ಪ್ರತಿಭೆ

( ಮರಳಿ ಗೆದ್ದ ಪ್ರತಿಭೆ ಉಳಿಸಿದ ಸ್ನೇಹದ ಕಥೆ )

ಬಯಲು ಸೀಮೆಯ ಒಂದು ಗ್ರಾಮೀಣ ಪ್ರದೇಶದಲ್ಲಿ ರವಿ ಎಂಬ ಸುಂದರ ಯುವಕನಿದ್ದನು. ಅವನು ಕಾಲೇಜಿಗೆ ಹೋಗುವ ವಿದ್ಯಾರ್ಥಿಯಾಗಿದ್ದ. ಕಾಲೇಜಿನಲ್ಲಿ ಎಲ್ಲರಿಗಿಂತಲೂ ಚುರುಕಾದ ರವಿ ಬಡತನದ ಬವಣೆಯಿಂದ ಬೆಂದುಹೋಗಿದ್ದ. ಆದರೆ ಆತನಲ್ಲಿದ್ದ ದಕ್ಷತೆ, ಶ್ರದ್ಧೆ, ನಿಷ್ಠೆ ಮತ್ತು ಚತುರತೆ ಇತರ ಜನರಿಗೆ ಆದರ್ಶಪ್ರಾಯವಾಗಿತ್ತು.

                ತನ್ನ ಪಾಠದೊಂದಿಗೆ ಇತರ ಹವ್ಯಾಸದಲ್ಲಿ ತೊಡಗಿ ಕ್ರೀಡೆ, ಸಂಗೀತ, ಸಾಹಿತ್ಯ ವಾಕ್ ಚತುರತೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ತೋರಿದ ಆದರೆ ಬಡತನವು ಇಂತಹ ಪ್ರತಿಭೆಯನ್ನು ಹೊರತರಲು ವಿಫಲವಾಯಿತು. ಸರಿಯಾದ ಸಮಯಕ್ಕೆ ಹಣದ ಅಭಾವದಿಂದ ಆತನ ಕಾಲೇಜಿನ ವ್ಯಾಸಂಗಕ್ಕೆ ಕುತ್ತು ಬಂದಿತು ಶಾಲಾ ಬಿಡುವಿನ ವೇಳೆಯಲ್ಲಿ. ಗಾರೆ ಕೆಲಸಕ್ಕೆ ಹೋಗಿ ಹಣವನ್ನು ಸಂಪಾದಿಸಿ ಶಾಲಾ ಪ್ರವೇಶ ಪಡಿದ. ಮನೆಯಲ್ಲಿ ಕುಟುಂಬದ ಜವಾಬ್ದಾರಿ ಹೊರಬೇಕಾಯಿತು. ತಂದೆಯ ಅಕಾಲಿಕ ಮರಣದಿಂದ ರವಿಗೆ ದೊಡ್ಡ ಕಷ್ಟದ ಗೋಡೆಯಾಗಿ ನಿಂತಿತು. ದುಡಿದ ಹಣವು ಶಾಲೆಯ ಖರ್ಚಿಗೆ ಸಾಲದೆ ಮನೆಯ ಬಳಕೆಗೆ ಹೋಗುತಿತ್ತು. ಇಂತಹ ಸಮಯದಲ್ಲಿ ರವಿ ದಿಗ್ಗಭ್ರಾಂತನಾಗಿ ಕುಳಿತುಕೊಂಡ ವಿಚಾರ ಮಾಡುವಾಗ ಅವನಿಗೆ ಏನು ಹೊಳೆಯದಾಯಿತು. ರವಿ ಒಬ್ಬ ಎಲೆ ಮರೆ ಕಾಯಿಹಾಗೆ ಜಗತ್ತಿನ ಬೆಳಕಿಗೆ ಬೀಳದ ಸಾಹಿತಿಯಾಗಿದ್ದ. ತನ್ನ ಬದುಕಿನ ರೋಚಕ , ಮಾರ್ಮಿಕ ಕಥೆಗಳನ್ನು ಬರೆಯುತ್ತಿದ್ದ.

                     ” ಜಗತ್ತಿಗೆ ಬಂದ ಮೇಲೆ ಒಂದಲ್ಲಾ ಒಂದು ಸಾಧನೆ ನಾವು ಮಾಡಿ ಹೋಗಬೇಕು.” ಅಂದರೆ ನಾವು ಈ ಜಗತ್ತಿಗೆ ಬಂದದ್ದು ಸಾರ್ಥಕ ಎಂದು ತಿಳದಿದ್ದ. ಹಗಲು ಸೂರ್ಯನ ಬೆಳಕಿನಲ್ಲಿ ಕತ್ತಲಾಗುವ ಬದಲು ಬೆಳಕಿನಲ್ಲೇ ಬೆಳಕಾಗಿ ಮಿಂಚಬೇಕು. ಎಂಬ ಭಾವನೆಯನ್ನು ರವಿ ಹೊಂದಿದ್ದನು. ರವಿಗೆ ಕಾಲೇಜು ಪ್ರವೇಶ ಸಮೀಪವೇ ಬಂದಿತು ಆದರೆ ಹಣವಿರಲಿಲ್ಲ. ಆಗ ಆತನ ಕಾಲೇಜು ಕಲೆಯುವ ಕನಸು ನೆಲಕ್ಕೆ ಬಿದ್ದಿತು. ನಿರೀಕ್ಷೆಯ ಕನಸುಗಳು ನುಚ್ಚು ನೂರಾಯಿತು.

