ಹಲವಾರು ಬಾರಿ ಪ್ರಶಸ್ತಿಗೆ ಹೆಸರು ನಾಮಿನೇಟ್ ಆದರೂ ಕೆಲವು ಗಣ್ಯರಿಗೆ ಇನ್ನೂ ದೊರೆತಿಲ್ಲ ವಿಶ್ವದ ಈ ಪ್ರತಿಯೊಂದು ಪ್ರತಿಷ್ಠಿತ ಗೌರವ

ಮಿತ್ರರೇ, ನೊಬೆಲ್ ಪ್ರಶಸ್ತಿಯ ಬಗ್ಗೆ ತಿಳಿಯದವರು ಯಾರೂ ಇರಲಿಕ್ಕಿಲ್ಲ. ಸದ್ಯಕ್ಕೆ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ನೊಬೆಲ್ ಕೂಡ ಒಂದು. ನೊಬೆಲ್ ಪ್ರಶಸ್ತಿ ಹುಟ್ಟಿದ್ದು ಕೂಡ ಒಂದು ಕುತೂಹಲಕಾರಿ ಘಟನೆಯೇ… ನಿಮ್ಮಲ್ಲಿ ಅನೇಕರಿಗೆ ಈ ಘಟನೆ ತಿಳಿದಿರಬಹುದು, ಆದರೂ ಅದನ್ನೊಮ್ಮೆ ನೆನಪಿಸುವೆ!

ಅಲ್ಫ್ರೆಡ್ ನೋಬೆಲ್ ‘ಡೈನಾಮೆಟ್’ ವಿಸ್ಫೋಟಕವನ್ನು ಆವಿಷ್ಕರಿಸಿದಾತ. ಈ ವಿಸ್ಫೋಟಕವು ಯುದ್ಧ ಹಾಗೂ ಗಣಿಗಾರಿಕೆಯಲ್ಲಿ ಬಳಕೆಯಾಗುತ್ತಿತ್ತು. ಇದರಿಂದಾಗಿ ನೊಬೆಲ್ ಅತಿ ಶೀಘ್ರದಲ್ಲಿ ಸಂಪತ್ತನ್ನು ಗಳಿಸಿ ಸಿರಿವಂತರಾದ. 1888 ರ ಒಂದು ಮುಂಜಾನೆ ಆಲ್ಫ್ರೆಡ್ ನೊಬೆಲ್ ದಿನಪತ್ರಿಕೆಯಲ್ಲಿ ತಮ್ಮದೇ ನಿಧನ ವಾರ್ತೆಯನ್ನು ಓದಿದರು! ಅದರಲ್ಲಿ “ದಿ ಮರ್ಚೆಂಟ್ ಆಫ್ ದ ಡೆತ್ ಈಸ್ ಡೆಡ್” ಎಂದು ಬರೆಯಲಾಗಿತ್ತು. ನೋಬೆಲ್ ರ ಸಹೋದರನ ಮರಣದ ವಾರ್ತೆಯನ್ನು ದಿನಪತ್ರಿಕೆ ಹೀಗೆ ತಪ್ಪಾಗಿ ನಮೂದಿಸಿತ್ತು! ಆದರೆ, ಇದು ನೋಬೆಲ್ ರನ್ನು ಚಿಂತೆಗೀಡು ಮಾಡಿದ್ದು ಮಾತ್ರ ಬೇರೆ ಕಾರಣಕ್ಕೆ. ನಾನು ಸತ್ತರೆ ಜನತೆ ನನ್ನನ್ನು “ಸಾವಿನ ವ್ಯಾಪಾರಿ” ಎಂದು ನೆನಪಿಟ್ಟುಕೊಳ್ಳುತ್ತಾರೆ… ಎಂಬ ಸತ್ಯವನ್ನು ಅವರು ಅರಿತರು. ಇದರ ಬಗ್ಗೆ ಖೇದಗೊಂಡ ನೊಬೆಲ್, ಜನತೆಯ ಮನದಲ್ಲಿ ಉತ್ತಮ ರೀತಿಯಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಕೆಲಸ ಮಾಡಬೇಕೆಂದು ನಿರ್ಧರಿಸಿದರು.

