“ಮೀಸಲು”, “ಸೌಲಭ್ಯ” ಗಳ ಹೆಸರಲ್ಲಿ ವಿದ್ಯಾರ್ಥಿಗಳ ತಲೆಯಲ್ಲಿ ಜಾತಿ – ಅಸಮಾನತೆ ಬೀಜ ಬಿತ್ತಬೇಡಿ

ಈ ಹಿಂದೆ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ನಮ್ಮ ವ್ಯವಸ್ಥೆಯಲ್ಲಿ ಜಾರಿಗೆ ಬಂದ ಮೀಸಲಾತಿ ಸೌಲಭ್ಯ ಹಾಗೂ ಹಿಂದುಳಿದ ವರ್ಗಗಳಿಗೆ ವಿವಿಧ ಕ್ಷೇತ್ರಗಳಲ್ಲಿ ನೀಡುವ ಸೌಲಭ್ಯ ಈಗ ಮಿತಿ ಮೀರಿದೆ. ಸಾಮಾನ್ಯ ವರ್ಗದ ಜನತೆ ರೋಸಿ ಹೋಗುವಷ್ಟರ ಮಟ್ಟಿಗೆ ಈ ಸೌಲಭ್ಯ ವಿಸ್ತಾರವಾಗತೊಡಗಿದೆ. ಯಾವ ಉದ್ದೇಶದಿಂದ ಹಾಗೂ ನಿಗಧಿತ ಅವಧಿಗೆಂದು ಕಲ್ಪಿಸಲ್ಪಟ್ಟ ಇಂತಹ ಅವಕಾಶಗಳು ನಮ್ಮ ದುರುಳ ರಾಜಕಾರಣಿಗಳ ಕೈಗೆ ಸಿಕ್ಕು ವಿಸ್ತಾರ ಆಗುತ್ತಾ ಆಗುತ್ತಾ ಜಾತಿ ಜಾತಿಗಳ ನಡುವೆ ಹಾಗೂ ಸಮಾಜದ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯರ ನಡುವೆ ವಿಷಬೀಜ ಬಿತ್ತತೊಡಗಿವೆ.

ಎಲ್ಲಾ ರಾಜಕೀಯ ಪಕ್ಷಗಳಿಗೂ ಎಲ್ಲಾ ವರ್ಗದ ಕಾರ್ಯಕರ್ತರು ಇದ್ದೇ ಇರುತ್ತಾರೆ. ಆದರೆ ಕೇವಲ ಮತಗಳಿಕೆ ದೃಷ್ಟಿಯಿಂದ ನಿಗಧಿತ ಸಮುದಾಯವೊಂದರ ಓಲೈಕೆಗೆ ಆಳುವ ಪಕ್ಷಗಳು ಮುಂದಾಗುತ್ತಿರುವುದು ಮಾತ್ರ ದುರದೃಷ್ಟಕರ. ಈ ಮೀಸಲಾತಿ ಹಾಗೂ ವಿವಿಧ ಸೌಲಭ್ಯಗಳ ಹಾವಳಿ ಎಷ್ಟಿದೆಯೆಂದರೆ ಸಾಮಾನ್ಯ ವರ್ಗದ ಜನ, “ನಾವೇಕೆ ಹಿಂದುಳಿದ ವರ್ಗಗಳಲ್ಲಿ ಹುಟ್ಟಲಿಲ್ಲವಲ್ಲಾ’’ ಎಂದು ಕೊರಗುವಷ್ಟರ ಮಟ್ಟಿಗೆ ಇದೆ.

ನಾನು ಹಿಂದುಳಿದ ವರ್ಗಗಳಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ವಿರೋಧಿ ಖಂಡಿತಾ ಅಲ್ಲ. ಸೌಲಭ್ಯಗಳನ್ನು ಕೊಡಿ. ಆದರೆ, ಆ ಮಕ್ಕಳನ್ನು, ಆ ವರ್ಗದ ವಿದ್ಯಾರ್ಥಿಗಳನ್ನು ಕಲಿಯಲು, ಹಿರಿಯರನ್ನು ದುಡಿಯಲು ಬಿಡಿ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯವರ್ಗದ ಮಕ್ಕಳು ಇದ್ದಾರೆ ಎಂಬುದು ಕುರುಡು ಸರ್ಕಾರದ ಕಣ್ಣಿಗೆ ತಿಳಿಯುವುದಾದರೂ ಹೇಗೆ? ಇಂತಹ ಮಕ್ಕಳ ಮನಸ್ಸಿನಲ್ಲಿ ನಮ್ಮ ವ್ಯವಸ್ಥೆಯ ಬಗ್ಗೆ ಮೂಡುವ ಭಾವನೆಯಾದರೂ ಹೇಗಿರಬಹುದು ಎಂದು ಒಮ್ಮೆ ಆಲೋಚಿಸಿ ನೋಡಿ.