               ಏನಾದರು ಸಾಧಿಸಬೇಕು ಎಂದು ರವಿ ತನ್ನ ಬರವಣಿಗೆಯಿಂದ ಹುಟ್ಟಿಕೊಂಡು ಕವನ ಮತ್ತು ಕಥೆಗಳನ್ನು ಒಬ್ಬ ಸಾಹಿತಿಯ ಹತ್ತಿರ ತೆಗೆದುಕೊಂಡು ಹೋಗುತ್ತಾನೆ. ಅವರಿಗೆ ತನ್ನ ಕವನ, ಕಥೆ, ಲೇಖನ, ಕಾದಂಬರಿಯನ್ನು ತೋರಿಸುತ್ತಾನೆ. ಆ ಸಾಹಿತಿಗೆ ಇತನ ಕವನ, ಕಥೆ, ಲೇಖನ ನೋಡಿ ಶ್ರೇಷ್ಠ ಬರವಣಿಗೆಯ ಸಾಲಿನಲ್ಲಿ ನಿಂತಂತೆ ಕಾಣುತ್ತದೆ. ರವಿಯ ವಿಚಾರ, ಚಿಂತನೆ, ಆಲೋಚನೆಗಳು ಸಾಹಿತಿಯ ಮನಸ್ಸನ್ನು ಕೆದಕಿಸುತ್ತದೆ. ನೀನು ಒಬ್ಬ ಒಳ್ಳೆಯ ದೊಡ್ಡ ಸಾಹಿತಿಯಾಗುತ್ತಿಯಾ. ನಿನ್ನ ಬರವಣಿಗೆ ಮುಂದುವರಿಸು ಎಂದು ಹೇಳಿ ಆತನ ತಪ್ಪುಗಳನ್ನು ತಿದ್ದಿ ಮುದ್ದಿಸಿ ಕಳಿಸುತ್ತಾನೆ.

                       ರವಿ ದಾರಿಯಲ್ಲಿ ಏಕಾಂಗಿಯಾಗಿ ವಿಚಾರಿಸುತ್ತಾ ನಡೆದುಕೊಂಡು ಬರುತ್ತಿರುವಾಗ ನಾನು ಯಾರು? ನನ್ನಲ್ಲಿ ಎಂತಹ ಪ್ರತಿಭೆಯಿದೆ? ಆದರು ಹೊರದೂಡಲು ಸಾಧ್ಯವಾಗಿದೆ? ಇಲ್ಲಾ? ಹೊರಹಾಕಲು ಹಣದ ಅವಶ್ಯಕತೆ. ಈ ಜಗತ್ತಿನಲ್ಲಿ ಹಣವಿದ್ದವನೆ ದೊರೆ. ಆದ್ದರಿಂದ ನಾನು ಹಣವನ್ನು ಗಳಿಸಬೇಕು ಎಂದು ವಿಚಾರಿಸುತ್ತಾ ಬರುತ್ತಿರುವಾಗ ಒಂದು ಬದಿಯಲ್ಲಿ ವಸ್ತುಗಳ ಹರಾಜು ನಡಿಯುತ್ತಿದ್ದವು. ಅಲ್ಲಿಗೆ ರವಿ ಬರುತ್ತಾನೆ. ಎಲ್ಲರು ಹರಾಜಿನಲ್ಲಿ ವಸ್ತುವನ್ನು ಖರೀದಿಸಿ ಮನೆಗೆ ಒಯುತ್ತಾರೆ. ಧನಿಕನಾದ ಮುತ್ತಯ್ಯ ಒಬ್ಬನೇ ಕಾರಿನ ಮುಂದೆ ನಿಂತು ಹಣವನ್ನು ಎಣಿಸುತ್ತಿರುವಾಗ ರವಿ ಆ ಧನಿಕನ ಮುಂದೆ ಬಂದು ನಿಲ್ಲುತ್ತಾನೆ.

