ಪೊಲೀಸ್ ವರ್ಗಾವಣೆಗೆ ಶಿಫಾರಸು ಪತ್ರ ನೀಡಿದ್ದಕ್ಕೆ ಸಿದ್ದರಾಮಯ್ಯ ಸೇರಿ ಇಪ್ಪತ್ತ್ನಾಲ್ಕು ಶಾಸಕರಿಗೆ ಹೈಕೋರ್ಟ್ ನೋಟಿಸ್

ಪೊಲೀಸ್ ವರ್ಗಾವಣೆಯನ್ನು ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿಯೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ 2006 ರಲ್ಲಿ ತೀರ್ಪು ನೀಡಿತ್ತು. ಆದರೂ ಶಾಸಕರು ಹಾಗೂ ಸಂಸದರ ಶಿಫಾರಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು .ಆದರೆ ಈಗ ಕರ್ನಾಟಕ ಪೊಲೀಸ್ ಮಹಾ ಸಂಘ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 24 ಶಾಸಕರುಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ .
ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ವಿವಿಧ ಹುದ್ದೆಗಳ ಪೊಲೀಸರನ್ನು ವರ್ಗಾವಣೆ ಮಾಡಲು ಕೆಲ ಸಂಸದರು ಹಾಗೂ ಶಾಸಕರು ಶಿಫಾರಸು ಪತ್ರ ನೀಡಿರುವುದನ್ನು ದಾಖಲೆ ಸಹಿತ ಹೈಕೋರ್ಟ್ಗೆ ಸಲ್ಲಿಸಿದ್ದು, ಇವರುಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ಕೋರಿದೆ .
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಅಕ್ರಮವಾಗಿ ಶಿಫಾರಸು ಪತ್ರ ನೀಡಿದ ರಾಜ್ಯದ 24 ಜನಪ್ರತಿನಿಧಿಗಳ ವಿರುದ್ಧ ಎಸ್ಐಟಿ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಅರ್ಜಿಯನ್ನು ವಿಭಾಗೀಯ ಪೀಠವು ವಿಚಾರಣೆ ನಡೆಸಿತು .

ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಆರ್ ನರೇಂದ್ರ, ಬಿ ನಾಗೇಂದ್ರ, ಶಾಮನೂರು ಶಿವಶಂಕರಪ್ಪ, ಎನ್.ಎ. ಹ್ಯಾರಿಸ್, ಡಾ ಯತೀಂದ್ರ, ಬಿ.ಎಸ್ ಸುರೇಶ್, ಅನಿಲ್ ಚಿಕ್ಕಮಾದು, ಅಖಂಡ ಶ್ರೀನಿವಾಸ ಮೂರ್ತಿ, ಎಸ್.ಎನ್ ಸುಬ್ಬಾರೆಡ್ಡಿ, ಬಿ. ಕೆ. ಸಂಗಮೇಶ್ವರ, ಸುರೇಶ್ ಗೌಡ, ವಿ ಮುನಿಯಪ್ಪ, ಎಂ ಕೃಷ್ಣಪ್ಪ, ಬಿ ಶಿವಣ್ಣ, ಖನಿಜ್ಹ್ ಫಾತಿಮಾ, ಸಂಸದ ಡಾ ಉಮೇಶ ಜಾಧವ್, ಮಾಜಿ ಶಾಸಕ ಸಂತೋಷ್ ಲಾಡ್ ಮತ್ತು ಸದ್ಯ ಅನರ್ಹಗೊಂಡಿರುವ ರೋಷನ್ ಬೇಗ್ ಡಾ.ಕೆ. ಸುಧಾಕರ್ ಹಾಗೂ ಮುನಿರತ್ನ ಅವರಿಗೆ ನ್ಯಾಯಪೀಠ ನೋಟಿಸ್ ಜಾರಿಗೊಳಿಸಿದೆ .ವಿಚಾರಣೆಯನ್ನು ಸೆಪ್ಟೆಂಬರ್ 24 ಕ್ಕೆ ಮುಂದೂಡಲಾಗಿದೆ.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿಯೇ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ 2006 ರಲ್ಲಿ ತೀರ್ಪು ನೀಡಿದೆ .ಆದರೂ ಶಾಸಕರು ಸಂಸದರ ಶಿಫಾರಸ್ಸಿನ ಮೇರೆಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ದೋಸ್ತಿ ಸರ್ಕಾರದಲ್ಲಿ ನಿಯಮ ಬಾಹಿರವಾಗಿ ಶಿಫಾರಸು ಮಾಡಿದ 24 ಜನಪ್ರತಿನಿಧಿಗಳ ವಿರುದ್ಧ 2019ರ ಜನವರಿ 12 ರಂದು ಸ್ಪೀಕರ್ ಗೆ ದೂರು ನೀಡಲಾಗಿದೆ. ಆ ದೂರಿನನ್ವಯ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಸ್ಐಟಿ ತನಿಖೆಗೆ ನಿರ್ದೇಶಿಸಬೇಕು ಪೊಲೀಸ್ ಸಿಬ್ಬಂದಿ ನೇಮಕಾತಿ ಮಂಡಳಿ ಮೂಲಕವೇ ಅಧಿಕಾರಿಗಳ ವರ್ಗಾವಣೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ .

Leave a Reply

Your email address will not be published. Required fields are marked *