ಭಾರತ ದೇಶವನ್ನು ನಾವೆಲ್ಲ ಗೌರವದಿಂದ ಕಾಣಬೇಕಿದೆ – ಮ್ಯಾಥ್ಯೂ ಹೇಡನ್

(ಆಸ್ಟ್ರೇಲಿಯಾದ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ The Pioneer ಪತ್ರಿಕೆಯಲ್ಲಿ ಬರೆದ “Incredible India deserves respect” ಲೇಖನ. ಕನ್ನಡ ಅನುವಾದ: ಶ್ರೀವತ್ಸ ಜೋಶಿ.)

ಕೋವಿಡ್‌ನ ಎರಡನೆಯ ಅಲೆಯಿಂದ ಉಂಟಾಗಿರುವ ಪರಿಸ್ಥಿತಿಯಲ್ಲಿ ಭಾರತವು ನಲುಗಿಹೋಗಿದೆ. ವೈರಾಣುವಿನ ಹಾವಳಿ ಕಾಳ್ಗಿಚ್ಚಿನಂತೆ ಹಬ್ಬುವುದನ್ನು ತಡೆಗಟ್ಟಲು ದೇಶದಲ್ಲಿ ಸಮರೋಪಾದಿಯಲ್ಲಿ ಕೆಲಸಗಳು ನಡೆಯುತ್ತಿರುವಾಗ, ದೇಶ-ವಿದೇಶದ ಮಾಧ್ಯಮಗಳು ಭಾರತವನ್ನು ನಿಕೃಷ್ಟ ರೂಪದಲ್ಲಿ ಬಿಂಬಿಸುತ್ತ ವಿಕೃತವಾಗಿ ಚಪ್ಪರಿಸುತ್ತಿವೆ. 1.4 ಬಿಲಿಯನ್‌ನಷ್ಟು ಜನಸಂಖ್ಯೆಯ ಈ ಮಹಾನ್ ದೇಶದಲ್ಲಿ ಯಾವುದೇ ಯೋಜನೆಯನ್ನು ರಾಷ್ಟ್ರವ್ಯಾಪಿಯಾಗಿ ಅನುಷ್ಠಾನಗೊಳಿಸುವುದು ಎಂಥ ಸವಾಲಿನ ಕೆಲಸ ಎಂಬ ಕನಿಷ್ಠ ಪರಿಜ್ಞಾನವೂ ಇಲ್ಲದೆ ಇವು ಭಾರತವನ್ನು ಹೀಯಾಳಿಸುತ್ತಲೇ ಇವೆ.

