ಆರೋಪಿಯ ಮಾತು ಕೇಳಿ ಜಿಲ್ಲಾಧಿಕಾರಿಯ ಕಣ್ತುಂಬಿದವು

ಅದು, ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ. ಆವತ್ತು… ತಾಲೂಕಿನ ಮುಖ್ಯ ವೈದ್ಯಾಧಿಕಾರಿ, ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸರ್ಕಾರಿ ಆಸ್ಪತ್ರೆಯ ಜವಾನ “ಶಿವಪ್ಪ” ಹೊರಗಡೆ ಕುಳಿತಿದ್ದರು.

ಆವತ್ತಿನ ವಿಚಾರಣೆಯಲ್ಲಿ “ಶಿವಪ್ಪ”ಎಂಬ ಸರಕಾರಿ ಜವಾನನ ಭವಿಷ್ಯ‌ ನಿರ್ಧಾರ ಮಾಡಲಿದ್ದು… ಅವನ ಪಕ್ಕ ಕುಳಿತ ಇನ್ಸಪೆಕ್ಟರ್ ಹಾಗೂ ಮುಖ್ಯ ಆರೋಗ್ಯ ಅಧಿಕಾರಿಯ ಮುಖದಲ್ಲಿ ಅವಹೇಳನೆಯ ನಗು ಕಂಡುಬರುತ್ತಿತ್ತು.

ಜಿಲ್ಲಾಧಿಕಾರಿಗಳು ಬಂದ ನಂತರ, ಅಲ್ಲಿನ ಜವಾನ ಕೂಗಿ ಹೇಳಿದ “ಎಲ್ಲರೂ ಒಳಗೆ ಬರಬೇಕು” ಎಂದು. ಎಲ್ಲರೂ ಒಳಗೆ ನಡೆದಿದ್ದರು. ಕೊನೆಯಲ್ಲಿ ಶಿವಪ್ಪ ಮಾತ್ರ, ನಿಧಾನವಾಗಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೋಗಿ ನಿಂತಿದ್ದ. ಅಷ್ಟರಲ್ಲೇ ಒಳಗೆ, ನಮಸ್ಕರಿಸಿ, ನುಗ್ಗಿ ಬಂದಿದ್ದ… ಸರ್ಕಾರಿ ವಕೀಲ, ರಾಜೀವ ನಾಯ್ಕ .

ಎದುರಿಗಿನ ಜಿಲ್ಲಾಧಿಕಾರಿಗಳಾದ ಚಕ್ರವರ್ತಿ ಅವರಿಗೆ, ಎಲ್ಲವೂ ನಿಚ್ಚಳ ಆಗಿತ್ತು.
ಶಿವಪ್ಪ ಕುಡಿದು ಬಂದು ಉದ್ಯೋಗ ಮಾಡಿದ್ದ ಎಂದು. ಮತ್ತು ಅದಕ್ಕಾಗಿ ಆತ, ಸತ್ತವರ ಸಂಬಂಧಿಯ ಬಳಿ “ನೂರು ರೂಪಾಯಿ ಲಂಚ ಪಡೆದಿದ್ದಾನೆ” ಎಂಬುದು ಕೂಡ!

ಇಂದಿನ “ವಿಚಾರಣೆ” ಎಂಬುದು ಕೇವಲ ಒಂದು ಭಾಗ ಅಷ್ಟೇ, ಅವನನ್ನು ಕೆಲಸದಿಂದ “ವಜಾ” ಮಾಡಲು … ಎಂಬುದನ್ನು ಕೂಡ ಅರಿತಿದ್ದರು, ಅವರು.

ಶಿವಪ್ಪ, ಆ ಕಛೇರಿಯ ಒಳಗಡೆ ಇದ್ದ ಕಟಕಟೆಯಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತಿದ್ದ. ಆತನ ಮುಖದಲ್ಲಿ ಮಾತ್ರ, ಆವತ್ತು… ಹಿಂದೆಂದೂ ಕಾಣದ ದುಃಖ ಇತ್ತು. ಚಕ್ರವರ್ತಿ ಸಾಹೇಬರು ಕೂಡ, ಆತನ ಕಡೆ ಕನಿಕರದಿಂದ ನೋಡಿದರು.

