ಪ್ರಜಾಪ್ರಭುತ್ವ ಉಳಿಯಬೇಕೇ? ಇಲ್ಲಿದೆ ನೋಡಿ ಏಕೈಕ ಮಾರ್ಗ…

ಈ ಚಿಂತನೆ ಇಂದು ನಿನ್ನೆಯದಲ್ಲ. ನನ್ನ ವಿದ್ಯಾರ್ಥಿ ಜೀವನದಿಂದಲೂ ಕಾಡುತ್ತಿರುವ ಪ್ರಶ್ನೆ ಇದು.

“ಪ್ರಜಾಪ್ರಭುತ್ವ” ದ ರೀತಿ ಆಯ್ಕೆಯಾಗುವುದು ಎಂದರೇನು? ಈ ವ್ಯವಸ್ಥೆಯ ಬಗ್ಗೆ ಅರಿವಿರುವ ಹಸುಗೂಸುಗಳೂ ಹೇಳಬಲ್ಲವು “ಹೆಚ್ಚು ಜನರ ಒಲವು ಯಾರ ಕಡೆ ಇರುತ್ತದೆಯೋ ಅವರ ಆಯ್ಕೆ” ಎಂದು
ಅಲ್ಲವೇ?

ಹಾಗಾದರೆ ಈ ಕೆಳಗಿನ ಒಂದು ಉದಾಹರಣೆಯನ್ನು ನೋಡಿ. ಒಬ್ಬ ಶಾಸಕನ ಆಯ್ಕೆ ಅಥವಾ ಸಂಸದನ ಆಯ್ಕೆಗೆ ಚುನಾವಣೆ ನಡೆಯುತ್ತದೆ. ನಮ್ಮಲ್ಲಿ ಮತ ಚಲಾವಣೆ ಇನ್ನೂ “ಕಡ್ಡಾಯ” ಆಗಿಲ್ಲದಿರುವ ಕಾರಣದಿಂದ
ಶೇ.60ರಷ್ಟು ಮತಚಲಾವಣೆ ಆಯಿತು ಎಂದು ಇಟ್ಟುಕೊಳ್ಳೋಣ. ಒಟ್ಟು ಒಂದು ಲಕ್ಷ ಮತದಾರರಲ್ಲಿ 60,000 ಮಂದಿ ಮತ ಹಾಕಿದ್ದಾರೆ. ಅದರಲ್ಲಿ ಒಂದು ಪಕ್ಷದ ಅಭ್ಯರ್ಥಿ 25,000 ಮತ, ಮತ್ತೊಂದು ಪಕ್ಷದ ಅಭ್ಯರ್ಥಿ 20000 ಮತ, ಇನ್ನೊಂದು ಪಕ್ಷದ ಅಭ್ಯರ್ಥಿ 10,000 ಮತ ಹಾಗೂ ಇತರರು ಸೇರಿ 5,000 ಮತ ಪಡೆದಿದ್ದಾರೆ ಎಂದು ಭಾವಿಸೋಣ. ಈ ಸಂದರ್ಭದಲ್ಲಿ 25,000 ಮತ ಪಡೆದ ವ್ಯಕ್ತಿ ಸಹಜವಾಗಿಯೇ ಗೆಲ್ಲುತ್ತಾನೆ ತಾನೇ?
ಈಗಿರುವ ವ್ಯವಸ್ಥೆಯ ಪ್ರಕಾರ ಖಂಡಿತಾ ಹೌದು. ಆದರೆ ಇಲ್ಲೇ ಸಮಸ್ಯೆ ಇರುವುದು ನೋಡಿ. 60 ಸಾವಿರ ಮತಚಲಾವಣೆ ಆದ ಸಂದರ್ಭದಲ್ಲಿ ಆ ವ್ಯಕ್ತಿ 25 ಸಾವಿರ ಮತಗಳಿಸಿದರೆ ಪರೋಕ್ಷವಾಗಿ 35 ಸಾವಿರ ಮಂದಿ ಅವನ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅರ್ಥ ಅಲ್ಲವೇ? ಇದೇ ಪ್ರಜಾಪ್ರಭುತ್ವ ವ್ಯವಸ್ಥೆಯ ದುಸ್ಥಿತಿ-ದುರ್ಗತಿ.

