ಪಶ್ಚಿಮ ಘಟ್ಟದಲ್ಲಿ ಆಗುತ್ತಿರುವ ಬದಲಾವಣೆಯಿಂದ ಜೀವ ವೈವಿಧ್ಯಕ್ಕೆ ಆಪತ್ತು…
ಮೈ ತುಂಬ ಹಸಿರನ್ನು ಹೊದ್ದು, ಸಸ್ಯ ಶ್ಯಾಮಲೆಯಂತೆ ಕಂಗೊಳಿಸುವ ಪಶ್ಚಿಮ ಘಟ್ಟಗಳ ಸೊಬಗನ್ನು ಸವಿಯದವರು ಯಾರು? ಭಾರತ ಜಂಬೂದ್ವೀಪದ ಪಶ್ಚಿಮಕ್ಕಿರುವ ಸಹ್ಯಾದ್ರಿ ಶ್ರೇಣಿಗಳ ಸೌಂದರ್ಯಕ್ಕೆ ಮನಸೋಲದವರೇ ಇಲ್ಲವೆಂದರೂ ತಪ್ಪಾಗಲಿಕ್ಕಿಲ್ಲ. ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಉದ್ದಕ್ಕೂ ಸುಮಾರು 1900 ಕಿ. ಮೀ. ಹಬ್ಬಿ ನಿಂತಿದೆ ಈ ವನಸಿರಿ. ಕೃಷ್ಣೆ, ಕಾವೇರಿ, ಗೋದಾವರಿಯಂತಹ ಅತಿ ಸಂಕೀರ್ಣ ನದಿ ವ್ಯವಸ್ಥೆಯ ಜೊತೆಗೆ ವಿವಿಧ ತಳಿಯ ಸಸ್ಯ ಸಂಕುಲ, ಪ್ರಾಣಿ ಸಂಕುಲಗಳ ನೆಲೆಯಾಗಿದೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಸರಿಸುಮಾರು 325 ತಳಿಯ ಜೀವಿಗಳು ಪಶ್ಚಿಮ ಘಟ್ಟ ಪ್ರದೇಶವೊಂದರಲ್ಲೇ ನೆಲೆಸಿದೆ.
ಮಿತ್ರರೇ, ಇಂದು ಪಶ್ಚಿಮ ಘಟ್ಟದ ಬಗೆಗೆ ಹೇಳುತ್ತಿರುವುದಕ್ಕೆ ಕಾರಣವೇನಿರಬಹುದು ಎಂಬ ಪ್ರಶ್ನೆಯೇ? ನಿಜ, ಇಂತಹ ಅದ್ಭುತ ಪ್ರಾಕೃತಿಕ ಸೌಂದರ್ಯದ ನಿಧಿ ಇಂದು ಅಪಾಯದ ಅಂಚಿನಲ್ಲಿದೆ! ನಮ್ಮ ಈ ಪಶ್ಚಿಮ ಘಟ್ಟಗಳು ತೀರ ಇತ್ತೀಚಿನ ನಾಲ್ಕು ವರ್ಷಗಳಲ್ಲಿ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ! ನಿಜಕ್ಕೂ ಇದು ಆತಂಕಕಾರಿ ಬೆಳವಣಿಗೆ. ಈ ರೀತಿಯ ಬದಲಾವಣೆ ಹವಾಮಾನ ವೈಪರೀತ್ಯದ ಜೊತೆಗೆ ಭಾರತದ ಅರ್ಧದಷ್ಟು ಭೂ ಪ್ರದೇಶದಲ್ಲಿನ ಮಳೆ, ಗಾಳಿಯ ವ್ಯತ್ಯಾಸಕ್ಕೆ ಕಾರಣವಾಗಿದೆ. ಅರಬ್ಬಿ ಸಮುದ್ರದಲ್ಲಿ ಹಬ್ಬುವ ದಟ್ಟ ಮೋಡಗಳನ್ನು ನಿಯಂತ್ರಿಸುವ ಮೂಲಕ ಭಾರತದಲ್ಲಿ ಹೆಚ್ಚಿನ ಭೂಭಾಗವನ್ನು ಪ್ರವಾಹದಂತಹ ಪ್ರಾಕೃತಿಕ ವೈಪರೀತ್ಯದಿಂದ ಕಾಪಾಡುತ್ತಿರುವುದೇ ಸಹ್ಯಾದ್ರಿ ಸಾಲುಗಳು.
ಆದರೆ, ಇಂದು ಅತಿ ವೇಗದಲ್ಲಿ ಆಗುತ್ತಿರುವ ಬೆಳವಣಿಗೆ ಪಶ್ಚಿಮ ಘಟ್ಟಗಳಿಗೆ ಮಾರಕವಾಗಿದೆ. ಅರಣ್ಯ ಭಾಗವನ್ನು ಕಡಿದು ಕೃಷಿ ಭೂಮಿಯಾಗಿ ಪರಿವರ್ತನೆ, ನೀರಾವರಿ ಕಾಮಗಾರಿ, ರಸ್ತೆ ಅಗಲೀಕರಣದಂತಹ ಕಾಮಗಾರಿಗಳ ಜೊತೆಗೆ ಆಧುನೀಕರಣದ ಹೊಡೆತದಿಂದಾಗಿ ಪಶ್ಚಿಮ ಘಟ್ಟಗಳು ನಿಧಾನವಾಗಿ ಕರಗುತ್ತಿದೆ. ಇಲ್ಲಿನ ಹಸಿರು ಕಣ್ಮರೆಯಾಗುವ ಜೊತೆಗೆ ಪ್ರಾಣಿ ಹಾಗೂ ಅಪರೂಪದ ಗಿಡಮೂಲಿಕೆಗಳು ನಾಶದ ಅಂಚಿಗೆ ತಲುಪುತ್ತಿದೆ. ಇದನ್ನೆಲ್ಲ ಕಂಡೂ.. ಸರಕಾರ ಇವುಗಳ ಮರುಹುಟ್ಟಿಗೆ ಯಾವುದೇ ಕ್ರಮಕೈಗೊಳ್ಳದೇ ವರ್ಷದಿಂದ ವರ್ಷಕ್ಕೆ ಜಾರಿಕೊಳ್ಳುತ್ತಿರುವುದು ಮಾತ್ರ ವಿಷಾಧನೀಯ.
ಹಾಗಾದರೆ ಈ ಪಶ್ಚಿಮ ಘಟ್ಟಗಳ ಉಳಿವಿಗಾಗಿ ಸರಕಾರ ಏನು ಕ್ರಮ ಕೈಗೊಂಡಿಲ್ಲವೆ? ಎಂಬ ಪ್ರಶ್ನೆ ಎದುರಾದರೆ.. ನಿಜ ಸರಕಾರ ಜನರ ಕಣ್ಣೊರೆಸುವ ನಿಟ್ಟಿನಲ್ಲಿ ‘ಮಾಧವ ಗಾಡ್ಗಿಲ್ ವರದಿ’ ಹಾಗೂ ‘ಕಸ್ತೂರಿ ರಂಗನ್ ವರದಿ’ ತಯಾರಿಸಿದೆ. ಈ ಎರಡೂ ವರದಿಗಳು ಹೇಳುತ್ತಿರುವುದೇನು? ಈ ಎರಡೂ ವರದಿಗಳು ಜಾರಿಗೊಳ್ಳದೆ ಕೇವಲ ವರದಿಯಾಗಿ ಉಳಿದಿರಲು ಕಾರಣವೇನು? ಎಂಬುದು ಬೇಕಲ್ಲವೆ. ಬನ್ನಿ… ನನಗೆ ತಿಳಿದ ಮಟ್ಟಿಗೆ ಎರಡೂ ವರದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡುವೆ.