ಯುದ್ಧದಲ್ಲಿ ಡೈನಮೆಟ್ ಬಳಕೆಯಿಂದ ಉಂಟಾದ ಅಪಾರ ಸಾವು ನೋವುಗಳಿಂದ ವಿಚಲಿತರಾದ ನೊಬೆಲ್, ತಮ್ಮ ಸಂಪತ್ತಿನ ಶೇಕಡ 94ರನ್ನು ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದವರಿಗೆ ಪ್ರಶಸ್ತಿ ನೀಡಲು ಮೀಸಲಾಗಿರಿಸಿದರು. ತಮ್ಮ 63ನೇ ವಯಸ್ಸಿನಲ್ಲಿ 1896 ರಲ್ಲಿ ನೊಬೆಲ್ ನಿಧನರಾದರು. ಅವರ ಉಯಿಲಿನ ಪ್ರಕಾರವಾಗಿ 1901 ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ನೀಡಲಾಯಿತು.

ಈ ಪ್ರಶಸ್ತಿಯನ್ನು ನೀಡಲು ನಾರ್ವೆಯ ಓಸ್ಲೋದಲ್ಲಿ ಪ್ರತಿಷ್ಠಾನ ರಚಿಸಲಾಗಿದೆ. ಆಲ್ಫ್ರೆಡ್ ನಿಧನರಾದಾಗ ನಾರ್ವೆ ಹಾಗೂ ಸ್ವೀಡನ್ ಒಂದೇ ಒಕ್ಕೂಟದಲ್ಲಿದ್ದು ನಂತರ ಪ್ರತ್ಯೇಕಗೊಂಡಿತು. 1897ರ ನಂತರ ನಾರ್ವೆ ಸರಕಾರ ಈ ಪ್ರಶಸ್ತಿ ನೀಡಲು ಅನುಮೋದನೆ ನೀಡಿತು. ಬಳಿಕ ನೋಬೆಲ್ ಫೌಂಡೇಶನ್ ರಚನೆಯಾಗಿ 1901 ರಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ಅಧಿಕೃತವಾಗಿ ನೆರವೇರಿತು.

ನೊಬೆಲ್ ಪ್ರಶಸ್ತಿಯ ಮೊತ್ತ 2017ರಲ್ಲಿ 7.4 ಕೋಟಿ ಎಂದು ಹೇಳಲಾಗಿದೆ. ಒಂದೇ ವಿಷಯದಲ್ಲಿ ಇಬ್ಬರೂ ಮೂವರಿಗೆ ಪ್ರಶಸ್ತಿ ನೀಡುವುದಾದರೆ ಈ ಮೊತ್ತವನ್ನು ಹಂಚಿಕೆ ಮಾಡಲಾಗುತ್ತದೆ. ಈ ಪ್ರಶಸ್ತಿಗೆ ಯಾವುದೇ ವಶೀಲಿ ಅಥವಾ ಲಾಬಿ ಅಸಾಧ್ಯ. ನೊಬೆಲ್ ಪ್ರಶಸ್ತಿಗೆ ಅವರೇ ಹೆಸರನ್ನು ಸೂಚಿಸಿಕೊಳ್ಳುವಂತಿಲ್ಲ. ಇತರರು ಅವರ ಹೆಸರನ್ನು ಸೂಚಿಸಬೇಕು ಮತ್ತು ನಾಮನಿರ್ದೇಶನದ ಸಂದರ್ಭದಲ್ಲಿ ಸಾಧಕ ಜೀವಂತವಾಗಿರಬೇಕು. ಪ್ರತಿ ಕ್ಷೇತ್ರದಲ್ಲಿ 200 ನಾಮನಿರ್ದೇಶನಗಳು ಮಾತ್ರ ಇರಬೇಕು. ಅದರಲ್ಲಿ ಸಮಿತಿಯು ಪ್ರತಿ ಕ್ಷೇತ್ರದಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತದೆ. ಜೊತೆಗೆ ಪ್ರತಿ ಕ್ಷೇತ್ರಕ್ಕೂ ಬೇರೆಬೇರೆ ಆಯ್ಕೆ ಸಮಿತಿಗಳಿರುತ್ತದೆ.