                           ರವಿ ತನ್ನ ಸಾಹಿತ್ಯ ರಚನೆಯ ಹಸ್ತಪ್ರತಿ ಪುಸ್ತಕವನ್ನು ಮುತ್ತಯ್ಯನಿಗೆ ಕೊಡುತ್ತಾನೆ. ಧಣಿಗೆ ಆಶ್ಚರ್ಯವಾಗುತ್ತದೆ. ಏಕೆ? ಇದನ್ನು ಕೊಟ್ಟೆ ಎಂದು  ಧಣಿ ಕೇಳಿದಾಗ. ಇದಕ್ಕೆ ಎಷ್ಟು ಹಣ ಕೊಡುವಿರಿ ಎಂದು ರವಿ ಕೇಳಿದಾಗ. ರದ್ದಿಯಲ್ಲಿ 10 ರೂ ಕೊಡುತ್ತಾರೆ ಎನ್ನುತ್ತಾನೆ . ರದ್ದಿಗೆ 10 ರೂ ಕೊಡುವರು ಆದರೆ ಅದರಲ್ಲಿನ ಚಿಂತನೆಗೆ ಮತ್ತು ಬರವಣಿಗೆಗೆ ಎಷ್ಟು ಹಣ ಕೊಡುವಿರಿ ಎಂದಾಗ ಧಣಿ ತಿರುವು ಮೂರುವು ಮಾಡಿ ನೋಡಿ ಎಲ್ಲಾ ಪುಸ್ತಕ ಓದಿದಾಗ ಅದರಲ್ಲಿ ಕಥೆ, ಕವನ ಉತ್ತಮವಾಗಿರುತ್ತವೆ. ಧಣಿ ಮುತ್ತಯ್ಯ ಒಬ್ಬ ನಿರ್ದೇಶಕ ಮತ್ತು ನಿರ್ಮಾಪಕನಾಗಿರುತ್ತಾನೆ. ಅವನು ಚಿತ್ರವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಮುತ್ತಯ್ಯ ರವಿ ಬರೆದ ಬರಹಕ್ಕೆ 1 ಲಕ್ಷ ರೂಪಾಯಿ ಬೆಲೆ ಕಟ್ಟಿ ಖರೀದಿಸುತ್ತಾನೆ. ನಂತರ ರವಿ ಕಡೆಯಿಂದ ಮಾತು ತೆಗೆದುಕೊಳ್ಳುತ್ತಾನೆ. ನೀನು ಈ ವಿಷಯವನ್ನು ಯಾರಿಗೂ ಹೇಳಬೇಡ. ನನ್ನ ಹಣ ನಿನ್ನ ಕಥೆ ಎರಡು ಸಮ. ನಾನೇ ಬೇರೆ ನೀನೆ ಬೇರೆ ಇದೊಂದು ಕೆಟ್ಟ ಕನಸು ಮರೆತು ಬಿಡು ಎಂದು ಮುತ್ತಯ್ಯ ರವಿಗೆ ಹೇಳಿ ಹೋಗುತ್ತಾರೆ.

                      ಹಣವನ್ನು ಕಾಣದ ರವಿ ಗರಿಗರಿ ನೋಟುಗಳನ್ನು ನೋಡಿ ಆತನ ಆನಂದಕ್ಕೆ ಪಾರವೇ ಇರಲಿಲ್ಲ. ರವಿ ಮನೆಗೆ ಬಂದು ತನ್ನ ಕುಟುಂಬದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇನೆ. ಮತ್ತೆ ಕಾಲೇಜಿಗೆ ಹೋಗಲು ಬ್ಯಾಗನ್ನು ಬಗಲಿಗೆ ಹಾಕುತ್ತಾನೆ.

                     ಮುಂದೊಂದು ದಿನ ರವಿ ಬರಿದ ಕವನಗಳು ಹಾಡುಗಳಾಗಿ. ಕಥೆ ಚಿತ್ರಕಥೆಯಾಗಿ  ಒಂದು ಅತ್ಯುತ್ತಮ ಚಿತ್ರವಾಗಿ ಬಿಡುಗಡೆಯಾಗುತ್ತದೆ. ಆ ” ಹೊಂಗನಸು” ಚಿತ್ರ ದಿನದಿಂದ ದಿನಕ್ಕೆ ಜಯಬೇರಿಯನ್ನು ಸಾಧಿಸುತ್ತಾ ಅಧಿಕ ಹಣವನ್ನು ಗಳಿಸಿ ನಿರ್ದೇಶಕನಿಗೆ ತುಂಬಾ ಒಳ್ಳೆಯ ಹೆಸರು, ಹಣ ತರುತ್ತದೆ. ಮುತ್ತಯ್ಯನಿಗೆ ಉತ್ತಮ ಕಥೆಗಾರ ಮತ್ತು ಹಾಡು ರಚನಾಕಾರ ಎಂದು ಬಹುಮಾನ ನೀಡುತ್ತಾರೆ.