ಮಾಧವ ಗಾಡ್ಗೀಲ್ ವರದಿ :
ಕೇಂದ್ರ ಸರಕಾರ ಪಶ್ಚಿಮ ಘಟ್ಟಗಳ ರಕ್ಷಣೆಯ ಸದುದ್ದೇಶದಿಂದ ಪರಿಸರ ತಜ್ಞ ‘ಮಾಧವ ಗಾಡ್ಗೀಲ್’ ರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ವರದಿ ಸಲ್ಲಿಸಲು ಸೂಚಿಸಿತು. ಅವರು 31 ಅಗೋಸ್ಟ್ 2011ರಲ್ಲಿ ಸರಕಾರಕ್ಕೆ ತಮ್ಮ ಸವಿಸ್ತಾರವಾದ ವರದಿಯನ್ನು ನೀಡಿದರು. ಆ ವರದಿಯನುಸಾರ… ಪಶ್ಚಿಮ ಘಟ್ಟದ ಶೇ. 94 ರಿಂದ 97 ಭಾಗವನ್ನು ‘ಸೂಕ್ಷ್ಮ ಪ್ರದೇಶ’ ಎಂದು ಪರಿಗಣಿಸಬೇಕು. ಅಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಅಲ್ಲಿನ ಜೀವವೈವಿಧ್ಯವನ್ನು ಕೆಡಿಸದಿರುವ ಷರತ್ತಿನ ಮೇರೆಗೆ ಅಭಿವೃದ್ಧಿಗೆ ಅನುಮತಿ ನೀಡಬೇಕು ಎಂದು ಶಿಫಾರಸು ಮಾಡಿದೆ.
ಆದರೆ, ನಂತರದ ದಿನಗಳಲ್ಲಿ ಈ ಗಾಡ್ಗಿಲ್ ವರದಿಯು ತೀವ್ರವಾಗಿ ಟೀಕೆಗೆ ಗುರಿಯಾಯಿತು. ಟೀಕೆಗೆ, ವರದಿಯು ಅತಿ ಹೆಚ್ಚು ಪರಿಸರಸ್ನೇಹಿ ಮತ್ತು ಪ್ರಾಕೃತಿಕ ಸಂಪತ್ತಿನ ಕಾಳಜಿ ಹೊಂದಿತ್ತು ಎಂಬುದು ಒಂದು ಕಾರಣವಾದರೆ, ವರದಿಯು ವಾಸತ್ವ ನೆಲೆಗಳ ಬಗ್ಗೆ ಗಮನ ಹರಿಸಲು ವಿಫಲವಾಯಿತು ಎಂಬುದು ಇನ್ನೊಂದು ಕಾರಣ. ಗಾಡ್ಗಿಲ್ ವರದಿಯ ಈ ಎಲ್ಲಾ ಕುಂದು ಕೊರತೆಯನ್ನು ನೀಗಿಸಲು ಹುಟ್ಟಿಕೊಂದದ್ದೇ… ಕಸ್ತೂರಿ ರಂಗನ್ ಸಮಿತಿ.
ಕಸ್ತೂರಿ ರಂಗನ್ ಸಮಿತಿ ವರದಿ :
‘ಡಾ. ಕೃಷ್ಣ ಸ್ವಾಮಿ ಕಸ್ತೂರಿ ರಂಗನ್’ ನೇತೃತ್ವದಲ್ಲಿ ಇತರ 10 ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ, ವರದಿಯನ್ನು ಸಲ್ಲಿಸಲು ತಿಳಿಸಲಾಯಿತು. ಈ ಸಮಿತಿಯು 15 ಏಪ್ರಿಲ್ 2013 ರಲ್ಲಿ ತನ್ನ ವಿಸ್ತೃತವಾದ ವರದಿಯನ್ನು ಸರಕಾರದ ಮುಂದಿರಿಸಿತು. ಈ ವರದಿಯು ತಿಳಿಸುವ ಪ್ರಕಾರ… ಪಶ್ಚಿಮ ಘಟ್ಟದ ಶೇ.36.49 ಭಾಗವನ್ನು ‘ಇಕೋ ಸೆನ್ಸಿಟಿವ್ ಏರಿಯಾ’ ಎಂದು ಗುರುತಿಸಿತು. ಈ ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್, ಪವನ ವಿದ್ಯುತ್ ಯೋಜನೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಎಲ್ಲಾ ರೀತಿಯ ಗಣಿಗಾರಿಕೆ ಮುಂದಿನ ಐದು ವರ್ಷ ಮುಗಿಯುತ್ತಿದ್ದಂತೆ ಸ್ಥಗಿತಗೊಳಿಸಬೇಕು. 20,000 ಚ. ಮೀ. ಗಿಂತ ದೊಡ್ಡದಾದ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.