ಅಷ್ಟರಲ್ಲಿ ಸರಕಾರಿ ವಕೀಲ ಪಂಡಿತ್, ತನ್ನ ವಾದವನ್ನು ಶುರು ಮಾಡಿದ್ದ.
“ಮಹಾ ಸ್ವಾಮಿ, ಇಲ್ಲಿ ನಿಂತವನು “ಶಿವಪ್ಪ” ಎಂದು. ಸರಕಾರಿ ಆಸ್ಪತ್ರೆಯಲ್ಲಿ ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ, ‘ಡಿ’ ದರ್ಜೆಯ ನೌಕರನಾಗಿ”.

“ಇವನ ಮೇಲಿನ ಮೊದಲ ಆರೋಪ, ಕುಡಿದು ಕೆಲಸ ಮಾಡಿದ… ಎಂದು.
ಹಾಗೂ ಎರಡನೇ ಆರೋಪ, ಸುಟ್ಟ ಗಾಯದಿಂದ ಮೃತಪಟ್ಟ ಹೆಂಗಸಿನ ಶರೀರ ಪೋಸ್ಟ್ ಮಾರ್ಟಂ ಮಾಡಲು… ಅವರ ತಂದೆಯಿಂದಲೇ ನೂರು ರೂಪಾಯಿ ‘ಲಂಚ’ ತೆಗೆದುಕೊಂಡಿದ್ದ… ಎಂಬುದು”.

ಸರಕಾರಿ ವಕೀಲ ಇಷ್ಟು ಹೇಳಿ, ತನ್ನ ವಾದ ಹೇಗೆ ಇದೆ? ಎಂದು…. ಒಳಗೆ ಕುಳಿತ ಪೋಲಿಸ್ ಇನ್ಸ್ಪೆಕ್ಟರ್ ಕಡೆ ನೋಡಿದ. ಆತನ ಕಣ್ಣಲ್ಲಿ ಕೂಡ ಮೆಚ್ಚುಗೆ!

ಒಂದು ಉತ್ತಮ ಕೆಲಸದಲ್ಲಿ ಇದ್ದವರು… ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದವರು… ಒಬ್ಬ ಸಣ್ಣ ನೌಕರನ ವಿರುದ್ಧ ನಿಂತು ಬಿಟ್ಟಿದ್ದರು, ಆವತ್ತು… ತಾವು ಎಷ್ಟು “ಪ್ರಾಮಾಣಿಕರು” ಎಂದು ತೋರಿಸಿಕೊಳ್ಳಲು!

ಕೇಳುತ್ತಾ ಇದ್ದ ಶಿವಪ್ಪ, ತನ್ನ ಮೇಲಿನ ಆರೋಪವನ್ನು… ಹಾಗೂ ಅವು ಯಾವುದೂ ಸುಳ್ಳಿರಲಿಲ್ಲ .

ಮುಂದೆ ವಕೀಲ ರಾಜೀವನಾಯ್ಕ ನುಡಿದಿದ್ದ. “ಮಹಾ ಸ್ವಾಮಿ, ಅದಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ ದಾಖಲೆಗಳನ್ನೂ ನಿಮ್ಮಮುಂದೆ ಈಗಾಗಲೇ ಹಾಜರು ಮಾಡಿದ್ದೇನೆ. ಅದನ್ನು ಪರಿಗಣಿಸಿ ತಾವು, ಇಲ್ಲಿ ನಿಂತಿರುವ ‘ಆರೋಪಿಯನ್ನು’ – ತಕ್ಷಣಕ್ಕೆ ಜಾರಿಗೆ ಬರುವಂತೆ – ಕೆಲಸದಿಂದ ವಜಾ ಮಾಡಬೇಕೆಂದು ಕೋರಿಕೆ” ಎಂದು ಕೈ ಮುಗಿದು, ಕುಳಿತ.

ಎಲ್ಲರಿಗೂ ಅರಿವು ಇತ್ತು … ಇಂದು ಶಿವಪ್ಪ ಕೆಲಸದಿಂದ ವಜಾ ಆಗುತ್ತಾನೆ… ಎಂದು!

“ನಿನ್ನ ಕಡೆ ವಾದ ಮಾಡಲು ಯಾರು ಇಲ್ಲವೇ? ” ಕೇಳಿದ್ದರು, ಜಿಲ್ಲಾಧಿಕಾರಿ ಚಕ್ರವರ್ತಿಯವರು. ಅದೊಂದು ಪ್ರಕ್ರಿಯೆ ಮಾತ್ರ ಉಳಿದಿತ್ತು… ಅಷ್ಟೇ.

