ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಸಿಹಿಸುದ್ದಿ: ಇನ್ನು ಮುಂದೆ ರೈಲ್ವೆ ನಿಲ್ದಾಣದಿಂದಲೇ ಮಹಾನಗರ ಸಾರಿಗೆ ಬಸ್ ಸೌಲಭ್ಯ

ಬೆಂಗಳೂರಿಗೆ ಪ್ರಯಾಣಿಸುವ ಅಥವಾ ಬೆಂಗಳೂರಿನಿಂದ ಇತರೆಡೆಗೆ ತೆರಳುವ ರೈಲ್ವೇ ಪ್ರಯಾಣಿಕರಿಗೆ ಒಂದು ಸಿಹಿ ಸುದ್ದಿ ಇದೆ.ಇನ್ನು ಮುಂದೆ ತಮ್ಮ ಲಗೇಜುಗಳನ್ನು ಎತ್ತಿಕೊಂಡು ಮೆಜೆಸ್ಟಿಕ್ನಿಂದ ಸಬ್ ವೇ ಮೂಲಕ ರೈಲ್ವೆ ನಿಲ್ದಾಣ ತಲುಪುವ ಕಷ್ಟ ಇರುವುದಿಲ್ಲ.ರೈಲ್ವೆ ನಿಲ್ದಾಣದ ಹೊರ ಭಾಗದಿಂದಲೇ ನಗರ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲು ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಇದೀಗ ಸಜ್ಜಾಗಿದ್ದು ನಿಲ್ದಾಣದ ಹೊರ ಭಾಗದಿಂದಲೇ ಬಸ್ ಸೌಲಭ್ಯ ಕಲ್ಪಿಸಲು ರೈಲ್ವೆ ಇಲಾಖೆ ಬಹಳ ವರ್ಷಗಳ ಬಳಿಕ ಒಪ್ಪಿಗೆ ನೀಡಿದೆ.

ನಗರದ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಆಟೋ, ಟ್ಯಾಕ್ಸಿಗಳ ಹಾವಳಿ ತಪ್ಪಿಸಲು ಬಿಎಂಟಿಸಿ ಇಂದಿನಿಂದ ಬಸ್ ಸೇವೆ ಆರಂಭಿಸಿದೆ.ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬಿಎಂಟಿಸಿ ಬಸ್ ನಿಲ್ದಾಣವಿದ್ದರೂ ರೈಲ್ವೆ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಗಳು ಆಗಮನ ಸಾಧ್ಯವಿಲ್ಲದ ಕಾರಣ ಪ್ರಯಾಣಿಕರು ಆಟೋ, ಟ್ಯಾಕ್ಸಿ ಮೊರೆ ಹೋಗಬೇಕಿತ್ತು. ಆಗ 20 ರೂಪಾಯಿ ಸಂಚಾರದಲ್ಲಿ ಲಗೇಜ್ ಇದೆ ಅಂತ ಖಾಸಗಿ ವಾಹನಗಳು 200 ರೂಪಾಯಿ ವಸೂಲಿ ಮಾಡುತ್ತಿದ್ದರು. ಇದು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿತ್ತು. ಇದನ್ನು ತಪ್ಪಿಸವ ಸಲುವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದಲೇ ಬಿಎಂಟಿಸಿ ಬಸ್ ಸಂಚಾರಕ್ಕೆ ನೈರುತ್ಯ ರೈಲ್ವೆ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ಸಿಟಿ ರೈಲ್ವೆ ನಿಲ್ದಾಣದಿಂದ ಬಸ್ ಸೇವೆ ಲಭ್ಯವಿದೆ.

ಸಂಚಾರ ದಟ್ಟಣೆ ಹಾಗೂ ಸ್ಥಳಾವಕಾಶದ ಕೊರತೆಯಿಂದ ರೈಲ್ವೇ ನಿಲ್ದಾಣದೊಳಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಜನರು ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಸುರಂಗ ಮಾರ್ಗದ ಮೂಲಕ ರೈಲು ನಿಲ್ದಾಣ ತಲುಪಬೇಕಿತ್ತು. ವಯಸ್ಸಾದವರು, ಮಹಿಳೆಯರು ಲಗೇಜ್ ಹೊತ್ತು ಸುಮಾರು ದೂರ ನಡೆಯಬೇಕಿತ್ತು. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಆಟೋ ಚಾಲಕರ ವಸೂಲಿಗೆ ಈಗ ಕಡಿವಾಣ ಬಿದ್ದಿದೆ.

ರೈಲು ನಿಲ್ದಾಣದ ಗೇಟ್ ಮೂರರಿಂದ ನಗರದ ವಿವಿಧ ಭಾಗಗಳಿಗೆ ಸಂಚಾರ ನಡೆಸುವ ಬಸ್ ಸೇವೆಗೆ ಇವತ್ತು ಚಾಲನೆ ಸಿಕ್ಕಿದೆ.ನೈರುತ್ಯ ರೈಲ್ವೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆಲವು ದಿನಗಳ ಹಿಂದೆ ಬಸ್ ಸೇವೆ ಆರಂಭಿಸುವ ಕುರಿತು ಮಾತುಕತೆ ನಡೆಸಿದ್ದೆವು. ಬಿಎಂಟಿಸಿಯ ಅಧಿಕಾರಿಗಳ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ಮಾಡಿದರು.

ಮೆಜೆಸ್ಟಿಕ್ ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 1.7ಕೋಟಿ ವೆಚ್ಚದಲ್ಲಿ 3ನೇ ಪ್ರವೇಶದ್ವಾರವನ್ನು ನಿರ್ಮಾಣ ಮಾಡಲಾಗಿದೆ. ಜೂನ್ ನಲ್ಲಿ ಇದನ್ನು ಉದ್ಘಾಟಿಸಲಾಗಿದ್ದು, ಈಗ ಬಸ್ ಇಲ್ಲಿಂದಲೇ ಸಂಚಾರ ನಡೆಸಲಿದೆ.

Leave a Reply

Your email address will not be published. Required fields are marked *