ರತನ್ ಟಾಟಾ ಅವರೇ ನೀವು ಭಾರತೀಯ ಆದರ್ಶ ಸಹೃದಯಿ ಉದ್ಯಮಿ ಎಂಬುದು ನಮ್ಮೆಲ್ಲರ ಹೆಮ್ಮೆ

ಮಿತ್ರರೇ, ಭಾರತದ ಉದ್ದಗಲಕ್ಕೂ ಹಲವು ಬಗೆಯ ವ್ಯಾಪಾರ – ವ್ಯವಹಾರ ಮಾಡುವ ಸಾವಿರಾರು ಉದ್ಯಮಿಗಳು ನಮ್ಮ ಕಣ್ಣಿಗೆ ಬೀಳುತ್ತಾರೆ. ಅದರಲ್ಲಿ ಹಲವಷ್ಟು ಮಂದಿ ಇಂದು ತಿಂಗಳೊಂದಕ್ಕೆ ಕೋಟಿಗಳಲ್ಲಿ ಸಂಪಾದಿಸುತ್ತಿದ್ದರೆ, ಬಹಳಷ್ಟು ಮಂದಿ ಲಕ್ಷಗಳಲ್ಲಿ ತಮ್ಮ ಸಂಪಾದನೆಯನ್ನು ಮಾಡುತ್ತಿದ್ದಾರೆ. ಆದರೆ, ಈ ರೀತಿಯ ವ್ಯಾಪಾರಿಗಳು ಅಥವಾ ಉದ್ಯಮಿಗಳೆಂದರೆ ಸಮಾಜಕ್ಕೆ ನಕಾರಾತ್ಮಕ ಭಾವನೆಯೇ ಬರುತ್ತದೆ. ಅದಕ್ಕೆ ಮುಖ್ಯ ಕಾರಣ ಈ ಉದ್ಯಮಿಗಳ ಜೀವನ ಹಾಗೂ ಆಸೆಬುರುಕತನ ಎಂದರೂ ತಪ್ಪಾಗಲಾರದು. ಬಹಳಷ್ಟು ಉದ್ದಿಮೆದಾರರು ಐಷಾರಾಮಿ ಜೀವನ ನಡೆಸುತ್ತಾ… ತಮ್ಮ ಅಣ್ಣ-ತಮ್ಮಂದಿರಲ್ಲೇ ಆಸ್ತಿಗಾಗಿ ಕಿತ್ತಾಡುತ್ತಾ… ತಮ್ಮ ಬದುಕನ್ನು ಮಧ್ಯ, ಮದಿರೆ, ರೇಸು ಇತ್ಯಾದಿಗಳಲ್ಲಿ ಕಳೆದು ಬಿಡುತ್ತಿದ್ದಾರೆ. ಸಮಾಜಕ್ಕೆ ಇವರ ಕೊಡುಗೆ ತೀರಾ ಶೂನ್ಯ. ಇಂತಹ ಉದ್ದಿಮೆದಾರರ ಬಗ್ಗೆ ಜನತೆ ತಿರಸ್ಕಾರದಿಂದ ಕಾಣುವುದು ಸರ್ವೇ ಸಾಮಾನ್ಯ.

ಆದರೆ, ಕೆಲವರು ಉಳ್ಳವರು ಸಹ ಇದಕ್ಕೆ ಅಪವಾದ. ಕರ್ನಾಟಕದಲ್ಲಿರುವ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿಗಳು ತಮ್ಮ ಇನ್ಫೋಸಿಸ್ ಚಾರಿಟಿಯ ಮೂಲಕ ಕರ್ನಾಟಕದಾದ್ಯಂತ ಅಲ್ಲದೇ ಇತರ ಕಡೆಗಳಲ್ಲೂ ಹಲವು ರೀತಿಯ ಕೊಡುಗೆಗಳನ್ನು ನೀಡಿದ್ದಾರೆ ಈಗಲೂ ನೀಡುತ್ತಿದ್ದಾರೆ. ಇಂತಹ ಹಲವು ಮಹನೀಯರು ತಮ್ಮ ಗಳಿಕೆಯ ಬಹುಪಾಲನ್ನು ಸಮಾಜದ ಕಷ್ಟಗಳಿಗೆ ವಿನಿಯೋಗಿಸುವ ಮೂಲಕ ಜನರ ಮನದಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ.

ಹೀಗೆ ಹೆಸರಿಸಬಹುದಾದ ಇನ್ನೊಬ್ಬರ ಹೆಸರೇ “ರತನ್ ಟಾಟಾ”. 82 ವರ್ಷದ ರತನ್ ಟಾಟಾ ಅವರು ಆರೋಗ್ಯ ರಕ್ಷೆ, ಪೌಷ್ಟಿಕ ಆಹಾರ, ಶಿಕ್ಷಣ, ನೀರಿನ ಯೋಜನೆ, ಜೀವನಮಟ್ಟ ಸುಧಾರಣೆ, ಪರಿಸರ, ವಿಪತ್ತು, ಕ್ರೀಡೆ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಹತ್ತು ಹಲವು ಜನೋಪಯೋಗಿ ಕಾರ್ಯಗಳಿಗೆ ತಮ್ಮ ಟಾಟಾ ಟ್ರಸ್ಟ್ ನ ಮೂಲಕ ಹಣವನ್ನು ವಿನಿಯೋಗಿಸುತ್ತಾ ಬಂದಿದ್ದಾರೆ. ಪ್ರತಿಯೊಬ್ಬ ಕ್ಯಾನ್ಸರ್ ರೋಗಿಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಸಿಗಬೇಕೆಂಬ ಆಶಯ ರತನ್ ಟಾಟಾರದ್ದು. ಅದಕ್ಕಾಗಿ 1,000 ಕೋಟಿ ರೂ. ಗಳನ್ನು ಟಾಟಾ ಟ್ರಸ್ಟ್ ನೀಡಿದೆ.

ಮಿತ್ರರೇ, ಇಂದು ಭಾರತದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ರತನ್ ಟಾಟಾರ ಹೆಸರನ್ನು ಹುಡುಕಿದರೂ ದೊರಕುವುದಿಲ್ಲ. ಅವರ ಒಟ್ಟು ಸಂಪತ್ತಿನ ಮೊತ್ತ 100 ಕೋಟಿ ಡಾಲರ್ ಅಂದರೆ 7,400 ಕೋಟಿ ರೂ. ಆದರೆ, ತಮ್ಮ ಆದಾಯದ ಶೇಕಡಾ 60 ರಷ್ಟನ್ನು ಚಾರಿಟೇಬಲ್ ಟ್ರಸ್ಟ್ ಗಳಲ್ಲಿ ಹಾಕಿದ ಏಕೈಕ ಉದ್ದಿಮೆದಾರರೆಂದರೆ ರತನ್ ಟಾಟಾ. “ಈ ದೇಶವು ಎಲ್ಲರಿಗೂ ಸಮಾನ ಅವಕಾಶಗಳ ನೆಲೆಯಾಗಬೇಕು ಇದು ನನ್ನ ಕನಸು. ಬಡವ ಶ್ರೀಮಂತರ ನಡುವಿನ ಅಂತರ ಅಳಿಸಿ ಹೋಗಬೇಕು” ಎಂಬ ರತನ್ ಟಾಟಾ ಮಾತುಗಳೇ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ಈ ಕರೋನಾ ಸಂಕ್ರಮಣಕಾಲದಲ್ಲೂ ದೇಶಕ್ಕೆ ಬಹುದೊಡ್ಡ ಕೊಡುಗೆಗಳನ್ನು ರತನ್ ಟಾಟಾ ನೀಡಿದ್ದಾರೆ. ಕರೋನಾ ವಿಷಯದಲ್ಲಿ ಭಾರತ ಸರಕಾರದ ಜೊತೆ ಕೈ ಜೋಡಿಸಿರುವ ರತನ್ ಟಾಟಾ ಅವರು 500 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದಾರೆ. ಅವರ ಟಾಟಾ ಗ್ರೂಪ್ 1,000 ಕೋಟಿ ರೂಪಾಯಿಯನ್ನು ನೀಡಿದೆ. ಹಾಗೆಯೇ ಟಾಟಾ ಗ್ರೂಪ್ ನ ತಾಜ್ ಹೋಟೆಲ್ ಗಳು ಚಿಕಿತ್ಸೆಯನ್ನು ನೀಡುವ ವೈದ್ಯರಿಗಾಗಿ ತನ್ನ ಬಾಗಿಲನ್ನು ತೆರೆದಿದೆ. ಹೀಗೆ ದೇಶವೂ ತೀರಾ ಸಂಕಷ್ಟದ ಸ್ಥಿತಿ ಎದುರಿಸುತ್ತಿರುವಾಗಲೆಲ್ಲಾ ರತನ್ ಟಾಟಾ ಹಾಗೂ ಅವರ ಒಡೆತನದ ಟಾಟಾ ಗ್ರೂಪ್ ಗಳು ತಮ್ಮ ಅಮೂಲ್ಯ ನೆರವನ್ನು ಸರಕಾರಕ್ಕೆ ನೀಡುತ್ತಲೇ ಬಂದಿದೆ.

