ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡುತ್ತಿರುವ ಮಾಜಿ ಸಂಸದ..!

ಕೇವಲ ಒಬ್ಬ ತಾಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಸದಸ್ಯ ಇಲ್ಲವೇ ಪಾಲಿಕೆ ಸದಸ್ಯ ಆದರೂ ಸಾಕು ಕೈತುಂಬಾ ಹಣ ಮಾಡುವ ಇಂದಿನ ಅನೇಕ ಜನಪ್ರತಿನಿಧಿಗಳ ನಡುವೆ ಓರ್ವ ಸಂಸದ ನಾಗಿದ್ದ ವ್ಯಕ್ತಿ ಈಗಲೂ ಬೀಡಿ ಕಟ್ಟಿ ಜೀವನ ನಡೆಸುತ್ತ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಎಂಬುದು ಗೊತ್ತೇ?
ಭೋಪಾಲ್ [ ಮಾ.30]: ಸಂಸದ ಅಥವಾ ಮಾಜಿ ಸಂಸದ ಎಂಬ ಪದ ಕೇಳುತ್ತಿದ್ದಂತೆಯೇ ಓರ್ವ ಸಂಪತ್ತು ಹೊಂದಿರುವ, ಐಷಾರಾಮಿ ಜೀವನ ಸಾಗಿಸುವ ವ್ಯಕ್ತಿಯ ಚಿತ್ರಣ ಮನದಲ್ಲಿ ಮೂಡುತ್ತದೆ. ಆದರೆ ಮಧ್ಯೆ ಪ್ರದೇಶದ ಬುಂದೇಲ್ ಖಂಡ್ನಲ್ಲಿ ಮಾಜಿ ಸಂಸದರೊಬ್ಬರು ಇದ್ದಕ್ಕೆ ತದ್ವಿರುದ್ಧ ಎಂಬಂತೆ ಜೀವನ ಸಾಗಿಸುತ್ತಿದ್ದಾರೆ.
ಸೈಕಲ್‌ ಓಡಿಸಿಕೊಂಡು ಪ್ರಯಾಣಿಸುವ ಇವರು ಸಮಯ ಸಿಕ್ಕರೆ ಬೀಡಿ ಕಟ್ಟುತ್ತಾರೆ. ‘ಸೈಕಲ್ ವಾಲಾ ನೇತಾಜಿ’ (ಸೈಕಲ್‌ ಓಡಿಸುವ ನಾಯಕ) ಎಂದೇ ಹೆಸರುವಾಸಿಯಾಗಿರುವ ಈ ಮಾಜಿ ಸಂಸದ ಯಾರು? ಇಲ್ಲಿದೆ ವಿವರ

ಮಧ್ಯ ಪ್ರದೇಶದ ಸಾಗರ ನಗರದ ಪುಖ್ಯಾವು ಟೋರಿ ಇಲಾಖೆಯ ಶಂಕರಿ ಗಲ್ಲಿಯ ಸಾಮಾನ್ಯ ಮನೆಯಲ್ಲಿ ವಾಸಿಸುತ್ತಿರುವ ಮಾಜಿ ಸಂಸದ ರಾಮ್ ಸಿಂಗ್‌ ಅಹಿರ್ವಾರ್ ತತ್ವಶಾಸ್ತ್ರ ಪದವೀಧರ ಹಾಗು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರು. 1967 ರಲ್ಲಿ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಹಿರ್ವಾರ್ ಜಯಶಾಲಿಯಾಗಿದ್ದರು. 82 ವರ್ಷ ದಾಟಿರುವ ಈ ಮಾಜಿ ಸಂಸದ ಇಂದಿಗೂ ದಿನಂ ಪ್ರತಿ ಹಲವಾರು ಕಿ.ಮೀ ಸೈಕಲ್‌ ತುಳಿದುಕೊಂಡೇ ಪ್ರಯಾಣಿಸುತ್ತಾರೆ ಹಾಗು ತನ್ನವರನ್ನು ಬೇಟಿಯಾಗುತ್ತಾರೆ. ಅವರ ಬಳಿ ಯಾವುದೇ ಮೋಟಾರು ವಾಹನಗಳಿಲ್ಲ.

‘ನನಗೆ ಯಾವತ್ತಿಗೂ ಮೋಟಾರು ವಾಹನ ಬೇಕೆಂದು ಅನಿಸಲಿಲ್ಲ, ಅಗತ್ಯವೂ ಬೀಳಲಿಲ್ಲ ಹೀಗಾಗಿ ಖರೀದಿಸಲಿಲ್ಲ’ ಎಂಬುವುದು ಮಾಜಿ ಸಂಸದರ ಮಾತಾಗಿದೆ‌. ಕಳೆದ ಕೆಲ ದಿನಗಳ ಹಿಂದೆ ಪಾರ್ಶ್ವವಾಯುಗೀಡಾದ ಅಹಿರ್ವಾಲ್ ಮಾತನಾಡುವ ಸಂದರ್ಭದಲ್ಲಿ ತೊದಲುತ್ತಾರೆ. ಹೀಗಿದ್ದರೂ ಸೈಕಲ್‌ ಮಾತ್ರ ಇನ್ನೂ ಬಿಟ್ಡಿಲ್ಲ. ಸಮಯ ಸಿಕ್ಕಾಗ ಬೀಡಿ ಕಟ್ಟುವುದನ್ನು ಮಾಡುತ್ತಾರೆ.

