ಸುಮಂಗಳಮ್ಮಅವರಿಂದ ಕೃಷಿ ಕ್ಷೇತ್ರದಲ್ಲಿ ಅಧ್ಬುತ ಸಾಧನೆ

ಚಿತ್ರದುರ್ಗ ಜಿಲ್ಲೆಯ ಬೊಮ್ಮಗೊಂಡನ ಕೆರೆ(ಬಿ.ಜಿ.ಕೆರೆ) ಊರಿನ ಹೆಮ್ಮೆಯ ವಸುಂಧರೆ ಶ್ರೀಮತಿ ಎಸ್. ವಿ. ಸುಮಂಗಳಮ್ಮ.

ಮೊಳಕಾಲ್ಮೂರು ತಾಲ್ಲೂಕಿಗೆ ಸೇರಿದ ಬೆಂಗಳೂರು ಮತ್ತು ಬಳ್ಳಾರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಬಿ.ಜಿ.ಕೆರೆ ಗ್ರಾಮದಲ್ಲಿ ವಸುಂಧರಾ ಕೃಷಿ ಕ್ಷೇತ್ರ ಸುಮಾರು 80 ಎಕರೆ ಪ್ರದೇಶದಲ್ಲಿ ಯಾವ ಕೃಷಿ ವಿಶ್ವವಿದ್ಯಾಲಯಕ್ಕೂ ಸಾಟಿ ಇಲ್ಲ ಎಂಬಂತಹ ಸಸ್ಯ ಕ್ಷೇತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸುಮಾರು 60 ಕ್ಕೂ ಹೆಚ್ಚು ಸ್ಥಳೀಯ ಕೃಷಿ ಕಾರ್ಮಿಕರಿಗೆ ವರುಷ ಪೂರ್ತಿ ದಿನಗೂಲಿ ಕೆಲಸ ನೀಡುತ್ತಾ ಬಂದಿದ್ದಾರೆ.

ಅತಿ ಮುಖ್ಯವಾದ ಮತ್ತೊಂದು ಕೆಲಸವೆಂದರೆ ಗ್ರಾಮೀಣ ಶೌಚಾಲಯ ನಿರ್ಮಾಣ ಮತ್ತು ಸ್ವಚ್ಛ ಭಾರತದ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುತ್ತಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸ್ವ ಇಚ್ಛೆಯಿಂದ ಕೆಲಸ ಮಾಡುತ್ತಿದ್ದದು. ಇವರು ಸರೋಜಿನಿ ಸಮಗ್ರ ಸಮುದಾಯದ ಅಭಿವೃದ್ಧಿ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿಯಾಗಿದ್ದರು.
“ಬರದ ನಾಡು” ಎಂದೇ ಹೆಸರಾದ ಈ ಸ್ಥಳದಲ್ಲಿ ಉತ್ತಮ ಕೃಷಿ ಸಾಧನೆ ಮಾಡಿದ ಮಹಿಳೆ ಇವರು.

ಎಲ್ಲಾ ವಯೋಮಾನದವರು ಇವರನ್ನು ಸುಮಕ್ಕಾ ಎಂದೇ ಸಂಭೋದಿಸುತ್ತಿದ್ದದ್ದು.
ವಯೋಸಹಜ ಅರೋಗ್ಯ ಸಮಸ್ಯೆಗಳಿಂದ ಎಲ್ಲರನ್ನು ಅಗಲಿದ ಇವರು ಸಾಧನೆಯಲ್ಲಿ ಶಿಖರಸಾಧಕರು. ಚೈತನ್ಯದ ಚಿಲುಮೆ, ಹಸನ್ಮುಖಿ, ಉಡುಗೆ ತೊಡುಗೆ ಮಾತು ಎಲ್ಲ ಆಯಾಮಗಳಲ್ಲೂ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು.

ಓದಿರುವುದು ಪಿ.ಯು.ಸಿ ಮಾತ್ರ ಸಾಧನೆಯಲ್ಲಿ ಯಾವ ಪದವಿಗೂ ಸರಿಸಾಟಿಯಿಲ್ಲ. ಕೃಷಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕೃಷಿಯಲ್ಲಿ ಅವಿಷ್ಕಾರವನ್ನೇ ಸೃಷ್ಟಿಸಿದ ಮಹಿಳೆ.