ನಾನು ಈ ಹಿಂದೆಯೇ ಬರೆದಿದ್ದೆ, ನೀವೇ ಅಲ್ಲ ನಿಮ್ಮ ಮಕ್ಕಳು, ಮರಿಮಕ್ಕಳು ಅಧಿಕಾರಕ್ಕೆ ಬಂದರೂ ಮುಂದೊಮ್ಮೆ ತೀರಿಸಲಾಗದಷ್ಟು ಸಾಲದ ಹೊರೆಯನ್ನು ಈಗಾಗಲೇ ಹೊರಿಸಿದ್ದೀರಿ. ಮತ್ತೆ ಈಗ ಉಚಿತ ಲ್ಯಾಪ್ಟಾಪ್, ಸಾವಿರ ರೈತರನ್ನು ವಿದೇಶಕ್ಕೆ ಕಳುಹಿಸುವ ಯೋಜನೆ, ಉಚಿತ ಬಸ್ಪಾಸ್… ಇತ್ಯಾದಿಗಳನ್ನು ಘೋಷಿಸಿದ್ದೀರಿ. ಇದಕ್ಕೆಲ್ಲಾ ಹಣವನ್ನು ನಿಮ್ಮ ಮಾವನವರ ಮನೆಗಳಿಂದ ತರುತ್ತೀರಾ? ಒಂದು ವಿಷಯ ಶ್ರೀಸಾಮಾನ್ಯರಿಗೆ ತಿಳಿದಿರಲಿಕ್ಕಿಲ್ಲ. ನೀವುಗಳು ಕೆಎಸ್ಆರ್ಟಿಸಿಗೆ ಸಾವಿರಗಳ ಸಂಖ್ಯೆಯಲ್ಲಿ ಬಸ್ಸುಗಳನ್ನು ಖರೀದಿಸಿರುವುದರ ಹಿಂದೆ, ವಿದ್ಯಾರ್ಥಿಗಳಿಗಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಸೈಕಲ್ಗಳನ್ನು ಖರೀದಿಸಿರುವುದರ ಹಿಂದೆ, ಪೊಲೀಸ್ ಇಲಾಖೆಗಾಗಿ ಸಾವಿರಾರು ಸಂಖ್ಯೆಯ ವಾಹನಗಳನ್ನು ಖರೀದಿಸಿರುವುದರ ಹಿಂದೆ ಸಾಮಾಜಿಕ ಕಳಕಳಿ ಇದೆ ಎಂದುಕೊಂಡಿದಾರೆ. ಆದರೆ ವಾಹನವೊಂದಕ್ಕೆ ಕನಿಷ್ಠ 50ಸಾವಿರದಿಂದ 1ಲಕ್ಷರೂ. ಕಮಿಷನ್ ಅಂದುಕೊಂಡರೂ ಅದು ಕೋಟಿಗಳನ್ನು ದಾಟುತ್ತದಲ್ಲವೇ?

ಇದೀಗ ಉಚಿತ ಬಸ್ಪಾಸ್  ಹೆಸರಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರನ್ನು ಕೆಣಕಿದ್ದೀರಿ. ರಾಜಕೀಯ ದಾಟದ ಒಳ ಹೊರಗು ಅರಿಯದ ವಿದ್ಯಾರ್ಥಿಗಳ ತಲೆಯಲ್ಲಿ ತಾರತಮ್ಯದ ಹುಳ ಬಿಟ್ಟಿದ್ದೀರಿ. ಆದರೂ ನಿಮ್ಮ ಇಂಥ ಅಸಂಬದ್ಧ ನಿರ್ಧಾರಗಳ ಕುರಿತು ವಿವಿಧ ಸಮಾಜಗಳ ಮುಖಂಡರುಗಳು ಏಕೆ ಬಾಯಿಮುಚ್ಚಿಕೊಂಡು ಕುಳಿತಿದ್ದಾರೋ ತಿಳಿಯುತ್ತಿಲ್ಲ.

Leave a Reply

Your email address will not be published. Required fields are marked *