ಹೊನ್ನುಡಿಕೆ ಎಂಬ ದೇವಾಲಯ ಗುಚ್ಚ

ನಾಡಿನಲ್ಲಿ ಹಲವು ದೇವಾಲಯಗಳು ಇದ್ದು ಹಲವು ಅರಸರ ಕೊಡುಗೆ ಗಮನಾರ್ಹವಾದದ್ದು. ಅವುಗಳಲ್ಲಿ ಮೈಸೂರು ಹಾಗು ಬೆಂಗಳೂರು ಸುತ್ತ ಮುತ್ತ ಗಂಗ ದೇವರ ದೇವಾಲಯಗಳು ಕಾಣ ಸಿಗುತ್ತದೆ. ಅಂತಹ ಗಂಗರು ಸೇರಿದಂತೆ ಹಲವು ದೇವಾಲಯಗಳನ್ನು ತನ್ನ ಒಡಲಿನಲ್ಲಿ ಹೊತ್ತ ಉರೆಂದರೆ ತುಮಕೂರು ಜಿಲ್ಲೆಯ ಹೊನ್ನುಡಿಕೆ.

ಇತಿಹಾಸ ಪುಟದಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿರುವದಕ್ಕೆ ಇಲ್ಲಿ ಸಿಕ್ಕ ಸುಮಾರು 10 ಶಾಸನಗಳೇ ಸಾಕ್ಷಿ. ಗಂಗರ ಶ್ರೀವಿಕ್ರಮನ ಶಾಸನದಲ್ಲಿ ಪೊನ್ನುಡಿಕೆ ಎಂಬ ಉಲ್ಲೇಖವಿದೆ. ಇಲ್ಲಿನ ಶಾಸನವೊಂದರಲ್ಲಿ ಅಗ್ರಹಾರ ಗಂಧವರಣಾಪುರ ಹೊನ್ನುಡಿಕೆ ಎಂಬ ಉಲ್ಲೇಖ ನೋಡಬಹುದು. ಇಲ್ಲಿನ 1150 ರ ಶಾಸನದಲ್ಲಿ ಕೈಲಾಸೇಶ್ವರ ದೇವಾಲಯದ ಉಲ್ಲೇಖವಿದೆ. ಜನಾರ್ಧನ ದೇವಾಲಯದಲ್ಲಿನ 1166 ರ ಶಾಸನದಲ್ಲಿ ಹೊಯ್ಸಳ ದೊರೆ ನರಸಿಂಹನ ಕಾಲದಲ್ಲಿ ವೀಮರಸನಾಯಕ ಇಲ್ಲಿನ ವಿಮಾನವನ್ನು ಕಟ್ಟಿಸಿದ ಉಲ್ಲೇಖವಿದೆ. ಹೊಯ್ಸಳ ದೊರ ರಾಮನಾಥನ ಕಾಲದ ಎರಡು ಶಾಸನಗಳು ಜನಾರ್ಧನ ದೇವಾಲಯದಲ್ಲಿ ಸಿಕ್ಕಿದ್ದು ಇದರಲ್ಲಿ ಗಂಧವಾರಣಪುರವಾದ ಹೊನ್ನುಡಿಕೆಯ ಚೊಕ್ಕಪೆರುಮಾಳು ದೇವರಿಗೆ ದತ್ತಿ ನೀಡೀದ ಉಲ್ಲೇಖವಿದೆ. ಇನ್ನು 1160 ರ ಶಾಸನದಲ್ಲಿ ಮಾಚಿಯಕ್ಕ ಎಂಬ ಹೆಗ್ಗಡಿತಿ ಮಂದರಿಗಿರಿಯಲ್ಲಿ ಬಸದಿ ನಿರ್ಮಿಸಿದ ಉಲ್ಲೇಖ ಇಲ್ಲಿನ ಶಾಸನದಲ್ಲಿದೆ. ಇಲ್ಲಿನ ಹಲವು ದೇವಾಲಯಗಳು ಇದು ಅತ್ಯಂತ ಪ್ರಮುಖ ಅಗ್ರಹಾರವಾಗಿತ್ತು ಎಂಬುದಕ್ಕೆ ಸಾಕ್ಷಿ. ಇನ್ನು ಸಮೀಪದಲ್ಲಿ ಜಲಗಾರದಿಬ್ಬದ ಬಳಿ ಸಿಕ್ಕ ಅವಶೇಷಗಳು, ಮಡಕೆಯ ಚೂರುಗಳು ಇಲ್ಲಿನ ಇತಿಹಾಸವನ್ನ ಪುರಾತನಕ್ಕೆ ಕೊಂಡುಯುತ್ತದೆ.