ಕೃಷಿಗೆ ಸಂಬಂಧಿಸಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದವರು. ಮುಖ್ಯವಾಗಿ ಕಳೆದ ವರುಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಭೂ ತಾಯಿಯ ಭಗಿನಿ ಪ್ರಶಸ್ತಿ, ಕೃಷಿ ಕ್ಷೇತ್ರದ ಸಾಧನೆಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡವರು. ಆಸ್ಪಿ ಎಲ್. ಎಮ್. ಪಟೇಲ್ ಸಂಸ್ಥೆಯಿಂದ 2010 ನೇ ಸಾಲಿನ “ಅತ್ಯುತ್ತಮ ರೇಷ್ಮೆ ಬೆಳೆಗಾರ ಪ್ರಶಸ್ತಿ”, “ಉತ್ತಮ ಮಹಿಳಾ ಉದ್ಯಮ ಶೀಲತೆ” ರಾಷ್ಟ್ರೀಯ ಪ್ರಶಸ್ತಿ, ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಉತ್ತಮ ಸಾಧಕಿಯಾಗಿ ಸಾಧನಾ ಪ್ರಶಸ್ತಿ, ನಬಾರ್ಡ್ ಸಂಸ್ಥೆಯಿಂದ ರೈತ ಒಕ್ಕೂಟ ಅಭಿವೃದ್ಧಿ ಗೆ ” ಉತ್ತಮ ಸಾಧಕಿಯಾಗಿ ಸಾಧನಾ ಪ್ರಶಸ್ತಿ” ಹೀಗೆ ಇನ್ನೂ ಹತ್ತು ಹಲವಾವಾರು ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಸುಮಂಗಳಮ್ಮನವರು.

ಮೊಟ್ಟ ಮೊದಲು ಟ್ರಾಕ್ಟರ್ ಚಾಲನೆಗೆ ಲೈಸೆನ್ಸ್ ಪಡೆದ ಧೀರೆ, ದಿಟ್ಟ ಮನೋಭಾವದ ಮಹಿಳೆ.
ಶ್ರಮಿಕ ಕೃಷಿಕರು ನಮ್ಮ ವೀರಭದ್ರಪ್ಪೋರ ಸುಮಕ್ಕನವರು ಹೀಗೆ ಪತಿಯ ಹೆಸರಿನೊಂದಿಗೆ ಇವರ ಹೆಸರಿನ ಉಚ್ಛಾರಣೆ ಮಾಡುವುದು ಪರಿಚಯದವರೆಲ್ಲರು ಕರೆಯುವ ಅವರ ರೂಢಿ ನಾಮವಾಗಿದೆ. ಈಗ ಅವರು ನೆನಪಾಗಿ ಉಳಿದರೆನ್ನುವುದೇ ಬೇಸರದ ಸಂಗತಿ.ಭೌತಿಕವಾಗಿ ಅವರು ನಮ್ಮನ್ನಗಳಲಿರಬಹುದು, ಆದರೆ ಬಿ.ಜಿ. ಕೆರೆಯ ಪ್ರತಿ ಶ್ರಮಿಕ ಮಹಿಳೆಯರ ಉತ್ಸಾಹದಲ್ಲೂ ಅವರು ಜೀವಂತವಾಗಿದ್ದಾರೆ.