ಕೈ ಮುಗಿದು ಹೇಳಿದ ಶಿವಪ್ಪ. “ಯಾರನ್ನೂ ಕೂಡ ವಾದ ಮಾಡಲು ನಾನು ನೇಮಕ ಮಾಡಿಲ್ಲ ಮಹಾ ಸ್ವಾಮಿ”.

“ಎಲ್ಲವೂ ಸತ್ಯವೇ ಅವರು ಹೇಳಿದ್ದು. ಆದರೆ, ತಾವು ದಯವಿಟ್ಟು… ನನ್ನ ಐದು ನಿಮಿಷದ ಮಾತು ಕೇಳಿ” ಎಂದು ಕೈಮುಗಿದು ವಿನಂತಿ ಮಾಡಿದ.

“ಕುಡಿದಿದ್ದು ಹೌದು ಮಹಾ ಸ್ವಾಮಿ, ಯಾಕೆ
ಅಂದರೆ”… ಆತನ ಕಣ್ಣಲ್ಲಿ ನೀರಿತ್ತು. ಆದರೆ… ನಾನು ಕುಡುಕನಲ್ಲ, ಮಹಾಸ್ವಾಮಿ”.

ಆದರೆ, ಈ “ಪೋಸ್ಟ್ ಮಾರ್ಟಂ” ಮಾಡಲು ಹೋಗುವಾಗ… ಅದು ನನಗೆ ಅದು ಬೇಕೇ ಬೇಕು… ಈ ಮೂವತ್ತು ವರ್ಷದಿಂದ, ನಾನು ಇದನ್ನೇ ಮಾಡಿದ್ದೇನೆ ಕೂಡ”.

ಚಕ್ರವರ್ತಿ ಅವರಲ್ಲಿ ಇದೀಗ ಕುತೂಹಲ!
ಈತನಲ್ಲಿ ಮಾತನಾಡಲು, ಏನು ವಿಷಯ ಇರುತ್ತೆ? ಎಂದು.

“ಅಲ್ಲಿ ಸತ್ತವರ ದೇಹವನ್ನು ಕೊಯ್ದು… ಅದರಲ್ಲಿ ವೈದ್ಯರು ಹೇಳಿದ ಅಂಗವನ್ನು ತೆಗೆದು… ಮತ್ತೆ ಶರೀರವನ್ನು ‘ಹೊಲಿಯುವ’ ಕೆಲಸ ನನ್ನದು. ಮಾಮೂಲಿ ಮನಸು ಅದಕ್ಕೆ ಒಗ್ಗುವುದಿಲ್ಲ.
ಯಾಕೆ ಅಂದರೆ, ಸತ್ತ ಸಣ್ಣ ಮಕ್ಕಳ ತಲೆ ಒಡೆದು, ಅವರ ಮೆದುಳಿನ ಭಾಗ ತೆಗೆಯಬೇಕು. ಅದು ಕೂಡ… ಅವರ ತಲೆಗೆ ಸುತ್ತಿಗೆ ಪೆಟ್ಟು ಹಾಕಿ!” ಶಿವಪ್ಪ ಭಾವುಕನಾಗಿ ಹೋಗಿದ್ದ. ಅಲ್ಲಿನ ಪ್ರತಿ ಚಿತ್ರ, ಅವನ ಕಣ್ಣ ಮುಂದೆ ಬರುತ್ತಿತ್ತು.

“ದೇಹ ಸತ್ತಿರಬಹುದು ಮಹಾ ಸ್ವಾಮಿ, ಆದರೆ ಅದನ್ನು ಮತ್ತಷ್ಟು ಹಿಂಸಿಸಿ… ಅದರ ಎದೆಯ ಭಾಗವನ್ನು, ಹೊಟ್ಟೆಯನ್ನು ಕೊಯ್ದು… ಅದರ ತುಣುಕು ತೆಗೆದಿಡುವ ಕೆಲಸ ನನ್ನದು… ವೈದ್ಯರು ಹೇಳಿದ ಹಾಗೆ. ಕಡೆಗೆ ಕೂಡ, ಅದನ್ನು ಸೇರಿಸಿ ಹೊಲೆಯಬೇಕು ನಾನು, ಪೇಟೆಯಲ್ಲಿ ಸಿಗುವ ಹಗ್ಗದಿಂದ.”

