ಮುಖ್ಯಮಂತ್ರಿ ಆಗಿದ್ದರೂ ಅವರಿಗೆ ಇದ್ದದ್ದು ಕೇವಲ ಎರಡೇ ಲುಂಗಿಗಳು..! ದೇಶಕಂಡ ಈವರೆಗಿನ ಅತ್ತ್ಯುತ್ತಮ ಮುಖ್ಯಮಂತ್ರಿ…

ಇಂದು ಗ್ರಾಮ ಪಂಚಾಯ್ತಿ ಸದಸ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯ, ಜಿಲ್ಲಾ ಪಂಚಾಯ್ತಿ ಸದಸ್ಯರಾದರೂ  ಸಾಕು ತಮ್ಮ ಅವಧಿಯಲ್ಲಿ ಬಾಚಿ ಮುಕ್ಕುತ್ತಾರೆ.  ಅಪ್ಪಿ ತಪ್ಪಿ ಅಧ್ಯಕ್ಷರಾಗುವ ಯೋಗ  ಸಿಕ್ಕಿದರೆ ಮೊಮ್ಮಕ್ಕಳಿಗೂ  ಸಾಕಾಗುವಷ್ಟು ಮಾಡಿಡುತ್ತಾರೆ.  ಇನ್ನು ಶಾಸಕ, ಸಂಸದ ಅಥವಾ  ಮಂತ್ರಿಯಾದರೆ ಕೇಳಬೇಕೇ?
ಒಮ್ಮೆ ಯೋಚಿಸಿ ನೋಡಿ… ಇಂದು ನಾವು ನೋಡುತ್ತಿರುವ  ಕೋಟ್ಯಾಧಿಪತಿಗಳು ಹಿಂದೆ ಏನಾಗಿದ್ದರು ಎಂದು. ಅವರಪ್ಪ ಹಾಗೂ  ಅಜ್ಜನ ಸಮಯದಲ್ಲಿ ಅವರ ಕುಟುಂಬದ  ಸ್ಥಿತಿ ಏನಿತ್ತು ಎಂಬುದನ್ನು.  ಹಾಗಾದರೆ ಈಗ ಇವರುಗಳು ಸಂಪಾದಿಸಿರುವುದು ಹೇಗೆ ಎಂದು ಚಿಂತಿಸಿ ನೋಡಿ.

ರಾಜಕೀಯ ಎಂಬುದೂ ಒಂದು ಕಾಲದಲ್ಲಿ  “ಧರ್ಮ” ಆಗಿತ್ತು. ಅಧಿಕಾರ ಎಂಬುದು  ತಮಗೆ  ಜನಸೇವೆ ಮಾಡಲು ಒದಗಿಬಂದಿರುವ  ಅವಕಾಶ ಎಂದು ಜನಪ್ರತಿನಿಧಿಗಳು ಅಂದುಕೊಂಡಿದ್ದ  ಕಾಲವದು. ಆ ಕಾಲ ಮುಂದೆಂದೂ ಬಾರದ ದುರ್ಗತಿಯಲ್ಲಿ  ಈಗ ನಾವಿದ್ದೇವೆ. ಕೇವಲ  ಇತಿಹಾಸದ  ಪುಟದಲ್ಲಿ ಅಷ್ಟೆ ನಾವು ಅಂಥವರನ್ನು ಕಾಣಲು ಸಾಧ್ಯವೇ ಹೊರತು ಅಂಥ ಮಹನೀಯರುಗಳನ್ನು ಅಥವಾ ಅಂಥವರನ್ನು ಹೋಲುವ ಇಲ್ಲವೇ ಉದಾಹರಣೆ ಕೊಡಬಹುದಾದ ಒಬ್ಬನೇ ಒಬ್ಬ ಈಗ ಈ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಎಲ್ಲರೂ ಸ್ವಾರ್ಥಿಗಳು, ಜಾತಿವಾದಿಗಳು, ಅವಕಾಶವಾದಿಗಳು, ಅಧಿಕಾರಕ್ಕಾಗಿ ಎಂಥ ಹೀನಕೃತ್ಯಕ್ಕೂ ಹೇಸದವರು.

ನಾನೀಗ ಒಂದಿಬ್ಬರು ಮಹನೀಯರ ಕುರಿತು ಬರೆಯುತ್ತಿರುವುದು ನಮ್ಮ ಯುವ ಪೀಳಿಗೆಗೆ “ಇಂಥವರೂ” ಹಿಂದೆ ರಾಜಕಾರಣದಲ್ಲಿದ್ದರು, ಮುಖ್ಯಮಂತ್ರಿ ಹಾಗೂ  ಪ್ರಧಾನಮಂತ್ರಿಯಂಥ ಉನ್ನತಸ್ಥಾನ ಅಲಂಕರಿಸಿದರೂ ಅವರು ದುಡಿದದ್ದು ನಾಡಿಗಾಗಿ ಮಾತ್ರ ಎಂಬುದನ್ನು  ತಿಳಿಸಲು.
ಕಂತುಗಳಲ್ಲಿ  ಇಂಥ ಕೆಲ ಮಹನೀಯರ ಬಗ್ಗೆ  ತಿಳಿಸುತ್ತೇನೆ.  ಇದು ಅದರ ಮೊದಲ ಭಾಗ.