ನಮ್ಮೂರಿನ ಅನೇಕ ಮೊದಲುಗಳಿಗೆ ಕಾರಣರಾದವರು ಸುಮಕ್ಕನವರು. ಹೆಂಗಳೆಯರಿಗೆ ಛಲ, ಬಲ, ಬೆಲೆ ತಂದುಕೊಟ್ಟವರು. ಅನೇಕ ಮಹಿಳಾ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿದವರು. ಹೆಣ್ಣುಮಕ್ಕಳು ಸಣ್ಣ ಮಟ್ಟದ ಹಣ ಸಂಗ್ರಣೆಗೆ ಪ್ರೋತ್ಸಾಹ ನೀಡಿದವರು. ಇದರಿಂದ ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ಮಹಿಳೆಯರ ಉಳಿತಾಯ ಖಾತೆಗಳು ಹೆಚ್ಚಿದವು. ನಾಲ್ಕು ಗೋಡೆಗೆ ಸೀಮಿತರಾಗಿದ್ದ ಮಹಿಳೆಯರು ಹೊರಗಿನ ಪ್ರಪಂಚದ ಜೊತೆ ಧೈರ್ಯದಿಂದ ಒಡನಾಟ ಬೆಳೆಸಿಕೊಂಡು ಬ್ಯಾಂಕ್, ಪೋಸ್ಟ್ ಆಫೀಸ್ ಗಳಲ್ಲಿ ಸ್ವತಃ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಣತನದಿಂದ ಮುನ್ನಡೆಯಲು ಬೆಳಕು ಚೆಲ್ಲಿದವರು ನಮ್ಮ ಸುಮಕ್ಕಾ. ಕೆಲವರು ಸಣ್ಣ ಗುಡಿ ಕೈಗಾರಿಕೆಗಳನ್ನು ಮಾಡಿಕೊಂಡು ಮನೆಯಲ್ಲೇ ಇದ್ದು ದುಡಿಯಲು ತರಬೇತಿ, ಪ್ರೋತ್ಸಾಹ ಮತ್ತು ಉತ್ಸಾಹ ತುಂಬುವಲ್ಲಿ ಸುಮಕ್ಕನ ಶ್ರಮ ಅಪಾರ.

ಕೃಷಿ ಕುರಿತಂತೆ ದೇಶ ವಿದೇಶಗಳಲ್ಲಿ ನಡೆಯುವ ಕೃಷಿ ಕಾನ್ಫರೆನ್ಸ್ ಗಳಲ್ಲಿ ಭಾಗವಹಿಸಿ ಹೊಸ ಕೃಷಿ ಚಟುವಟಿಕೆಗಳ ಪ್ರಯೋಗ ಮಾಡಿ ಹೆಸರು ಮಾಡಿದ ಮೊದಲ ಮಹಿಳಾ ರತ್ನ. ಇವರ ಪತಿಯ ಪ್ರೋತ್ಸಾಹವೇ ಇವರಿಗೆ ಬೆನ್ನೆಲುಬು. ಸದಾ ಪತಿಯೊಂದಿಗೆ ತೋಟದಲ್ಲೇ ಇದ್ದು ಸರಳ ಜೀವನ ನಡೆಸುತ್ತಿದ್ದ ಸುಮಕ್ಕನವರದು ಮೇರು ವ್ಯಕ್ತಿತ್ವ.

ಅವರ ತೋಟದ ಹೆಸರು “ವಸುಂಧರ ಕೃಷಿ ಕ್ಷೇತ್ರ” ಇಲ್ಲಿ ತೆಂಗು ,ಬಾಳೆ, ಅಡಿಕೆ, ಸೀಬೇ, ನಿಂಬೆ, ನುಗ್ಗೆ,ಮಾವು, ಹುಣಸೆ, ಬೇವೂ, ಹಲಸು,ಸೀತಾಫಲ, ಲಕ್ಷ್ಮಣ ಫಲ, ಹಾಗೂ ತರಾವರಿ ಹಸು, ಎಮ್ಮೆಗಳ ತಳಿ, ಅನೇಕ ಕುರಿಯ ತಳಿಗಳು,ಕೋಳಿ ,ಮೀನು, ಜೇನು ಸಾಕಾಣಿಕೆ, ರೇಷ್ಮೇ ಬೆಳೆ, ಜೊತೆಗೆ ಮುದ್ದಾದ ಮೂರ್ನಾಲ್ಕು ಬೆಕ್ಕು ಮತ್ತು ನಾಯಿಗಳುನ್ನು ಸಾಕಿದ್ದಾರೆ.

ತುಂಬಾ ಸ್ಪೆಷಲ್ ಇವರ ತೋಟದ ನೀರು ಸಂಗ್ರಹಣೆಯ ತೊಟ್ಟಿ. ಇದು ಮಕ್ಳಳಿಗೆ ಈಜುಕೊಳ. ಇತ್ತೀಚಿನ ಬಿ.ಜಿ.ಕೆರೆಯ ಮಕ್ಕಳು ಈಜು ಕಲಿಯುತ್ತಿರುವುದೇ ಇವರ ತೋಟದಲ್ಲಿ. ಇದು ಎಲ್ಲಕ್ಕೂ ವಿಶೇಷವೇ. ತೆಂಗಿನ ಮರದಿಂದ ತೆಗೆದ ನೀರಾ ತುಂಬಾ ವಿಶೇಷವಾದುದು.
ಹೀಗೆ ಇನ್ನು ಹತ್ತು ಹಲವು ಗಿಡ ಮರಗಳ ತಾಯಿ ಈಕೆ. ಇವೆಲ್ಲವುಗಳ ಆರೈಕೆಯ ಕೆಲಸದ ಸಿಂಹ ಪಾಲು ಸುಮಂಗಳ ವೀರಭದ್ರಪ್ಪನವರದು.

