ಲೋಕಿಕೆರೆಯ ದೇವಾಲಯಗಳು

ರಾಜ್ಯದಲ್ಲಿ ಪ್ರಮುಖವಾಗಿ ಕಾಣ ಸಿಗುವ ದೇವಾಲಯಗಳಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳು ಪ್ರಮುಖವಾದವು. ಹಲವು ಕಡೆ ಶೈವ ಹಾಗು ವೈಷ್ಣವ ದೇವಾಲಯಗಳನ್ನು ನಿರ್ಮಾಣ ಮಾಡಿರುವ ಅವರ ದೇವಾಲಯಗಳು ಇದ್ದು ಅಂತಹ ದೇವಾಲಯಗಳಲ್ಲಿ ಒಂದಾದ ಹಾಗು ಕಾಲದ ಆಂಚಿಗೆ ಸಿಲುಕಿ ನಲುಗುತ್ತಿರುವ ದೇವಾಲಯವೊಂದು ದಾವಣಗೆರೆ ತಾಲ್ಲೂಕಿನ ಲೋಕಿಕೆರೆಯಲ್ಲಿದೆ.

ಇತಿಹಾಸ ಪುಟದಲ್ಲಿ ಪ್ರಮುಖವಾದ ಅಗ್ರಹಾರವಾಗಿ ಗುರುತಿಸಿಕೊಂಡಿದ್ದ ಲೋಕಿಕೆರೆ ಹೊಯ್ಸಳರ ಕಾಲದಲ್ಲಿ ಪ್ರಮುಖ ಕೇಂದ್ರವಾಗಿತ್ತು, ಇಲ್ಲಿನ 1236 ರ ಶಾಸನದಲ್ಲಿ ಹೊಯ್ಸಳ ದೊರೆ ಸೋಮೇಶ್ವರ ಇಲ್ಲಿನ ಕೆತೇಶ್ವರ ದೇವಾಲಯಕ್ಕೆ ದತ್ತಿ ನೀಡಿದ ಉಲ್ಲೇಖವಿದೆ. 1229 ರಲ್ಲಿ ಎರಡನೇ ನರಸಿಂಹನ ಕಾಲದಲ್ಲಿ ಕೋಡಿ ಕಲ್ಲೇಶ್ವರ ದೇವಾಲಯ ನಿರ್ಮಿಸಿದ ಉಲ್ಲೇಖವಿದೆ.

ಈಶ್ವರ ದೇವಾಲಯ

ಹೊಯ್ಸಳರ ಕಾಲದಲ್ಲಿ ಸುಮಾರು 13 ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಗರ್ಭಗುಡಿ ಹಾಗು ಅಂತರಾಳದ ಭಾಗಿಲುವಾಡಗಳಿಗೆ ಹೊದಿಕೆ ಹೊಂದಿಸಿದ ಕಾರಣ ಮೂಲ ಸ್ವರೂಪ ಕಾಣ ಸಿಗುವದಿಲ್ಲ.

ಇನ್ನು ನವರಂಗದಲ್ಲಿ ಸುಂದರವಾದ ನಾಲ್ಕು ಕಂಭಗಳಿದ್ದು ವಿತಾನದಲ್ಲಿ ಸುಂದರವಾದ ಅಷ್ಟದಿಕ್ಪಾಲಕರ ಕೆತ್ತೆನೆ ನೋಡಬಹುದು. ಮಧ್ಯದಲ್ಲಿನ ನಟರಾಜನ ಕೆತ್ತೆನೆ ಗಮನ ಸೆಳೆಯುತ್ತದೆ. ಇನ್ನು ಶಿವಲಿಂಗಕ್ಕೆ ಎದುರಾಗಿ ದೊಡ್ಡದಾದ ನಂದಿಯ ಶಿಲ್ಪವಿದೆ. ನವರಂಗದಲ್ಲಿ ಜಾಲಂದ್ರಗಳಿದ್ದು ಪ್ರವೇಶದ್ವಾರ ಸುಂದರವಾಗಿ ಅಲಂಕೃತಗೊಂಡಿದೆ. ಇನ್ನು ಇಲ್ಲಿನ ಗಣಪತಿ, ಮಹಿಶಾಸುರ ಮರ್ಧಿನಿಯ ಶಿಲ್ಪಗಳು ಗಮನ ಸೆಳೆಯುತ್ತದೆ. ಇನ್ನು ಕಿರಿದಾದ ಮುಖಮಂಟಪವಿದ್ದು ಪ್ರವೇಶಮಂಟಪದಂತೆ ಕಾಣ ಬರುತ್ತದೆ. ಇನ್ನು ಹೊರಭಿತ್ತಿಯಲ್ಲಿ ಅಲ್ಲಲ್ಲಿ ಅರ್ಧಕಂಭಗಳ ಕೆತ್ತೆನೆ ಕಾಣ ಸಿಗಲಿದ್ದು ಯಾವುದೇ ಶಿಲ್ಪದ ಕೆತ್ತೆನೆಗಳಿಲ್ಲ. ದೇವಾಲಯಕ್ಕೆ ನೂತನವಾಗಿ ನಿರ್ಮಿಸಿದ ಶಿಖರವಿದೆ.

