ಕೊರೋನಾ ತಡೆಗೆ ಮಹಾರಾಷ್ಟ್ರವೇ ಮಾದರಿಯಾಗಬಲ್ಲದೇ??

ಮಿತ್ರರೇ, ಇತ್ತೀಚೆಗೆ ಕೊಡಗು ಜಿಲ್ಲಾಡಳಿತ ವಾರದ ಎರಡು ದಿನ ಮಾತ್ರ ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟಿಗೆ ಅನುಮತಿ ನೀಡಿದೆ. ಈ ಮೂಲಕ ಕೊರೊನಾ ತಡೆಗೆ ಮಹತ್ವದ ತೀರ್ಮಾನವನ್ನು ಕೊಡಗು ಜಿಲ್ಲಾಡಳಿತ ತೆಗೆದುಕೊಂಡಿದೆ. ಇದೇ ರೀತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವೂ ತನ್ನ ವ್ಯಾಪಾರ ವಹಿವಾಟಿನ ಮೇಲೆ ನಿರ್ಭಂದ ಹೇರುವ ಹಾದಿಯಲ್ಲಿ ಸಾಗುತ್ತಿದೆ. ಪ್ರತಿಯೊಂದು ಜಿಲ್ಲಾಡಳಿತವು ಹೀಗೆ ತನ್ನ ಜಿಲ್ಲೆಯ ಜನರ ರಕ್ಷಣೆಗೆ ಕಟಿಬದ್ಧವಾಗಿ ನಿಂತರೆ ಈ ಕೊರೊನಾ ವಿರುದ್ಧದ ಹೋರಾಟಕ್ಕೆ ನಿಜಕ್ಕೂ ಗೆಲುವು ದೊರೆಯುತ್ತದೆ. ಕ್ಷಣಕ್ಕೊಂದು ತೀರ್ಮಾನವನ್ನು ಬದಲಾಯಿಸದೆ… ತೆಗೆದುಕೊಂಡ ತೀರ್ಮಾನಕ್ಕೆ ಅಂಟಿಕೊಂಡಿದ್ದೇ ಆದರೆ, ಖಂಡಿತವಾಗಿಯೂ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಮುಂಬೈಯ ಯಶಸ್ವಿ ಕಾರ್ಯಾಚರಣೆಯೇ ಸಾಕ್ಷಿಯಾಗಿದೆ.

ನಮಗೆಲ್ಲ ತಿಳಿದಿರುವಂತೆ ದೇಶದ ವಾಣಿಜ್ಯ ನಗರಿ ಈ ಮುಂಬೈ. ಇದು ಜನಸಂಖ್ಯೆಯಲ್ಲೂ ಅಗಾಧ ಪ್ರಮಾಣವನ್ನು ಹೊಂದಿದೆ. ಜೊತೆಗೆ ಅಧಿಕ ಕೊಳಗೇರಿಗಳನ್ನು (ಸ್ಲಂ) ಹೊಂದಿರುವ ನಗರವು ಮುಂಬೈ. ಕಳೆದ ಬಾರಿಯ ಮೊದಲನೇ ಅಲೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಮುಂಬೈ ಸರಕಾರ ಹೈರಾಣಾಗಿ ಹೋಗಿತ್ತು. ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಗಳು ಬಹಳ ಶ್ರಮವಹಿಸಿ ಮುಂಬೈ ನಗರವನ್ನು ಮೊದಲ ಅಲೆಯಿಂದ ಕಾಪಾಡಿದ್ದರು. ಅವರಲ್ಲಿ ಇದ್ದ ಮೊದಲ ಅಲೆಯ ಕಹಿ ಅನುಭವವೇ… ಎರಡನೇ ಅಲೆಯನ್ನು ಎದುರಿಸಲು ಸಹಕಾರಿಯಾದದ್ದು ಎನ್ನಬಹುದು. ಬಹುಶಃ ಎಲ್ಲಾ ರಾಜ್ಯಗಳು ಬಿಎಂಸಿ ಮಾದರಿಯಲ್ಲೇ ಕಾರ್ಯನಿರ್ವಹಿಸಿದರೆ… ಕೊರೊನಾದ ಎರಡನೇ ಅಲೆಯಿಂದ ಆಗುತ್ತಿರುವ ಪ್ರಾಣ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು.