ನಾನು ಕಳೆದೊಂದು ದಶಕದಿಂದ ಭಾರತಕ್ಕೆ ಅನೇಕ ಸಲ ಭೇಟಿಯಿತ್ತಿದ್ದೇನೆ, ಭಾರತದ ವಿವಿಧೆಡೆಗಳಲ್ಲಿ- ವಿಶೇಷವಾಗಿ ನಾನು ನನ್ನ ‘ಅಧ್ಯಾತ್ಮಕೇಂದ್ರ’ ಎಂದು ಪರಿಗಣಿಸುವ ತಮಿಳುನಾಡಿನಲ್ಲಿ- ಸಂಚರಿಸಿದ್ದೇನೆ. ಇಷ್ಟು ವಿಶಾಲವಾದ ಮತ್ತು ವೈವಿಧ್ಯಮಯ ದೇಶದ ಆಡಳಿತ ಚುಕ್ಕಾಣಿ ಹಿಡಿದ ನಾಯಕರನ್ನು, ಸಾರ್ವಜನಿಕ ಅಧಿಕಾರಿಗಳನ್ನು ನಾನು ಯಾವತ್ತಿಗೂ ಅತ್ಯಂತ ಗೌರವಭಾವದಿಂದ ಗುರುತಿಸಿದ್ದೇನೆ. ನಾನು ಹೋದಲ್ಲೆಲ್ಲ ಜನಸಾಮಾನ್ಯರು ನನ್ನನ್ನು ಅತ್ಯಂತ ಪ್ರೀತಿಯಿಂದ ಕಂಡಿದ್ದಾರೆ, ಅವರ ಈ ಪ್ರೀತಿಗೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಇಷ್ಟು ವರ್ಷಗಳಲ್ಲಿ ಭಾರತ ದೇಶವನ್ನು ಸಾದ್ಯಂತ ಗಮನಿಸಿ ಗೌರವಿಸಿದ್ದೇನೆಂಬ ಹೆಮ್ಮೆ ಅಭಿಮಾನ ಗರ್ವ ನನಗಿವೆ, ಆದ್ದರಿಂದಲೇ ಪ್ರಸ್ತುತ ಭಾರತಕ್ಕೆ ಬಂದೊದಗಿದ ವಿಪತ್ತನ್ನು ನೋಡಿ ನನ್ನ ಹೃದಯ ಚೀರುತ್ತಿದೆ. ಅದಕ್ಕಿಂತಲೂ ಸಂಕಟವೆಂದರೆ ವಿಶ್ವದ ಮಾಧ್ಯಮಗಳು ಭಾರತದ ಈ ಪರಿಸ್ಥಿತಿಯನ್ನು ಅತ್ಯಂತ ಹೀನಾಯವಾಗಿ ತೋರಿಸುತ್ತಿರುವುದು. ಅವರೆಲ್ಲ ಈ ದೇಶವನ್ನು, ಇಲ್ಲಿಯ ಜನರನ್ನು, ಮತ್ತು ಇಲ್ಲಿ ಸವಾಲುಗಳ ನಡುವೆಯೂ ಅರಳುವ ಪ್ರೀತಿಯ ಬದುಕನ್ನು ಅರಿಯುವ ಚಿಕ್ಕದೊಂದು ಪ್ರಯತ್ನವನ್ನಾದರೂ ಯಾವಾಗಾದರೂ ಮಾಡಿದ್ದಿದೆಯೇ ನಾನರಿಯೆ.

ಒಬ್ಬ ಕ್ರಿಕೆಟಿಗನಾಗಿ, ಈ ಕ್ರೀಡೆಯ ಆರಾಧಕನಾಗಿ, ಇದರಲ್ಲಿ ತೊಡಗಿಸಿಕೊಂಡಿರುವ ನನಗೆ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳ ವೀಕ್ಷಕವರದಿಗಾರನಾಗಿಯೂ ಭಾರತಕ್ಕೆ ಬರುವ ಅವಕಾಶಗಳು ಸಿಕ್ಕಿವೆ. ನನ್ನ ಆಸ್ಟ್ರೇಲಿಯಾ ದೇಶದ ಬೇರೆ ಕೆಲವು ಆಟಗಾರರೂ ಐಪಿಎಲ್‌ನಲ್ಲಿ ಆಡಿದ್ದಾರೆ/ಆಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾವಿರಾರು ಮೈಲು ದೂರದಿಂದ ಮಾಧ್ಯಮಮಂದಿ ಭಾರತದ ಬಗ್ಗೆ ಕ್ರೂರವಾಗಿ ವರ್ತಿಸುತ್ತ, ಇಲ್ಲಿಯ ಸರಕಾರವನ್ನು ದೂಷಿಸುತ್ತ ವಿಕೃತಾನಂದ ಪಡೆಯುತ್ತಿರುವಾಗ, ಸದ್ಯಕ್ಕೆ ಭಾರತದಲ್ಲೇ ಇರುವ ನಾನು ಅವರಿಗೆ ನನ್ನದೊಂದು ದೃಷ್ಟಿಕೋನವನ್ನು ಕೊಡಬೇಕೆಂಬ ಹಂಬಲದಿಂದ ಇದನ್ನು ಬರೆಯುತ್ತಿದ್ದೇನೆ.