ಜನರ್ಧಾನ (ರಂಗನಾಥ) ದೇವಾಲಯ :

ಇನ್ನು ಬಹುತೇಕ ಕಡೆ ಕಾಣ ಬರುವಂತೆ ಉರ ಮಧ್ಯದಲ್ಲಿ ಈ ದೇವಾಲಯವಿದ್ದು ಗರ್ಭಗುಡಿ, ಅಂತರಾಳ ಹಾಗು ನವರಂಗವಿದ್ದು ನವರಂಗದ ಭಾಗ ನಾಶವಾಗಿದೆ. ಇನ್ನು ಗರ್ಭಗುಡಿಯಲ್ಲಿ ಸುಂದರವಾದ ಸ್ಥಾನಿಕ ಭಂಗಿಯಲ್ಲಿನ ವಿಷ್ಣುವಿನ ಶಿಲ್ಪವಿದೆ. ಚಕ್ರ, ಶಂಖ, ಅಭಯ ಹಾಗು ಗಧೆ ಇದ್ದು ಅಕ್ಕ ಪಕ್ಕದಲ್ಲಿ ಶ್ರಿದೇವಿ ಹಾಗು ಭೂದೇವಿಯ ಕೆತ್ತೆನೆ ಇದೆ. ಬಹುತೇಕ ಜನಾರ್ಧನ ಸ್ವರೂಪದಲ್ಲಿನ ಈ ಶಿಲ್ಪದ ರಕ್ಷಣೆಯ ಅಗತ್ಯವಿದೆ. ಇನ್ನು ಇಲ್ಲಿ ಗಣಪತಿಯ ಶಿಲ್ಪವಿದೆ.

ಈಶ್ವರ ದೇವಾಲಯ

ಇನ್ನು ಇಲ್ಲಿ ಮತ್ತೊಂದು ಈಶ್ವರ ದೇವಾಲಯವಿದ್ದು ಸಂಪೂರ್ಣವಾಗಿ ನಾಶದ ಹಂತದಲ್ಲಿದೆ. ಈ ದೇವಾಲಯ ಸಹ ಗರ್ಭಗುಡಿ, ಅಂತರಾಳ, ನವರಂಗ ಹಾಗು ಮುಖಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶಿವಲಿಂಗವಿದೆ. ಗರ್ಭಗುಡಿಯ ಲಲಾಟದಲ್ಲಿ ಗಜಲಕ್ಶ್ಮಿ ಕೆತ್ತೆನೆ ಇದ್ದು ಇಲ್ಲಿಯೂ ನವರಂಗದಲ್ಲಿ ನಾಲು ಕಂಭಗಳಿದ್ದು ನಂದಿ ಇದೆ. ದೇವಾಲಯ ವಿನಾಶದ ಅಂಚು ತಲುಪವ ಮುನ್ನ ರಕ್ಷಣೆ ಮಾಡುವುದು ಅಗತ್ಯವಾಗಿದೆ.

ಇನ್ನು ಇಲ್ಲಿ ಆಂಜನೇಯ, ವೀರಭದ್ರ, ಮೈಲಾರಲಿಂಗೇಶ್ವರ ದೇವಾಲಯ ಹಾಗು ಶಂಕರಲಿಂಗ ಭಗವಾನ್ ಅವರ ಆಶ್ರಮವೂ ಸಹ ಇದೆ.

ತಲುಪವ ಬಗ್ಗೆ : ಲೋಕಿಕೆರೆ ದಾವಣಗೆರೆಯಿಂದ ಸುಮಾರು 19 ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್. ಎಸ್.

Leave a Reply

Your email address will not be published. Required fields are marked *