“ಬಿಗಿದು ಹೋದ ಮಾಂಸದಲ್ಲಿ ಸೂಜಿ ಚುಚ್ಚಲು ಬರೋಲ್ಲ ಮಹಾ ಸ್ವಾಮಿ… ಅದಕ್ಕೆ ದೊಡ್ಡ ದಬ್ಬಣ ಬೇಕು. ಎಂತಹ ಹಣೆಬರಹ ನೋಡಿ ನನ್ನದು” ಇಷ್ಟು ಹೇಳುವಷ್ಟರಲ್ಲಿ ಬಸವಳಿದು ಅಲ್ಲೇ ಕುಸಿದು ಕುಳಿತಿದ್ದ ಶಿವಪ್ಪ. ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿದು ಹೋಗುತ್ತಿತ್ತು .

ಕೇಳುತ್ತಿದ್ದ ಚಕ್ರವರ್ತಿ ಸಾಹೇಬರಿಗೆ ಕೂಡ… ಎಲ್ಲೋ ಮನಸಿಗೆ ತಾಗಿದ ಹಾಗಿತ್ತು, ಮಾತು. “ನೀರು ಏನಾದರೂ ಬೇಕ ಶಿವಪ್ಪ” ಎಂದು ಕೇಳಿದ್ದರು. ಬೇಡವೆಂದು ತಲೆಯಾಡಿಸಿದ ಶಿವಪ್ಪ ಮಾತು ಮುಂದುವರಿಸಿದ.

“ಗಂಡನ ಕೈಯಿಂದ ಸುಟ್ಟು ಕರಕಲು ಆದ ಹೆಂಗಸು, ಬೈಕ್ ಮೇಲಿಂದ ಬಿದ್ದ ಮಕ್ಕಳು, ಸಾಲ ತೀರಿಸಲು ಆಗದೆ ಆತ್ಮಹತ್ಯೆ ಮಾಡಿಕೊಂಡ ರೈತನ ಶರೀರ,
ಈಜಲು ಹೋದ ಪುಟ್ಟ ಮಕ್ಕಳ ಶರೀರಗಳು ಸ್ವಾಮಿ, ಅಲ್ಲಿಗೆ ಬರುವುದು.”

“ಕೆಲವೊಮ್ಮೆ , ಅಪಘಾತದಲ್ಲಿ ಮಡಿದವರ ತಲೆಯೇ ಇಲ್ಲದ ಶರೀರ! ‌ತುಂಬಿದ ಬಸುರಿಯ ಶರೀರ ಕೂಡ ಕೆಲವೊಮ್ಮೆ”. ಇದನ್ನು ಹೇಳುವಾಗ, ದೊಡ್ಡದಾಗಿ ಅತ್ತು ಬಿಟ್ಟ ಶಿವಪ್ಪ .

“ಹೇಗೆ ಸ್ವಾಮಿ ಮಾಡಲಿ ನಾನು? ಮಾಮೂಲಿ ಮನುಷ್ಯನಂತೆ ಈ ಕೆಲಸಗಳನ್ನು .
ಹೇಗೆ?? ಬಸುರಿಯ ಹೊಟ್ಟೆಯನ್ನು ಕೊಯ್ದು… ಕಣ್ಣು ಬಿಡದ ಮಗುವನ್ನು ಎತ್ತಿ ಇಡಲಿ, ಹೊರಗೆ? ಎಲ್ಲಾ ಹೆಣದ ಕಣ್ಣುಗಳೂ ನನ್ನನ್ನೇ ನೋಡುತ್ತಿರುವಾಗ!”

“ಸಾಮಾನ್ಯ ಡಾಕ್ಟರ್ ಬಳಿ ಇರುವ, ಚೂಪು ತುದಿಯ ಬ್ಲೇಡ್ ಸೌಲಭ್ಯ ಕೂಡ ನನಗಿಲ್ಲ. ನನ್ನ ಬಳಿಯ ಬಾಕು.. ನನ್ನ ಬಳಿಯ ಸುತ್ತಿಗೆ ಕೂಡ ಯಾವುದೋ… ಪ್ಲಾಸ್ಟಿಕ್ ಹಗ್ಗದಲ್ಲಿ ಹೊಲಿಗೆ ಹಾಕಿ, ಶರೀರವನ್ನು ಒಟ್ಟು ಮಾಡಿ ಕೊಡುವ ಕೆಲಸ ಮಹಾ ಸ್ವಾಮಿ, ನನ್ನದು”.

