್ನು ಬೆಂಬಲಿಸಿದ್ದ ಆ ಮಹಾ ಜನಸಾಗರ ಈ ಘಟನೆಯನ್ನು ಏಕಾಂಗಿಯಾಗಿ ಪ್ರತಿಭಟಿಸಿದ ಈ ಯುವಕನ ಬೆಂಬಲಕ್ಕೇಕೆ ನಿಲ್ಲಲಿಲ್ಲ ಎಂಬುದೇ ಆಶ್ಚರ್ಯ.

ಕಣ್ಣೆದುರೇ ನಡೆದ ಬಡವರ ಸುಲಿಗೆಗೆ ಆಕ್ರೋಶ ವ್ಯಕ್ತಪಡಿಸಿದ ಈ ಯುವಕನಿಗೆ ದೊಡ್ಡ ಹ್ಯಾಟ್ಸಪ್. ನನ್ನ ವಿನಂತಿ ಇಷ್ಟೆ, ನಮ್ಮ ಪರಿಸರದಲ್ಲಿ, ನಮ್ಮೂರು, ನಮ್ಮ ತಾಲ್ಲೂಕು, ನಮ್ಮ ಜಿಲ್ಲೆಗಳಲ್ಲಿ ನಮ್ಮೆದುರೇ ನಡೆವ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಒಂದೇ ಕಾಮಗಾರಿಗೆ ಮೂರ್ನಾಲ್ಕು ಬಾರಿ ಪಡೆವ ಬಿಲ್…. ಮುಂತಾದ ಘಟನೆಗಳನ್ನು ಪ್ರತಿಭಟಿಸುವ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಯಲಿ ಎಂಬುದು.

Leave a Reply

Your email address will not be published. Required fields are marked *