ಈ ಕೊರೊನಾವನ್ನು ನಿಯಂತ್ರಣದಲ್ಲಿ ಇಡಲು ಬಿಎಂಸಿ ಅನುಸರಿಸಿದ್ದು 3 ‘ಟಿ’ ಮಾರ್ಗವನ್ನು. ಏನಿದು ಮೂರು “ಟಿ” ಎಂದಿರೋ…? ಟ್ರ್ಯಾಕಿಂಗ್, ಟೆಸ್ಟಿಂಗ್ ಮತ್ತು ಟ್ರೀಟಿಂಗ್ ಎಂಬ ಸರಳ ತಂತ್ರವನ್ನು ಬಿಎಂಸಿ ಅನುಸರಿಸಿತು. ಅತಿ ಕಡಿಮೆ ಅವಧಿಯಲ್ಲಿ ಅಧಿಕ ಜನರನ್ನು ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಗಳ ಮೂಲಕ ಪರೀಕ್ಷಿಸಲಾಯಿತು. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗಳಿಗೆ ವರ್ಗಾಯಿಸಿ, ಸೂಕ್ತ ಚಿಕಿತ್ಸೆ ನೀಡಲಾಯಿತು. ಇದರಿಂದಾಗಿ ಸೋಂಕಿತರಲ್ಲದವರಿಗೂ ಹರಡುವ ಪ್ರಮಾಣ ಗಣನೀಯವಾಗಿ ಕಡಿಮೆ ಆಯಿತು.

ಹಾಗೆ ಮುಂಬೈ ನಗರದ ಯಶಸ್ಸಿಗೆ ಮತ್ತೊಂದು ಕಾರಣವೇ ಲಾಕ್ ಡೌನ್ ನ ಕಠಿಣ ನಿರ್ಬಂಧ. ಕೋವಿಡ್ ನಿಯಮಗಳನ್ನು ಪಾಲಿಸದವರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮವನ್ನು ವಿಧಿಸಿದರು. ಪ್ರಾರಂಭದಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಜನರು ಪಾಲಿಸುತ್ತಿರಲಿಲ್ಲ. ಇದರಿಂದಾಗಿ ಕೊರೊನಾ ನಿಯಂತ್ರಣವು ಕಠಿಣವಾಗುತ್ತ ಸಾಗಿತು. ಹಾಗಾಗಿ ಬಿಎಂಸಿಯು ಈ ವಿಷಯದಲ್ಲಿ ದೃಢವಾದ ಕಠಿಣ ತೀರ್ಮಾನಕ್ಕೆ ಬರಲೇಬೇಕಾಯಿತು. ಆಗ ಬಿಎಂಸಿಯು ಮಾರ್ಗಸೂಚಿಯನ್ನು ಪಾಲಿಸದ ಜನರು, ಸೊಸೈಟಿ, ಬಿಲ್ಡಿಂಗ್ ಗಳ ವಿರುದ್ಧ ಕಠಿಣವಾದ ಕ್ರಮವನ್ನು ಕೈಗೊಂಡರು. ಎಲ್ಲಾ ರೀತಿಯ ಪ್ರದೇಶದಲ್ಲೂ ಕಠಿಣ ನಿರ್ಭಂದವನ್ನು ಹೇರಿದರು. ಇದರಿಂದಾಗಿ ಕೊರೊನಾದ ಚೈನ್ ಬ್ರೇಕ್ ಮಾಡಲು ಸಹಕಾರಿಯಾಗಿ, ಇದು ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಇಳಿಮುಖವಾಗಿಸಿತು.