ನಾನು ಅಂಕಿಸಂಖ್ಯೆಗಳಲ್ಲಿ ಪರಿಣತನಲ್ಲ, ಆದರೆ ನಾನು ಗಮನಿಸಿರುವ ಕೆಲವು ವರದಿಗಳಲ್ಲಿ ತಿಳಿದುಬಂದಿರುವ ಸತ್ಯಾಂಶಗಳು ನನ್ನನ್ನು ಬೆರಗುಗೊಳಿಸಿವೆ. ಭಾರತದಲ್ಲಿ ಆಗಲೇ ಸುಮಾರು 160 ಮಿಲಿಯಕ್ಕಿಂತಲೂ ಹೆಚ್ಚು (ಅಂದರೆ ಇಡೀ ಆಸ್ಟ್ರೇಲಿಯಾದ ಜನಸಂಖ್ಯೆಯ ಐದು ಪಟ್ಟು) ಜನರಿಗೆ ಕೋವಿಡ್ ವಿರುದ್ಧ ಲಸಿಕೆ ದೊರೆತಿದೆ. ದಿನವೊಂದಕ್ಕೆ 1.3 ಮಿಲಿಯಕ್ಕಿಂತಲೂ ಹೆಚ್ಚು ಜನರು ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನಾನು ಏಕೆ ಹೇಳುತ್ತಿದ್ದೇನೆಂದರೆ ಇಂಥ ಸಾಧನೆಯ ಅಗಾಧತೆಯನ್ನು, ಸಾಧಿಸಲು ಇರುವ ಸವಾಲುಗಳನ್ನು, ಏಕೆ ಈ ಮಾಧ್ಯಮಮಂದಿ ನಿರ್ಲಕ್ಷಿಸುತ್ತಾರೆ?

ನನ್ನ ಮನಸ್ಸಿನಲ್ಲಿ ಭಾರತ ದೇಶದ ಬಗೆಗಿನ ಆಲೋಚನೆ ಸುಳಿದಾಗಲೆಲ್ಲ ನೆನಪಿಗೆ ಬರುವ ಪದ “Incredible” (ವಿಸ್ಮಯಕರ). ಅದಕ್ಕೆ ತಕ್ಕಂತೆ ಭಾರತ ಪ್ರವಾಸೋದ್ಯಮವೂ “Incredible India” ಎಂಬ ಘೋಷವಾಕ್ಯ ಹೊಂದಿರುವುದು. ಈ ಕ್ಷಣದಲ್ಲೂ, ಅಂದರೆ ನನ್ನ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ತಾತ್ಕಾಲಿಕವಾಗಿ ಭಾರತದಿಂದ/ಭಾರತಕ್ಕೆ ಪ್ರಯಾಣಸೌಕರ್ಯವನ್ನು ತಡೆದಿರುವಾಗಲೂ, ಪ್ರಾಚೀನ ನಾಗರಿಕತೆಯ ಈ ಮಹಾನ್ ದೇಶದ ಬಗೆಗೆ ನನಗಿರುವ ಗೌರವಭಾವ ಎಳ್ಳಷ್ಟೂ ಕಡಿಮೆಯಾಗಿಲ್ಲ.

