ರಾಜ್ಯದ 7 ಮಕ್ಕಳೂ ಸೇರಿ 26 ಮಂದಿ ರಾಷ್ಟ್ರೀಯ ಬಾಲ ಪುರಸ್ಕಾರ

ನವದೆಹಲಿ, ಜ. 23 ರಾಷ್ಟ್ರಪತಿ ರಾಮನಾಥ ಕೋವಿಂದ್ ಕರ್ನಾಟಕದ ಏಳು ಮಕ್ಕಳು ಸೇರಿದಂತೆ ವಿವಿಧ ರಾಜ್ಯಗಳ 26 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರದಾನ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲಾಗುವ ಪ್ರಶಸ್ತಿ ಇದಾಗಿದೆ.

ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ, ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು ದೆಹಲಿಯ ಚೈಲ್ಡ್ ಕೇರ್ ಸಂಸ್ಥೆಗಳಲ್ಲಿ ವಾಸವಿರುವ ಅನೇಕ ಪುಟಾಣಿ ಮಕ್ಕಳೊಡನೆ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿದ್ದರು.

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವನ್ನು ಈಗ ಎರಡು ವಿಭಾಗಗಳಲ್ಲಿ ನೀಡಲಾಗುತ್ತಿದೆ. ವೈಜ್ಞಾನಿಕ ಅವಿಷ್ಕಾರ, ಸಮಾಜಸೇವೆ, ಶೌರ್ಯ, ಕಲಾ ವಿಭಾಗ ಸೇರಿ ನಾನಾ ವಿಭಾಗಗಳಲ್ಲಿ ಮಕ್ಕಳು ಪ್ರಶಸ್ತಿ ಗಳಿಸಿದ್ದಾರೆ.
ಪ್ರತಿ ಪ್ರಶಸ್ತಿಯು ಪ್ರಶಸ್ತಿ ಪದಕ, 1,00,000 ರೂ. ನಗದು, 10,000 ರೂ. ಮೌಲ್ಯದ ಬುಕ್ ವೋಚರ್, ಪ್ರಮಾಣ ಪತ್ರ ಹೊಂದಿರಲಿದೆ. ಪ್ರಶಸ್ತಿ ಪುರಸ್ಕೃತ ಮಕ್ಕಳು ಜ.26 ಗಣರಾಜ್ಯ ದಿನದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇಬ್ಬರು ವ್ಯಕ್ತಿಗಳು, ಮೂರು ಸಂಸ್ಥೆಗಳಿಗೆ ಬಾಲ ಕಲ್ಯಾಣ ಪುರಸ್ಕಾರ ಲಭಿಸಿದೆ. ಈ ಪ್ರಶಸ್ತಿಯು ಒಂದು ಲಕ್ಷ ರೂ. ನಗದು ಬಹುಮಾನ, ಒಂದು ಪದಕ, ಒಂದು ಪ್ರಮಾಣಪತ್ರ ಹೊಂದಿರುತ್ತದೆ. ಸಂಸ್ಥೆಗೆ ನೀಡಲಾಗುವ ಪ್ರಶಸ್ತಿಯು 5,00,000 ರೂ. ನಗದು, ಪ್ರಮಾಣಪತ್ರ ಹಾಗೂ ಪದಕವನ್ನೊಳಗೊಂಡಿರಲಿದೆ.
ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ ಕರ್ನಾಟಕದ ಮಕ್ಕಳು ಃ ಮೊಹ್ಮದ್ ಸೌಹೇಲ್ ಚೀಣ್ಯ ಸಲೀಂಪಾಶಾ, ಅರುಣಿಮಾ

ಸೇನ್, ಎ.ಯು. ನಚಿಕೇತ್ ಕುಮಾರ್, ಬಿ.ಆರ್. ಪ್ರತ್ಯಕ್ಷಾ, ನಿಖಿಲ್ ಜಿತೂರಿ, ಎಂ. ವಿನಾಯಕ ಇದಲ್ಲದೆ ಕರ್ನಾಟಕದ ರಂಗಕಹಳೆ ಸಂಸ್ಥೆಗೆ ಸಹ ಪ್ರಶಸ್ತಿ ಲಭಿಸಿದೆ.

Leave a Reply

Your email address will not be published. Required fields are marked *