ಸಿದ್ಧಾರ್ಥ್ ಅಂತ್ಯಕ್ರಿಯೆ; ಮುಗಿಲು ಮುಟ್ಟಿದ ಆಕ್ರಂದನ

ನಾಪತ್ತೆಯಾದ ಬಳಿಕ ನೇತ್ರಾವತಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾದ ಕೆಫೆ ಕಾಫೀ ಡೇ ಹರಿಕಾರ, ಉದ್ಯಮಿ ಹಾಗೂ ಮಾಜಿ ಸಿಎಂ ಎಸ್. ಎಮ್. ಕೃಷ್ಣರ ಅಳಿಯ ಸಿದ್ಧಾರ್ಥ್ ಅಂತ್ಯಕ್ರಿಯೆ ಒಕ್ಕಲಿಗ ಸಂಪ್ರದಾಯದಂತೆ ಬುಧವಾರ ಸಂಜೆ ನೆರವೇರಿತು.

ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ಸೇತುವೆ ಬಳಿಯಿಂದ ನಿಗೂಢವಾಗಿ ಕಣ್ಮರೆಯಾಗಿದ್ದ ವಿ.ಜಿ. ಸಿದ್ಧಾರ್ಥ್ ಮೃತದೇಹ ಎಡೆಬಿಡದ ಶೋಧದ ಬಳಿಕ ಬುಧವಾರ ಬೆಳಗ್ಗೆ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಪತ್ತೆಯಾಯಿತು. ಬಳಿಕ ಮೃತದೇಹವನ್ನು ಚಿಕ್ಕಮಗಳೂರಿನ ಮಾರ್ಗವಾಗಿ ಮೂಡಿಗೆರೆ ತಾಲೂಕಿನ ಚೇತನಹಳ್ಳಿ ಎಸ್ಟೇಟಿಗೆ ತರಲಾಯಿತು. ಬಳಿಕ ಹೆಗ್ಡೆ(ಒಕ್ಕಲಿಗ) ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನಡೆಸಲಾಯಿತು.
ಇದಕ್ಕೂ ಮುನ್ನ ಸಿದ್ಧಾರ್ಥ್ ಸಂಬಂಧಿಕರಿಂದ ಚಿತೆಗೆ ಪೂಜೆ ನೆರವೇರಿತು. ಸಿದ್ಧಾರ್ಥ್ ಅವರ ಹಿರಿಯ ಪುತ್ರ ಅಮಾರ್ತಾಯ ಪಾರ್ಥಿವ ಶರೀರಕ್ಕೆ ವಿಧಿ-ವಿಧಾನಗಳನ್ನು ನೆರವೇರಿಸಿ ಹಲಸು , ಗಂಧ ಹಾಗೂ ನೇರಳೆ ಕಟ್ಟಿಗೆಗಳಿಂದ ಮಾಡಿದ್ದ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತ್ಯಕ್ರಿಯೆ ವೇಳೆಗೆ ಕೇವಲ ಕುಟುಂಬಸ್ಥರು ಹಾಗೂ ಸಂಬಂಧಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಹೆಚ್ಚು ನೂಕುನುಗ್ಗಲು ಆಗದಂತೆ ಅಂತ್ಯಸಂಸ್ಕಾರದ ಜಾಗವನ್ನು ಹಗ್ಗದ ಬೇಲಿಯಿಂದ ಸುತ್ತುವರಿಸ ಲಾಗಿತ್ತು.

ಸಿದ್ಧಾರ್ಥ್ ಅಂತ್ಯಕ್ರಿಯೆಗೂ ಮುನ್ನ ಸಾಕಷ್ಟು ಗಣ್ಯರು ಅಂತಿಮ ದರ್ಶನ ಪಡೆದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ,ಮಾಜಿ ಸಚಿವ ಡಿ.ಕೆ ಶಿವಕುಮಾರ್ , ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ , ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ, ಮಾಜಿ ಸಚಿವರಾದ ರಾಮನಾಥ ರೈ, ಯು.ಟಿ ಖಾದರ್ ಹಾಗೂ ಡಿ.ಸಿ ತಮ್ಮಣ್ಣ ಸೇರಿದಂತೆ ಹಲವಾರು ಗಣ್ಯರು ಸಿದ್ದಾರ್ಥ್ ಪಾರ್ಥಿವ ಶರೀರಕ್ಕೆ ವಂದಿಸಿದರು.

