ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದು ಮಾದರಿಯಾದ ಪೊಲೀಸ್ ಅಧಿಕಾರಿಗಳು

ಗಂಗಾವತಿ,ಡಿ.31: ಪೊಲೀಸರಿಗೂ ಸಹ ಮಿಡಿಯುವ ಮನಸ್ಸಿರುತ್ತದೆ. ಸರ್ಕಾರಿ ಶಾಲೆಯಲ್ಲಿ ಓದುವ ಬಹುತೇಕ ಬಡ ಮಕ್ಕಳ ಕುರಿತು ಕಾಳಜಿ ಇರುತ್ತದೆ‌. ತಮ್ಮ ಕೆಲಸದ ಒತ್ತಡದ ನಡುವೆಯೂ ಕೆಲ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಕೈಲಾದ ಸೇವೆಯನ್ನು, ಸಹಕಾರವನ್ನು ನೀಡುವ ಸಹೃದಯತೆ ಸಹ ಇರುತ್ತದೆ.

ಇದಕ್ಕೆ ಸಾಕ್ಷಿಯೆಂಬಂತೆ ಇಲ್ಲಿನ ಎಪಿಎಂಸಿ ಗಂಜ್ ಹಮಾಲಿ ಕಾರ್ಮಿಕರ ಏರಿಯಾದಲ್ಲಿರುವ ಸರಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಡಾ.ಚಂದ್ರಶೇಖರ ನೇತೃತ್ವದಲ್ಲಿ ದತ್ತು ಪಡೆದುಕೊಂಡು ಶಾಲೆಯಲ್ಲಿ ಗ್ರಂಥಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ.
ಮಂಗಳವಾರ ಶಾಲೆಯಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಗ್ರಾಮೀಣ ಹಾಗೂ ಸಿಪಿಐ ಸುರೇಶ ತಳವಾರ ನಗರ ಪಿಐ ಉದಯರವಿ ತಮ್ಮ ಒಂದು ತಿಂಗಳ ವೇತನದಲ್ಲಿ ಗ್ರಂಥಾಲಯ ಹಾಗೂ ಇದಕ್ಕೆ ಬೇಕಾಗುವ ಪುಸ್ತಕಗಳನ್ನು ಖರೀದಿ ಮಾಡಲು ಹಣ ನೀಡುವುದಾಗಿ ಭರವಸೆ ನೀಡಿದರು. ಇಡೀ ಶಾಲೆಗೆ ಸುಣ್ಣ ಬಣ್ಣ ಹಚ್ಚಿ ಶಾಲೆಯ ಗೋಡೆಗಳ ಮೇಲೆ ಸಾಹಿತ್ಯ, ವಿಜ್ಞಾನ, ಕಲೆ, ಜ್ಞಾನಪೀಠ ಪುರಸ್ಕೃತರು, ನೊಬೆಲ್ ಪ್ರಶಸ್ತಿ ಪಡೆದವರು, ದೇಶದ ಪ್ರಧಾನಿ, ರಾಜ್ಯದ ಸಿಎಂ ಸೇರಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಡಿವೈಎಸ್ಪಿ ಡಾ.ಚಂದ್ರಶೇಖರ್ ಬರೆಯಿಸಿದ್ದಾರೆ.

ಬೇರೆಯವರು ಸಹ ಸರಕಾರಿ ಶಾಲೆಗಳನ್ನು ದತ್ತು ಪಡೆದು ಸೌಲಭ್ಯ ಒದಗಿಸುವಂತೆ ಬಿಇಒ ಸೋಮಶೇಖರ್ ಗೌಡ ಹೇಳಿದ್ದಾರೆ.
ನಿಜಕ್ಕೂ ಮೇಲಿನ ಈ ಕಾರ್ಯವನ್ನು ಎಲ್ಲರೂ ಪ್ರಶಂಸಿಸಲೇಬೇಕು. ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳು ಇಂತಹ ಕಾರ್ಯಕ್ಕೆ ಮುಂದಾದರೆ ಅವರನ್ನು ನೋಡಿ ಮತ್ತೊಬ್ಬರು, ಇನ್ನೊಬ್ಬರು… ಹೀಗೆ ಮುಂದೆ ಬಂದಲ್ಲಿ ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳು ಹೆಚ್ಚು ಸೌಲಭ್ಯ ಹೊಂದಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಹಾಗೂ ಬಡ ಕುಟುಂಬದ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಾಧ್ಯ ಅಲ್ಲವೇ..?

Leave a Reply

Your email address will not be published. Required fields are marked *