ಕಾಮರಾಜರ್….. ಎಂಬ ದಂತಕಥೆ

ಅದೊಂದು  ಸಂದರ್ಭವನ್ನು ತಮಿಳುನಾಡಿನವರೇ ಆದ ರಾಜ್ಯದ ಖ್ಯಾತ ಪೊಲೀಸ್ ವರಿಷ್ಠಾಧಿಕಾರಿ ಎಂದು  ಹೆಸರು ಪಡೆದಿರುವ ಮುರುಗನ್ ಸಮಾರಂಭವೊಂದರಲ್ಲಿ ಸ್ವತಃ ಹೇಳಿದ್ದಾರೆ. ಚಿಕ್ಕಮಗಳೂರು ಎಸ್.ಪಿ. ಆಗಿರುವ ಅವರು ಶಾಲಾ ಸಮಾರಂಭವೊಂದರಲ್ಲಿ ಹೇಳಿದ್ದನ್ನು ವೀಡಿಯೋದಲ್ಲಿ ಕೇಳಬಹುದು.

ಕಾಮರಾಜರ್ ಅವರು ತಮಿಳುನಾಡು ಮುಖ್ಯಮಂತ್ರಿ ಆಗಿದ್ದ  ಸಂದರ್ಭವದು. ಶಾಲಾ ಕಟ್ಟಡವೊಂದರ ಉದ್ಘಾಟನೆಗೆ ಬೆಳಿಗ್ಗೆ 11 ಗಂಟೆಗೆ ಸಮಯ ನಿಗಧಿಯಾಗಿತ್ತು. ಕಾರ್ಯಕ್ರಮದ ಸಂಘಟಕರು ಹಾಗೂ ಅಂದಿನ ಶಿಕ್ಷಣ ಸಚಿವರು ಕಾಮರಾಜರ್ ಅವರನ್ನು  ಸಮಾರಂಭಕ್ಕೆ ಕರೆತರಲು ಮನೆಯ ಬಳಿ ಬಂದಿದ್ದರು. ಕಾಮರಾಜರ್ ಹಿತ್ತಲಲ್ಲಿ ಇದ್ದಾರೆ ಎಂದು ತಿಳಿದು 20 ನಿಮಿಷ ಕಾದು ಕುಳಿತರು. ಆದರೂ ಕಾಮರಾಜರ್ ರೆಡಿಯಾಗಿ ಹೊರಬರುವ ಲಕ್ಷಣ  ಕಾಣಲಿಲ್ಲ.

ಏಕೆ ಹೀಗೆ ಎಂದು ಶಿಕ್ಷಣ ಸಚಿವರು ಹಿತ್ತಲಿಗೆ ಹೋಗಿ ನೋಡಿದಾಗ ಸ್ವತಃ  ಕಾಮರಾಜರ್ ಅವರೇ ಲುಂಗಿ (ಪಂಚೆ)ಯೊಂದನ್ನು ಗಾಳಿಗೆ ಒಡ್ಡಿ ಒಣಗಿಸುತ್ತಿದ್ದರು. ಅವರನ್ನು ಆಶ್ಚರ್ಯಕರ ರೀತಿಯಲ್ಲಿ ಶಿಕ್ಷಣ ಸಚಿವರು ನೋಡಿದಾಗ ಕಾಮರಾಜರ್ ಅವರು ಒಂಥರಾ ಮುಜುಗರಕ್ಕೆ ಈಡಾದವರಂತೆ  “ಕ್ಷಮಿಸಿ, ನಿಮ್ಮನ್ನು ಹಾಗೂ ಸಂಘಟಕರನ್ನು ಕಾಯಿಸಿಬಿಟ್ಟೆ.  ಈ ಸಮಾರಂಭದ ಬಗ್ಗೆ  ನನಗೆ ಮರೆತು ಹೋಗಿತ್ತು. ನನ್ನ ಬಳಿ ಇರುವ ಎರಡೂ ಲುಂಗಿಗಳನ್ನು ರಾತ್ರಿ ತೊಳೆದುಹಾಕಿದ್ದೆ,  ಹಾಳಾದವು ಇನ್ನು ಒಣಗಿಲ್ಲ” ಎಂದರು.