ಕುಟುಂಬದ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಚೇತನ ಹಳ್ಳಿಯ ಮನೆಯಲ್ಲಿ ಶೋಕಸಾಗರ ಮಡುಗಟ್ಟಿತ್ತು. ಸುಮಾರು 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿ ಜೀವನಕ್ಕೆ ದಾರಿದೀಪವಾಗಿದ್ದು ನೆಚ್ಚಿನ ಮಾಲೀಕನ ಅಗಲಿಕೆಯಿಂದ ಕೆಫೆ ಕಾಫಿ ಡೇ ಉದ್ಯೋಗಿಗಳು ಹಾಗೂ ಅವರ ಕುಟುಂಬಸ್ಥರು ಕಂಬನಿ ಮಿಡಿಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿದರು.

ಪ್ರತಿಷ್ಠಿತ ಉದ್ಯಮಿ ಹಾಗೂ ಸಾಕಷ್ಟು ಮಂದಿಗೆ ಉದ್ಯೋಗ ನೀಡಿ ಅನ್ನದಾತ ರಾಗಿದ್ದ ಸಿದ್ಧಾರ್ಥ್ ಸಾವಿಗೆ ಮೂಡಿಗೆರೆ ಜನ ಕಂಬನಿ ಮಿಡಿದರು. ಸ್ವಯಂ ಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದರು.

ಸಿದ್ಧಾರ್ಥ್ ಒಡೆತನದ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ಸಿಬ್ಬಂದಿ ತಮ್ಮ ಮಾಲೀಕರ ಅಂತಿಮ ದರ್ಶನಕ್ಕಾಗಿ ಆಗಮಿಸಿ ಸಂತಾಪ ಸೂಚಿಸಿದರು. ಚಿಕ್ಕಮಗಳೂರು ಸೇರಿದಂತೆ ವಿವಿದೆಡೆ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ ಸಿದ್ಧಾರ್ಥ್ ಪಾರ್ಥಿವ ಶರೀರ ಕಂಡು ಬಸ್ ಕಂಬನಿ ಮಿಡಿದರು. ಚಿಕ್ಕಮಗಳೂರಿನ ಎಬಿಸಿ ಆವರಣದಲ್ಲಿ ಎಲ್ಲರಿಗೂ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಸಿದ್ಧಾರ್ಥ್ ನಿಧನದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಕೇತನಹಳ್ಳಿ, ಚಟ್ನಳ್ಳಿ ,ಗೌತಳ್ಳಿ ಹಾಗೂ ಕಳೆದರು ಗ್ರಾಮ ಸೇರಿದಂತೆ ಅನೇಕ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಯಿತು. ಅಲ್ಲದೆ ಚಿಕ್ಕಮಗಳೂರು ,ಹಾಸನ ಹಾಗೂ ಮಡಿಕೇರಿಯ ಕಾಫಿ ತೋಟದಲ್ಲಿ ಒಂದು ದಿನದ ಕೆಲಸ ಸ್ಥಗಿತಗೊಳಿಸುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ದಿಂದ ಕರೆ ನೀಡಲಾಯಿತು. ಜೊತೆಗೆ ಕೆಫೆ ಕಾಫಿ ಡೇ ಸಂಬಂಧ ಎಲ್ಲ ಉದ್ಯಮಗಳಿಗೂ ರಜೆ ಘೋಷಣೆ ಮಾಡಲಾಯಿತು.

Leave a Reply

Your email address will not be published. Required fields are marked *