ಅಮೇರಿಕಾದಂತೆ ಕೇವಲ ದ್ವಿಪಕ್ಷೀಯ ಚುನಾವಣೆ ನಮ್ಮಲ್ಲಿಲ್ಲ. ಇಲ್ಲಿನ ವ್ಯವಸ್ಥೆಯನ್ನು ನಾವು ಒಪ್ಪಿಕೊಂಡಿದ್ದೇವೆ. ಹಾಗಾದರೆ ಮತಗಳು ಹರಿದು ಹಂಚಿ ಹೋದರೂ ನಾವು 60 ಸಾವಿರದಲ್ಲಿ 25 ಸಾವಿರ ಮತಪಡೆದ
ಅಭ್ಯರ್ಥಿಯ ಆಯ್ಕೆಯನ್ನು ಒಪ್ಪಿಕೊಳ್ಳಬೇಕೇ ಎಂಬುದು ಪ್ರಶ್ನೆ. ಇಂಥ ವ್ಯವಸ್ಥೆ ಇದ್ದಾಗಲೂ ಯಾವುದಾದರೊಂದು ಪಕ್ಷ ಸರಳ ಬಹುಮತ ಪಡೆದರೆ 5 ವರ್ಷಗಳ ಸುಭದ್ರ ಆಡಳಿತ ನೀಡಲು ಸಾಧ್ಯ. ಆದರೆ ಈಗ ರಾಜ್ಯ ಸರ್ಕಾರದಲ್ಲಿ ಉಂಟಾಗಿರುವ ಪರಿಸ್ಥಿತಿ ನಿರ್ಮಾಣವಾಗಿ 224 ಕ್ಷೇತ್ರಗಳಲ್ಲಿ ಕೇವಲ 39 ಸ್ಥಾನಗಳನ್ನು ಪಡೆದ ಪಕ್ಷವೊಂದು ಉಳಿದವರ ಸಹಾಯ ಬೆಂಬಲದಿಂದ ಆಡಳಿತ ನಡೆಸುತ್ತದೆ ಎಂದರೆ ಇದು ಪ್ರಜಾತಂತ್ರ ವ್ಯವಸ್ಥೆಯ ವಿಪರ್ಯಾಸ ಅಲ್ಲವೇ?

ಇದು ಯಾವುದೇ ನಿರ್ಧಿಷ್ಟ ಪಕ್ಷದ ಕುರಿತು ಬರೆದದ್ದು ಅಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಹೇಗೆ ಮಾರಕವಾದ ಫಲಿತಾಂಶ ಬರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ಅಷ್ಟೆ.

ಇರಲಿ, ಮೈತ್ರಿ ಪಕ್ಷಗಳೆಲ್ಲ ಸೇರಿ ಸರ್ಕಾರ ರಚಿಸಿ “ಮ್ಯಾಜಿಕ್” ಸಂಖ್ಯೆಯನ್ನು ಹೊಂದುವುದು ಇಂದು ನಿನ್ನೆಯದೇನೂ ಅಲ್ಲ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ.
ಆದರೆ ಒಂದು ಮೂಲಭೂತ ಪ್ರಶ್ನೆ ಎದುರಾಗುತ್ತದೆ.

ಒಂದು ಕ್ಷೇತ್ರದಲ್ಲಿ ಶಾಸಕ ಅಥವಾ ಸಂಸದನ ಆಯ್ಕೆ ನಡೆಯುತ್ತದೆ. ಅತಂತ್ರ ವಿಧಾನಸಭೆ ಅಥವಾ ಲೋಕಸಭೆಯ ಸಂದರ್ಭದಲ್ಲಿ ಈ ರೀತಿ ಆಯ್ಕೆಯಾದ ವ್ಯಕ್ತಿ ತನ್ನ ಪಕ್ಷ ಸ್ಪಷ್ಟ ಬಹುಮತ ಪಡೆಯದೇ ಇದ್ದ ಸಂದರ್ಭದಲ್ಲಿ ಇತರೆ ಯಾವುದಾದರೊಂದು ಪಕ್ಷಕ್ಕೆ ಬೆಂಬಲ ಸೂಚಿಸಬೇಕಾದ ಸಂದರ್ಭ ಒದಗಿದರೆ ಆತ ಮತ್ತೊಮ್ಮೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ತನ್ನ ಬೆಂಬಲವನ್ನು ನಿಗಧಿತ ಪಕ್ಷಕ್ಕೆ ವ್ಯಕ್ತಪಡಿಸುತ್ತಾನೆಯೇ ?… ಖಂಡಿತಾ ಇಲ್ಲ. ಆಗ ಅದು ಆತನ ವೈಯಕ್ತಿಕ ಆಯ್ಕೆ ಆಗಿರುತ್ತದೆ ಅಲ್ಲವೇ?

ಉದಾಹರಣೆಗೆ ಕಾಂಗ್ರೆಸ್ ಶಾಸಕನೊಬ್ಬ ಜೆ.ಡಿ.ಎಸ್. ಅಧಿಕಾರಕ್ಕೆ ಬರಲಿ ಎಂಬ ಕಾರಣಕ್ಕೆ ತನ್ನ ಹೈಕಮಾಂಡ್ ಸೂಚಿಸಿದೆ ಎಂಬ ಉದ್ದೇಶದಿಂದ ಜೆ.ಡಿ.ಎಸ್.ಗೆ ಬೆಂಬಲ ವ್ಯಕ್ತಪಡಿಸುತ್ತಾನೆ ಎಂದಿಟ್ಟುಕೊಳ್ಳೋಣ. “ಅಲ್ಲಯ್ಯಾ, ನಿನ್ನನ್ನು ಗೆಲ್ಲಿಸಿದ್ದು ಕಾಂಗ್ರೆಸ್ ಶಾಸಕ ಎಂಬ ಕಾರಣಕ್ಕೆ. ನೀನು ಹೇಗೆ ಜೆ.ಡಿ.ಎಸ್.ಗೆ ಬೆಂಬಲ ವ್ಯಕ್ತಪಡಿಸುವ ಮನೋಭಾವ ಹೊಂದಿದ್ದರೆ ನಿನ್ನನ್ನೇ ನಾವು ಆಯ್ಕೆ ಮಾಡುತ್ತಿರಲಿಲ್ಲ” ಎಂದು ಮತದಾರ ಏಕೆ ಕೇಳಬಾರದು?… ಇಷ್ಟಕ್ಕೂ ಈ ರಾಜಕೀಯ ಪಕ್ಷಗಳು ಚುನಾವಣೆ ಪೂರ್ವ ಹೊಂದಾಣಿಕೆ ಮಾಡಿಕೊಂಡು ಬಳಿಕ ಚುನಾವಣೆ ಎದುರಿಸಿದರೆ ಈ ಪ್ರಶ್ನೆ ಬರುವುದಿಲ್ಲ ಅಲ್ಲವೇ? ಏಕೆ ಹೀಗೆ ಮಾಡಬಾರದು ನಮ್ಮ ಜನಪ್ರತಿನಿಧಿಗಳು ಹಾಗು ಅನುಕೂಲ ಸಿಂಧು ರಾಜಕೀಯ ಪಕ್ಷಗಳು.

ದಾವಣಗೆರೆಯ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರು, ಕಾನೂನು ತಜ್ಞರು ಹಾಗೂ ಪ್ರಜಾಪ್ರಭುತ್ವದ ಪ್ರತಿಪಾದಕರೂ ಆಗಿದ್ದ ನನ್ನ ಆತ್ಮೀಯ ಹಿರಿಯ ಮಿತ್ರರಾಗಿದ್ದ ಪ್ರೊ. ಎಸ್.ಹೆಚ್.ಪಟೇಲರ ಜೊತೆ ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ
ಲೋಪಗಳ ಕುರಿತು ಸಾಕಷ್ಟು ಬಾರಿ ಚರ್ಚಿಸಿದ್ದೆ. ಅವರಲ್ಲಿ ಒಂದು ಆಲೋಚನೆ ಸದಾ ಇರುತ್ತಿತ್ತು. ಅದೆಂದರೆ “ರೀ ಕಾಲ್ ಸಿಸ್ಟಂ” (ಜನಾಭಿಪ್ರಾಯ ಪಡೆದು ಚುನಾಯಿತ ಪ್ರತಿನಿಧಿಯನ್ನು ಕೆಳಗಿಳಿಸುವ ಕ್ರಮ) ನಮ್ಮಲ್ಲಿ ಜಾರಿಗೆ ಬರಬೇಕು ಎಂಬುದು.
ಹೌದು, ವ್ಯಕ್ತಿಯೊಬ್ಬ ಚುನಾವಣೆಯ ತನಕವೂ ಸಾಚಾ ಆಗಿದ್ದು, ಪ್ರಾಮಾಣಿಕ ಆಗಿದ್ದು ಒಂದು ವೇಳೆ ಚುನಾಯಿತನಾದ ಬಳಿಕ ಬದಲಾದರೆ? ಅಥವಾ ರಾಜಕೀಯ ಒತ್ತಡ-ಆಮಿಷಗಳಿಗೆ ಒಳಗಾಗಿ ಜನಪರ ಕಾಳಜಿ ಮರೆತರೆ ಆಗಲೂ ಆತನನ್ನು ನಾವು 5 ವರ್ಷಗಳ ಕಾಲ ಸಹಿಸಿಕೊಳ್ಳಬೇಕೇ?… ಇಂಥ ಸಂದರ್ಭಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಆತನನ್ನು ಚುನಾಯಿಸಿದ ಜನತೆಗೆ ಇದ್ದರಷ್ಟೇ ಆ ವ್ಯಕ್ತಿಗೆ ತನ್ನ ಜವಾಬ್ದಾರಿಯ ಅರಿವು ಹಾಗೂ ಹೊಣೆಗಾರಿಕೆ ಹೆಚ್ಚಲು ಸಾಧ್ಯ ಅಲ್ಲವೇ?

ಇನ್ನೊಂದು ವಿಷಯ ಅವರು ಹಾಗೂ ನಾನು ಕುಳಿತು ತುಂಬಾ ಸಮಯ ಚರ್ಚಿಸುತ್ತಿದ್ದುದು. ಮೇಲೆ ಪ್ರಸ್ತಾಪಿಸಿದಂತೆ ಮತಗಳ ವಿವರ ಹಾಗೂ ಚಲಾವಣೆಯಾದ ಮತಗಳಲ್ಲಿ ಶೇ.50 ಅಥವಾ ಅದಕ್ಕಿಂತ ಹೆಚ್ಚು ಮತ ಪಡೆದರೆ ಮಾತ್ರ ಆ ಅಭ್ಯರ್ಥಿಯ ಆಯ್ಕೆ ಘೋಷಿಸಬೇಕು. ಇಲ್ಲದಿದ್ದಲ್ಲಿ ಮೊದಲ ಹಾಗೂ ಎರಡನೇ ಹೆಚ್ಚು ಮತ ಪಡೆದ ಅಭ್ಯರ್ಥಿಗಳನಡುವೆ ಮತ್ತೆ ಚುನಾವಣೆ ನಡೆಸಿ ಆಯ್ಕೆ ಮಾಡುವುದು. ಆಗಷ್ಟೆ ನಮಗೆ ಸ್ಪಷ್ಟ ಜನಾಭಿಪ್ರಾಯ ಪಡೆಯಲು ಸಾಧ್ಯ ಅಲ್ಲವೇ?