ಮಿತ್ರರೇ, ನೊಬೆಲ್ ಪ್ರಶಸ್ತಿಯ ಸುದೀರ್ಘ ಇತಿಹಾಸವನ್ನು ಓದಿದಿರಿ. ಹೌದು! ನಿಮಗೆಲ್ಲ ತಿಳಿದಿದೆ… ಇದುವರೆಗೆ 10 ಭಾರತೀಯರು ಈ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅದರಲ್ಲಿ ರವೀಂದ್ರನಾಥ ಟ್ಯಾಗೋರ್, ಸರ್ ಸಿ. ವಿ. ರಾಮನ್, ಮದರ್ ತೆರೇಸಾ ಮತ್ತಿತರರಿದ್ದಾರೆ. ಆದರೆ, ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡೂ ಪ್ರಶಸ್ತಿ ಪಡೆಯದ ಭಾರತೀಯರು ಕೆಲವರಿದ್ದಾರೆ. ಇವರ ಬಗ್ಗೆ ನಮಗೆ ಖಂಡಿತ ಅರಿವಿಲ್ಲ. ಅಂತಹ ಭಾರತೀಯರ ಪರಿಚಯ ಇಲ್ಲಿದೆ ನೋಡಿ.

ಮಹಾತ್ಮ ಗಾಂಧಿ

ನಮ್ಮ ‘ರಾಷ್ಟ್ರಪಿತ’ ಎನಿಸಿಕೊಂಡ ಮಹಾತ್ಮ ಗಾಂಧಿಯವರು ನೊಬೆಲ್ ಶಾಂತಿ ಪ್ರಶಸ್ತಿಗಾಗಿ ನಾಲ್ಕು ಬಾರಿ ನಾಮನಿರ್ದೇಶನಗೊಂಡಿದ್ದಾರೆ. ಆದರೆ, ಅವರಿಗೆ ನೊಬೆಲ್ ದೊರಕದಿದ್ದದ್ದು ಭಾರತೀಯರಿಗೆ ನಿರಾಶೆ ತಂದಿದೆ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹೆಸರನ್ನು ಕೇಳದವರಿಲ್ಲ. ಭಾರತದ ಉಪರಾಷ್ಟ್ರಪತಿ ಹಾಗೂ ರಾಷ್ಟ್ರಪತಿಯಾಗಿ ಇದ್ದ ಅವರು ಕೂಡ ತಮ್ಮ ಸಾಧನೆಯ ಮೇರೆಗೆ ಹನ್ನೊಂದು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಹಾಗೆಯೇ, ಹದಿನಾರು ಬಾರಿ ತಮ್ಮ ಸಾಹಿತ್ಯ ಸೇವೆಗೆ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಆದರೆ, ಪ್ರಶಸ್ತಿ ಇವರ ಮುಡಿಗೇರಲಿಲ್ಲ… ಎಂಬುದು ನೋವಿನ ಸಂಗತಿ!

ಆರ್. ಕೆ. ನಾರಾಯಣ್

ಇನ್ನೊಬ್ಬ ಮಹನೀಯರು, ಆರ್. ಕೆ. ನಾರಾಯಣ್. ಇವರು ಭಾರತದ ಪ್ರಸಿದ್ಧ ಆಂಗ್ಲ ಸಾಹಿತಿಗಳಲ್ಲೊಬ್ಬರು. ‘ಮಾಲ್ಗುಡಿ ಡೇಸ್’ ನಂತಹ ಕೃತಿಯ ಸೃಷ್ಟಿಕರ್ತರು. ಅವರ ಸಾಹಿತ್ಯ ಕೃಷಿಗಾಗಿ ಹಲವು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡೂ ಪ್ರಶಸ್ತಿ ಗಳಿಸುವಲ್ಲಿ ವಿಫಲರಾಗಿದ್ದಾರೆ. ಮೇಘನಾಥ್ ಸಹ ಭಾರತದ ಪ್ರಮುಖ ಭೌತವಿಜ್ಞಾನಿಯಾಗಿ ಇದ್ದರು. ಇವರು ಕೂಡ ಏಳು ಬಾರಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ನೊಬೆಲ್ ಪ್ರಶಸ್ತಿ ಇವರಿಗೂ ಗಗನ ಕುಸುಮವಾಯಿತು.

