ವಿದ್ಯಾರ್ಥಿಗಳಿಗೊಂದು ಸಂತಸ, ಸಮಾಧಾನದ ಸುದ್ಧಿ: ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಯ ಅವಧಿ ಹೆಚ್ಚಳ..!

ಬೆಂಗಳೂರು,ಡಿ.25- ಮಾರ್ಚ್- ಏಪ್ರಿಲ್ ನಲ್ಲಿ ನಡೆಯುವ ಎಸ್ ಎಸ್ ಎಲ್ ಸಿ ಪರೀಕ್ಷೆಯ ಅವಧಿಯನ್ನು 15 ರಿಂದ 30 ನಿಮಿಷ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ರಾಜ್ಯದಲ್ಲಿ ಈ ಬಾರಿ ಪರೀಕ್ಷೆ ಬರೆಯಲಿರುವ 6 ಲಕ್ಷ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂಡು ಉತ್ತರವನ್ನು ಸಮಾಧಾನಕರವಾಗಿ ಬರೆಯಬಹುದು ಹಾಗೂ ಬರೆದ ನಂತರ ಮತ್ತೊಮ್ಮೆ ತಾವು ಬರೆದ ಉತ್ತರಗಳನ್ನು ಪರಿಶೀಲಿಸಿಕೊಳ್ಳಲು ಸಾಧ್ಯವಾಗಲಿದೆ‌.

ವಿದ್ಯಾರ್ಥಿಗಳ ಹಿತದೃಷ್ಠಿ ಗಮನದಲ್ಲಿಟ್ಟುಕೊಂಡು ಮುಂಬರುವ ಈ ಬಾರಿ ಪ್ರಶ್ನೆ ಪತ್ರಿಕೆಗಳು ಬದಲಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಗೊಂದಲ ಉಂಟಾಗಬಾರದೆಂಬ ಕಾರಣಕ್ಕಾಗಿ ಪ್ರಥಮ ಹಾಗೂ ಐಚ್ಛಿಕ ಭಾಷಾ ವಿಷಯಗಳಿಗೆ 15 ನಿಮಿಷ ಹೆಚ್ಚಳ ಮಾಡಲಾಗಿದೆ.

ಇನ್ನು ದ್ವಿತೀಯ ಮತ್ತು ತೃತೀಯ ಭಾಷಾ ವಿಷಯಕ್ಕೆ 30 ನಿಮಿಷ ಹೆಚ್ಚುವರಿ ಸಮಯವನ್ನು ನೀಡಲಾಗಿದ್ದು, ಇದು ಪ್ರಸಕ್ತ ವರ್ಷಕ್ಕೆ ಅನ್ವಯವಾಗುತ್ತದೆ ಎಂದು ಪ್ರೌಢಶಿಕ್ಷಣ ಮಂಡಳಿಯ ಅಧಿಕಾರಿ ಖಚಿತಪಡಿಸಿದ್ದಾರೆ. ಈವರೆಗೂ ಪ್ರತಿ ವಿಷಯಕ್ಕೆ 3 ಗಂಟೆ ಸಮಯವನ್ನು ನಿಗದಿಪಡಿಸಲಾಗಿತ್ತು‌. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾಗಿದೆ.

ಈ ಬಾರಿ ಪ್ರಥಮ ಭಾಷೆಗೆ 3 ಗಂಟೆ 15 ನಿಮಿಷ ಹೆಚ್ಚಳ ಮಾಡಿದ್ದರೆ, ದ್ವಿತೀಯ ಮತ್ತು ತೃತೀಯ ಭಾಷೆಗೆ 2 ಗಂಟೆ 30 ನಿಮಿಷ ನೀಡಲಾಗಿದ್ದನ್ನು ಈಗ 30 ನಿಮಿಷ ಹೆಚ್ಚಳ ಮಾಡಿರುವ ಪರಿಣಾಮ 3 ಗಂಟೆಯಲ್ಲಿ ವಿದ್ಯಾರ್ಥಿಗಳು ಉತ್ತರ ಬರೆಯಬಹುದು. ಐಚ್ಛಿಕ ವಿಷಯಗಳ ಸಮಯವೂ ಹೆಚ್ಚಳ ಮಾಡಲಾಗಿದೆ‌. ಈ ಬಾರಿ ವಿದ್ಯಾರ್ಥಿಗಳ ಜ್ಞಾನ ಹೆಚ್ಚಳ ಮಾಡಲು ಪ್ರಶ್ನೆ ಪತ್ರಿಕೆಯ ಸ್ವರೂಪ ಬದಲಾಯಿಸಲಾಗಿದೆ‌. ಮೊದಲು ಬಹು ಆಯ್ಕೆ ಮಾದರಿ ಮತ್ತು ಒಂದೇ ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಆದ್ಯತೆ ನೀಡಲಾಗಿತ್ತು‌. ಆದರೆ ಈ ಬಾರಿ ಇದನ್ನು ಕಡಿತ ಮಾಡಲಾಗಿದೆ.

