ರಂಗ ಜಂಗಮರ ಸಾರಥಿ ಗುಡಿಹಳ್ಳಿ ನಾಗರಾಜ ಒಂದು ನೆನಪು
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಗುಡಿಹಳ್ಳಿ ಊರಿನವರಾದ ಶ್ರೀ ಗುಡಿಹಳ್ಳಿ ನಾಗರಾಜ ಅವರು ಈ ನಾಡು ಕಂಡ ಶ್ರೇಷ್ಟ ಮತ್ತು ಸೃಜನಶೀಲ ಬರಹಗಾರರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಎಂ ಎ ಇಂಗ್ಲೀಷ್ ಪದವೀಧರರಾಗಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ ಪತ್ರಿಕೋಧ್ಯಮದಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಪತ್ರಕರ್ತರಾಗಿ. ಸಂಪಾದಕರಾಗಿ. ಕನ್ನಡ ರಂಗಭೂಮಿಯ ಪರಿಚಾರಕರಾಗಿ ಕನ್ನಡ ಭಾಷೆ ಮತ್ತು ರಂಗಭೂಮಿಗೆ ಅನುಪಮ ಸೇವೆ ಸಲ್ಲಿಸಿದವರು.
ವೃತ್ತಿ ರಂಗಭೂಮಿಯ ಹಾಗೂ ಹವ್ಯಾಸಿ ಏಳುಬೀಳುಗಳನ್ನರಿತು. ಅದರ ಒಳಿತು ಕೆಡುಕುಗಳನ್ನು ಅವಲೋಕಿಸಿ ಪರಿಹಾರವನ್ನು ಸೂಚಿಸುವ ನಿಟ್ಟಿನಲ್ಲಿ ರಂಗಭೂಮಿಯನ್ನು ಮತ್ತು ಆ ಕ್ಷೇತ್ರದ ಕಲಾವಿದರನ್ನು. ತಂತ್ರಜ್ಞರನ್ನು ಜೀವಂತವಾಗಿಟ್ಟ ಪರಿಚಾರಕರು.
ತಮ್ಮ ಪತ್ರಿಕಾ ವೃತ್ತಿಯ ಮೂಲಕ ಎಲೆಮರೆಯ ಕಾಯಿಯಂತಿದ್ದ ರಂಗಭೂಮಿಯ ಸಾಧಕರನ್ನು ನಾಡಿಗೆ ಪರಿಚಯಿಸಿˌ ಸಾಧನೆಗೆ ತಕ್ಕ ಸಮ್ಮಾನವನ್ನು ಕಲ್ಪಿಸಿಕೊಟ್ಟವರು.
ಯುವ ನಾಟಕಕಾರರನ್ನು, ಕಲಾವಿದರನ್ನು, ರಂಗ ತಜ್ಞರನ್ನು, ರಂಗ ತಂಡಗಳನ್ನು ಪೋಷಿಸಿದವರು.
ತಮ್ಮ ಬದುಕಿನುದ್ದಕ್ಕೂ ಪತ್ರಿಕೆˌ ಹಾಗೂ ರಂಗಭೂಮಿ ಕ್ಷೇತ್ರಗಳನ್ನು ಆಯ್ದುಕೊಂಡು ಅದರಲ್ಲೇ ಜೀವನಾನಂದ ಕಂಡವರು.
ಪ್ರತಿಭಾ ನಾರಾಯಣ್ ˌ ಶಾಂತಮ್ಮ ಪತ್ತಾರˌ ವೀಣಾ ಅದವಾನಿˌ ಪ್ರೇಮಾ ಗುಳೇದಗುಡ್ಡˌ ಹನುಮಕ್ಕˌ ಗೋಪಾಲ ಕೃಷ್ಣ ನಾಯಿರಿˌ ಬಾಬು ಹಿರಣ್ಯಯ್ಯˌ ಶಾರದಾˌ ಪುಷ್ಪಮಾಲˌ ಅಣ್ಣಿಗೇರಿˌ ಪ್ರೇಮಾ ಬದಾಮಿˌˌ ಜಯಶ್ರಿ ಪಾಟೀಲ್ ವಂದನಾ ಗಂಗಾವತಿˌ ಕೆ ನಾಗರತ್ನಮ್ಮ. ಸುಭದ್ರಮ್ಮ ಮನ್ಸೂರುˌ ಮಾಲತಿ ಮೈಸೂರು ಮುಂತಾದವರ ಜೀವನ ಚರಿತೆಯನ್ನು ರಚಿಸುವ ಮೂಲಕ ಅನೇಕ ರಂಗ ಕಲಾವಿದರುˌ ನಿರ್ಧೇಶಕರುˌ ಕಂಪನಿ ಮಾಲಿಕರುˌ ಸಂಘಟಕರುˌ ಸಂಗೀತಗಾರರನ್ನು ಪ್ರೋತ್ಸಾಹಿಸಿದವರು. ರಂಗಭೂಮಿಗಾಗಿಯೇ ತಮ್ಮ ಜೀವನವನ್ನು ಸವೆದು ನಿರ್ಲಕ್ಷ್ಯಕ್ಕೆ ಒಳಗಾದ ಸಾಧಕರ ಜೀವನಾಧಾರಕ್ಕೆ ನೆರವಾದರು. ಮತ್ತು ಅವರ ಸಾಧನೆಯನ್ನು ದಾಖಲಿಸಿದರು. ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳನ್ನು ಕಲ್ಪಿಸಿಕೊಟ್ಟರು.