                 ರವಿ ಅದೇ ಚಿತ್ರವನ್ನು ಸಿನಿಮಾ ಮುಂದಿರದಲ್ಲಿ ನೋಡುತ್ತಾನೆ. ಅವನಿಗೆ ಆನಂದವಾಗುತ್ತದೆ. ನನ್ನಲಿದ್ದ ಪ್ರತಿಭೆ ಹೊರದೂಡಲು ಸಾಧ್ಯವಾಗಲಿಲ್ಲ. ಆದರೆ ಇಂದು ನನ್ನ ಪ್ರತಿಭೆ ಮತ್ತೊಬ್ಬರ ಹೆಸರಲ್ಲಿ ಪ್ರದರ್ಶನ ಕಾಣುತ್ತಿದೆ ಎಂದು ಸ್ವಲ್ಪ ತಳಮಳವಾಯಿತು.

                            ರವಿ ಗೆಳೆಯನು ಕಾಲೇಜಿನಲ್ಲಿ ಓದುತ್ತಿದ್ದಾಗ ಈ ಕಥೆ ಮತ್ತು ಕವನಗಳನ್ನು ರವಿ ಪುಸ್ತಕದಿಂದ ಓದಿದ್ದನು ಚಿತ್ರ ಮಂದಿರದಲ್ಲಿ ಚಿತ್ರ ಮತ್ತು ಹಾಡನ್ನು ನೋಡಿ ಬಂದು ಮಿತ್ರ ಮಹೇಶ ರವಿಯನ್ನು ಪೀಡಿಸಿ ಕೇಳುತ್ತಾನೆ. ಇದು ನೀನು ಬರೆದ ಕಥೆಯಲ್ಲವೆ. ಎಂದಾಗ ರವಿ ತಡವಡಿಸುತ್ತಾ ಇಲ್ಲಾ ಎಂದು ಹೇಳುತ್ತಾನೆ. ಮಹೇಶ ಬಿಡದೆ ಮತ್ತೆ ಮತ್ತೆ ಪೀಡಿಸಿ ಕೇಳಿದರು ಹೇಳದಿದ್ದಾಗ. ರವಿಗೆ ಏನೊ ಆಗಿದೆ ಎಂದು ನ್ಯಾಯ ದೊರಕಿಸಿ ಕೊಡಲು ಮುಂದಾಗಿ ನಿರ್ದೇಶಕ ಮುತ್ತಯ್ಯನ ವಿರುದ್ಧ ಆಪಾದನೆಯನ್ನು ಹೊರಸಿ ದೂರು ಕೊಡುತ್ತಾನೆ.

                      ದೊಡ್ಡ ನಿರ್ದೇಶಕ, ನಿರ್ಮಾಪಕನಾಗಿ ಜನಪ್ರೀಯತೆ ಗಳಸಿದ ಮುತ್ತಯ್ಯನ ವಿರುದ್ಧ ಪೊಲೀಸರು ಜಾಲವನ್ನು ಬೀಸುತ್ತಾರೆ. ಇಲ್ಲಿ ರವಿ ಮಹೇಶನಿಗೆ ದೂರು ಹಿಂದೆ ತೆಗೆದುಕೊ ಎಂದು ದಯನೀಯವಾಗಿ ಅಂಗಲಾಚುತ್ತಾನೆ. ಮಹೇಶನು ಇದಕ್ಕೆ ಬೆಲೆ ಕೊಡದೆ ನನ್ನ ಗೆಳೆಯನಿಗೆ ಅನ್ಯಾಯವಾಗಿದೆ ಅದು ಒಬ್ಬ ಪ್ರತಿಭಾವಂತ ಬಡ ವಿದ್ಯಾರ್ಥಿಗೆ. ಅವನಿಗೆ ನ್ಯಾಯ ಕೊಡುಸುವುದೆ ನನ್ನ ಕರ್ತವ್ಯವೆಂದು ರವಿಗೆ ಹೇಳಿ ಹೋಗುತ್ತಾನೆ.

