ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟವರಿಗೆ ನಯಾ ಪೈಸೆನೂ ಪರಿಹಾರ ಕೊಡಲ್ಲ: ಬಿಎಸ್ ವೈ ಸ್ಪಷ್ಟನೆ

ಮಂಗಳೂರು,ಡಿ.25; ಪೌರತ್ವ ಕಾಯ್ದೆ ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಮಂಗಳೂರಿನಲ್ಲಿ ಈಚೆಗೆ ನಡೆದ ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಒಂದು ನಯಾಪೈಸೆ ಪರಿಹಾರವನ್ನು ಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಕಳೆದ ಗುರುವಾರ ಮಂಗಳೂರಿನಲ್ಲಿ ಪ್ರತಿಭಟನೆಗಳು ಹೆಚ್ಚಾದ ಕಾರಣ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇದರ ನಡುವೆಯೂ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಡಿ. 19ರಂದು ಪೋಲಿಸರು ಗೋಲಿಬಾರ್ ನಡೆಸಿದ್ದರು.

ಈ ಘಟನೆಯಲ್ಲಿ ಗುಂಡೇಟಿನಿಂದ ಜಲೀಲ್ ಮತ್ತು ನೌಶಿನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದರು. ಪೋಲೀಸರ ಗೋಲಿಬಾರ್ ಕೃತ್ಯಕ್ಕೆ ರಾಜ್ಯಾದ್ಯಾಂತ ಖಂಡನೆ ವ್ಯಕ್ತವಾಗಿತ್ತು. ಈ ವೇಳೆ ಪೋಲಿಸರ ಕೃತ್ಯವನ್ನು ಖಂಡಿಸಿ ಕಾಂಗ್ರೆಸ್ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರೆ, ಪೋಲೀಸರು ಸಹ ತಾವು ಏಕೆ ಗೋಲಿಬಾರ್ ಮಾಡುವ ಸನ್ನಿವೇಶ ಸೃಷ್ಠಿಯಾಯಿತು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು.

‌ಈ ನಡುವೆ ವಿಡಿಯೋದಲ್ಲಿ ಜನ ಪೋಲಿಸರೆಡೆಗೆ ಕಲ್ಲು ತೂರಾಟ ಮಾಡುವ ದೃಶ್ಯಗಳು ದಾಖಲಾಗಿದ್ದವು. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಲ್ ಸೇರಿದಂತೆ ಬಿಜೆಪಿ ಪಕ್ಷದ ಹಲವು ಶಾಸಕರು ಹಾಗೂ ಸಚಿವರು ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರು ಗಲಭೆ ಆರೋಪಿಗಳಾಗಿದ್ದು, ಅವರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡುವ ಕುರಿತು ತಕರಾರೆತ್ತಿದ್ದಾರೆ.

‌ಹೀಗಾಗಿ ಪ್ರಕರಣದ ಕುರಿತು ಈಗಾಗಲೇ ತನಿಖೆಗೆ ಆದೇಶಿಸಿರುವ ಬಿ. ಎಸ್ ಯಡಿಯೂರಪ್ಪ ಈ ಕುರಿತು ಇಂದು ಮಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಗೋಲಿಬಾರ್ ನಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಈವರೆಗೆ ಪರಿಹಾರದ ಹಣ ಘೋಷಣೆ ಮಾಡಿಲ್ಲ, ಅಲ್ಲದೆ ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು, ತನಿಖೆ ಮುಗಿಯುವವರೆಗೆ ಯಾರಿಗೂ ಪರಿಹಾರ ನೀಡಲಾಗುವುದಿಲ್ಲ. ಒಂದು ವೇಳೆ ತನಿಖೆಯಲ್ಲಿ ಮೃತಪಟ್ಟ ಇಬ್ಬರೂ ಯುವಕರು ಅಪರಾಧಿಗಳು ಎಂಬುದು ಸಾಬೀತಾದರೆ ಯಾರಿಗೂ 1 ರೂ. ಸಹ ಪರಿಹಾರ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *