ಪುಟ್ಟ ಪೊಟ್ಟಣದಲ್ಲಿ ಕೂಡಿಟ್ಟ ಹಣವನ್ನು ನೇರವಾಗಿ ಪೋಸ್ಟ್ ಮಾಸ್ಟರ್ ಕೈಲಿಟ್ಟು ಆಕೆ ಹೇಳಿದ್ದೇನು ಗೊತ್ತೆ…?

ಕರೋನಾ.. ಕರೋನಾ… ಕರೋನಾ…. ಟಿವಿ ಹಾಕಿದರೂ, ಪೇಪರ್ ಹಿಡಿದರೂ, ಮನೆಯ ಒಳಗೂ, ಮನೆಯಿಂದ ಹೊರಗೂ ಎಲ್ಲೆಲ್ಲಿ ಹೋದರೂ ಸದ್ಯಕ್ಕೆ ಕೇಳಿಬರುವ ಏಕೈಕ ಪದ, ಈ ಕರೋನಾ. ಸತತ ಒಂದು ವರ್ಷದಿಂದ ಈ ಕರೋನಾ ಜನತೆಯನ್ನು ಕಾಡುತ್ತಿದೆ. ಅದರಲ್ಲೂ ಈಗ ಎರಡು ತಿಂಗಳಿಂದ ಕರೋನಾದ ಅಟ್ಟಹಾಸ ಮಿತಿಮೀರಿದೆ. ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ. ಆಕ್ಸಿಜನ ಕೊರತೆ ಕಾಡುತ್ತಿದೆ. ಜನತೆ ಆಸ್ಪತ್ರೆಯ ಬಿಲ್ ಕಟ್ಟಲು ದುಡ್ಡಿಲ್ಲದೆ ತತ್ವಾರ ಪಡುತ್ತಿದ್ದಾರೆ. ಅಷ್ಟಕ್ಕೂ ಮೀರಿ ಸತ್ತವರ ಹೆಣ ಸುಡಲು ದುಡ್ಡಿಲ್ಲದೆ, ತನ್ನ ಕರಿಮಣಿಯನ್ನು ಸಾಲಕ್ಕೆ ಇಟ್ಟ ಮಹಿಳೆಯರು ಇದ್ದಾರೆ. ಬಡವ-ಬಲ್ಲಿದನೆಂಬ ಭೇದ ನೋಡದೆ, ಮೇಲ್ಜಾತಿ-ಕೆಳಜಾತಿ ಎಂಬ ಜಾತಿ ರಾಜಕಾರಣ ಮಾಡದೆ, ಎಲ್ಲರನ್ನೂ ಏಕ ತಕ್ಕಡಿಯಲ್ಲಿ ಹಾಕಿ ತೂಗಿದ ಕರೋನಾಕೆ ಬಲಿಯಾದವರು ಅದೆಷ್ಟೋ ಮಂದಿ. ಇನ್ನು ಕೆಲಸ ಕಳೆದುಕೊಂಡು ಜೀವಂತ ಬಲಿಯಾದವರು ಮತ್ತೆಷ್ಟೋ ಮಂದಿ.

ಪ್ರತಿ ಸಂಕಷ್ಟಕ್ಕೂ ಸರಕಾರವನ್ನು ದೂಷಿಸುತ್ತಾ ನಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ನಮಗೆಲ್ಲ ಅಭ್ಯಾಸವೇ ಆಗಿಹೋಗಿದೆ. ಭಾರತದಂತಹ ಅಧಿಕ ಜನಸಂಖ್ಯೆ ಹೊಂದಿದ ದೇಶದಲ್ಲಿ ಈ ಮಟ್ಟಿಗಿನ ಸೌಲಭ್ಯ ಮತ್ತು ಸುರಕ್ಷತೆ ಕಾಪಾಡಿಕೊಳ್ಳಲು ದೇಶವೇ ಹೆಣಗಾಡುತ್ತಿದೆ. ಪರಿಸ್ಥಿತಿ ಇಂತಿರುವಾಗ ನಾವು ಸಹಾಯ ಮಾಡುವುದು ಬದಿಗಿರಲಿ, ಸಹಾಯ ‌ಮಾಡುತ್ತಿರುವವರಿಗೂ ಬೇಸರ ಹುಟ್ಟಿಸುವಂತೆ ನಡೆದುಕೊಳ್ಳುತ್ತಿದ್ದೇವೆ. ವೈದ್ಯ ಲೋಕದ ಬಗೆಗೆ, ಮಾಧ್ಯಮ ಮಿತ್ರರ ಬಗೆಗೆ ಅಪಪ್ರಚಾರದ ಮಳೆ ಹರಿಸುತ್ತಿದ್ದೇವೆ. ರಾಜಕೀಯ ವ್ಯಕ್ತಿಗಳಂತೂ ಈ ಮಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಬಿಡಿ. ಇನ್ನು ಇದೇ ಸಂದರ್ಭ ಎಂದುಕೊಂಡು ಮಾತನಾಡುವ ಒಂದಷ್ಟು ಮಂದಿಯೂ ಹುಟ್ಟಿಕೊಂಡಿದ್ದಾರೆ. ತಮಗನಿಸಿದ್ದು, ಗೊತ್ತಿದ್ದು, ಗೊತ್ತಿಲ್ಲದ್ದು ಹೀಗೆ ಎಲ್ಲವನ್ನೂ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ತಮ್ಮ ಕೆಲಸ ಮುಗಿಯಿತೆಂಬಂತೆ ಫೋಸು ಕೊಡುತ್ತಿದ್ದಾರೆ

ಯಾಕೋ ನೋಡಿದರೆ ಕರೋನಾ ಮುಖಕ್ಕೆ ಬಟ್ಟೆಯ ಮುಖವಾಡ ಹಾಕಿಸಿ, ಮನುಷ್ಯನೊಳಗಿನ ನೈಜ್ಯ ಮುಖವಾಡವನ್ನು ಹೊರಗೆ ಎಳೆಯುತ್ತಿದೆಯೇನೋ ಎನಿಸುತ್ತಿದೆ! ದಿನಕ್ಕೊಂದು ಅಲ್ಲಲ್ಲಾ… ಕ್ಷಣಕ್ಕೊಂದು ವಿಡಿಯೋಗಳು ಬಂದು ಈ ಅನಕ್ಷರಸ್ಥರ ಜೊತೆಗೆ ಅಕ್ಷರಸ್ಥರನ್ನೂ ಹಾದಿ ತಪ್ಪಿಸುತ್ತಿರುವುದನ್ನು ಕಂಡಾಗ ಯಾರಿಗೆ ಹೇಳೋಣ ನಮ್ಮ ಸಮಸ್ಯೆ ಅನ್ನಿಸುತ್ತಿರುವುದು ಸತ್ಯ.

ಹೌದೂ… ನಿಮ್ಮ ಅನಿಸಿಕೆ ನಿಜ! ‘ಜನಮಿಡಿತ’ ಇಂದು ಅಂತಹ ಒಬ್ಬ ಮಹನೀಯರನ್ನು ನಿಮಗೂ ಪರಿಚಯಿಸಲು ಹೊರಟಿದೆ. ಲಕ್ಷ ಲಕ್ಷ ಕೊಟ್ಟವರಿಗೆ ಮಾತ್ರ ನೀಡುವ ಪ್ರಚಾರದ ಒಂದಂಶದಷ್ಟು ಇಂಥವರಿಗೆ ನೀಡುವುದಿಲ್ಲ ನಮ್ಮ ಮಾಧ್ಯಮಗಳು. ಲಕ್ಷ ಲಕ್ಷ ಕೊಟ್ಟವರಷ್ಟೇ ದಾನಿಗಳಲ್ಲ! ಇರುವ ಅಲ್ಪ ಹಣದಲ್ಲೇ ಕೊಡುಗೆಯನ್ನು ನೀಡುವ ಇಂಥವರೇ ನಿಜವಾದ ದಾನಿಗಳು. ಇವರುಗಳು ಜನಸಾಮಾನ್ಯರಿಗೂ ಆದರ್ಶಪ್ರಾಯರು. ಇಂತಹ ಒಬ್ಬರಿಂದ ಕೆಲವು ಜನರಾದರೂ ಪ್ರೇರಣೆ ಪಡೆದರೆ ‘ಜನಮಿಡಿತದ’ ಇಂತಹ ಬರಹಗಳು ಸಾರ್ಥಕ.

ಇವರ ಹೆಸರು ಪದ್ಮಾವತಮ್ಮ ಜಿ. ಇವರದ್ದು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಖಂಡಿಕಾ ಎಂಬ ಪ್ರದೇಶ. ಇವರ ಪತಿ ದಿವಂಗತ ಗಣಪತಿ ಭಟ್ಟರು, ಅಂದಿನ ಕಾಲಕ್ಕೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಜೈಲುವಾಸವನ್ನು ಅನುಭವಿಸಿದವರು. ಮೊನ್ನೆಯಷ್ಟೇ ಈ ಮಹಾತಾಯಿ ತಮ್ಮ ಮನೆಯ ಹತ್ತಿರದ ಅಂಚೆ ಕಚೇರಿಗೆ ತೆರಳಿ, ಅಲ್ಲಿನ ಅಧಿಕಾರಿಗಳಲ್ಲಿ ಕರೋನಾ ಪೀಡಿತರಿಗೆ ಸಹಾಯ ಮಾಡಬೇಕು ಎಂದಿದ್ದೇನೆ ಸಾಧ್ಯವೇ ಎಂದು ಸಂಕೋಚದಿಂದಲೇ ವಿಚಾರಿಸಿದ್ದಾರೆ. ಆಗ ಆ ಅಧಿಕಾರಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಅಂಚೆ ಇಲಾಖೆಗೆ ಯಾವ ಕಮಿಷನ್ ಅನ್ನು ನೀಡದೆ ಹಣ ಕಳುಹಿಸಲು ತಮ್ಮ ವ್ಯವಸ್ಥೆಯಲ್ಲಿ ಸಾಧ್ಯ ಎಂದು ತಿಳಿಸಿದ್ದಾರೆ.

ಕೂಡಲೇ ಈ ತಾಯಿ ತಾನು ಕೂಡಿಟ್ಟ ಸ್ವಲ್ಪ ಹಣ ತಂದಿರುವುದಾಗಿಯೂ, ಅದನ್ನು ಪರಿಹಾರ ನಿಧಿಗೆ ಕಳುಹಿಸಬೇಕಾಗಿ ವಿನಂತಿಸಿ, ಒಂದು ಪೊಟ್ಟಣವನ್ನು ಅಧಿಕಾರಿಗಳ ಕೈಗಿತ್ತರು. ಆ ಪಟ್ಟಣದಲ್ಲಿ ಮುದುರಿದ, ಮಡಿಕೆಗಳಾದ ಹಣ ಒಂದಷ್ಟು ಇತ್ತು. ಎಲ್ಲವನ್ನು ಹೊರತೆಗೆದು ಸರಿಯಾಗಿ ಬಿಡಿಸಿ ಬಿಡಿಸಿ ಎಣಿಸಿ ನೋಡಿದರು. ಅದರಲ್ಲಿ 2800 ರೂಪಾಯಿಗಳಷ್ಟು ಹಣವಿರುವುದು ಕಂಡು ಬಂತು. ಆ ತಾಯಿ ತನ್ನ ಆಪತ್ತಿನ ಕಾಲಕ್ಕೆ ಎಂದು ಜೋಪಾನವಾಗಿ ತೆಗೆದಿರಿಸಿದ್ದರು ಈ ಹಣವನ್ನು. ಇಂದು ದೇಶಕ್ಕೆ ಆಪತ್ತು ಬಂದಾಗ ತನ್ನ ಆಪತ್ತನ್ನು ಮರೆತು ಸಹಾಯಕ್ಕೆ ಮುಂದಾದರು. ಅವರ ಅಂತಃಕರಣಕ್ಕೆ, ಸಹಾಯ ಮಾಡಬೇಕು ಎಂಬ ಉದಾತ್ತ ಗುಣಕ್ಕೆ ಮನದಲ್ಲೇ ವಂದಿಸಿದ ಅಧಿಕಾರಿ ಅವರನ್ನು ಅಭಿನಂದಿಸಿದರು ಹಾಗೂ ಈ ಹಣವನ್ನು ಸ್ವೀಕರಿಸಲು ಅವರು ಎದ್ದು ನಿಂತರು ಕೂಡ. ಗೌರವಪೂರ್ವಕವಾಗಿ ಅವರಿಂದ ಹಣವನ್ನೂ ಸ್ವೀಕರಿಸಿದರು ಹಾಗೂ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿಕೊಟ್ಟರು. ಕಡೆಗೆ ಈ ಅಧಿಕಾರಿಯೇ ಇದನ್ನು ತಮ್ಮ ವಾಟ್ಸಾಪ್ ಬಳಗದಲ್ಲಿ ಹಂಚಿಕೊಂಡರು ಕೂಡ. ಈಗ ಆ ಮಹಿಳೆಯ ಈ ಚಿಕ್ಕ ಸಹಾಯ ಎಲ್ಲೆಡೆ ಹರಿದಾಡಿ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.