                         ಪೋಲೀಸರು ಮುತ್ತಯ್ಯನನ್ನು ಕರೆದುಕೊಂಡು ಕೋರ್ಟಿಗೆ ತರುತ್ತಾರೆ. ರವಿಯನ್ನು ಕರೆಸುತ್ತಾರೆ. ಮಹೇಶನ್ನು ಸಾಕ್ಷಾದಾರನಾಗಿ ಬರುತ್ತಾನೆ. ವಕೀಲರ ಮಧ್ಯ ಪರ ಮತ್ತು ವಿರುದ್ಧವಾಗಿ ವಾದ ವಿವಾದಗಳು ನಡಿಯುತ್ತವೆ. ಮುತ್ತಯ್ಯನ ವಕೀಲರು ನೋಡಿಸ್ವಾಮಿ ಇವರೊಬ್ಬ ನಿರ್ದೇಶಕರು ಮತ್ತು ಉತ್ತಮ ಕಥೆಗಾರರು. ಇವರ ಹೆಸರು ಕೆಡಿಸಲು ಮಹೇಶನು ದೂರು ನೀಡಿದ್ದಾನೆ. ಇವರು ಯಾವ ಕಥೆಯನ್ನು ಖರೀದಿಸಿಲ್ಲಾ, ಯಾವ ಕವನವನ್ನು ತೆಗೆದುಕೊಂಡಿಲ್ಲಾ. ಇವರೊಬ್ಬ ನಿರಪರಾದಿ ಬೇಕಾದರೆ ರವಿಯನ್ನೇ ಕೇಳಿ ಎಂದು ಮುಖ ತಿರುಗಿಸಿ ನೀನು ಇವನಿಗೆ ನಿನ್ನ ಕಥೆ , ಕವನ, ಮಾರಿದ್ದಿಯಾ ಎಂದು ಕೇಳಿದಾಗ ಇಲ್ಲಾ ನಾನು ಕವನ, ಕಥೆ ಬರೆಯುವದಿಲ್ಲಾ ಅಂದ ಮೇಲೆ ನಾನು ಏನಾದರೂ ಮಾರಲಿ ಎಂದು ವಕೀಲರಿಗೆ ಉತ್ತರಿಸಿದ್ದಾಗ ಮಹೇಶನ ವಕೀಲರು ಎದ್ದು ಪರವಾನಿಗೆ ಪಡಿದು. ಇದು ಸುದ್ಧ ಸುಳ್ಳು ರವಿಯೇ ಕಥೆಗಾರ, ಕವಿಗಾರ ಎನ್ನುವುದಕ್ಕೆ ಸಾಕ್ಷಾಧಾರನನ್ನಾಗಿ ಮಹೇಶನನ್ನು ಕರೆಸಿ ಪ್ರಶ್ನೆ ಕೇಳುತ್ತಾರೆ. ಇವರು ಯಾರು? ಎಂದಾಗ ಇವರ ಹೆಸರು ರವಿ ಸರ್, ಹಾಗಾದರೆ ಇವರ ಪರಿಚಯವಿದೆಯಾ?  ಎಂದಾಗ ಇದೆ ಸರ್ ಇವನು ನಾನು ಕಾಸ ಸ್ನೇಹಿತರು. ನನ್ನ ಬಿಟ್ಟು ಇವನಿಲ್ಲಾ. ಇವನ ಬಿಟ್ಟು ನಾನಿಲ್ಲ. ನನಗೆ ಗೊತ್ತು ಇವನೇ ಆ ಕಥೆ ಬರದಿದ್ದು. ಇದು ಎಲ್ಲೇ ಮೋಸವಾಗಿ ಚಿತ್ರವಾಗಿದೆ. ಇದು ಖಂಡಿತಾ ಕಠುಸತ್ಯ. ಈ ಕಥೆ ಕವನ ರಚನೆ ಮಾಡಿದ್ದು ರವಿನೆ  ಇದನ್ನು ನಾನು ಓದಿದ್ದೇನೆ ಈ ಧಣಿ ರವಿಗೆ ಏನೊ ಮೋಸ ಮಾಡಿದ್ದಾನೆ. ರವಿಗೆ ದಯಮಾಡಿ ನ್ಯಾಯವದಗಿಸಿ ಕೊಡಿ ಸರ್ ಎಂದು ಮಹೇಶ ಬೇಡಿಕೊಳ್ಳುತ್ತಾನೆ.

                          ಧಣಿಯ ವಕೀಲನು ಬಂದು ಈ  ಕಥೆ ರವಿಯೆ ಬರೆದಿದ್ದು ಎಂದು ಹೇಳುತ್ತಿಯಲ್ಲಾ ಮತ್ತು ಧಣಿನೆ ಮೋಸ ಮಾಡಿದ್ದಾನೆ ಎನ್ನಲಿಕ್ಕೆ ಏನಾದರೂ ಸಾಕ್ಷಾದಾರಿಗಳಿವೆ ಎಂದು ಮಹೇಶನನ್ನು ಪ್ರಶ್ನಿಸಿದಾಗ ಮಹೇಶನು ಒಂದು ಕ್ಷಣ ಸುಮ್ಮನೆ ನಿಂತನು. ನಂತರ ಇದಕ್ಕೆ ಪ್ರಬಲ ಸಾಕ್ಷಿ ರವಿ ಎಂದಾಗ ರವಿಗೆ ಭಯವಾಗುತ್ತದೆ. ಎಲ್ಲಿ ನಾನು ಕೊಟ್ಟ ಮಾತು ತಪ್ಪಿ ವಚನ ಭ್ರಷ್ಟನಾಗುತ್ತೇನೆ ಎಂದು ರವಿ ಸುಮ್ಮನೆ ನಿಂತು ಏನೋ ತಡವಡಿಸುತ್ತಾ ನಾನು ಅವನಿಗೆ ಕಥೆ ಮಾರಿಯೇ ಇಲ್ಲಾ. ನಾನು ಕಥೆಯು ಬರೆಯುವದಿಲ್ಲಾ ಎಂದಾಗ. ಧಣಿ ವಕೀಲ ನೋಡಿ ಸರ್ ಇವನೇ ಮಾರಿಲ್ಲಾ ಎಂದಾಗ ಮಹೇಶ ನನ್ನ ಕಕ್ಷಿದಾರನ ವಿರುದ್ಧ ಆರೋಪ ಮಾಡಿದ್ದಾನೆ ಎಂದನು.  ಮಹೇಶನು ಸರ್ ನಾನು ಇದಕ್ಕೆ ತಕ್ಕ ಸಾಕ್ಷ ಪುರಾವೆಗಳನ್ನು ನೀಡುತ್ತೆನೆ. ಎಂದಾಗ ನ್ಯಾಯ ಮೂರ್ತಿಗಳು ಕೇಸನ್ನು ಮುಂದುಡುತ್ತಾರೆ.