ಕಸ್ತೂರಿ ರಂಗನ್ ವರದಿ ಅನುಷ್ಠಾನಗೊಂಡರೆ ರಾಜ್ಯ ಸರಕಾರ ತನ್ನ ಹತೋಟಿ ಕಳೆದುಕೊಂಡು ಕೇಂದ್ರ ಸರಕಾರದ ಸುಪರ್ದಿಗೆ ಪಶ್ಚಿಮ ಘಟ್ಟಗಳನ್ನು ನೀಡಬೇಕಾಗುತ್ತದೆ. ಒಂದು ಬಾರಿ ಇದು ಭಾರಿ ಸೂಕ್ಷ್ಮವಲಯ ಎಂದು ಘೋಷಣೆ ಮಾಡಿದರೆ… ಮುಂದೆ ಯಾವುದೇ ರೀತಿಯ ಚಟುವಟಿಕೆಯನ್ನು ಈ ಪ್ರದೇಶಗಳಲ್ಲಿ ನಡೆಸುವಂತಿಲ್ಲ. ಇಲ್ಲಿನ ಅಪರೂಪದ ಪ್ರಾಣಿ-ಪಕ್ಷಿಗಳು, ಗಿಡಮೂಲಿಕೆಗಳು, ವನ್ಯಜೀವಿಗಳ ಸಂರಕ್ಷಣೆಗಾಗಿ ಕೇಂದ್ರ ಸರಕಾರ ತನ್ನ ಕ್ರಮ ಕೈಗೊಳ್ಳುತ್ತದೆ. ಜೊತೆಗೆ ದಶಕಗಳಿಂದ ಇದ್ದ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಇತ್ಯಾದಿ ಹಲವಾರು ಪರಿಣಾಮಗಳನ್ನು ಈ ವರದಿಯು ಕೂಡ ಎದುರಿಸಬೇಕಾಯಿತು.
ಕಸ್ತೂರಿ ರಂಗನ್ ವರದಿಯ ಮೇಲೂ ಪರ ಮತ್ತು ವಿರೋಧ ವಾದಗಳು ಕೇಳಿಬಂದವು. ಇದನ್ನು ಸಿದ್ಧಪಡಿಸುವಾಗ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲಿಲ್ಲ, ಜೊತೆಗೆ ಇದು ಸಂಪೂರ್ಣ ವಿದೇಶಿ ಸಂಸ್ಥೆ ಪ್ರಾಯೋಜಿತ ವರದಿ. ಇದು ಅನುಷ್ಠಾನಗೊಂಡರೆ ಪರಿಸರ ರಕ್ಷಣೆ ಅಸಾಧ್ಯ ಎಂಬ ಕೂಗೆದ್ದಿತು. ಹಾಗಾಗಿ ಈ ಎರಡೂ ವರದಿಗಳನ್ನು ಸಂಪೂರ್ಣವಾಗಿ ವಿರೋಧಿಸಿ, ಪ್ರಸ್ತುತ ಇರುವ ವಿವಿಧ ಕಾನೂನುಗಳ ಮೂಲಕವೇ ಪಶ್ಚಿಮ ಘಟ್ಟಗಳ ರಕ್ಷಣೆ ಮಾಡಬೇಕು ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಯಿತು. ಇದರ ಜೊತೆಗೆ ರಾಜ್ಯ ಸರಕಾರ ಪಶ್ಚಿಮ ಘಟ್ಟಗಳನ್ನು ಜೀವ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಮಾಡಿದರೆ… ಅಲ್ಲಿನ ಲಕ್ಷಾಂತರ ಜನರಿಗೆ ಸಮಸ್ಯೆಯಾಗುತ್ತದೆ, ಅವರನ್ನು ಒಕ್ಕಲೆಬ್ಬಿಸಬೇಕಾಗುತ್ತದೆ ಎಂಬ ಕಾರಣ ನೀಡಿ ವರದಿಯ ಜಾರಿಯನ್ನು ಮುಂದೂಡುತ್ತಾ ಬಂದಿತು.
ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಘಟ್ಟದಲ್ಲಿನ ಅರಣ್ಯ ಪ್ರದೇಶವನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದಾಗಿ ಭೂ ಕುಸಿತದ ಪ್ರಮಾಣ ಹೆಚ್ಚುತ್ತಿದೆ. ಅರಣ್ಯ ಭಾಗ ಕಣ್ಮರೆಯಾಗುತ್ತಿರುವುದುರಿಂದ ಅಲ್ಲಿನ ತಾಪಮಾನ ಹೆಚ್ಚುತ್ತಿದೆ. ಈ ಕಾರಣದಿಂದಾಗಿ ಬೇಸಿಗೆಯಲ್ಲಿ ಮರಗಳು ಒಣಗಿದರೆ… ಪ್ರಾಣಿ-ಪಕ್ಷಿಗಳು ನೀರಿಲ್ಲದೆ ನಿತ್ರಾಣಗೊಳ್ಳುವ ಸ್ಥಿತಿಗೆ ತಲುಪಿವೆ. ಇನ್ನು ಈ ಜಲವಿದ್ಯುತ್ ಯೋಜನೆ, ಶಿಶಿಲ – ಭೈರಾಪುರ ರಸ್ತೆ, ಶೃಂಗೇರಿ ರೈಲು ಮಾರ್ಗ ಮುಂತಾದ ಯೋಜನೆಗಳು ಜಾರಿಗೊಂಡದ್ದೇ ಆದರೆ ಪರಿಸ್ಥಿತಿ ಇನ್ನಷ್ಟು ಕರಾಳವಾಗಲಿದೆ.
ಈ ವರ್ಷ ಇದಾಗಲೇ ಪಶ್ಚಿಮ ಘಟ್ಟ ಪ್ರದೇಶದಲ್ಲಿನ ತಾಪಮಾನದಲ್ಲಿನ ಹೆಚ್ಚಳ ಕಂಡುಬಂದಿದೆ. ಚಾರಣಕ್ಕೆ ಯೋಗ್ಯವಾದ ಈ ಪ್ರದೇಶದ ಒಳಹೊಕ್ಕಂತೆ ನಡು ಮಧ್ಯಾಹ್ನದಲ್ಲಿಯೂ ಹಿತವಾದ ತಂಪಿನ ಅನುಭವವಾಗುತ್ತಿತ್ತು. ಆದರೆ, ಇಂದು 30 ರಿಂದ 32 ಡಿಗ್ರಿ ಸೆಲ್ಸಿಯಸ್ ನ ಆಸುಪಾಸಿನಲ್ಲಿ ತಾಪಮಾನದ ದಾಖಲಾಗುತ್ತಿದೆ. ಹೀಗೆ ಮುಂದುವರಿದಲ್ಲಿ ಈ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಅರಣ್ಯದ ನಡು ಪ್ರದೇಶಗಳಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗುವ ಭೀತಿ ಎದುರಾಗಲಿದೆ. ಇದರಿಂದ ನದಿಯ ನೀರಿನ ಹರಿವು ಕಡಿಮೆಯಾಗುತ್ತದೆ. ಹುಲ್ಲುಗಾವಲು ಪ್ರದೇಶ ಹಾಗೂ ಮರ-ಗಿಡಗಳು ಒಣಗಿ ಹೋಗುತ್ತದೆ. ಇದರಿಂದ ಕಾಡ್ಗಿಚ್ಚಿನಂತಹ ಆಪಾಯ ಎದುರಾಗುವ ಸಾಧ್ಯತೆ ಅಧಿಕ. ಹೀಗಾದಾಗ, ಜೀವಸಂಕುಲದ ಜೊತೆಗೆ ಸಸ್ಯಸಂಕುಲ ತೊಂದರೆಗೊಳಗಾಗುತ್ತದೆ. ಪ್ರಾಣಿಗಳು ಆಹಾರ ಹುಡುಕುತ್ತ ನಾಡಿನ ಕಡೆಗೂ ದಾಳಿ ಮಾಡಬಹುದು. ಒಟ್ಟಾರೆ ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನಾದರೂ ಜನಸಾಮಾನ್ಯರು ಎಚ್ಚೆತ್ತಕೊಳ್ಳಬೇಕಿದೆ. ಸರಕಾರ, ಜನಪ್ರತಿನಿಧಿಗಳು ತಮ್ಮ ವೋಟ್ ಬ್ಯಾಂಕ್ ನ ಹಿತಾಸಕ್ತಿಯನ್ನು ಬದಿಗೊತ್ತಿ ನೈಜ ಕಳಕಳಿಯಿಂದ ಪಶ್ಚಿಮ ಘಟ್ಟವನ್ನು ರಕ್ಷಿಸುವಲ್ಲಿ ಮನ ಮಾಡಬೇಕಿದೆ.
-ಸುಮಾ ಕಿರಣ್.