ಹೋಮಿ ಜಹಾಂಗೀರ್ ಬಾಬಾ

ಹೋಮಿ ಜಹಾಂಗೀರ್ ಬಾಬಾ ಹೆಸರು ಗೊತ್ತಿಲ್ಲದವರೇ ವಿರಳ. ಭಾರತದ ಭೌತವಿಜ್ಞಾನಿಯಾದ ಇವರು ಅಣುಶಕ್ತಿ ಸ್ಥಾಪನೆಗೆ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವರು. ‘ಭಾರತೀಯ ಪರಮಾಣು ಕಾರ್ಯಕ್ರಮದ ತಂದೆ’ ಎಂದೇ ಆಡುಮಾತಿನಲ್ಲಿ ಇವರನ್ನು ಬಣ್ಣಿಸಲಾಗುತ್ತದೆ. ಇವರ ಹೆಸರು ನೊಬೆಲ್ ಗೆ ಐದು ಬಾರಿ ನಾಮನಿರ್ದೇಶನಗೊಂಡಿತ್ತು. ಆದರೆ, ಇವರಿಗೆ ನೊಬೆಲ್ ಪ್ರಶಸ್ತಿ ಸಿಗದೇ ಹೋದದ್ದು ಭಾರತೀಯರಿಗೆ ಬೇಸರದ ಸಂಗತಿ. ಹಾಗೆ ಸತ್ಯೇಂದ್ರನಾಥ ಬೋಸ್ ರು ಬಂಗಾಳಿ ಭೌತವಿಜ್ಞಾನಿ ಆಗಿದ್ದರು. ಇವರ ಪ್ಲ್ಯಾಂಕ್ ನ ನಿಯಮ ಹಾಗೂ ಲೈಟ್ ಕ್ವಾಂಟಮ್ ತತ್ವವನ್ನು ಐನ್ ಸ್ಟಿನರೇ ಮೆಚ್ಚಿಕೊಂಡಿದ್ದರು. ಇವರು ಕೂಡ ನೊಬೆಲ್ ಪ್ರಶಸ್ತಿಗೆ ಮೂರು ಬಾರಿ ನಾಮನಿರ್ದೇಶನಗೊಂಡರೂ, ನೊಬೆಲ್ ಪ್ರಶಸ್ತಿಗೆ ಭಾಜನರಾಗಲಿಲ್ಲ. ಟಿ.ಆರ್. ಶೇಷಾದ್ರಿಯವರು ರಸಾಯನ ಹಾಗೂ ಸಸ್ಯ ವಿಜ್ಞಾನ ಎರಡೂ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದವರು. ಇವರ ಈ ಸಾಧನೆಯಿಂದ 1966 ರಲ್ಲಿ ನೊಬೆಲ್’ಗೆ ನಾಮನಿರ್ದೇಶನಗೊಂಡಿದ್ದರು. ಆದರೆ, ನೊಬೆಲ್ ಪ್ರಶಸ್ತಿಗೆ ಭಾಜನರಾಗಲಿಲ್ಲ.

