ಪ್ರವಾಹಕ್ಕೆ ಮತ್ತೆ ಮಿಡಿದ ಮಾತೃ ಹೃದಯಿ ಇನ್ಫೋಸಿಸ್ ಸುಧಾಮೂರ್ತಿ ಅವರಿಂದ ಪರಿಹಾರ ನಿಧಿಗೆ ಹತ್ತು ಕೋಟಿ ದೇಣಿಗೆ.
ಕಳೆದ ವರ್ಷ ಮಡಿಕೇರಿಯಲ್ಲಿ ಸಂಭವಿಸಿದ ಇದೇ ತರಹದ ಪ್ರಕೃತಿ ವಿಕೋಪದಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬಂದ ಸಾವಿರಾರು ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ್ದ ಕರ್ನಾಟಕದ ಕರುಣಾ ಮಯಿ ಎಂದೇ ಕರೆಯಲ್ಪಡುವ ಮಾತೃಹೃದಯಿ ಇನ್ಫೋಸಿಸ್ ನ ಸುಧಾಮೂರ್ತಿ ಅವರು ಮತ್ತೊಮ್ಮೆ ರಾಜ್ಯದ ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ಕರ್ನಾಟಕದಲ್ಲಿ ಈಗ ಉಂಟಾಗಿರುವ ಮಳೆ ಹಾನಿ ಸಂತ್ರಸ್ತರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಇನ್ಫೋಸಿಸ್ ನಿಂದ ಬರೋಬ್ಬರಿ ಹತ್ತು ಕೋಟಿ ರೂ ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವ ಮೂಲಕ ಸುಧಾಮೂರ್ತಿಯವರು ತಮ್ಮ ಸಹೃದಯತೆ ಮೆರೆದಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರು ಸಿಎಂ ಪರಿಹಾರ ನಿಧಿಗೆ ಹತ್ತು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಕುಂದಾನಗರಿ ಬೆಳಗಾವಿಯಲ್ಲಿಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಾಣ ಮಾಡಿಕೊಡಲಾಗುವುದು, ಆಸ್ತಿ ನಷ್ಟವಾದವರಿಗೂ ಪರಿಹಾರ ನೀಡಲಾಗುವುದು,ಪ್ರವಾಹದಲ್ಲಿ ಮೃತರಾದವರಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ಸ್ವತಃ ತಾವೇ ಪ್ಯಾಕಿಂಗ್ ಮಾಡಿ ಪರಿಹಾರ ಸಾಮಗ್ರಿ ಕಳುಹಿಸಿದ್ದ ಕರುಣಾಮಯಿ:
ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ತೀವ್ರ ಸಂಕಷ್ಟಕ್ಕೆ ಸಿಲುಕಿ ತಾತ್ಕಾಲಿಕ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಮಂದಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ನೈಟಿ ಸೇರಿದಂತೆ ಒಳ ಉಡುಪುಗಳನ್ನು ಡ್ರೈ ಫುಡ್ ಗಳನ್ನು ಇನ್ಫೋಸಿಸ್ ವತಿಯಿಂದ ನೀಡಲಾದ ಸಂದರ್ಭದಲ್ಲಿ ಸ್ವತಃ ಸುಧಾಮೂರ್ತಿಯವರೆ ಕುಳಿತು ತಮ್ಮ ಸಿಬ್ಬಂದಿಯೊಂದಿಗೆ ಪ್ಯಾಕಿಂಗ್ ಮಾಡುವ ದೃಶ್ಯವನ್ನು ನಾವು ನೀವೆಲ್ಲ ಕಂಡಿದ್ದೇವೆ. ದೇವರು ಸಾಕಷ್ಟು ಶ್ರೀಮಂತಿಕೆಯನ್ನು ಸುಧಾಮೂರ್ತಿ ಅವರಂತಹ ಅನೇಕರಿಗೆ ಕೊಟ್ಟಿದ್ದಾನೆ. ಆದರೆ ಸುಧಾಮೂರ್ತಿಯವರ ಹೃದಯವಂತಿಕೆಯನ್ನು ಎಲ್ಲರಿಗೂ ಕೊಟ್ಟಿಲ್ಲವೇಕೆ ಎಂಬ ಆತಂಕ ಆಗಾಗ ಮೂಡುತ್ತದೆ. ಚಿಕ್ಕ ಪ್ರಮಾಣದ ಉದ್ಯಮಿಯೊಂದಿಗೆ ಅಂಬೆಗಾಲಿಟ್ಟು ಇದೀಗ ವಿಶ್ವದ ದೈತ್ಯ ಸಂಸ್ಥೆಗಳಲ್ಲಿ ಒಂದು ಎಂಬಂತೆ ಇನ್ಫೋಸಿಸ್ ಅನ್ನು ಕಟ್ಟಿ ಬೆಳೆಸಿರುವ ಸುದಾಮೂರ್ತಿ ದಂಪತಿಗಳು ಇಂತಹ ಸಹೃದಯತೆಯೇ ಅವರಿಗೆ ರಾಜ್ಯದ ಜನತೆ ಇಟ್ಟಿರುವ ಪ್ರೀತಿಗೆ ಸಾಕ್ಷಿಯಾಗಿದೆ. ಇದಕ್ಕೆ ಮಾದರಿ ಎಂಬಂತೆ ಇನ್ಫೋಸಿಸ್ ಸಹ ಕರ್ನಾಟಕದ ಹೆಮ್ಮೆಯಷ್ಟೇ ಅಲ್ಲ, ರಾಜ್ಯಕ್ಕೆ ಕಷ್ಟದ ಸಂದರ್ಭದಲ್ಲಿ ತಾನೂ ಸಹ ನೆರವಿಗೆ ಇದ್ದೇನೆ ಎಂದು ಸಾಬೀತುಪಡಿಸುತ್ತಿದೆ. ಸುಧಕ್ಕ ಅವರಿಗೆ ಹಾಗೂ ಅವರ ಸಂಸ್ಥೆಗೆ ನಮ್ಮದೊಂದು ದೊಡ್ಡ ಸಲಾಂ .