ಒಂದು ರಾಜ್ಯದ ಮುಖ್ಯಮಂತ್ರಿಯಾದ ವ್ಯಕ್ತಿಯಿಂದ ಇಂಥ ಸರಳ ಜೀವನ ಶೈಲಿಯನ್ನು ಇಂದಿನ ದಿನದಲ್ಲಿ ಕಾಣಬಹುದೇ? ಕಾಣುವುದು ಏನು ಬಂತು… ನಿರೀಕ್ಷಿಸಲಾದರೂ ಆದೀತೇ? ತಾವು ಮುಖ್ಯಮಂತ್ರಿ ಆಗುವವರೆಗೂ  ಅವರ ಮನೆಗೆ ಪ್ರತ್ಯೇಕ ನೀರಿನ ಪೈಪ್ ಲೈನ್ ಇರಲಿಲ್ಲ. ಮುಖ್ಯಮಂತ್ರಿ ಆದ ಬಳಿಕ ಸಹಜವಾಗಿಯೇ ಹೊಸ ಪೈಪ್ ಲೈನ್ ಅಳವಡಿಸಲಾಯಿತು. ಒಮ್ಮೆ ಕಛೇರಿಯಿಂದ ಮನೆಗೆ ಅವರು ಹಿಂದಿರುಗಿದಾಗ ಈ ವಿಷಯ ಅವರ ಗಮನಕ್ಕೆ ಬಂತು.
ತಕ್ಷಣವೇ ತಮ್ಮ ತಾಯಿಯವರನ್ನು ಕರೆದು “ಅಮ್ಮಾ ಏನಿದು?ಶ್ರೀ ಸಾಮಾನ್ಯ ಏನೆಂದುಕೊಂಡಾರು? ಎಲ್ಲರೂ ರಸ್ತೆ ಬದಿಯ ನೆಲ್ಲಿಯಲ್ಲಿ ನೀರು ತರುವಾಗ ನಮ್ಮ ಮನೆಗೇಕೆ ಪ್ರತ್ಯೇಕ ಪೈಪ್‍ಲೈನ್. ಮೊದಲು ಇದನ್ನು ತೆಗಿಸಿ” ಎಂದರು. ಜನಪ್ರತಿನಿಧಿ ಎಷ್ಟೇ ಉನ್ನತ ಹುದ್ದೆ ಹೊಂದಿದ್ದರೂ ತಾನೂ ಒಬ್ಬ ಸಾಮಾನ್ಯ ಪ್ರಜೆ ಎಂಬುದನ್ನು ಸದಾ ಅರಿತಿರಬೇಕು ಎಂಬುದು ಕಾಮರಾಜರ್ ಅವರ ಮನದಾಳದ ಇಂಗಿತವಾಗಿತ್ತು. ತಾವು ಬದುಕಿರುವವರೆಗೂ ಹಾಗೇ ಜೀವನ ಸಾಧಿಸಿದ ಮಹಾನ್ ವ್ಯಕ್ತಿ ಅವರಾಗಿದ್ದರು.

ತಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 9 ಅಣೆಕಟ್ಟುಗಳನ್ನು ಕಟ್ಟಿಸಿ ಸಾವಿರಾರು ರೈತಾಪಿ ಕುಟುಂಬಗಳ ಜೀವನವನ್ನು ಕಟ್ಟಿಕೊಟ್ಟ ಆಧುನಿಕ ಭಗೀರಥ ಸಹ ಆಗಿದ್ದರು ಕಾಮರಾಜರ್ ಅವರು. 1954 ರಿಂದ 1963ರವರೆಗೆ ಅಂದರೆ ಒಟ್ಟು 9 ಸುದೀರ್ಘ ವರ್ಷಗಳವರೆಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅವರು 1952 ರಿಂದ 1959 ಹಾಗೂ 1969 ರಿಂದ 1975ರವರೆಗೆ ಸಂಸದರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದರು. ತಮಿಳುನಾಡು ಅಷ್ಟೇ ಏಕೆ ರಾಷ್ಟ್ರ ಕಂಡ ಈವರೆಗಿನ ಅತ್ಯುತ್ತಮ ಮುಖ್ಯಮಂತ್ರಿ ಅವರೇ.
ಹೌದು, ದೇಶ ಕಂಡ  ಮಹಾನ್ ವ್ಯಕ್ತಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪ್ರಧಾನಮಂತ್ರಿ ಸ್ಥಾನಕ್ಕೆ ತರುವಲ್ಲಿ  ಕಾಮರಾಜರ್ ಅವರ ಪಾತ್ರವೂ  ಬಹು ಮುಖ್ಯವಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತ ಹಾಗೂ ಅವರ ಸರಳ ಜೀವನಶೈಲಿಯ ಕುರಿತ ಲೇಖನವನ್ನು ಭಾಗ-2 ರಲ್ಲಿ ಬರೆಯುತ್ತೇನೆ.

– ಜಿ.ಎಂ.ಆರ್. ಆರಾಧ್ಯಸಂಪಾದಕರು, ಜನಮಿಡಿತ.

Leave a Reply

Your email address will not be published. Required fields are marked *