ಹೆಸರ ಹಿಂದಿನ ಮಹತ್ವ

ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ।।
ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।
ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ।।

ತಿಮ್ಮ ಗುರು ಹೆಸರಿನ ಬಗ್ಗೆ ಹೀಗೆ ಹೇಳಿದ್ದಾರೆ. ಖ್ಯಾತಿಯ ಹಿಂದೆ ಬೀಳದೆ, ಮಗುವಿನಂತೆ ಬದುಕು ಎಂಬುದನ್ನು ನಾವು ಅರಿಯಬೇಕಿದೆ. ಹೌದೂ, ಹೆಸರಿನ ಹಿಂದೆ ಬೀಳದೆ ಇದ್ದರೂ… ನಮ್ಮನ್ನು ಗುರುತಿಸಲು ಒಂದು ಹೆಸರು ಬೇಕಲ್ಲವೇ?

ಮಿತ್ರರೇ, ಈ ಪ್ರಪಂಚದಲ್ಲಿ ವ್ಯವಹಾರಿಕವಾಗಿ ನಮ್ಮನ್ನು ಗುರುತಿಸಿಕೊಳ್ಳಲು ನಮಗೊಂದು ಹೆಸರು ತೀರಾ ಅಗತ್ಯ ಅಲ್ಲವೇ? ನಮ್ಮ ಇತ್ತೀಚಿನ ಕಾಲಮಾನದವರಿಗೆ ಹಿಂದಿನವರು ಇಡುತ್ತಿದ್ದ ಹೆಸರು ಔಟ್ ಡೆಟೇಡ್ ಅನ್ನಿಸುತ್ತದೆ. ಈಗಿನವರು ಇಡುವ ನವೀನ ಮಾದರಿಯ ಹೆಸರನ್ನು ಕರೆಯಲು ಹಿರಿಯರಿಗೆ ಬರುವುದಿಲ್ಲ. ಒಟ್ಟಿನಲ್ಲಿ ಈ ಹೆಸರಿನ ಗೊಂದಲ ತಲೆ ತಲಾಂತರದಿಂದಲೂ ಬಗೆಹರಿಯುವುದೇ ಇಲ್ಲಾ ಅನ್ನಿಸುತ್ತದೆ. ಹೆಸರಿನ ಬಗ್ಗೆ ಒಂದು ಬಹಳ ಚನ್ನಾಗಿರುವ ಕಥೆ ಇದೆ, ನೀವು ಓದಿ….

ಅಜಾಮಿಳ ಒಬ್ಬ ಸರ್ವರೀತಿಯಲ್ಲಿಯೂ ಕೆಟ್ಟ ಹುಳದಂತೆ ಜೀವನ ನಡೆಸುತ್ತಿದ್ದ ಮನುಷ್ಯ. ಅವನು ಮಾಡದ ನೀಚ ಕೆಲಸವಿಲ್ಲ.. ಹೇಯ ಕೃತ್ಯಗಳಿಲ್ಲ..ಸದಾ ಮನದಲ್ಲಿ ಕೆಟ್ಟ, ದುರುಳ ಆಲೋಚನೆಗಳನ್ನೇ ತುಂಬಿಕೊಂಡು ಅದರಂತೆ ಕೃತ್ಯವೆಸಗುತ್ತಾ ಜೀವಿಸುತ್ತಿದ್ದ. ಅವನಿಗೆ ಮನೆ ತುಂಬಾ ಗಂಡು ಸಂತಾನ. ಅವರ ಹೆಸರುಗಳು ಮಾತ್ರ ಕೇಶವ, ಕೃಷ್ಣ, ಮುಕುಂದ, ಹರಿ, ಮಾಧವ, ಮುರಾರಿ.. ಇತ್ಯಾದಿ.ಎಷ್ಟಾದರೂ ಅಜಾಮಿಳ ಮನುಷ್ಯನಲ್ಲವೇ? ವಯೋಸಹಜ ಜರ್ಝರಿತ ದೈಹಿಕ‌ ಅಸ್ವಸ್ಥತೆ.. ಕಡೆಗೂ, ನೀಚ ರೀತಿಯಲ್ಲಿ ಜೀವಿಸುತ್ತಿದ್ದ ಅಜಾಮಿಳನ ಅಂತ್ಯಕಾಲ ಬಂದಿತು.