ಹೊನ್ನದೇವಿ ದೇವಾಲಯ

ಇಲ್ಲಿನ ಅತ್ಯಂತ ಪ್ರಾಚೀನ ದೇವಾಲಯವಾದ ಇದು ಸಂಪೂರ್ಣವಾಗಿ ನವೀಕರಣಗೊಂಡಿದೆ. ಕೆರೆಯ ಅಂಚಿನಲ್ಲಿ ಇರುವ ಈ ದೇವಾಲಯ ಗರ್ಭಗುಡಿ ಹಾಗು ವಿಶಾಲವಾದ ಮಂಟಪವನ್ನು (ನವರಂಗ) ಹೊಂದಿದ್ದು ಗರ್ಭಗುಡಿಯಲ್ಲಿ ಪುರಾತನವಾದ ಹೊನ್ನದೇವಿಯ ಪ್ರತಿಮೆ ಇದೆ. ಅಸುರ ಮರ್ಧನ ಭಂಗಿಯಲ್ಲಿನ ಶಿಲ್ಪದ ಕೈಗಳಲ್ಲಿ ಗುರಾಣಿ, ಕತ್ತಿ, ತ್ರಿಶೂಲ, ಡಮರುಗ, ಪಾನಪಾತ್ರೆ ಹಾಗು ಅಭಯಹಸ್ತ ಇದ್ದು ಬಲಭಾಗದಲ್ಲಿ ದುರ್ಗಿ ಹಾಗು ಎಡ ಭಾಗದಲ್ಲಿ ಶಾರದೆಯ ಶಿಲ್ಪವಿದೆ.

ದೇವಾಲಯದ ಕಂಭಗಳಲ್ಲಿ ಗಂಗರ ಕಾಲದ ನಾಲ್ಕು ಕಂಭಗಳನ್ನು ಹಾಗೆಯೆ ಉಳಿಸಿಕೊಂಡಿದ್ದು ನವೀಕರಣ ಮಾಡಲಾಗಿದೆ. ಇನ್ನು ನವರಂಗದಲ್ಲಿ ಪ್ರತ್ಯೇಕವಾದ ಎಂಟು ಗರ್ಭಗುಡಿಗಳನ್ನ ಸ್ಥಾಪಿಸಲಾಗಿದ್ದು ಇಲ್ಲಿ ಗಣಪತಿ ಹಾಗು ಸಪ್ತಮಾತೃಕೆಯರೆ ಶಿಲ್ಪಗಳನ್ನು ಇರಿಸಲಾಗಿದೆ. ಇದಕ್ಕೆ ಹೊಂದಿಕೊಂಡಂತೆ ವಿಶಾಲವಾದ ತೆರೆದ ಮಂಟಪವಿದ್ದು ಮುಂಚೆ ಒಳ ಭಾಗದಲ್ಲಿ ಇದ್ದ ನಂದಿಯನ್ನ ಇರಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ಮೂಲ ದೇವಾಲಯದ ಅವಷೇಶಗಳನ್ನ ಹಾಕಲಾಗಿದ್ದು ಅದನ್ನ ಕ್ರಮಬದ್ದವಾಗಿ ಜೋಡಿಸಿದಲ್ಲಿ ಅನುಕೂಲ.

ಜನರ್ಧಾನ ದೇವಾಲಯ

ಚೋಳರ ಶೈಲಿಯಲ್ಲಿ ನಿರ್ಮಾಣವಾದ ದೇವಾಲಯ ಎನ್ನಲಾದರೂ ಹೊಯ್ಸಳರ ಕಾಲದ ಹಲವು ಶಾಸನಗಳು ಇರುವ ಹಿನ್ನೆಲೆಯಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಎನ್ನಬಹುದು.
ಶಾಸನಗಳಲ್ಲಿ ಚೊಕ್ಕಪ್ಪೆರುಮಾಳು ಎಂದೇ ಕರೆದಿರುವ ಹಿನ್ನೆಲೆಯಲ್ಲಿ ಚೋಳರ ಕಾಲದ ನವೀಕರಣದ ಸಾಧ್ಯತೆಗಳಿವೆ. ಸುಮಾರು 12 ನೇ ಶತಮಾನದ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಸುಖನಾಸಿ, ಪ್ರದಕ್ಶಿಣೆ ಪಥ, ನವರಂಗ, ಮಂಟಪ ಹಾಗು ಪ್ರವೇಶ ಮಂಟಪವನ್ನು ಹೊಂದಿದೆ. ಇನ್ನು ಗರ್ಭಗುಡಿಯಲ್ಲಿ ನಂತರ ಕಾಲದಲ್ಲಿ ಬದಲಾದ ಜನರ್ಧಾನ ಶಿಲ್ಪವಿದ್ದು ಚಕ್ರ, ಶಂಖ, ಗಧಾ ಹಾಗು ಅಭಯಹಸ್ತ ಧಾರಿಯಾಗಿದ್ದಾನೆ. ಶಿಥಿಲಗೊಂಡಿದ್ದ ದೇವಾಲಯವನ್ನು 2011 ರಲ್ಲಿ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಸಹಕಾರದೊಂದಿಗೆ 2011 ರಲ್ಲಿ ಜಿರ್ಣೋದ್ದಾರ ಮಾಡಲಾಗಿದೆ.