                      ಮಹೇಶನು ರೂಮಿಗೆ ಬಂದು ರವಿ ನೀನು ಸುಳ್ಳು ಹೇಳಿದೆಯಲ್ಲಾ. ಇದೆನಾ ನೀನು ನನ್ನ ಗೆಳೆತನಕ್ಕೆ ಕೊಟ್ಟ ಬೆಲೆ ಎಂದಾಗ ರವಿಗೆ ನೋವಾಯಿತು. ನೀನು ಕೊರ್ಟಿನಲ್ಲಿ ಸತ್ಯವನ್ನು ನುಡಿಯದೆ ಹೋದರೆ ನಿನ್ನ ತಾಯಿ ಮೇಲೆ ಆಣೆ ಎಂದು ಮಹೇಶನು ರವಿಯು ಬರೆದ ಒಂದು ಕವನವನ್ನು ರದ್ದಿಯಲ್ಲಿ ಆರಿಸಿ ಕಥೆಯ ಎರಡು ಮೂರು ಹಾಳೆ ತೇಗೆದುಕೊಂಡು  ಹೋಗುತ್ತಾನೆ.

                    ಮರುದಿನ ನ್ಯಾಯ ನಿರ್ಣಯ ಪಾಳೆ ಕೊರ್ಟಿನಲ್ಲಿ ಬರುತ್ತದೆ. ರವಿ ಎರಡು ಪೇಚಿನಲ್ಲಿ ಸಿಗುತ್ತಾನೆ. ಒಂದು ಕಡೆ ನನ್ನ ತಾಯಿಯ ಮೇಲೆ ಆಣೆಯಿಟ್ಟಿದ್ದಾರೆ. ಅವನ ಮಾತಿಗೆ ಬೆಲೆ ಕೊಟ್ಟು ಸತ್ಯವನ್ನು ಹೇಳಲೇ?. ಇಲ್ಲಾ ನನ್ನನ್ನು ಒಂದು ಸ್ಥಾನಕ್ಕೆ ತಂದ ಧಣಿ ಮುತ್ತಯ್ಯ ಹಣ ಕೊಟ್ಟು ಕಥೆ ಖರೀದಿಸಿದ ಎಂದು ಸತ್ಯ ಹೇಳಲೇ?. ಸುಳ್ಳು ಹೇಳಿ ಮಾತನು ಉಳಿಸಿಕೊಳ್ಳಲೇ? ಎಂದು ಯೋಚಿಸುತ್ತಾ ಏಕಾಂತನಾದನು ವಿಚಾರ ಮಾಡುತ್ತಾ  ಒಂದು ವಿಚಾರಕ್ಕೆ ಬಂದು ತಾನೇ ಏನನ್ನು ಹೇಳದೆ ಹೋದರೆ ಎರಡು ಮಾತನ್ನು ಉಳಿಸಿಕೊಳ್ಳಬಹುದು ಎಂದು ವಿಷ ಪಾಷಾಣವನ್ನು ನುಂಗುತ್ತಾನೆ.