ಕೇಳುತ್ತಿದ್ದ ಚಕ್ರವರ್ತಿ ಅವರ ಹೃದಯದಲ್ಲಿ ಕೂಡ ಸಣ್ಣ ಕಂಪನ! ‌ ಕಣ್ಣೀರು ಬಸಿದು ಹೋಗುತ್ತಿತ್ತು ಶಿವಪ್ಪನ ಕಣ್ಣಿನಿಂದ.

“ಪ್ರತಿ ಬಾರಿ ಹೆಣದ ಮುಂದೆ ಕುಳಿತಾಗ… ನನಗೆ ಕಾಣಿಸುವುದು ನನ್ನ ಮಗ, ನನ್ನ ಮಗಳು. ಸತ್ತು ಹೋದ ಹುಡುಗ, ಬದುಕಿ ಇದ್ದರೆ?!! ಎಂಬ ಭಾವನೆ ಮಹಾ ಸ್ವಾಮಿ.”

“ಈಜಲು ಹೋಗಿ ಮುಳುಗಿ ಮರಣಿಸಿದ ಮಗುವನ್ನು ಕತ್ತರಿಸುವಾಗ… ನಾನು ಮತ್ತಷ್ಟು ಹಿಂಸೆ ಕೊಡುತ್ತಿದ್ದೇನೆ, ಎಂಬ ಸಂಕಟ ಸ್ವಾಮಿ… ಅಲ್ಲಿ ನನಗೆ ಕಾಣಿಸುವುದು ಶವ ಅಲ್ಲ, ನನಗೆ ಕಾಣಿಸುವುದು ಅವರ ಮುಂದಿನ ಬದುಕು! ಅದಕ್ಕಾಗಿಯೇ ಈ ಕೆಲಸ ಮಾಡಲು ‘ಮನಸು’ ಎಂಬುದು ಇರಬಾರದು ಮಹಾ ಸ್ವಾಮಿ…” ಎಂದಿದ್ದ, ಶಿವಪ್ಪ.

ಎಲ್ಲವೂ ಸತ್ಯವಿತ್ತು – ಆತನ ಮಾತಿನಲ್ಲಿ .

“ಮನೆಗೆ ಹೋದರೆ, ಅದೆಷ್ಟೇ ಸ್ನಾನ ಮಾಡಿದರೂ ಕೂಡ ಹೋಗದ ಈ ನನ್ನ ಕೆಲಸದ ವಾಸನೆ! ರಾತ್ರಿ ಮಲಗಿದರೂ ಕೂಡ, ಕಣ್ಣು ಮುಂದೆ ನಿಲ್ಲುವ ಶವದ ಮುಖಗಳು…”
ಹೇಳುತ್ತಲೇ ಇದ್ದ, ಆತ. ಇಷ್ಟು ವರ್ಷ ತನ್ನ ಹೊಟ್ಟೆಯೊಳಗೆ ಘನೀಕೃತವಾಗಿದ್ದ ಸಂಕಟ, ಎದ್ದು ಹೊರಗೆ ಬರುತ್ತಿತ್ತು ಅವನಿಗೆ!

“ಅದಕ್ಕೆ ಸ್ವಾಮಿ, ಮನಸನ್ನು ಕೊಲೆ ಮಾಡಲು ನಾನು ಕುಡಿದು ಹೋಗುತ್ತಿದ್ದೆ … ಶವಾಗಾರಕ್ಕೆ. ನಾನು ಏನು ಮಾಡುತ್ತಿದ್ದೇನೆ? ಯಾವ ಮುಖ ಅದು? ಎಂಬುದು ಕೂಡ ತಿಳಿಯಬಾರದು ನನಗೆ? ಅದಕ್ಕಾಗಿ ನಾನು ಕುಡಿದು ಹೋಗುತ್ತಿದ್ದೆ. ಕಣ್ಣು ಮಸುಕಾಗಿ, ಮನಸ್ಸು ಎಂಬುದೇ ಸತ್ತು ಹೋಗಬೇಕೆಂದು…‌ ಕುಡಿಯುತ್ತೇನೆ ಮಹಾ ಸ್ವಾಮಿ.”