ಇದನ್ನು ನಾನು ಬರೆಯುತ್ತಿರುವ ಹೊತ್ತಿಗೆ, ಸದಾ ಗಿಜಿಗುಡುವ ಸಂಭ್ರಮ ತರುತ್ತಿದ್ದ ಹಬ್ಬಗಳು, ವೈಭವೋಪೇತ ಮದುವೆಗಳು, ಬದುಕಿನ ವರ್ಣವೈಭವ ತೋರುವ ಇಲ್ಲಿನ ಬೀದಿಗಳು- ಎಲ್ಲವೂ ನಿಶ್ಶಬ್ದವಾಗಿ ಕೋವಿಡ್ ಮಹಾಮಾರಿಯ ಕರಾಳ ಮುಖವೊಂದೇ ಎಲ್ಲೆಲ್ಲೂ ಕಾಣುತ್ತಿದೆ. ಬೆಂಗಳೂರಿನಲ್ಲಿ ನಾನು ಉಳಿದುಕೊಂಡಿರುವ ಹೊಟೇಲ್‌ ರೂಮ್‌ನ ಕಿಟಕಿಯಿಂದ ಹೊರನೋಡಿದರೆ ಈ ಕರಾಳತೆಯೇ ಗೋಚರಿಸುತ್ತಿದೆ. “ಪ್ರತ್ಯೇಕಗೊಳ್ಳಿ, ಮನೆಯಿಂದ ಹೊರಬರಬೇಡಿ, ಕೈಗಳನ್ನು ತೊಳೆದುಕೊಳ್ಳುತ್ತಿರಿ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ…” ಪ್ರಪಂಚಕ್ಕೆಲ್ಲ ಇದೇ ಈಗ ರಾಷ್ಟ್ರಗೀತೆಯಾಯ್ತಲ್ಲ ಎಂದು ಎಣಿಸಿಕೊಂಡರೆ ಮನಸ್ಸು ವಿಹ್ವಲಗೊಳ್ಳುತ್ತದೆ. ಅದೇವೇಳೆ, ಚಿಂತಾಕ್ರಾಂತ ಜನರು ಜೀವವನ್ನು ಮುಷ್ಟಿಯಲ್ಲಿ ಹಿಡಕೊಂಡು ವೈದ್ಯಕೀಯ ಸೌಲಭ್ಯಕ್ಕಾಗಿ ಅಲೆಯುತ್ತಿದ್ದಾರೆ, ಆಕ್ಸಿಜನ್ ಮತ್ತಿತರ ಅತ್ಯಾವಶ್ಯಕಗಳ ಸರಬರಾಜು ಹಗಲಿರುಳೂ ನಡೆದಿದ್ದರೂ ಬೇಡಿಕೆ-ಪೂರೈಕೆಯ ಅಂತರವನ್ನು ಕಡಿಮೆಗೊಳಿಸಲಾಗುತ್ತಿಲ್ಲ. ನಿಜ ಹೇಳಬೇಕೆಂದರೆ ಈ ತುರ್ತಿನ ಧಾವಂತವು ನನಗೆ ಉಸ್ಸೇನ್ ಬೋಲ್ಟ್‌ನ ಸ್ಪರ್ಧಿಯಂತೆಯೇ ಕಾಣುತ್ತಿದೆ. ಲವಲವಿಕೆಯಿಂದಿದ್ದ ಜೀವನದ ಓಟವು, ಈಗ ಕಳವಳವೇ ಕ್ಷಣಕ್ಷಣಕ್ಕೂ ದಾಪುಗಾಲಿಡುತ್ತಿದೆಯೆಂದು ಅನಿಸುತ್ತಿದೆ. ಈ ಸಾಂಕ್ರಾಮಿಕ ಮಹಾಮಾರಿಯಿಂದಾಗಿರುವ ಸಂಕಷ್ಟಗಳಲ್ಲಿ ಭಾರತವು ನಲುಗಿಹೋಗುತ್ತಿರುವುದನ್ನು ನಾನು ಅತ್ಯಂತ ನೋವಿನಿಂದ ನೋಡುತ್ತಿದ್ದೇನೆ.

