ನೀರಿನ ಕಂದಾಯ; ನಾಗರೀಕರ ಪ್ರಶ್ನೆಗಳಿಗೆ ಉತ್ತರಿಸಲು ತತ್ತರಿಸಿದರು ಪಾಲಿಕೆ ನೌಕರರು

ಮನೆ ಕಂದಾಯ ಹಾಗೂ ನೀರಿನ ಕಂದಾಯವನ್ನು ನಾಗರೀಕರಿಂದ ಸಂಗ್ರಹಿಸಲು ಸಂಬಂಧಿಸಿದ ಮಹಾನಗರ ಪಾಲಿಕೆಯವರು ವಸೂಲಾತಿ ಆಂದೋಲನಗಳನ್ನು ಅಲ್ಲಲ್ಲಿ ನಡೆಸುವುದು ಸಾಮಾನ್ಯ. ಈ ಕ್ರಮ ಸ್ವಾಗತಾರ್ಹವೂ ಹೌದು. ಆಯಾ ಭಾಗದ ಜನ ಪಾಲಿಕೆಯವರೆಗೂ ತೆರಳಿ ತೆರಿಗೆ ಕಟ್ಟಲು ಸಮಯಾವಕಾಶ ಇಲ್ಲದಿದ್ದಾಗ ತಮ್ಮ ಮನೆ ಸಮೀಪವೇ ನಡೆಯುವ ಇಂಥ ಕಂದಾಯ ವಸೂಲಾತಿ ಕಾರ್ಯದಲ್ಲಿ ಸುಲಭವಾಗಿ ಪಾಲ್ಗೊಂಡು ಕಂದಾಯ ಪಾವತಿಸುತ್ತಾರೆ.

ಇಂಥ ಕಂದಾಯ ವಸೂಲಾತಿ ಆಂದೋಲನ ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ಇಂದು ನಡೆಯುತ್ತಿತ್ತು. ನಾನೂ ಸಹ ಮನೆಯ ನೀರಿನ ಕಂದಾಯ ಕಟ್ಟಲು ಮಹೇಶ್ ಪಿಯು ಕಾಲೇಜಿನ ಆವರಣಕ್ಕೆ ತೆರಳಿದೆ. ಅಲ್ಲಿ ಕೆಲ ನಾಗರೀಕರೂ ನೀರಿನ ಕಂದಾಯ ಸಂಗ್ರಹಿಸುತ್ತಿದ್ದ ಪಾಲಿಕೆ ನೌಕರರನ್ನು ಪ್ರಶ್ನಿಸುತ್ತಾ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ವಾಗ್ವಾದಕ್ಕಿಳಿದಿದ್ದರು.

