ಶಾಸಕ ರವೀಂದ್ರನಾಥ್ ಬಂಧನ ಆಗಿಲ್ಲ:ಚುನಾವಣಾ ವಿಷಯವು ಅಲ್ಲವೇ ಅಲ್ಲ

ದಾವಣಗೆರೆ ಏ ೨೯. “ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ್ ಅವರನ್ನು ಬಂಧಿಸಲಾಗಿದೆ” ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪು ವರದಿ ಪ್ರಕಟವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ರವೀಂದ್ರನಾಥ್ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ ಎಂಬ ವರದಿಗಳು ಹರಿದಾಡುತ್ತಿದ್ದು ಇದೆಲ್ಲಾ ಸುಳ್ಳು ಸುದ್ದಿ ಎಂಬುದೀಗ ದೃಢಪಟ್ಟಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಸ್ವತಃ ರವೀಂದ್ರನಾಥ್ ಅವರೇ ಜನಮಿಡಿತ ಪತ್ರಿಕೆಯ ಮಾತನಾಡಿ ಎರಡು ಮೂರು ವರ್ಷಗಳ ಕೆಳಗೆ ದಾವಣಗೆರೆ ಭಾಗಕ್ಕೆ ಭದ್ರಾ ನೀರು ಹರಿಸುವ ವಿಷಯದಲ್ಲಿ ಶಿವಮೊಗ್ಗದ ಕಾಡಾ ಎದುರು ನಡೆಸಿದಾಗ ತಮ್ಮ ಹಾಗೂ ಇತರೆ ಕೆಲವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. ಶಿವಮೊಗ್ಗದಲ್ಲಿ ವಿಚಾರಣೆಯ ಬಳಿಕ ಬೆಂಗಳೂರಿಗೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ನಾನು ಹಾಗೂ ಲಿಂಗರಾಜು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದೇವು. ಕೆಲವರು ಅನೇಕ ಬಾರಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಇಂದು ಅವರೂ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರುಗಳಿಗೆ ಎಚ್ಚರಿಸಿದ ನ್ಯಾಯಾಲಯ ನಿಮಗೇಕೆ ನ್ಯಾಯಾಲಯದ ನೋಟಿಸ್ ‌ಸಿಕ್ಕಿರಲಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿ ಅವರುಗಳನ್ನು ಕೆಲ ಕಾಲ ಅಲ್ಲಿಯೇ ಕಾಯುವಂತೆ ಮಾಡಿತು. ಸಾಮಾನ್ಯ ಪ್ರಕ್ರಿಯೆ ಎಂಬಂತೆ ಅವರುಗಳ ಕಾವಲಿಗೆ ಪೊಲೀಸರಿಗೆ ಸೂಚಿಸಲಾಗಿತ್ತು.

ನಾನೇನು ಲಂಚ ತಿಂದು , ಅಕ್ರಮ ಆಸ್ತಿ ಕಬಳಿಸಿ ಅಥವಾ ಗೋಲ್ ಮಾಲ್ ಮಾಡಿ ನ್ಯಾಯಾಲಯದ ಎದುರು ನಿಂತಿದ್ದೇವೆಯೇ ಎಂದು ಪ್ರಶ್ನಿಸಿದ ರವೀಂದ್ರನಾಥ್ , ನೀರು ಕೊಡ್ರಪ್ಪ ನಮ್ಮ ಜನಕ್ಕೆ ಅಂತ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದುದು ಪ್ರಕರಣ ದಾಖಲಿಸಲು ಕಾರಣವಾಗಿದೆ. ನಮ್ಮ ರೈತರ ಪರವಾಗಿ ಇಂತಹ ಪ್ರಕರಣಗಳನ್ನು ಎಷ್ಟಾದರೂ ಎದುರಿಸಲು ಸಿದ್ಧ.

ನನಗೂ ಅನೇಕರು ಪ್ರಶ್ನಿಸುತ್ತಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಈ ರೀತಿ ಬರುತ್ತಿದೆಯಲ್ಲ ಎಂದು. “ಏನೋ ಒಂದು ತೋರಿಸಬೇಕು. ತೋರಿಸುತ್ತಿದ್ದಾರೆ. ಅದಕ್ಕೆಲ್ಲ ತಲೆಕೆಡಿಸಿಕೊಂಡು ಕೂತ್ರೆ ಆಗುತ್ತಾ. ಈಗ ವಿಷಯ ಗೊತ್ತಾಗಿದೆಯಲ್ಲ. ನೀವಾದ್ರೂ ಒಂದೀಟು ಅರ್ಥ ಆಗೋ ಹಾಗೆ ಬರೆಯಿರಿ ಎಂದರು.

Leave a Reply

Your email address will not be published. Required fields are marked *