“ನಾನು ನೂರು ರೂಪಾಯಿ ಪಡೆದಿದ್ದು ನಿಜ ಸ್ವಾಮಿ. ಆವತ್ತು ಗಂಡನಿಂದ ಸುಟ್ಟು ಹೋದ, ತುಂಬಿದ ಬಸುರಿಯ ಹೆಣವನ್ನು ನಾನು ಕೊಯ್ದು ಹಾಕಬೇಕಿತ್ತು. ಅವಳ ಹೊಟ್ಟೆಯಲ್ಲಿ ಇದ್ದ ಮಗುವನ್ನು… ಅಳತೆ ಮಾಡಬೇಕಿತ್ತು”.

“ಕುಡಿಯಲು ದುಡ್ಡು ಇರಲಿಲ್ಲ ನನ್ನ ಬಳಿ… ಅದಕ್ಕಾಗಿ ಆವತ್ತು ಕೇಳಿದೆ ಸ್ವಾಮಿ…” ಎಂದು ಕೈ ಜೋಡಿಸಿ ನಿಂತು ಬಿಟ್ಟಿದ್ದ.

“ಆದರೆ ಅವರ ದುಡ್ಡಿಗೆ…‌ ನಾನೇ ಸ್ಮಶಾನದಲ್ಲಿ ಗುಂಡಿ ಹೊಡೆದು ಕೊಟ್ಟೆ. ಅದೆಷ್ಟು ಚಿತ್ರಹಿಂಸೆ ಪಟ್ಟು ಹೆಣವಾಗಿ ಹೋಗಿದ್ದಳೋ, ಆಕೆ…’ ಒತ್ತಿ ಬಂದ ದುಃಖದಿಂದ ಅವನ ದ್ವನಿ ಕಟ್ಟಿ ಬರುತಿತ್ತು!

ವಾದ ಮಾಡಲು ಬಂದ ಸರಕಾರಿ ವಕೀಲ, ಮೇಲೆ ಕುಳಿತಿದ್ದ ಚಕ್ರವರ್ತಿ ಸಾಹೇಬರಿಗೆ ಕೂಡ ಕಣ್ಣು ಮಂಜಾದ ಹೊತ್ತು ಅದು.

“ದಯಮಾಡಿ ನನ್ನನ್ನು ಕೆಲಸದಿಂದ ತೆಗೆದು ಬಿಡಿ… ಈ ಹೆಣ ಕೊಯ್ದು, ಅದನ್ನು ಮತ್ತೆ ಜೋಡಿಸುವ ಕೆಲಸದಿಂದ ನನಗೆ ಮುಕ್ತಿ ಕೊಡಿಸಿ ಬಿಡಿ ಮಹಾ ಸ್ವಾಮಿ “ಎಂದು ಕೈ ಜೋಡಿಸಿ ಗೋಳೋ… ಎಂದು ಅತ್ತಿದ್ದ .

“ಅತ್ಯಾಚಾರ ಮಾಡಿ, ಕೊಲೆ ಮಾಡಿ ಹೋದ ಆಕೆಯ ಶವವನ್ನು… ನಾನೇ ಮತ್ತೊಮ್ಮೆ ಆಕೆಯನ್ನು ನಗ್ನ ಮಾಡಿ …ಅದೆಷ್ಟು ‘ಹಾನಿ’ ಆಗಿದೆ ಎಂದು ಹೇಳಬೇಕು, ಆಕೆಯ ಪ್ರತಿ ಅಂಗವನ್ನು ಮತ್ತೊಮ್ಮೆ ಕತ್ತರಿಸಿ!”.

“ಆಗ ನೆನಪು ಆಗುವವಳು… ನನ್ನ ಮಗಳು. ಮನೆಯಿಂದ ಹೊರಗೆ ಹೋಗುವಾಗ ಅಪ್ಪ-ಅಮ್ಮನಿಗೆ ಕೈ ಬೀಸಿ ಶಾಲೆಗೆ ಹೋಗುವ ಹೆಣ್ಣು ಮಕ್ಕಳು. ಆದರೆ, ಅದೇ ಅತ್ಯಾಚಾರಿಗಳಿಗೆ ತಲೆ ಸರಿ ಇರಲಿಲ್ಲವೆಂದೂ, ಅದಕ್ಕಾಗಿ ಅವರಿಗೆ ಜಾಮೀನು ಕೊಡಬೇಕೆಂದೂ ಜಾಮೀನು ಕೂಡ ಕೊಡಿಸಿ ಬಿಟ್ಟರು… ಇಲ್ಲಿ ಕುಳಿತವರು”.