ಜಗುಲಿಯ ಮೇಲೆ ಮರಣಾವಸ್ಥೆಯಲ್ಲಿದ್ದ ಅಜಾಮಿಳನನ್ನು ಮಲಗಿಸಿ ಅವನ ಮಕ್ಕಳೆಲ್ಲಾ ತಂತಮ್ಮ ಕಾರ್ಯಗಳಲ್ಲಿ ತೊಡಗಿದ್ದರು..

ಮರಣಾವಸ್ಥೆಯ ತಾರಕ ಸ್ಥಿತಿಯನ್ನು ತಲುಪಿದ ಅಜಾಮಿಳನ ಗಂಟಲೊಣಗಿತು… ಕಷ್ಟಪಟ್ಟು ಒಣಗಿದ ನಾಲಿಗೆಯಿಂದ ನೀರಿಗಾಗಿ ತನ್ನೆಲ್ಲ ಮಕ್ಕಳನ್ನೂ ಒಬ್ಬೊಬ್ಬರನ್ನಾಗಿ ಕೂಗಿ‌ ಕರೆದ…ಕೃಷ್ಣಾ, ಮುಕುಂದ, ಮುರಾರೀ, ಕೇಶವಾ… ಇತ್ಯಾದಿ.ಒಬ್ಬರಿಗಾದರೂ ಇವನ ಕೂಗು ಕೇಳಿ, ನೀರು ಕೊಟ್ಟಾರೇನೋ..‌ ಅನ್ನುವ ತವಕ ಅವನದು. ಕೊನೆಗೆ ಯಾರೋ ಒಬ್ಬ ಮಗನಿಗೆ ಇವನ ಕ್ಷೀಣದನಿ ಕೇಳಿ, ಮನೆಯಲ್ಲಿದ್ದ ಗಂಗೆಯ ಥಾಲಿ ತಂದು, ಒಡೆದು.. ನೀರು ಬಿಡುವಷ್ಟರಲ್ಲಿ….ಅಜಮಿಳನ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಸರಿ. ಇತ್ತ, ಸತ್ತ ಅಜಾಮಿಳನ ಲೆಕ್ಕಪತ್ರ ತೆಗೆದ ಚಿತ್ರಗುಪ್ತರು ಅವನ ಜೀವನಪರ್ಯಂತ ಮಾಡಿದ ಅಪಚಾರ, ಅನಾಚಾರಗಳ, ಸುಲಿಗೆಗಳ ಸರಮಾಲೆಯನ್ನು ಯಮನ ಗಮನಕ್ಕೆ ತಂದರು. ಯಮ, ಅವನ ಆತ್ಮವನ್ನು ಪಾಶದಿಂದ ಎಳೆತಂದು ನರಕಕ್ಕೆ ಸೇರಿಸಲು ಆಜ್ಞಾಪಿಸಿದ.

ಅದರಂತೆ ಅಜಾಮಿಳನ ಆತ್ಮ ಸೆಳೆಯಲು ಬಂದ ಯಮಭಟರಿಗೆ, ಅಲ್ಲಿ ಅವರಿಗಿಂತ ಮುಂಚೆ ಬಂದಿದ್ದ ವಿಷ್ಣುದೂತರು ಕಂಡರು ಮತ್ತು ಅವರು ಯಮದೂತರ ಕಾರ್ಯಕ್ಕೆ ಅಡ್ಡವಾಗಿ ನಿಂತರು.

“ಈ ಆತ್ಮ ವೈಕುಂಠ ಸೇರಬೇಕೆಂದು ವಿಷ್ಣುವಿನ ಅಪ್ಪಣೆ. ಹೀಗಾಗಿ ಯಮದೂತರಾದ ನೀವು ನರಕಕ್ಕೆ ಕೊಂಡೊಯ್ಯುವಂತಿಲ್ಲ” ಎಂಬುದು ಅವರ ವಾದ.ವಾದ ವಿವಾದಗಳು ಯಮದೂತರ ಮತ್ತು ವಿಷ್ಣುಭಟರ ಮಧ್ಯೆ ಒಂದು ತಾರಕ ಹಂತಕ್ಕೇರಿದಾಗ, ಸ್ವತಃ ಯಮಧರ್ಮರಾಯ ಮತ್ತು ವಿಷ್ಣುವೇ ಅಲ್ಲಿ ಪ್ರತ್ಯಕ್ಷರಾದರು.