                     ಕೋರ್ಟ್ ಸಮಯದ ಹೊತ್ತಿಗೆ ರವಿ ಹಾಜರಾದನು ನ್ಯಾಯ ಕಟ್ಟೆಯಲ್ಲಿ ಮಹೇಶನು ಮತ್ತು ರವಿ ಎದುರು ಬದರಾಗಿ ನಿಂತಿದ್ದರು. ರವಿ ಕಥೆ ಮಾರಿದಕ್ಕೆ ಏನು ಸಾಕ್ಷಿ ಎಂದಾಗ ಮಹೇಶನು ಇದೆ ನೋಡಿರಿ ”  ಹೊಂಗನಸು” ಚಿತ್ರದಲ್ಲಿನ ಒಂದು ಹಾಡು ಈ ಕವನದಿಂದಲೆಯಾಗಿದ್ದು. ಚಿತ್ರ ಬಿಡುಗಡೆಯಾಗುವ  ಮುಂಚಿನ ದಿನಾಂಕವನ್ನು ರವಿಯು ಹಾಕಿದ್ದು ಇದೆ. ಎಂದು ತನ್ನ ವಕೀಲನ ಕೈಯಲ್ಲಿ ಕೊಟ್ಟನು. ಅದನ್ನು ನ್ಯಾಯ ಮೂರ್ತಿಯವರಿಗೆ ಕೊಟ್ಟರು. ಆಗ ವಕೀಲರು ರವಿ ಇದಕ್ಕೆ ಏನು ಹೇಳುತ್ತಿಯಾ ಎಂದಾಗ ಏನು ತಿಳಿಯದೆ ನಿಂತ ಕಟ್ಟೆಯಲ್ಲಿ ಕುಸಿದು ಬಿದ್ದನು. ವೈದ್ಯರು ಮತ್ತು ಪೊಲೀಸರು ರವಿಯನ್ನು ಒಳಗೆ ಕರೆದುಕೊಂಡು ಹೋದರು. ವೈದ್ಯರು ಪರೀಕ್ಷೆ ಮಾಡಿ ಸರ್ ರವಿ  ವಿಷ ನುಂಗಿದ್ದಾನೆ ಎಂದಾಗ ಮಹೇಶನ ಮುಖದಲ್ಲಿ ನೋವು, ವೇದನೆ ಕಾಣುತ್ತಿತ್ತು. ಧಣಿಯ ಮುಖದಲ್ಲಿ ಪಾಪ ಎಂಬ ಭಾವನೆ ಮೂಡಿತು.  ಇನ್ನು ಸತ್ಯ ಮುಚ್ಚಿಡಲು ಸಾಧ್ಯವಿಲ್ಲವೆಂದು ಧಣಿ ಸರ್ ನಾನೇ ಆ ಅಪರಾಧಿ ನನ್ನ ಹೊಂಗನಸು ಚಿತ್ರಕಥೆ, ಹಾಡು ನನ್ನ ಬರವಣಿಗೆಯಲ್ಲಾ ಅದು ವಿಷ ಸೇವಿಸಿದ ರವಿಯದ್ದು ಎಂದಾಗ ಎಲ್ಲರ ಮುಖದಲ್ಲಿ ಏನೋ ಆಶ್ಚರ್ಯ ಎದ್ದು ಕಾಣುತಿತ್ತು.

                       ನಾನು ಹಣ ಕೊಟ್ಟೆ, ರವಿ ಬರವಣಿಗೆ ಕೊಟ್ಟ. ಆ  ಕಥೆ ಖರೀದಿಸಿದ ವ್ಯಕ್ತಿ ಬೇರೆಯಾರು ಅಲ್ಲಾ ನಾನೇ ಎಂದು ಧಣಿ ಹೇಳಿದನು. ಇದನ್ನು ಕೇಳಿದ ವಕೀಲರು ನ್ಯಾಯ ಮೂರ್ತಿಗಳೆ ಇವನೆ ಆ ಅಪರಾಧಿ ಎಂದು ಒಪ್ಪಿಕೊಂಡಿದ್ದಾನೆ. ಇವನಿಗೆ ದಯಮಾಡಿ ಶಿಕ್ಷೆ ವಿಧಿಸಿರಿ ಎಂದಾಗ ರವಿ ತಡವರಿಸುತ್ತಾ ಜೋಲಿ ಹೊಡಿಯುತ್ತಾ. ಕಟಕಟೆಗೆ ಬರುತ್ತಾನೆ. ಆತನು ಬರುವದನ್ನು ನೋಡಿ ಮುಂದೆ ಕುಳಿತಿದ್ದ ವಕೀಲರಿಗೆ ನ್ಯಾಯ ಮೂರ್ತಿಗಳಿಗೆ, ಕುಂತಜನರಿಗೆ ಆತನ ತ್ಯಾಗ ಮತ್ತು ದೊಡ್ಡತನ ಹೆಮ್ಮೆತರುತ್ತದೆ.

                   ರವಿ ಬಂದು ಸರ್ ಧಣಿ ಅಪರಾದಿಯಲ್ಲಾ. ನಾನೆ ಅಪರಾದಿ ಕಥೆಯನ್ನು ಅವರು ಬೇಡಿ ಪಡೆಯಲಿಲ್ಲ ನಾನೇ ನನ್ನ ಬಡತವನ್ನು ನಿವಾರಿಸಿಕೊಳ್ಳಲು ನನ್ನ ಪ್ರತಿಭೆಯನ್ನು ಮಾರಿದೆ. ಅದು ನನ್ನ ತಪ್ಪು. ನನಗೆ ಶಿಕ್ಷೆ ನೀಡಿ ಎಂದಾಗ ಧಣಿಯ ಕಣ್ಣಲ್ಲಿ ನೀರು ಬಂದವು. ಆತನ ಮಾತು ಕೇಳಿ ಧಣಿಗೆ  ರವಿಯ ಮೇಲೆ ಮಮತೆ ಹುಟ್ಟಿತು.

                    ರವಿ ಅಂತರಾಳದಿಂದ ” ಸರ್ ಕಷ್ಟದಲ್ಲಿ ಇರುವರಿಗೆ ಸಹಾಯ ಮಾಡುವದು ಎಲ್ಲರ ಧರ್ಮ ಆದರೆ ಆ ಸಹಾಯವನ್ನು ತೀರಿಸುವದು ನಮ್ಮ ಧರ್ಮ” ಆದ್ದರಿಂದ ಧಣಿಯ ಹಣದ ಸಹಾಯಕ್ಕೆ ನನ್ನ ಬರವಣಿಗೆ ಕೊಡುವ ಮೂಲಕ ಋಣವನ್ನು ತೀರಿಸಿದೆ. ಇದು ತಪ್ಪಾ ಎಂದಾಗ ಎಲ್ಲರಲ್ಲಿ ಉದಾರ ಮಾನವೀಯ ಮೌಲ್ಯಗಳು ಮೊಳಕೆವಡಿದವು.

                        ನ್ಯಾಯ ಮೂರ್ತಿಗಳು ತಾವು ಪರೀಕ್ಷಿಸಿದ ಎಲ್ಲಾ ಅಂಶಗಳ ಮೇಲೆ ” ಹೊಂಗನಸಿನ ಚಿತ್ರಕಥೆ ಮತ್ತು ಹಾಡುಗಳಿಗೆ ರವಿ ಹೆಸರು ಅಳವಡಿಸಿ ಧಣಿಯ ಹೆಸರು ತೆಗೆದು ಹಾಕಲು ತಿಳಿಸಿದರು ಮತ್ತು ರವಿ ಧಣಿ ಮಾಡಿದ ತಪ್ಪುನ್ನು ಕ್ಷಮಿಸಿ ಎಂದಿದ್ದಾರೆ. ಆದರು ಇದು ಕಾನೂನು ಬಾಹಿರ ಘಟನೆಯಾಗಿದೆ. ಆದ ಕಾರಣ ಮುತ್ತಯ್ಯನಿಗೆ ಕೃತಿಚೌರ್ಯ ಅಂತಾ ದಂಡ ವಿಧಿಸಲಾಗಿದೆ. ಎಂದು ತೀರ್ಪು ನೀಡಿದರು.

                   ಮಹೇಶನಿಗೆ ಆನಂದವೇ ಆನಂದ. ನನ್ನ ಗೆಳೆಯನಿಗೆ ನ್ಯಾಯ ದೊರಕಿತಲ್ಲಾ ” ಪ್ರತಿಭೆ” ಎಂದು ಸಾಯುವದಿಲ್ಲಾ  ಸತ್ಯ ಎಂದು ಮುಚ್ಚುವದಿಲ್ಲಾ. ತಪ್ಪು ತಪ್ಪೇ ಎಂದು ರವಿಗೆ ಹೇಳಿ ಅಪ್ಪಿಕೊಂಡನು ಧಣಿ ಹೊರಗೆ ಬಂದು ಪೊಲೀಸರ ಸಮ್ಮುಖದಲ್ಲಿ ಹೊಂಗನಸು ಚಿತ್ರದ ಅರ್ಧ ಗಳಿಕೆಯನ್ನು ಚಕ್ ಮೂಲಕ ಹಣವನ್ನು ರವಿಗೆ ಕೊಟ್ಟನು ರವಿ ಮನಸ್ಸಿನಲ್ಲಿ ಏನೋ ಭಾವನೆ ಮೂಡಿತು. ನನ್ನಲ್ಲಿನ ಪ್ರತಿಭೆಯನ್ನು ಹೊರದೂಡಿದನು ಮತ್ತು ಸಿರಿವಂತನಾದೆನು ಎಂದು ದೀರ್ಘ ಉಸಿರೆಳೆದು ” ಜಗತ್ತನ್ನು ಮುನ್ನಡಿಸುವ ಶಕ್ತಿ ಪ್ರತಿಭೆಗಳಿಗಿದೆ” ಎಂದು ಆತ್ಮದ ಅರಿವಾಯಿತು.


ಕಥೆಗಾರರು:- ಶರೀಫ ಗಂಗಪ್ಪ ಚಿಗಳ್ಳಿ( ಸಾಹಿತಿ)
ಸಾ/ ಬೆಳಗಲಿ ತಾ/ ಹುಬ್ಬಳ್ಳಿ ಜಿ/ ಧಾರವಾಡ- 580024

 

Leave a Reply

Your email address will not be published. Required fields are marked *