‘ಪದ್ಮಶ್ರೀ’ ಹಲ್ದಾರ್ ನಾಗ್ ಬಗ್ಗೆ ನಮಗೆಷ್ಟು ಗೊತ್ತು?

ಮಿತ್ರರೇ, ನೀವು “ಹಲ್ದಾರ್ ನಾಗ್” ಎಂಬ ಕವಿಯ ಹೆಸರನ್ನು ಕೇಳಿರಬಹುದು. ಇವರು 2016 ರಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ದೇಶದ ಅತ್ಯುನ್ನತ ಬಿರುದುಗಳಲ್ಲಿ ಒಂದಾದ “ಪದ್ಮಶ್ರೀ” ಯನ್ನು ಪಡೆದಿರುವ ನೆನಪು ನಿಮಗೆ ಇರಬಹುದು. ಆದರೆ, ಪ್ರಶಸ್ತಿ ಸ್ವೀಕರಿಸುವಾಗ ಜರುಗಿದ ರೋಚಕ ಕತೆ ಮಾತ್ರ ನಮ್ಮಲ್ಲಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಬನ್ನಿ ಆ ಕಥೆಯನ್ನೊಮ್ಮೆ ಕೇಳಿ ಬರೋಣ.

>ನಾಗ್ ಅವರಿಗೆ ಪ್ರಶಸ್ತಿ ಬಂದ ಸಂದರ್ಭದಲ್ಲಿ… ಅದನ್ನು ಪಡೆದುಕೊಳ್ಳಲು ದೆಹಲಿಗೆ ಹೋಗಲು ಬೇಕಾದಷ್ಟು ಹಣವಾಗಲಿ, ಸರಿಯಾದ ಮಾರ್ಗದ ತಿಳುವಳಿಕೆಯಾಗಲಿ ನಾಗ್ ಅವರಿಗೆ ಇರಲಿಲ್ಲ. ಇದನ್ನೆಲ್ಲಾ ತಿಳಿದ ಒರಿಸ್ಸ ಸರಕಾರ ನಾಗ್ ಅವರಿಗೆ ದೆಹಲಿಗೆ ತೆರಳುವ ವ್ಯವಸ್ಥೆ ಮಾಡುತ್ತದೆ. ದೆಹಲಿಗೆ ವಿಮಾನದಲ್ಲಿ ಬಂದಿಳಿವ ನಾಗ್ ಅವರನ್ನು ಸ್ವಾಗತಿಸಲು ದೆಹಲಿಯ ವಿಮಾನ ನಿಲ್ದಾಣದಲ್ಲೂ ವ್ಯವಸ್ಥೆಯನ್ನು ಮಾಡಲಾಗಿತ್ತು.
ಆದರೆ, ದೆಹಲಿಗೆ ಬಂದಿಳಿದ ನಾಗ್ ಅವರನ್ನು ಗುರುತಿಸಲು ವಿಮಾನ ನಿಲ್ದಾಣಕ್ಕೆ ಬಂದವರಿಂದ ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ನಾಗ್ ಅವರ ತೀರ ಸರಳವಾದ ವೇಷ-ಭೂಷಣ. ಕೊನೆಗೆ ಕಾದು ಸಾಕಾದ ನಾಗ್ ಅವರೇ ಒಂದು ಆಟೋವನ್ನು ಹಿಡುದು ಪ್ರಶಸ್ತಿ ವಿಜೇತರಿಗಾಗಿ ಸರಕಾರ ಮೀಸಲಾಗಿರಿಸಿದ ದೆಹಲಿಯ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ… ಅಶೋಕಕ್ಕೆ ತೆರಳಿದರು.

ಅಶೋಕ ಹೋಟೆಲಿನ ಗೇಟ್ ಮುಂದೆ ತೀರಾ ಸರಳ ಉಡುಗೆಯ, ಕಾಲಿಗೆ ಚಪ್ಪಲಿಯನ್ನೂ ಧರಿಸದ, ಕೈಯಲ್ಲಿ ಸಣ್ಣ ಚೀಲವೊಂದನ್ನು ಹಿಡಿದು ನಿಂತ ವ್ಯಕ್ತಿಯನ್ನು ಕಂಡು ಕಾವಲುಗಾರ ಒಳಗೆ ಬರದಂತೆ ತಡೆಯುತ್ತಾನೆ. ನಾಗ್ ಅವರು ತಮಗೆ ಬರುತ್ತಿದ್ದ ಅರೆ-ಬರೆ ಹಿಂದಿಯಲ್ಲೇ ಪರಿಪರಿಯಾಗಿ ವಿವರಿಸಿದರೂ… ಕಾವಲುಗಾರ ನಂಬಲಿಲ್ಲ.