ಜಗದೀಶ್ ಚಂದ್ರ ಬೋಸ

ಜಗದೀಶ್ ಚಂದ್ರ ಬೋಸರು ಬಂಗಾಲಿ ಮೂಲದ ಭೌತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಜ್ಞಾನಿ. ಇವರು ಸಸ್ಯಗಳೂ ಸಹ ಪ್ರಾಣಿಗಳಂತೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತದೆ ಎಂದು ಜಗತ್ತಿಗೆ ಸಾಬೀತುಪಡಿಸಿ ತೋರಿಸಿದರು. ರೇಡಿಯೋ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸತ್ಯ ಜೀವಶಾಸ್ತ್ರ ಹೀಗೆ ಅನೇಕ ವಿಭಾಗಗಳಲ್ಲಿ ಸಂಶೋಧನೆ ನಡೆಸಿದವರು. ಇವರು ಕೂಡ ನೊಬೆಲ್’ಗೆ ನಾಮನಿರ್ದೇಶನಗೊಂಡಿದ್ದರು. ಆದರೆ, ನೊಬೆಲ್ ಇವರಿಗೂ ದೊರಕಲಿಲ್ಲ. ಇ.ಸಿ. ಜಾರ್ಜ್ ಸುದರ್ಶನ್ ಅವರು ಕೇರಳ ಮೂಲದ ಪ್ರಸಿದ್ಧ ಭೌತಶಾಸ್ತ್ರಜ್ಞ. ಸಾಪೇಕ್ಷ ಸಿದ್ಧಾಂತದ ಪ್ರಕಾರ ಯಾವ ವಸ್ತುವು ಬೆಳಕಿನ ವೇಗಕ್ಕಿಂತ ಹೆಚ್ಚು ವೇಗ ಪಡೆಯಲು ಸಾಧ್ಯವಿಲ್ಲ. ಆದರೆ, ಇವರು ಟ್ಯಾಟ್ರಿಯೊನ್ ಎಂಬ ಕಣ ಬೆಳಕಿನ ವೇಗಕ್ಕಿಂತ ಹೆಚ್ಚು ವೇಗವನ್ನು ಹೊಂದಬಹುದು ಎಂದು ಸೈದ್ಧಾಂತಿಕವಾಗಿ ತೋರಿಸಿದರು. ಇವರು ಒಟ್ಟು ಒಂಬತ್ತು ಬಾರಿ ನೊಬೆಲ್ ಪಾರಿತೋಷಕಕ್ಕೆ ನಾಮನಿರ್ದೇಶನಗೊಂಡರೂ ಒಂದು ಬಾರಿಯೂ ನೊಬೆಲ್ ದೊರಕದ್ದು ದೌರ್ಭಾಗ್ಯವೇ ಸರಿ!

ಡಾ. ಉಪೇಂದ್ರನಾಥ ಬ್ರಹ್ಮಚಾರಿ

ಡಾ. ಉಪೇಂದ್ರನಾಥ ಬ್ರಹ್ಮಚಾರಿ ಬಂಗಾಳಿ ವೈದ್ಯ ಮತ್ತು ವಿಜ್ಞಾನಿ. ಕಾಲ ಅಜಾರ್ ಗಾಗಿ ಔಷಧವನ್ನು ಅಭಿವೃದ್ಧಿಪಡಿಸುವಲ್ಲಿ ಸಂಶೋಧನೆ ನಡೆಸಿದವರು. ತಮ್ಮ ಜೀವನವನ್ನೇ ಈ ಸಂಶೋಧನೆಗಾಗಿ ಮುಡಿಪಿಟ್ಟ ಮಹಾನ್ ವ್ಯಕ್ತಿ. ಇವರೊಬ್ಬರೇ ವೈದ್ಯಕೀಯ ಕ್ಷೇತ್ರದಲ್ಲಿ ನೊಬೆಲ್ ಗಾಗಿ ನಾಮನಿರ್ದೇಶನಗೊಂಡ ಭಾರತೀಯರಾಗಿದ್ದರು. ಆದರೆ, ದುರದೃಷ್ಟವಶಾತ್ ಇವರು ಕೂಡ ನೊಬೆಲ್ ಪ್ರಶಸ್ತಿಯಿಂದ ವಂಚಿತರಾದರು.

Leave a Reply

Your email address will not be published. Required fields are marked *