ಜನಾಭಿಪ್ರಾಯ ಸಂಗ್ರಹಿಸಿ ಚುನಾಯಿತ ಪ್ರತಿನಿಧಿಯನ್ನು ಕೆಳಗಿಳಿಸುವ ವ್ಯವಸ್ಥೆ ಅಥವಾ ಮೊದಲ ಎರಡನೇ ಹೆಚ್ಚು ಮತ ಪಡೆದ ಅಭ್ಯರ್ಥಿಗಳ ನಡುವೆ ಮತ್ತೆ ಚುನಾವಣೆ ನಡೆಸಿ ಸ್ಪಷ್ಟ ಜನಾಭಿಪ್ರಾಯ ಪಡೆಯುವ ರೀತಿ ಜಾರಿಗೆ ಬರುವುದು ದುಬಾರಿ ಎನ್ನಿಸಬಹುದು. ಆದರೆ ಅದು ಇಂದು ಕೇಳಿ ಬರುತ್ತಿರುವ ಸಾವಿರಾರು ಕೋಟಿ ರೂಗಳ, ಲಕ್ಷಾಂತರ ಕೋಟಿ
ರೂ.ಗಳ ಹಗರಣಗಳಷ್ಟು ಖಂಡಿತ ದುಬಾರಿ ಆಗಲಾರದು.

ಅತಂತ್ರ ವಿಧಾನಸಭೆ ಅಥವಾ ಲೋಕಸಭೆಯನ್ನು ಹೊಂದಿ, “ಯಾವಾಗಲಾದರೂ ಸರ್ಕಾರ ಬೀಳಬಹುದು” ಎಂಬ ಆತಂಕವನ್ನು ನಾಗರೀಕರಲ್ಲಿ ಸೃಷ್ಟಿಸಿ ಅರಾಜಕತೆಯ ವಾತಾವರಣ ನಿರ್ಮಿಸುವುದಕ್ಕಿಂತ ಇದು ಉತ್ತಮ.

ಅಧಿಕಾರಿಗಳಲ್ಲಿ ಜನಪ್ರತಿನಿಧಿಗಳ ಬಗ್ಗೆ ಗೌರವ ಹಾಗೂ ಹೆದರಿಕೆ ಮೂಡಿಸದ ಇಂಥ ಅತಂತ್ರ ಸ್ಥಿತಿಗಿಂತಲೂ ಮೇಲಿನ ಎರಡು ಸುಧಾರಣೆಗಳು ಜಾರಿಗೆ ಬಂದು ಮತ ಚಲಾವಣೆ “ಕಡ್ಡಾಯ” ಆದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಒದಗಿಸಿದಂತೆ ಅಲ್ಲವೇ…?

ನಿಮ್ಮ ಅಭಿಪ್ರಾಯ ಸರಿ ಎನ್ನಿಸಿದರೆ ದಯಮಾಡಿ ಇದನ್ನು
ಶೇರ್ ಮಾಡಿ ಹಾಗೂ “ಜನಮಿಡಿತ“ವನ್ನು ಲೈಕ್ ಮಾಡಿ.
-ಜಿ.ಎಂ.ಆರ್.ಆರಾಧ್ಯ.

One thought on “ಪ್ರಜಾಪ್ರಭುತ್ವ ಉಳಿಯಬೇಕೇ? ಇಲ್ಲಿದೆ ನೋಡಿ ಏಕೈಕ ಮಾರ್ಗ…

  • September 14, 2018 at 2:30 pm
    Permalink

    ಉತ್ತಮವಾದ ಲೇಖನ

    Reply

Leave a Reply

Your email address will not be published. Required fields are marked *