ಅದಿರಲಿ, ಆಸ್ಟ್ರೇಲಿಯಾದ ಈ ಮಾಜಿ ಕ್ರಿಕೆಟಿಗನೇಕೆ ತನ್ನ ದೇಶದಿಂದ, ತನ್ನ ಕುಟುಂಬದಿಂದ ದೂರದಲ್ಲಿ ಇದ್ದಾನೆ, ಅದೂ ಇಂಥ ಅಪಾಯಕಾರಿ ಕ್ಷಣದಲ್ಲಿ? ಮೇಲ್ನೋಟಕ್ಕೆ ಕಾಣುವಂತೆ ಇದು ನನ್ನ ಸಂಪಾದನೆಯ ದಾರಿ. 2008ರಲ್ಲಿ ಆರಂಭವಾದ ಐಪಿಎಲ್ ಪಂದ್ಯಾವಳಿಗಳಲ್ಲಿ ಸ್ವತಃ ಆಡಿ, ಈಗ ನಿವೃತ್ತನಾದರೂ, ನಾನು ಪ್ರತಿವರ್ಷವೂ ಈ ಕ್ರಿಕೆಟ್ ಹಬ್ಬಕ್ಕೆ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ. ಇದು ನನಗೆ ದುಡ್ಡಿನ ದೊಡ್ಡ ಮೊತ್ತವನ್ನು ತಂದುಕೊಡುತ್ತದೆ, ತಾಯ್ನಾಡಿನಲ್ಲಿರುವ ನನ್ನ ಕುಟುಂಬದ ಖರ್ಚುಗಳನ್ನು ಸರಿದೂಗಿಸುವುದು ಸಾಧ್ಯವಾಗುತ್ತದೆ. ಆದರೆ ಮೇಲ್ನೋಟಕ್ಕಿಂತ ಆಳವಾಗಿ, ವಿಶಾಲವಾಗಿ ನೋಡಿದರೆ ನನಗೆ ಭಾರತಮಾತೆಯ ಜೊತೆಗಿರುವ ಸಂಬಂಧವು ನನ್ನ ಜೀವನೋದ್ದೇಶಕ್ಕೆ ತಳುಕುಹಾಕಿಕೊಂಡಿದೆ: ಸದ್ಯಕ್ಕೆ ಆ ಉದ್ದೇಶ ಏನೆಂದರೆ ಜನಸಾಮಾನ್ಯರನ್ನು, ಸಂಘಟನೆಗಳನ್ನು ಕರಾಳತೆಯಿಂದ ಕೊಂಚವಾದರೂ ದೂರಸರಿಸುವುದು. ಆಂಶಿಕವಾಗಿ ಅಥವಾ ಪೂರ್ಣಪ್ರಮಾಣದಲ್ಲಿ ಲಾಕ್‌ಡೌನ್ ಎನ್ನುವುದು ಎಲ್ಲ ಕಡೆಯೂ ಸಾಮಾನ್ಯವೇ ಆಗಿಹೋಗಿರುವಾಗ ಈ ಐಪಿಎಲ್ ಪಂದ್ಯಗಳಿಂದಾದರೂ ಜನರ ಮನಸ್ಸನ್ನು ತುಸು ಅರಳಿಸಲಿಕ್ಕಾಗುತ್ತದೆಯೆಂದು ನನ್ನ ನಂಬಿಕೆ. ಪ್ರತಿದಿನವೂ ಸಂಜೆ ಆರೂವರೆಗೆಲ್ಲ ಆಟ ಆರಂಭವಾದಾಗ, ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡದ ಆಟವನ್ನು ನೋಡಲಿಕ್ಕೆ ಟೆಲಿವಿಷನ್‌ಅನ್ನೋ ಆನ್‍‌ಲೈನ್ ಸ್ಟ್ರೀಮಿಂಗ್‌ಅನ್ನೋ ನೆಚ್ಚಿಕೊಂಡಾಗ, ಕೋವಿಡ್ ಕರಾಳತೆಯನ್ನು ಕ್ಷಣಕಾಲ ಮರೆತಾಗ, ಅಷ್ಟರಮಟ್ಟಿಗೆ ನಿರಾಳತೆಯನ್ನು ನಾನೂ ಅನುಭವಿಸುತ್ತೇನೆ.