ದೇವಾಲಯದಲ್ಲಿನ ನವರಂಗ, ಮಂಟಪ ಹಾಗು ಪ್ರವೇಶ ಮಂಟಪದಲ್ಲಿ ಕಂಭಗಳಿದ್ದು ಯಾವುದೇ ಉಬ್ಬು ಶಿಲ್ಪಗಳ ಕೆತ್ತೆನೆ ಕಾಣ ಬರುವದಿಲ್ಲ. ಇನ್ನು ಮಂಟಪದಲ್ಲಿ ರಾಮಾನುಜಾಚಾರ್ಯ ಹಾಗು ಆಳ್ವಾರ ಪ್ರತಿಮೆಗಳನ್ನು ನೋಡಬಹುದು.

ಕೈಲಾಸೇಶ್ವರ ದೇವಾಲಯ :

ಗಂಗರ ಕಾಲದ ಈ ದೇವಾಲಯ ಗರ್ಭಗುಡಿ, ಸುಕನಾಸಿ, ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ಶಿವನ ಎದುರು ನಂದಿ ಇದೆ. ಇನ್ನು ಇಲ್ಲಿ ಗಂಗರ ಕಾಲಕ್ಕೆ ಸೇರಿದ ಗಣಪತಿ ಹಾಗು ನಾಗ ಶಿಲ್ಪಗಳು ಗಮನ ಸೆಳೆಯುತ್ತದೆ. ನವಂಗದಲ್ಲಿ ಹೊನ್ನಾದೇವಿಯ ಉತ್ಸವ ಮೂರ್ತಿಯನ್ನ ಇರಿಸಲಾಗಿದೆ. ಈ ದೇವಾಲಯ ಸುಮಾರು 1150 ರಲ್ಲಿ ಪುನರ್ನಿಮಾಣವಾಗಿದ ಉಲ್ಲೇಖವಿದೆ. ದೇವಾಲಯದ ಹೊರಭಿತ್ತಿಯಲ್ಲಿ ಅಲಂಕರಣಗಳಿಲ್ಲ. ದೇವಾಲಯಕ್ಕೆ ಚಿಕ್ಕದಾದ ಪ್ರವೇಶ ಮಂಟಪವಿದ್ದು ಹೊನ್ನುಡಿಕೆಯ ಪುರಾತನ ದೇವಾಲಯಗಳಲ್ಲಿ ಒಂದು.

ಬಸವೇಶ್ವರ ದೇವಾಲಯ

ಸುಂದರವಾದ ಮೂರು ಅಡಿ ಎತ್ತರದ ಬಸವನ ಶಿಲ್ಪವನ್ನು ಹೊಂದಿರುವ ದೇವಾಲಯ ಊರ ಮಧ್ಯದಲ್ಲಿದೆ. ಶಿಥಿಲವಾಗಿದ್ದ ಈ ದೇವಾಲಯವನ್ನು ನವೀಕರಣ ಮಾಡಲಾಗಿದ್ದು ಸಾಕಷ್ಟು ಜನರು ಇಲ್ಲಿಗೆ ಬರುತ್ತಾರೆ,

ತಲುಪವ ಬಗ್ಗೆ : ಹೊನ್ನುಡಿಕೆ ತುಮಕೂರಿನಿಂದ ಸುಮಾರು ತುಮಕೂರಿನಿಂದ ಸುಮಾರು 19 ಕಿ ಮೀ ದೂರದಲ್ಲಿ ಶಿವಗಂಗೆಯಿಂದ ಸುಮಾರು 17 ಕಿ ಮೀ ಹಾಗು ಬೆಂಗಳೂರಿನಿಂದ ಸುಮಾರು 60 ಕಿ ಮೀ ದೂರದಲ್ಲಿದ್ದು ಆಲದಹಳ್ಳಿ ಅಥವಾ ಡಾಬಸ್ ಪೇಟೆ ಮಾರ್ಗವಾಗಿಯೂ ತಲುಪಬಹುದು. (ತುಮಕೂರು ರಸ್ತೆ)

ಲೇಖಕರು,
ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *