ವಿಮರ್ಶೆಗೆ ಕೊಟ್ಟಿದ್ದ ಪುಸ್ತಕ ಆತ ವಾಪಸ್ ಕೇಳಿದ್ದಾದರು ಏಕೆ ಗೊತ್ತ…

ಒಬ್ಬ ಖ್ಯಾತ ವಿಮರ್ಶಕರಿದ್ದರು. ಅವರು ಮನೆಯಲ್ಲಿ ಕುಳಿತು, ಕರೆಂಟ್ ಬಿಲ್ ಕಟ್ಟಲೆಂದು ಕಿಸೆಯಲ್ಲಿದ್ದ ಹಣ ಎಣಿಸುತ್ತಾ ಕೂತಿದ್ದ ಸಮಯ.

ಒಬ್ಬ ಉದಯೋನ್ಮುಖ ಬರಹಗಾರ ಬಾಗಿಲು ತಟ್ಟಿದ. ವಿಮರ್ಶಕರು ಬಾಗಿಲು ತೆರೆದರು. ಯುವಕನನ್ನು ಒಳಗೆ ಕರೆದರು.
“ಸರ್, ನಾನು ನಿಮ್ಮ ಅಭಿಮಾನಿ. ನನ್ನ ಮೊದಲ ಕಾದಂಬರಿ ಇದು. ನೀವು ಓದಿ ಅಭಿಪ್ರಾಯ ತಿಳಿಸಬೇಕು. ಮುಂದೆ ಬರೆಯಲು ನನಗೆ ಸಹಾಯವಾಗುತ್ತದೆ. ನೀವು ವಿಮರ್ಶೆಯನ್ನು ಬರೆದು ಕೊಟ್ಟರೂ ಸಾಕು. ಮುಂದಿನ ವಾರ ಬರಲೇ ?”

ಗೌರವ ಪ್ರತಿಯೊಂದನ್ನು ಹಸ್ತಾಕ್ಷರದ ಜೊತೆಗೆ ತನ್ನ ಮೆಚ್ಚಿನ ವಿಮರ್ಶಕರಿಗೆ ಕೊಟ್ಟ.
ವಿಮರ್ಶಕರು ಆಯಿತು ಎಂದರು. “ಬಂದಿದ್ದೀಯಾ ಕಾಫಿ ಕುಡಿದು ಹೋಗು” ಎಂದು, ಒಳ ಹೋಗಿ ಕಾಫಿ ತಂದರು. ಯುವಕ ಕಾಫಿ ಕುಡಿದು ನಮಸ್ಕಾರ ಹೇಳಿ ಹೋದ.
ಅವನನ್ನು ಕಳುಹಿಸಿ ಕೊಟ್ಟ ವಿಮರ್ಶಕರು ಮತ್ತೆ ಬಂದು ಕುಳಿತು ಕೊಳ್ಳುತ್ತಾರೆ, ನೋಡಿದರೆ ಟೇಬಲ್ ಮೇಲೆ ಎಣಿಸಿ ಇಟ್ಟ ಹಣ ಇಲ್ಲ!
“ಎರಡು ಸಾವಿರ ರೂಪಾಯಿಯ ಮೂರು ನೋಟು !” ಅಲ್ಲಿ ಇಲ್ಲಿ ಹುಡುಕಿದರು . ಊಹುಂ ….

ಆ ಯುವಕ ಬಿಟ್ಟರೆ ಅಲ್ಲಿಗೆ ಯಾರೂ ಬಂದಿರಲಿಲ್ಲ! ವಿಮರ್ಶಕರಿಗೆ ತುಂಬಾ ಖೇದವಾಯಿತು. ಯುವಕನ ಮೇಲೆ ಸಿಟ್ಟು ಒತ್ತರಿಸಿ ಬಂತು. ಕೇಳಿದ್ದರೆ ಕೊಡುತ್ತಿದ್ದೆ . ಈಗಲೇ ದೂರವಾಣಿ ಮಾಡಿ ಅವನಲ್ಲಿ ವಿಚಾರಿಸಲೇ ? ಬೇಡ ಅನ್ನಿಸಿತು. ತಾಳ್ಮೆಯಿಂದ ಯುವಕನಿಗೆ ಬುದ್ಧಿವಾದ ಹೇಳಬೇಕು ಎಂದು ನಿರ್ಧರಿಸಿದರು .
ಎರಡು ವಾರ ಬಿಟ್ಟು ವಿಮರ್ಶಕರು ಯುವಕನಿಗೆ ಫೋನ್ ಮಾಡಿದರು “ನಿನ್ನ ಪುಸ್ತಕ ಓದಿದೆ. ಇಷ್ಟವಾಯಿತು. ಅದರ ಬಗ್ಗೆ ಮಾತನಾಡಬೇಕು. ಮನೆಗೆ ಬಾ… “
ಯುವ ಲೇಖಕ ಸಂಭ್ರಮದಿಂದ ವಿಮರ್ಶಕರ ಮನೆಗೆ ಧಾವಿಸಿದ.