ನಾನು ನಾಲ್ಕು ವರ್ಷಗಳ ಹುಡುಗನಾಗಿದ್ದಾಗಿನಿಂದ ಪ್ರೀತಿಸಿಕೊಂಡು ಬಂದಿರುವ ಈ ಕ್ರೀಡೆಗೆ ಈಗ ನನ್ನ ಸ್ವರ, ನನ್ನ ಭಾವೋದ್ವೇಗ ಬಳಕೆಯಾಗಿ, ಕ್ರೀಡಾಪ್ರೇಮಿಗಳಿಗೆ ಲವಲವಿಕೆಯನ್ನು ತಲುಪಿಸುವುದಕ್ಕೆ ನೆರವಾಗುತ್ತಿದೆ. ನನ್ನ ಪ್ರಕಾರ, ಕೋವಿಡ್‌ನ ಕರಾಳ ಮೋಡಗಳ ಬೆಳ್ಳಿಯಂಚುಗಳಲ್ಲಿ ಕ್ರಿಕೆಟ್ ಕೂಡ ಒಂದು. ದುರದೃಷ್ಟವೆಂದರೆ ಐಪಿಎಲ್‌ನಲ್ಲಿ ಆಡುತ್ತಿರುವ ಕ್ರಿಕೆಟಿಗರನ್ನೂ ಈ ಕ್ರೂರ ಮಾಧ್ಯಮಗಳು ತಮ್ಮ ತೀಟೆಗೆ ಗುರಿಯಾಗಿಸಿವೆ. ಪಾಪ, ಕಾಂಟ್ರಾಕ್ಟ್ ನಿಬಂಧನೆಗಳಿಂದಾಗಿ ಅವರು ಬಾಯ್ದೆರೆಯುವಂತೆಯೂ ಇಲ್ಲ. ಹಾಗಿರುವಾಗ, ಒಂದೊಮ್ಮೆ ಆಟಗಾರನಾಗಿದ್ದು ಅಂಥದೇ ಸಂದಿಗ್ಧತೆಯಲ್ಲಿದ್ದ ನನ್ನಂಥವರು, ಈಗ ಹೊರಗೆ ನಿಂತು ಅವರ ಬಗ್ಗೆ ಮತ್ತು ಅವರ ಪರವಾಗಿ ಮಾತನಾಡುವುದು ಮುಖ್ಯವಾಗುತ್ತದೆ. ಬರೀ ಕ್ರೀಡಾಳುಗಳ ಬಗ್ಗೆ ಅಲ್ಲ, ಕ್ರೀಡಾಪ್ರೇಮಿಗಳ ಬಗ್ಗೆ, ಒಟ್ಟಿನಲ್ಲಿ ದೇಶದ ಪ್ರಜೆಗಳೆಲ್ಲರ ಬಗ್ಗೆ.

ಭಾರತದ್ದು ಅತ್ಯಂತ ಶ್ರೀಮಂತ ನಾಗರಿಕತೆ, ಇದಕ್ಕೆ ಸರಿಸಾಟಿಯಾದುದು ಜಗತ್ತಿನಲ್ಲಿ ಬೇರೆಡೆ ಯಾವುದೂ ಇಲ್ಲ. ಈಗ ಸಂಕಷ್ಟದ ಸಮಯದಲ್ಲಿ ನಾವು ಮಾಡಬಹುದಾದ ಕನಿಷ್ಠ ಕರ್ತವ್ಯವೆಂದರೆ ಇದರ ಸಾಂಸ್ಕೃತಿಕ, ಪ್ರಾದೇಶಿಕ, ಬಹುಭಾಷಿಕ, ವರ್ಣವೈವಿಧ್ಯತೆಯನ್ನು ನಿಶ್ಶರ್ತವಾಗಿ ನಿರಂತರವಾಗಿ ಗೌರವಿಸುವುದೇ ಹೊರತು ಕರಾಳ ಚಿತ್ರವನ್ನು ಬಿಂಬಿಸಿ ಕುಹಕವಾಡುವುದಲ್ಲ.

ಮ್ಯಾಥ್ಯೂ ಹೇಡನ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ. ಆಸ್ಟ್ರೇಲಿಯಾ-ಇಂಡಿಯಾ ಕೌನ್ಸಿಲ್‌ನ ಬೋರ್ಡ್ ಮೆಂಬರ್; ಭಾರತದೊಡನೆ ಸಾಂಸ್ಕೃತಿಕ ಸ್ನೇಹಸಂಪರ್ಕಕ್ಕಾಗಿ ಆಸ್ಟ್ರೇಲಿಯಾದ ‘ಸೌಹಾರ್ದ’ರಾಯಭಾರಿ).

Leave a Reply

Your email address will not be published. Required fields are marked *