ಪ್ರಥಮ ಭಾಷೆ ಪತ್ರಿಕೆಯಲ್ಲಿ ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳನ್ನು 23 ಅಂಕದಿಂದ 17 ಅಂಕಕ್ಕೆ ಇಳಿಸಲಾಗಿದೆ. ಇದೇ ರೀತಿ ಮೂರು ಅಂಕದಲ್ಲಿ ಉತ್ತರಿಸುವ 33 ಪ್ರಶ್ನೆಗಳನ್ನು 27 ಪ್ರಶ್ನೆಗಳಿಗೆ ಇಳಿಕೆ ಮಾಡಲಾಗಿದೆ‌. 2ನೇ ಭಾಷಾ ಪತ್ರಿಕೆಯಲ್ಲಿ 1 ಅಂಕಕ್ಕೆ ಉತ್ತರಿಸಬಹುದಾದ ಬಹು ಆಯ್ಕೆ ಪ್ರಶ್ನೆಗಳನ್ನು 8 ರಿಂದ 4 ಕ್ಕೆ ಇಳಿಕೆ ಮಾಡಲಾಗಿದ್ದು, ಒಂದೇ ವಾಕ್ಯದಲ್ಲಿ ಉತ್ತರಿಸಬಹುದಾದ 16 ಪ್ರಶ್ನೆಗಳನ್ನು 12 ಕ್ಕೆ ಹಾಗೂ 2 ವಾಕ್ಯದಲ್ಲಿ ಉತ್ತರಿಸಬಹುದಾದ 24 ಪ್ರಶ್ನೆಗಳ ಬದಲಿಗೆ 16ಕ್ಕೆ ಇಳಿಸಲಾಗಿದೆ.

3 ಅಂಕಗಳಲ್ಲಿ ಉತ್ತರಿಸಬಹುದಾದ ಪ್ರಶ್ನೆಗಳನ್ನು 12ಕ್ಕೆ ಹೆಚ್ಚಳ ಮಾಡಲಾಗಿದ್ದು, ಜೊತೆಗೆ ಸಾಮಾಜಿಕ ವಿಜ್ಞಾನ, ಗಣಿತ, 3ನೇ ಭಾಷಾ ಪತ್ರಿಕೆ ಮತ್ತು ವಿಜ್ಞಾನ ಪತ್ರಿಕೆಗಳಲ್ಲಿ 5 ಅಂಕದ ಪ್ರಶ್ನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಎಲ್ಲ ಶಾಲೆಗಳಿಗೂ ಮಾಹಿತಿ ಒದಗಿಸಲಾಗಿದ್ದು ಇದೇ ಮಾದರಿಯಲ್ಲಿ ಪರೀಕ್ಷೆಗೆ ಸಿದ್ಧರಾಗುವಂತೆ ಶಿಕ್ಷಕರಿಗೆ ತಯಾರಿ ಮಾಡಬೇಕೆಂದು ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.
ಫೆಬ್ರವರಿಯಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ದತಾ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿದೆ‌. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮಾ. 27 ರಿಂದ ಏಪ್ರಿಲ್ 9 ರವರೆಗೆ ನಡೆಯಲಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

Leave a Reply

Your email address will not be published. Required fields are marked *