ಕಳೆದ ಬಾರಿಯ ಕಹಿ ಅನುಭವ ಮುಂಬೈಗೆ ಕಲಿಸಿದ ಅತಿದೊಡ್ಡ ಪಾಠದ ಸಲುವಾಗಿ, ಬಿಎಂಸಿಓ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚದೆ ಜತನವಾಗಿ ಕಾಪಾಡಿಕೊಂಡು ಬಂದಿತು. ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳು ಕೋವಿಡ್ ಕೇರ್ ಸೆಂಟರ್ ಗಳನ್ನು ಮೊದಲ ಅಲೆಯ ನಂತರ ಮುಚ್ಚಿದ್ದವು. ಇದಕ್ಕೆ ಆರ್ಥಿಕ ಹೊರೆ ಎಂಬುದು ಒಂದು ಕಾರಣ. ಆದರೆ, ಬಿಎಂಸಿಯು ಜಾಣತನವನ್ನು ಮೆರೆದದ್ದೇ ಇಲ್ಲಿ. ಈ ಕೋವಿಡ್ ಕೇರ್ ಸೆಂಟರ್ ಗಳಿಂದಾಗಿ ಎರಡನೆಯ ಅಲೆಯನ್ನು ಸಮರ್ಥವಾಗಿ ಬಿಎಂಸಿ ಎದುರಿಸಿತು.

ಇದೆಲ್ಲದರ ಜೊತೆಗೆ ಬಿಎಂಸಿಯು ಮಾಡಿದ ಮತ್ತೊಂದು ಸ್ವಾಗತಾರ್ಹ ಕ್ರಮವೆಂದರೆ… 1500 ಐಸಿಯು ಬೆಡ್ ಗಳನ್ನು ಶೀಘ್ರದಲ್ಲಿ 2800ಕ್ಕೆ ಏರಿಸಿತು. ಗಂಭೀರ ಸ್ಥಿತಿಯಲ್ಲಿದ್ದ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಇದು ಸಹಕಾರಿಯಾಯಿತು. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಮೇಲಿನ ಒತ್ತಡವು ಕಡಿಮೆಯಾಯಿತು. ಬಿಎಂಸಿಯು ಕೆಲವೇ ದಿನಗಳಲ್ಲಿ ತನ್ನ ಬೆಡ್ ಗಳ ಸಂಖ್ಯೆಯನ್ನು 3000ಕ್ಕೆ ತಲುಪಿಸಿ ಜನರಿಗೆ ಉತ್ತಮ ಸೇವೆ ಒದಗಿಸಿತು. ಇದರಿಂದಾಗಿ ಜನರಲ್ಲಿ ವಿಶ್ವಾಸವು ವೃದ್ಧಿಯಾಗಿ, ಆತ್ಮಸ್ಥೈರ್ಯ ಹೆಚ್ಚಿತು. ಇದು ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಯಿತು.