ಸರಕಾರವನ್ನು ಬಯ್ಯುತ್ತಾ, ಆಸ್ಪತ್ರೆಯವರನ್ನು, ವೈದ್ಯಲೋಕ, ಮಾಧ್ಯಮ ಲೋಕ ಹೀಗೆ ಸಿಕ್ಕಸಿಕ್ಕವರ ಬಗ್ಗೆ ಅಪಪ್ರಚಾರ ಮಾಡುತ್ತಾ, ಲಿಂಬೆ ತಿನ್ನಿ.. ಕಾಳು ಮೆಣಸು ಕುಡಿರಿ.. ಶುಂಠಿ ಅಗಿಯಿರಿ.. ಎಂದು ತಮ್ಮದೇ ಬುರುಡೆ ಬಿಡುತ್ತಾ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವವರು ಸ್ವಲ್ಪ ಇಂತಹ ಉತ್ತಮ ಕಾರ್ಯಗಳ ಕಡೆಗೂ ಗಮನ ಹರಿಸಿದಾಗ ಇದರಿಂದ ನಾಲ್ಕು ಜನರಿಗೆ ಪ್ರೇರಣೆ ದೊರಕಬಹುದು ಎಂಬುದು ನಮ್ಮ ಕಾಳಜಿ. ಇಂಥವರ ಸಂತತಿ ಸಾವಿರವಾಗಲಿ ಎಂದು “ಜನಮಿಡಿತವು” ಆಶಿಸುತ್ತದೆ ಹಾಗೂ ಶಿವಮೊಗ್ಗ ಜಿಲ್ಲೆಯ ಪದ್ಮಾವತಮ್ಮನವರನ್ನು ಹೃದಯದುಂಬಿ ಅಭಿನಂದಿಸುತ್ತದೆ.

One thought on “ಪುಟ್ಟ ಪೊಟ್ಟಣದಲ್ಲಿ ಕೂಡಿಟ್ಟ ಹಣವನ್ನು ನೇರವಾಗಿ ಪೋಸ್ಟ್ ಮಾಸ್ಟರ್ ಕೈಲಿಟ್ಟು ಆಕೆ ಹೇಳಿದ್ದೇನು ಗೊತ್ತೆ…?

  • April 30, 2021 at 4:21 am
    Permalink

    ಪದ್ಮಾವತಮ್ಮನವರ ಅಂತಃಕರಣ, ಸಹಾನುಭೂತಿ, ಇಳಿವಯಸ್ಸಿನಲ್ಲೂ ದೇಶವಾಸಿಗಳ ಬಗ್ಗೆ ಇರುವ ಇವರ ಕಾಳಜಿ ನಿಜಕ್ಕೂ ಪ್ರಶಂಸಾರ್ಹ. ಇತರರಿಗೆ ಸ್ಪೂರ್ತಿದಾಯಕ. ಅಮ್ಮ ನಿಮಗೊಂದು ಸಲಾ ಮ್.

    Reply

Leave a Reply

Your email address will not be published. Required fields are marked *