ಕಪ್ಪು ವರ್ಣದ, ಪಂಚೆ-ಬನಿಯನ್ನು, ಅದರ ಮೇಲೊಂದು ಶಾಲನ್ನು ಧರಿಸಿ… ತೀರಾ ವಿಚಿತ್ರ ಉಡುಗೆಯಲ್ಲಿ ಅಶಿಕ್ಷಿತನಂತೆ ಕಾಣುತ್ತಿದ್ದ ನಾಗ್ ಅವರನ್ನು ನಂಬಲು ಕಾವಲುಗಾರ ಸಿದ್ಧನಿರಲಿಲ್ಲ. ಸಿರಿಮಂತರಿಗಾಗಿ ಮೀಸಲಾಗಿದ್ದ ಅದ್ದೂರಿಯಾದ ಅಶೋಕದಂತಹ ಹೋಟೆಲುಗಳಲ್ಲಿ, ಇಂತಹ ತೀರ ಸಾಮಾನ್ಯ ಉಡುಗೆ ತೊಡುಗೆಯ ವ್ಯಕ್ತಿಯನ್ನು ಕಂಡಾಗ ಅವನನ್ನು ನಂಬಲು ಕಾವಲುಗಾರ ಸುತಾರಾಂ ಒಪ್ಪಲಿಲ್ಲ. ಹೋಟೆಲಿನಲ್ಲಿ ಕೆಲಸವನ್ನು ಕೇಳಿಕೊಂಡು ಬಂದಿರಬೇಕು ಎಂದು ಕಾವಲುಗಾರ ಭಾವಿಸಿದ. ಹಾಗಾಗಿ ನಾಗ್ ಅವರನ್ನು ಗದರಿಸಲು ಪ್ರಾರಂಭಿಸಿದ.

ನಾಗ್ ಅವರು ಹಲವು ಬಾರಿ ತಾವು ಗೆಸ್ಟ್ ಎಂಬುದನ್ನು ತಿಳಿಸಿದಾಗ… ಅನುಮಾನಗೊಂಡ ಕಾವಲುಗಾರ ಕೊನೆಗೆ ಅವರ ಬಳಿ ಇದ್ದ ಐಡಿ ತೋರಿಸಲು ಕೇಳುತ್ತಾನೆ. ಆಗ ನಾಗ್ ಅವರು ತಮ್ಮ ಆಧಾರ್ ಕಾರ್ಡ್ ಅನ್ನು ತೆಗೆದು ತೋರಿಸುತ್ತಾರೆ. ಇವರ ಈ ಗಲಭೆಯ ನಡುವೆಯೇ ಆಗಮಿಸುತ್ತಿದ್ದ ವಿವಿಐಪಿ ಕಾರಿಗಾಗಿ ರಸ್ತೆಯನ್ನು ತೆರವುಗೊಳಿಸಲು ಕಾವಲುಗಾರರು ತೊಡಗುತ್ತಾರೆ.

ಆಗ ಕಾವಲುಗಾರರು ನಾಗ್ ಅವರನ್ನು ಪಕ್ಕಕ್ಕೆ ಸರಿದು ನಿಲ್ಲುವಂತೆ ಕೇಳುತ್ತಾರೆ. ಇದರಿಂದ ಬೇಸರಗೊಂಡ ನಾಗ್, ಇನ್ನು ಇಲ್ಲಿ ನಿಂತು ಉಪಯೋಗವಿಲ್ಲ ಎಂದು ಹತಾಶೆಯಿಂದ ಅಲ್ಲಿಂದ ಹೊರಡಲು ಸಿದ್ಧರಾಗುತ್ತಾರೆ.

ವಿವಿಐಪಿ ವಾಹನದಿಂದ ಇಳಿದ ವ್ಯಕ್ತಿ, ನಾಗ್ ಅವರು ತೆರಳುವುದನ್ನು ಗಮನಿಸಿ “ಸರ್” ಎಂದು ಕೂಗುತ್ತಾರೆ. ಹೀಗೆ ಕೂಗಿದವರು ಒರಿಸ್ಸಾದ ಐ ಎ ಎಸ್ ಅಧಿಕಾರಿಯಾಗಿದ್ದಂತಹ ಅರವಿಂದ್. ಹೋಟೆಲ್ ಗೆ ತಂಗಲು ಬಂದಿದ್ದ ಅರವಿಂದ್ ಅವರು ಗೇಟಿನ ಮುಂದೆ ನಡೆಯುತ್ತಿದ್ದುದ್ದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಹಾಗಾಗಿ ಹೊರಡುತ್ತಿದ್ದ ನಾಗ್ ಅವರನ್ನು ತಡೆದು ನಿಲ್ಲಿಸಿದರು.