ಮನೆಗೆ ಬಂದ ಯುವಕನನ್ನು ವಿಮರ್ಶಕರು ಕುಳ್ಳಿರಿಸಿದರು.
ಅವನು ಬರೆದ ಕಾದಂಬರಿಯ ಬಗ್ಗೆ ಅರ್ಧ ಗಂಟೆ ಮಾತನಾಡಿದರು. ಹೊಸ ಒಳ ನೋಟವುಳ್ಳ ಕಾದಂಬರಿ… ಎಂದರು. ಯುವ ಲೇಖಕನಿಗೆ ಮೈಯೆಲ್ಲಾ ಪುಳಕ. ಹೀಗೆ ಪುಸ್ತಕದ ಬಗ್ಗೆ ಸುದೀರ್ಘ ವಿಮರ್ಶೆ ಮುಗಿಸಿದ ಲೇಖಕರು ಈಗ ವಿಷಯಕ್ಕೆ ಬಂದರು

“ಕಷ್ಟ ಇದ್ದರೆ ನನ್ನ ಬಳಿ ಕೇಳ ಬಹುದಿತ್ತು. ನನ್ನನ್ನು ಕೇಳದೆಯೇ ನೀನು ದುಡ್ಡು ಎತ್ತಿದ್ದು ನನಗೆ ನೋವು ಕೊಟ್ಟಿತು … ಅದೂ ಆರು ಸಾವಿರ ರೂಪಾಯಿ … “
ಯುವಕ ಒಮ್ಮೆಲೇ ಆಘಾತ ಗೊಂಡವನಂತೆ ಅವರನ್ನೇ ನೋಡಿದ. ನಿಧಾನಕ್ಕೆ ಅವನ ಮುಖ ಕಪ್ಪಿಟ್ಟಿತು. ತಲೆ ತಗ್ಗಿಸಿದ. ಸುಮಾರು ಕಾಲು ಗಂಟೆ ಹಾಗೆಯೇ ತಲೆ ತಗ್ಗಿಸಿ ಕೂತಿದ್ದ. ತಲೆ ಎತ್ತಿದಾಗ ಅವನ ಕಣ್ಣ ಅಂಚಿನಲ್ಲಿ ನೀರಿತ್ತು.
“ಸರ್, ನಾನು ಕೊಟ್ಟ ನನ್ನ ಕಾದಂಬರಿ ಕೃತಿ ನನಗೆ ವಾಪಸ್ ಕೊಡಿ … ” ಎಂದು ಬಿಟ್ಟ.
“ಸಿಟ್ಟು ಮಾಡಿಕೊ ಬೇಡ. ಅವತ್ತು ನೀನು ಬಿಟ್ಟರೆ ಬೇರೆ ಯಾರೂ ಇಲ್ಲಿ ಇದ್ದಿರಲಿಲ್ಲ… ” ವಿಮರ್ಶಕರು ಸಮಾಧಾನಿಸಿದರು.

“ಸರ್, ನಾನು ಕೊಟ್ಟ ಆ ಕಾದಂಬರಿಯ ಪ್ರತಿ ನನಗೆ ವಾಪಸ್ ಕೊಡಿ ” ಯುವಕ ತುಸು ಗಟ್ಟಿಯಾಗಿ ಕೇಳಿದ.
ವಿಮರ್ಶಕರಿಗೂ ಸಿಟ್ಟು ಬಂತು. ಒಳ ಹೋದವರೇ ಕಪಾಟಿನಲ್ಲಿದ್ದ ಆ ಪುಸ್ತಕವನ್ನು ತಂದು ಯುವಕನ ಮುಖಕ್ಕೆ ಎಸೆದರು.
ಅಷ್ಟೇ….

ಪುಸ್ತಕದೊಳಗಿನ ಪುಟಗಳಿಂದ ಎರಡು ಸಾವಿರ ರುಪಾಯಿಯ ಮೂರು ನೋಟುಗಳು ಉದುರಿ ಅವರ ಪಾದ ಬುಡದಲ್ಲಿ ಬಿದ್ದವು .

ವಿಮರ್ಶಕರು ಅಚ್ಚರಿಯಿಂದ ದಿಟ್ಟಿಸುತ್ತಿರುವಾಗ ಯುವಕ ಉತ್ತರಿಸಿದ “ಸರ್, ನೀವು ನನಗೆ ಕಾಫಿ ತರಲು ಒಳ ಹೋದಾಗ ಈ ನೋಟುಗಳು ಟೇಬಲಲ್ಲಿ ಇದ್ದವು. ಗಾಳಿಗೆ ತಡಪಡಿಸುತ್ತಿದ್ದವು. ಹಾರಿ ಹೋಗದಿರಲಿ ಎಂದು ನಾನು ಕೊಟ್ಟಿದ್ದ ಪುಸ್ತಕದೊಳಗಿನ ಮೊದಲ ಪುಟದಲ್ಲೇ ಆ ನೋಟುಗಳನ್ನು ಇಟ್ಟಿದ್ದೆ. ನನ್ನ ಮೇಲೆ ಕಳವು ಆರೋಪ ಹೊರಿಸಿದ ಬಗ್ಗೆ ನನಗೆ ದುಃಖವಿಲ್ಲ. ಆದರೆ, ನನ್ನ ಕಾದಂಬರಿಯ ಒಂದು ಪುಟವನ್ನೂ ಬಿಡಿಸದೆ, ಅರ್ಧ ಗಂಟೆ ಪುಸ್ತಕದ ಬಗ್ಗೆ ಮಾತನಾಡಿದಿರಲ್ಲ, ಅದರ ಬಗ್ಗೆ ನನಗೆ ದುಃಖವಿದೆ. ವಿಷಾದವಿದೆ. ಕನಿಷ್ಠ ಒಂದು ಪುಟವನ್ನಾದರೂ ಬಿಡಿಸಿದ್ದರೆ ಇಂದು ನೀವು ನನ್ನನ್ನು ಕಳ್ಳನಾಗಿಸುವ ಪ್ರಮಾದ ಸಂಭವಿಸುತ್ತಿರಲಿಲ್ಲ”

ಯುವಕ ತನ್ನ ಕಾದಂಬರಿಯ ಜೊತೆಗೆ ಹೊರ ನಡೆದ. ಒಮ್ಮೆಯೂ ತಿರುಗಿ ನೋಡಲಿಲ್ಲ.

ಬಶೀರ್.ಬಿ.ಎಂ

Leave a Reply

Your email address will not be published. Required fields are marked *