ಯಮಧರ್ಮ ಅಜಾಮಿಳನ ಎಲ್ಲ ದುಷ್ಕೃತ್ಯಗಳನ್ನು ಸಾದ್ಯಂತವಾಗಿ ವಿಷ್ಣುವಿಗೆ ವಿವರಿಸಿ ಅವನ ಆತ್ಮವನ್ನು ನರಕಕ್ಕೆ ಕೊಂಡೊಯ್ಯಲು ಬಿಡುವಂತೆ ಕೇಳಿಕೊಳ್ಳುತ್ತಾನೆ.ಆದರೆ ವಿಷ್ಣುವು ಅಜಾಮಿಳನು‌ ಅವಸಾನ ಕಾಲದಲ್ಲಿ ಹರಿ‌ನಾಮ ಸ್ಮರಣೆ ಮಾಡಿದ್ದರಿಂದ, ಅವನಿಗೆ ವೈಕುಂಠ ಪ್ರಾಪ್ತಿಯಾಗುತ್ತದೆ.. ಎಂದು ಹೇಳುತ್ತಾನೆ.ಆಗ ಯಮಧರ್ಮನು, “ಹೇ ಭಗವಾನ್ ವಿಷ್ಣು, ಅಜಾಮಿಳನು ಹರಿ‌ನಾಮ ಸ್ಮರಣೆ ಮಾಡಲಿಲ್ಲ.. ಬದಲಿಗೆ ಸಾಯುವ ಮೊದಲು ತನ್ನ ಒಣಗಿದ ಗಂಟಲಿಗೆ ಒಂದಿಷ್ಟು ನೀರಿಗಾಗಿ ಅವನ ಮಕ್ಕಳನ್ನು‌ ಕರೆದ, ಅಷ್ಟೇ…” ಅನ್ನುತ್ತಾನೆ.

ಆಗ ವಿಷ್ಣು ಕೊಡುವ ಉದಾಹರಣೆ, ಅದ್ಭುತ! ಅವನು ಹೇಳುತ್ತಾನೆ….

“ಹೇ ಯಮ ಧರ್ಮರಾಜಾ, ಯಾವ ರೀತಿಯಲ್ಲಿ ಬೆಂಕಿಯನ್ನು ತಿಳಿದೋ, ತಿಳಿಯದೆಯೋ ಸ್ಪರ್ಶಿಸಿದ ಮಾತ್ರಕ್ಕೆ ಸುಡುತ್ತದೆಯೋ… ಅದೇ ರೀತಿ ಹರಿನಾಮ ಬೇಕಾಗಿಯೋ, ಬೇಡವಾಗಿಯೋ ಉಚ್ಛರಿಸಲ್ಪಟ್ಟ ಮಾತ್ರಕ್ಕೆ ಸಕಲ ಪಾಪರಾಶಿಗಳನ್ನೂ ಭಸ್ಮಮಾಡಿ ಸದ್ಗತಿಯ ಪ್ರಾಪ್ತಿಗೆ ಕಾರಣವಾಗುತ್ತದೆ‌. ಹಾಗಾಗಿ ಇವನ ಆತ್ಮ ವೈಕುಂಠಕ್ಕೆ ಸೇರಬೇಕು” ಎಂದು ಹೇಳಿ, ವಿಷ್ಣು ತನ್ನ ದೂತರೊಂದಿಗೆ ಅಜಾಮಿಳನ ಆತ್ಮವನ್ನು ತನ್ನ ಪುಷ್ಪಕವಿಮಾನದಲ್ಲಿ ವೈಕುಂಠಕ್ಕೆ ತೆಗೆದುಕೊಂಡು ಹೋಗುತ್ತಾನೆ.

ಆಗೆಲ್ಲ, ಉತ್ತಮವಾದ ದೇವರ ಹೆಸರು ಇಡುತ್ತಿದ್ದರು.. ಈಗ ಲತಿಕಾ, ಮೌನಿ, ಅತೀತ್, ನಿರ್ಲಿಪ್ತ್, ನಹುಷ್, ಸಂಘರ್ಷ ಇತ್ಯಾದಿ ಹೆಸರುಗಳು..! ನಾವು ನಮ್ಮ ಮಕ್ಕಳಿಗೆ ಹೆಸರಿಡುವ ಮುಂಚೆ ಕ್ಷಣಕಾಲ ಯೋಚಿಸೋಣವೇ….

ಸುಮಾ ಕಿರಣ್

Leave a Reply

Your email address will not be published. Required fields are marked *