ನಂತರ ಕಾವಲುಗಾರರನ್ನು ತರಾಟೆಗೆ ತೆಗೆದುಕೊಂಡ ಅರವಿಂದ್ ಅವರು, ಗೆಸ್ಟ್ ಗಳ ಲಿಸ್ಟ್ ಅನ್ನು ಪರಿಶೀಲಿಸಲು ತಿಳಿಸಿದರು. ಹಾಗೆಯೇ “ಸರಿಯಾಗಿ ವಿಚಾರಿಸದೆ ಯಾರನ್ನೂ ಅವಮಾನಿಸಬಾರದು. ಸೂಟು-ಬೂಟು ಹಾಕಿ ದುಬಾರಿ ಬೆಲೆಯ ಕಾರಿನಲ್ಲಿ ಬರುವವರಿಗೆ ಮಾತ್ರ ತಲೆಬಾಗುತ್ತೀರಾ? ಅಷ್ಟಕ್ಕೂ ನೀವಿಲ್ಲಿ ಬೈಯುತ್ತಿರುವುದು ಕೇಂದ್ರ ಸರಕಾರ ನಾಳೆ ಪದ್ಮಶ್ರೀ ಪ್ರಶಸ್ತಿ ಕೊಡಲು ಕರೆಸಿಕೊಂಡಿರುವ ಒರಿಸ್ಸಾದ ಖ್ಯಾತ ಕವಿಗಳಾದ ಹಲ್ದಾರ್ ನಾಗ್ ಅವರನ್ನು” ಎಂದು ತಿಳಿಸುವ ಜೊತೆಗೆ ಅವರಲ್ಲಿ ಕ್ಷಮೆ ಯಾಚಿಸುವಂತೆಯೂ ಸೂಚಿಸಿದರು.

ಸ್ವಲ್ಪ ಹೊತ್ತಿಗೆ ಮುಂಚೆ ಹಳ್ಳಿಯ ಗಮಾರ ಎಂದು ಭಾವಿಸಿದ ವ್ಯಕ್ತಿ ಖ್ಯಾತ ಕವಿ ಎಂದು ತಿಳಿದು ಕಾವಲುಗಾರರಿಗೆ ನಾಚಿಕೆಯಾಗುತ್ತದೆ. ಕಾವಲುಗಾರರು ನಾಗ್ ಅವರ ಬಳಿಯಲ್ಲಿ ಮನಃಪೂರ್ವಕವಾಗಿ ಕ್ಷಮೆ ಕೋರುತ್ತಾರೆ. ತಮಗೆ ಸೆಲ್ಯೂಟ್ ಹೊಡೆದು ನಿಂತ ಕಾವಲುಗಾರರನ್ನು ನೋಡುತ್ತ ನಾಗ್ ಅವರು, ಅರವಿಂದರ ಬಳಿಯಲ್ಲಿ “ಪರವಾಗಿಲ್ಲ ಬಿಡಿ ಸರ್ ಅವರಿಗೆ ನನ್ನ ಗುರುತು ಸಿಗಲಿಲ್ಲ. ಇದರಲ್ಲಿ ಅವರ ತಪ್ಪೇನಿದೆ?” ಎಂದು ನಕ್ಕುಬಿಟ್ಟರು.

ಮಿತ್ರರೇ ನಾವು ಯಾರನ್ನೇ ಆಗಲಿ ವೇಷಭೂಷಣಗಳಿಂದ ಅಳೆಯುವುದು ತಪ್ಪು. ಅದಕ್ಕೆಂದೇ ಇಂಗ್ಲಿಷ್ನಲ್ಲಿ ಮಾತೊಂದಿದೆ “ಡೋಂಟ್ ಜಡ್ಜ್ ಎ ಬುಕ್ ಬೈ ಇಟ್ಸ್ ಕವರ್.” ಹಾಗಾಗಿ ಪ್ರತಿಯೊಬ್ಬರನ್ನೂ ಗೌರವದಿಂದ ಕಾಣುವ ಮನಸ್ಥಿತಿಯನ್ನು ಬೆಳಸಿಕೊಳ್ಳೋಣ.

Leave a Reply

Your email address will not be published. Required fields are marked *