ಜಿಲ್ಲಾಧಿಕಾರಿಗಳಿಗೆ, ಒಬ್ಬ ಸರಕಾರಿ ‘ಡಿ’ ದರ್ಜೆ ನೌಕರನ ನೋವು ತಿಳಿದ ದಿನ ಅದು. ಮುಂದೆ ಇದ್ದ ಯಾರಿಗೂ ಕೂಡ, ತಮ್ಮ ಕಣ್ಣಲ್ಲಿ ತುಂಬಿದ ನೀರು ಕಾಣಿಸಬಾರದು… ಎಂದು ಮುಖವನ್ನು ತಿರುಗಿಸಿ ಬಿಟ್ಟಿದ್ದರು – ಗಾಳಿ ಬರುತ್ತಿದ್ದ ಕಿಟಕಿಯ ಕಡೆಗೆ.

ಇವತ್ತು ತಾನು ಬರೆಯುವ ಒಂದೇ ವಾಕ್ಯ, ಅವನ ಮೂವತ್ತು ವರ್ಷದ ಸೇವೆ, ಸೇವೆಯ ನಂತರ ಬರುವ ಕೆಲ ಸವಲತ್ತು… ಎಲ್ಲವೂ ನಿಂತು ಹೋಗುತ್ತದೆ, ಎಂದು ಜಿಲ್ಲಾಧಿಕಾರಿ ಚಕ್ರವರ್ತಿಗಳಿಗೆ ತಿಳಿದಿತ್ತು.

ನಿರ್ಧಾರ ತೆಗೆದುಕೊಳ್ಳುವ ಸಮಯ ಹತ್ತಿರ ಬಂದಿತ್ತು . ಆಗ ನುಡಿದಿದರು ಅವರು…
“ವೈದ್ಯಾಧಿಕಾರಿ, ಮತ್ತು ಇಲ್ಲಿ ಇರುವ ಪೋಲಿಸ್ ಇನ್ಸಪೆಕ್ಟರ್ ಮೇಲೆ ಕೂಡ, ಕೆಲ ಆರೋಪ ಇದೆ ಅಲ್ಲವೇ? ಆಫ್ ದಿ ರೆಕಾರ್ಡ್ ಇದು” ಎಂದು ಹೇಳಿದರು.

ಆಗ ತಲೆ ತಗ್ಗಿಸಿ ಕುಳಿತು ಬಿಟ್ಟರು… ಬಂದಿದ್ದ ತಾಲೂಕಿನ ಮುಖ್ಯ ವೈದ್ಯಾಧಿಕಾರಿ ಮತ್ತು ಇನ್ಸಪೆಕ್ಟರ್.

“ವಾಪಸ್ ಪಡೆದು ಬಿಡಿ ಕೇಸ್. ‌ ಎಲ್ಲಾ ಪ್ರಕ್ರಿಯೆ ಇನ್ನೊಂದು ಗಂಟೆಯಲ್ಲಿ ಆಗಬೇಕು” ಎಂದು ಒಳಗೆ ನಡೆದಿದ್ದರು!

ಒಳಗೆ ಹೋಗುವಾಗ ಅವರ ದೃಷ್ಟಿ, ಶಿವಪ್ಪನ ಮೇಲೆ ಇತ್ತು . ಆವತ್ತು ಅವರ ಮನಸ್ಸಿಗೂ ಒಂದು ತೃಪ್ತಿ .

‘ಲಂಚ’ ಎಂಬುದು ದೊಡ್ಡ ಆರೋಪ ಆದರೂ… ಅದನ್ನು ಒಪ್ಪಿ ಹೇಳಿ ಬಿಟ್ಟಿದ್ದ, ಅದು ಯಾಕೆಂದು! ನಿರಪರಾಧಿ ಅಲ್ಲದೇ ಇದ್ದರೂ, ಆತ ಅಪರಾಧಿ ಅಲ್ಲವೆಂದು ನ್ಯಾಯಾಧೀಶರಿಗೆ ಅನಿಸಿದ ದಿನ ಅದು.

ಅದೆಷ್ಟು ಕ್ರೂರ ಜಗತ್ತು? ಆತನ ಪ್ರತಿ ಮಾತು, ನೋವು ಎಲ್ಲವೂ ನಿಜ ಎಂದು ಅನಿಸಿದ್ದು ಆವಾಗಲೇ… ಅವರಿಗೆ!

ಕೃಪೆ – ವಾಟ್ಸಪ್

Leave a Reply

Your email address will not be published. Required fields are marked *