ಇದೆಲ್ಲದರ ಜೊತೆಗೆ ಕೋವಿಡ್ ವಾರ್ ರೂಮ್ಸ್ ಗಳ ದಕ್ಷ ಹಾಗೂ ಪ್ರಾಮಾಣಿಕ ಕೊಡುಗೆ ಬಿಎಂಸಿಯ ಕೊರೊನಾ ತಡೆಗೆ ಸಹಕಾರಿಯಾಯಿತು. ಬಿಎಂಸಿಯು 24 ವಾರ್ಡ್ ಲೆವೆಲ್ ವಾರ್ ರೂಮ್ಸ್ ಸ್ಥಾಪಿಸಿತು. ಈ ವಾರ್ ರೂಮ್ಸ್ ಗಳ ಮೂಲಕ ಬೆಡ್ ಗಳ ನಿರ್ವಹಣೆಯನ್ನು ಅತ್ಯಂತ ದಕ್ಷತೆಯಿಂದ ಮಾಡಿ, ಕೊರೊನಾ ನಿಯಂತ್ರಣಕ್ಕೆ ಕಾರಣವಾಯಿತು. ಬೆಡ್ ಗಳಿಗಾಗಿ ಉಂಟಾಗಬಹುದಾದ ಹಾಹಾಕಾರವನ್ನು, ಗೊಂದಲವನ್ನು ಈ ವಾರ್ ರೂಮ್ಸ್ ಗಳು ಸಮರ್ಥವಾಗಿ ಎದುರಿಸಿದವು. ಹೀಗೆ ಮುಂಬೈ ಸರಕಾರ ಕೋವಿಡ್ ಎರಡನೆಯ ಅಲೆಯನ್ನು ಅತ್ಯಂತ ದಕ್ಷತೆಯಿಂದ ಎದುರಿಸಿತು. ಉಳಿದೆಲ್ಲಾ ರಾಜ್ಯಗಳು ಇದೇ ಮಾದರಿಯನ್ನು ಅನುಸರಿಸಿದ್ದೇ ಆದರೆ ಖಂಡಿತಕ್ಕೂ ಕೊರೊನಾದ ಎರಡನೆಯ ಅಲೆಯನ್ನು ಸಮರ್ಥವಾಗಿ ಎದುರಿಸಬಹುದು.

ಮಿತ್ರರೇ, ಕರೋನಾ ದಿನದಿಂದ ದಿನಕ್ಕೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಈ ಸಂದರ್ಭದಲ್ಲಿ ನಾವು ನಮ್ಮೆಲ್ಲ ದ್ವೇಷಗಳನ್ನು, ಭೇದಗಳನ್ನು ಬದಿಗಿರಿಸಿ ಕೇವಲ ಮಾನವೀಯತೆಯ ದೃಷ್ಟಿಯಿಂದ ನೋಡಿದ್ದೇ ಆದರೆ ಮುಂಬೈ ಸರಕಾರದಂತೆ ಕೊರೊನಾದಿಂದ ಸ್ವಲ್ಪ ಮಟ್ಟಿಗಿನ ಸಮಾಧಾನ ದೊರಕಬಹುದು. ಕಷ್ಟಕರ ಸಂದರ್ಭವನ್ನೇ ಅಸ್ತ್ರವಾಗಿ ಬಳಸಿ, ಜನರ ಸುಲಿಗೆಯನ್ನು ನಿಲ್ಲಿಸಿದಾಗ ಮಾತ್ರ ಇದು ಸಾಧ್ಯ. ಇನ್ನಾದರೂ ಮಾನವೀಯತೆ ತುಂಬಿದ ಮನುಷ್ಯರಾಗೋಣವೇ??

ಸುಮಾ ಕಿರಣ್

One thought on “ಕೊರೋನಾ ತಡೆಗೆ ಮಹಾರಾಷ್ಟ್ರವೇ ಮಾದರಿಯಾಗಬಲ್ಲದೇ??

 • May 7, 2021 at 2:45 pm
  Permalink

  ಸುಮಾಕಿರಣ ಮೆಡಮ್ ಬರಹ ಸಮಯೋಚಿತ
  ರಾಜ್ಯಕ್ಕೆ ಹಿತವಾಗುವ ಯಾವುದೇ ತೆರನಾದ ::ಯಾರಿಂದಲೇ ಸಲಹೆ ಬಂದರೂ ಅನುಸರಿಸುವುದು ತಪ್ಪಲ್ಲವಲ್ಲ…
  ಮೆಡಮ್ ಅಭಿನಂದನೆಗಳು..
  ವಿದ್ಯಾ ಧರ ಮುತಾಲಿಕ ದೇಸಾಯಿ

  Reply

Leave a Reply

Your email address will not be published. Required fields are marked *