ಆ ಊರಿನ ಒಬ್ಬ ಕೂಲಿಗೆ ಹೋಗುವ ಹೆಣ್ಣುಮಗಳು ಕೂಡ ಇವರು ನಮ್ಮೂರ ಹೆಣ್ಣು ಮಕ್ಕಳಗೇ ಬಲ ಎಂದೆ ಸಂಭೋದಿಸುತ್ತಾ, ಕಂಬನಿಗರೆದು ಹೇಳುವವರೇ, ಇವರು ನಮ್ಮನ್ನ ಬಿಟ್ಟು ಹೋದದ್ದು ಇಡೀ ಊರಿಗೆ ತುಂಬಾ ಲಾರದ ನಷ್ಟ ಎಂದು ಹೇಳುವರು….. ಅಷ್ಟೊಂದು ಅಚ್ಚು ಮೆಚ್ಚಿನ ಹೆಣ್ಣುಮಗಳು ಸುಮಂಗಳಾ ಅವರು .
ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಕ್ಕರೆ ಖಾಯಿಲೆಯಿಂದ ನರಳುತ್ತಿದ್ದರು. ಅದನ್ನೆಂದೂ ಅವರು ತೋರ್ಪಡಿಸಿದ್ದೇ ಇಲ್ಲ . ಸದಾ ಚಟುವಟುಕೆಯಿಂದ ಇದ್ದ ಕೃಷಿ ಪಟು ಸುಮಕ್ಕನವರು.

ಅಷ್ಟೇ ಅಲ್ಲಾ 90 ರಿಂದ 14, 15 ರ ಎಲ್ಲಾ ವಯೋಮಾನದ ಊರಿನ ಎಲ್ಲಾ ಮಹಿಳೆಯರನ್ನು ತಮ್ಮ ಸ್ವ ಆಸಕ್ತಿ ಯಿಂದ ಪ್ರವಾಸ ಕೈಗೊಂಡು ಭಾರತ ದರ್ಶನ ಮಾಡಿಸಿದ ದಿಟ್ಟೆ ಹಾಗೂಋ ಸ್ವತಃ ಹವ್ಯಾಸಿ ಪ್ರವಾಸಿಗರು ಸುಮಕ್ಕನವರು. ಮಾತೃಭಾಷೆ ಕನ್ನಡದ ಜೊತೆಗೆ ಹಿಂದಿ ,ಇಂಗ್ಲಿಷ್, ಮರಾಠಿ, ತೆಲುಗು, ಗುಜರಾತಿ,ತಮಿಳು, ಭಾಷೆಯಲ್ಲಿ ಸರಾಗವಾಗಿ ಮಾತನಾಡುತ್ತಿದ್ದರು. ಇಂತಹ ಒಬ್ಬ ಹೆಮ್ಮೆಯ ಗರಿ ಇಂದು ಮುಂಜಾನೆ ಇಹ ಲೋಕ ತ್ಯಜಿಸಿದ್ದು ತುಂಬಾ ದುಃಖದ ಸಂಗತಿ.ಶ್ರಮಿಕ ಮಹಿಳೆಯರ ಆಶಾಕಿರಣ.

ಈ ಮಣ್ಣಿನ ಹೆಮ್ಮೆಯ ಮಗಳು ಮತ್ತೊಮ್ಮೆ ಹುಟ್ಟಿ ಬರಲೆಂದು ಭಗವಂತನಲ್ಲಿ ಬೇಡುವೆ.
ಇವರ ಕುಟುಂಬದವರಿಗೆ ಆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ.

ಶೋಭಾ ಮಂಜುನಾಥ್
ಚಿತ್ರದುರ್ಗ

Leave a Reply

Your email address will not be published. Required fields are marked *