ಸದಾ ಒಂದಿಲ್ಲೊಂದು ರಂಗಭೂಮಿಯ ಅಧ್ಯಯನದಲ್ಲಿ ಸಕ್ರಿಯರಾಗಿರುತ್ತಿದ್ದ ಗುಡಿಹಳ್ಳಿಯವರು
ತಮ್ಮ ನಾಲ್ಕು ದಶಕಗಳ ರಂಗಭೂಮಿ ಸೇವೆಯ ಮೂಲಕ ಅನೇಕ ರಂಗ ಜಂಗಮರ ಜೀವನ ಸಾಧನೆಯನ್ನು ರಂಗಭೂಮಿ ಮತ್ತು ಸಾಹಿತ್ಯ ಲೋಕಕ್ಕೆ ಪರಿಚಯಿಸುವ ಮುಖಾಂತರ ಆಯಾ ಕಾಲಘಟ್ಟದ ರಂಗಭೂಮಿಯ ಸ್ಥಿತಿಗತಿಯನ್ನು ತಿಳಿಯಪಡಿಸಿದರು.
ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳ ಕೊಂಡಿಯಂತಿದ್ದ ಇವರು ಎರಡೂ ಕ್ಷೇತ್ರಗಳ ಆಗು ಹೋಗುಗಳ ಕುರಿತು ಸಮಗ್ರ ಮಾಹಿತಿಯನ್ನು ಒದಗಿಸಬಲ್ಲ ಪ್ರಮುಖರಲ್ಲಿ ಇವರೂ ಒಬ್ಬ ರಂಗ ಪರಿಣಿತರಾಗಿದ್ದರು.
ಲಲಿತ ಕಲಾರಂಗˌ ಪೃಥ್ವಿ ರಂಗಶಾಲೆˌ ಮುಂತಾದ ರಂಗ ತಂಡಗಳ ಪೋಷಕರಾಗಿ ರಂಗ ಸೇವೆ ಮಾಡಿದರು.
ನಾಟಕ ಅಕಾಡಮಿ ಸದಸ್ಯರಾಗಿ ನಾಡಿನ ಎಲ್ಲಾ ಜಿಲ್ಲೆಗಳ ರಂಗಭೂಮಿ ಪರಿಚಯಾತ್ಮಕ ಹೊತ್ತಿಗೆಗಳನ್ನು ಹೊರ ತಂದಿದ್ದಾರೆ. ರಂಗ ನೇಪಥ್ಯ ಪತ್ರಿಕೆಯ ಸಂಪಾದಕರಾಗಿ ನಾಡಿನ ಯುವ ಬರಹಗಾರರನ್ನು ರಂಗ ಸಂಘಟಕರನ್ನು ಮತ್ತು ಕಲಾವಿದರನ್ನು ಪರಿಚಯಿಸಿದ್ದಾರೆ. ಹೀಗೆ ರಂಗಭೂಮಿಯ ವಿವಿಧ ಆಯಾಮಗಳನ್ನು ಆಳವಾಗಿ ಅರಿತಿದ್ದ ಕಾರಣದಿಂದ ಗುಡಿಹಳ್ಳೀ ನಾಗರಾಜ ಅವರಿಗೆ ಸಂಗ ಸಂಬಂಧಿ ಹೊತ್ತಿಗೆಗಳನ್ನು ರಚಿಸಲು ಸಾಧ್ಯವಾಯಿತು.
ಸರೀ ಸುಮಾರು ಹದಿನಾಲ್ಕು ರಂಗಭೂಮಿ ಸಂಬಂಧಿತ ಕೃತಿಗಳನ್ನು ರಚಿಸಿ ಕನ್ನಡ ಭಾಷೆ ಮತ್ತು ರಂಗಭೂಮಿ ಕ್ಷೇತ್ರಕ್ಕೆ ಅನನ್ಯ ಸೇವೆ ಸಲ್ಲಿಸಿರುವ ಶ್ರೀಯುತರಿಗೆ ಅನೇಕ ಪ್ರಶಸ್ತಿಗಳು ˌ ಗೌರವ ಸನ್ಮಾನಗಳು ಲಭಿಸಿವೆ. ಮತ್ತಷ್ಟೂ ಮಗದಷ್ಟು ಪರಿಣಾಮಕಾರಿ ರಂಗ ಚಟುವಟಿಕೆಗಳನ್ನು ನಿರ್ವಹಿಸಬೇಕಿದ್ದ ಶ್ರೀ ಗುಡಿಹಳ್ಳಿ ನಾಗರಾಜ ಅವರು ಇದೆ ಆಗಷ್ಟ್ ರಂದು ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯೆಜಿಸಿದರು. ಬಾಲ್ಯದಿಂದಲೂ ಅವರ ಒಡನಾಟದಲ್ಲಿ ಬೆಳೆದ ನನ್ನಂಥ ಅನೇಕ ರಂಗಕರ್ಮಿಗಳು ಅವರ ಸಾಧನೆಗಳನ್ನು ನೆನೆದು. ಅವರ ಹಾದಿಯಲ್ಲಿ ರಂಗಭೂಮಿಯನ್ನು ಮುನ್ನೆಡೆಸುವ ಅಗತ್ಯವಿದೆ.
ಅಂಥವರ ಸಾಧನೆ ಸದಾ ಹಸಿರಾಗಿರುವಂತೆ ಇಂದಿನ ಯುವ ರಂಗಕರ್ಮಿಗಳಿಗೆ ಮಾರ್ಗದರ್ಶನವಾಗಲಿ ಎಂದು ನಾವು ನೀವುಗಳೆಲ್ಲಾ ಅವರ ಆತ್ಮಕ್ಕೆ ಶಾಂತಿ ಕೋರೋಣ.
ವೆಂಕಟೇಶ ಈಡಿಗರ
ರಾಣೇಬೆನ್ನೂರು.