ಮಿತ್ರರೇ, ಇಷ್ಟೇ ಅಲ್ಲದೆ ರತನ್ ಟಾಟಾ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕರೋನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಇರುವ ಆಸ್ಪತ್ರೆಗಳು ಸಾಲದೆ ದಿನೇದಿನೇ ರೋಗಿಗಳು ಸಾವನ್ನಪ್ಪುತ್ತಿರುವುದು ನಾವು ಕಾಣುತ್ತೇವೆ. ಅದಕ್ಕಾಗಿಯೇ ಕರೋನಾ ರೋಗಿಗಳಿಗಾಗಿ ವಿಶೇಷ ಸೌಲಭ್ಯ ಹೊಂದಿರುವ ಆಸ್ಪತ್ರೆಯನ್ನು ಕೇರಳಕ್ಕೆ ಸಮೀಪವಿರುವ ಕಾಸರಗೋಡಿನಲ್ಲಿ ರತನ್ ಟಾಟಾ ನಿರ್ಮಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಹೊಂದಿರುವ ಈ ಆಸ್ಪತ್ರೆಯು 128 ಕೊಠಡಿಗಳನ್ನು ಹೊಂದಿದೆ. 540 ಬೆಡ್ ನ ವ್ಯವಸ್ಥೆಯೂ ಇಲ್ಲಿದೆ. ಏಕಕಾಲದಲ್ಲಿ 1000ಕ್ಕೂ ಅಧಿಕ ಕರೋನಾ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯಬಹುದಾದ ಎಲ್ಲಾ ವ್ಯವಸ್ಥೆಯನ್ನು ಒಳಗೊಂಡಿದೆ.

ಆಸ್ಪತ್ರೆಯಲ್ಲಿ ಮೂರು ಪ್ರತ್ಯೇಕ ವಿಭಾಗಗಳಿವೆ. ಒಂದು ಮತ್ತು ಮೂರನೇ ವಿಭಾಗವು ಕ್ವಾರಂಟೈನ್ ಗೆ ಲಭ್ಯವಿದೆ. ಎರಡನೆಯ ವಿಭಾಗವನ್ನು ಐಸೋಲೇಷನ್ ಗಾಗಿಯೇ ನಿರ್ಮಿಸಲಾಗಿದೆ. ಬಹುಪಯೋಗಿ ಈ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದಾರೆ. ಕರೆಂಟು, ನೀರು ಮತ್ತಿತರ ವ್ಯವಸ್ಥೆಯನ್ನು ಕೇರಳ ಸರಕಾರವೇ ನೋಡಿಕೊಂಡಿದೆ. ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ವಿಶೇಷ ಆಸ್ಪತ್ರೆಯನ್ನು ರತನ್ ಟಾಟಾ ಅವರು ಜುಲೈ 31ಕ್ಕೆ ಸರಕಾರಕ್ಕೆ ಹಸ್ತಾಂತರಿಸಲಿದ್ದಾರೆ.

ಮಿತ್ರರೇ, ಇಂತಹ ಉದ್ಯಮಿಗಳು ಉಳಿದವರಿಗೂ ಮಾರ್ಗದರ್ಶಕರಲ್ಲವೇ? ಇವರನ್ನು ನೋಡಿಯಾದರೂ ದೇಶದ ಉಳಿದ ಉದ್ಯಮಪತಿಗಳು ಪ್ರೇರಣೆಗೊಂಡು ತಮ್ಮ ಉಳಿತಾಯದಲ್ಲಿ ಸಣ್ಣ ಭಾಗವನ್ನು ನಿರ್ಗತಿಕರ, ಅನಾರೋಗ್ಯ ಪೀಡಿತರ ಸೇವೆಗೆ ನೀಡಲಿ ಎಂಬುದು ನಮ್ಮ ಸದಾಶಯ.

(ಈಗಾಗಲೇ ವಿಡಿಯೋದಲ್ಲಿ ಆಸ್ಪತ್ರೆಯ ದೃಶ್ಯಗಳನ್ನು ಕೆಲವರು ನೋಡಿರಬಹುದು. ನಾಗರಿಕರ ಮಾಹಿತಿಗಾಗಿ “ಜನಮಿಡಿತ” ಇದನ್ನು ಪ್ರಸ್ತುತಪಡಿಸುತ್ತಿದೆ.)

Leave a Reply

Your email address will not be published. Required fields are marked *