ಇಷ್ಟೇ ಅಲ್ಲ ರಾಮ್ ಸಿಂಗ್ ತಮ್ಮ ಸಂಸದರ ಪಿಂಚಣಿ ಪಡೆಯಲು ಸಮಸ್ಯೆಗಳನ್ನೆದುರಿಸಿದ್ದರು. ಈ ಬಗ್ಗೆ ತಮ್ಮ ನೋವು ವ್ಯಕ್ತಪಡಿಸಿದರುವ ಅವರು ‘2005 ರಿಂದ ಬಹಳಷ್ಟು ಪ್ರಯತ್ನಗಳ ಬಳಿಕ ನನಗೆ ಸೇರಬೇಕಾಗಿದ್ದ ಸಂಸದರ ಪಿಂಚಣಿಯ ಮೊತ್ತ ಬರಲು ಆರಂಭವಾಯಿತು. ಪಿಂಚಣಿ ಪಡೆಯಲು ಹಲವಾರು ವರ್ಷಗಳವರೆಗೆ ಸಂಘರ್ಷ ನೆಡೆಸಿದ್ದೇನೆ’ ಎಂದಿದ್ದಾರೆ. ರಾಮ್ ಸಿಂಗ್ ರವರಿಗೆ 82 ವರ್ಷ ದಾಟಿದ್ದರೂ ಇಂದಿಗೂ ಅತ್ಯಂತ ಸಕ್ರಿಯವಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಹಾಗೂ ರಾಜ್ಯದಲ್ಲೂ ಸುಮಾರು 15 ವರ್ಷಗಳವರೆಗೆ ಬಿಜೆಪಿ ಸರ್ಕಾರವಿತ್ತು ಹೀಗಿದ್ದರೂ ಈ ಪಕ್ಷ ತಮಗೆ ಯಾವುದೇ ಮಹತ್ವ ನೀಡಿಲ್ಲ ಎಂಬ ಅಸಮಾಧಾನ ರಾಮ್ ಸಿಂಗ್ ತೋರ್ಪಡಿಸಿದ್ದಾರೆ.

ರಾಜಕೀಯದಲ್ಲಾಗುವ ಈ ಬದಲಾವಣೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಮ್ ಸಿಂಗ್ ತಾವು ಸಂಸದರಾಗಿದ್ದು ಹೇಗೆ ಎಂಬುವುದನ್ನು ತಿಳಿಸಿದ್ದಾರೆ. ‘ನಾನು ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದೆ ಹಾಗೂ ಜೀವನೋಪಾಯಕ್ಕಾಗಿ ಬೀಡಿ ಕಟ್ಟುತ್ತಿದ್ದೆ.
ಹೀಗಿರುವಾಗಲೇ ಸಾಗರ ಸಂಸದೀಯ ಕ್ಷೇತ್ರದಿಂದ ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು ಹಾಗೂ ನಾನು ಜಯಗಳಿಸಿದೆ’ ಎಂದಿದ್ದಾರೆ ರಾಮ್ ಸಿಂಗ್.

ಇತರ ನಾಯಕರಿಗಿಂತ ಭಿನ್ನ:
ರಾಮ್ ಸಿಂಗ್ ಕುರಿತಾಗಿ ಮಾತನಾಡಿರುವ ಅವರ ನೆರೆ ಮನೆಯ ನಾಯಕರಿಗಿಂತ ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ಅವರೊಬ್ಬ ಸಜ್ಜನ, ಸರಳ ಹಾಗೂ ನೇರ ಸ್ವಭಾವದ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಸಂಸದರಾಗಿದ್ದರು ಎಂದು ಅನಿಸುವುದಿಲ್ಲ ಅಂತಹ ಸರಳ ಜೀವನ ನಡೆಸುತ್ತಾರೆ. ಸೈಕಲ್‌ ತುಳಿಯುತ್ತಾರೆ ಬೀಡಿ ಕಟ್ಟುತ್ತಾರೆ. ಸಂಸದರಾಗಿದ್ದವರು ಹೀಗೆ ಜೀವನ ನಡೆಸುತ್ತಾರೆ ಎಂದು ಅಚ್ಚರಿಯಾಗುತ್ತದೆ’

Leave a Reply

Your email address will not be published. Required fields are marked *