ಅಲ್ಲಾ ಸ್ವಾಮಿ, ವರ್ಷದ ನೀರಿನ ಕಂದಾಯ ಕಟ್ಟಿಸಿಕೊಳ್ಳುತ್ತೀರಿ, ಆದರೆ ವಾರಕ್ಕೊಮ್ಮೆ ನೀರು ಬಿಡುತ್ತೀರಿ. ತಿಂಗಳಲ್ಲಿ ನಾಲ್ಕು ದಿನ ಅಂದರೆ ವರ್ಷಕ್ಕೆ 48 ದಿನ ನೀವು ಬಿಡುವ ನೀರಿಗೆ 365 ದಿನದ ಕಂದಾಯ ಕಟ್ಟಬೇಕೆ ಎಂದು ನಾಗರೀಕರೊಬ್ಬರು ಅಲ್ಲಿದ್ದ ಪಾಲಿಕೆ ನೌಕರರನ್ನು ಪ್ರಶ್ನಿಸಿದಾಗ ಅವರು ನಿರುತ್ತರರಾದರು. ಇನ್ನೂ ಪ್ರಶ್ನಿಸತೊಡಗಿದಾಗ, “ನಮ್ಮ ಹಿರಿಯ ಅಧಿಕಾರಿಗಳನ್ನೋ ಅಥವಾ ಪಾಲಿಕೆ ಸದಸ್ಯರನ್ನೋ ಪ್ರಶ್ನಿಸಿ” ಎಂದು ಕೈಚೆಲ್ಲಿದರು. ಕಂದಾಯ ಕಟ್ಟುವ ನಾಗರೀಕರ ಸಿಟ್ಟು ನೆತ್ತಿಗೇರಿತು. “ಹಾಗಾದರೆ ಈ ಭಾಗದ ಪಾಲಿಕೆ ಸದಸ್ಯರನ್ನು ಅಥವಾ ನೀವು ಹೇಳುತ್ತಿರುವ ಹಿರಿಯ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿ, ಅವರನ್ನೇ ಕೇಳುತ್ತೇವೆ” ಎಂದರು. ನಂತರ ಹೇಗೋ ಸಮಾಧಾನ ಮಾಡಿಕೊಂಡ ಅನೇಕರು ಏನು ಹೇಳಿದರೂ, ಏನು ಕೇಳಿದರೂ ಇವರ ಹಣೇಬರಹವೇ ಇಷ್ಟು ಎಂದು ಗೊಣಗುತ್ತಲೇ ಸುಂಕದವರ ಮುಂದೆ ಸುಖ ದುಃಖ ಹೇಳಿಕೊಳ್ಳಲಾದೀತೆ? ಎನ್ನುತ್ತ ಕಂದಾಯ ಕಟ್ಟತೊಡಗಿದರು. ಬಹುತೇಕರು ಸಂಬಂಧಿಸಿದವರನ್ನು ಪ್ರಶ್ನಿಸಿಯೇ ಕಂದಾಯ ಕಟ್ಟಿದರಾಯಿತು ಎಂದು ಹಾಗೇ ಹಿಂದಿರುಗಿದರು.

ಈ ಎಲ್ಲವನ್ನೂ ಸಾಕ್ಷೀಕರಿಸಿದ ಬಳಿಕ ನನಗೂ ಹಾಗೇ ಅನ್ನಿಸಿತು. ಕಂದಾಯ ವಸೂಲಾತಿ ಸಂದರ್ಭದಲ್ಲಿ ಆಯಾ ಭಾಗದ ಪಾಲಿಕೆ ಸದಸ್ಯರು ಅಥವಾ ಉತ್ತರಿಸಬಹುದಾದ ಅಧಿಕಾರಿಗಳು ಅಲ್ಲಿ ಹಾಜರಿರುವುದನ್ನು ಮತ್ತು ನಾಗರೀಕರ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಕಡ್ಡಾಯ ಮಾಡಬಾರದೇಕೆ? ಎಂದು.

ಹೇಗೆ ಕಟ್ಟುನಿಟ್ಟಾಗಿ ತೆರಿಗೆ ಸಂಗ್ರಹಿಸುತ್ತಾರೋ ಅಷ್ಟೇ ನಿಯತ್ತಾಗಿ ಸೇವೆ ನೀಡುವುದೂ ಸಹ ಸ್ಥಳೀಯ ಸಂಸ್ಥೆಗಳ ಕರ್ತವ್ಯ ತಾನೇ? ನಾವು ಎಷ್ಟು ಪ್ರಮಾಣದಲ್ಲಿ ವಿದ್ಯುತ್, ಗ್ಯಾಸ್, ದೂರವಾಣಿ ಮುಂತಾದವುಗಳನ್ನು ಉಪಯೋಗಿಸುತ್ತೇವೆಯೋ ಅಷ್ಟು ಪ್ರಮಾಣಕ್ಕೆ ಹಣ ನೀಡುತ್ತೇವೆ. ಆದರೆ ವರ್ಷದ 48 ದಿನ ಮಾತ್ರ ಪೂರೈಕೆಯಾಗುವ (ಅದು ಅಸಮರ್ಪಕ ರೀತಿ) ನೀರಿಗೆ 365 ದಿನಗಳ ಕಂದಾಯ ವಸೂಲು ಮಾಡುವುದು ನ್ಯಾಯವೇ?

ನಿಜ, ನ್ಯಾಯಾಲಯದಲ್ಲಿ ಈ ವಿಷಯವನ್ನು ಪ್ರಶ್ನಿಸಬಹುದು. ಎಲ್ಲಕ್ಕೂ ನ್ಯಾಯಾಲಯದ ಮೊರೆ ಹೋಗುವುದಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಔಚಿತ್ಯವಾದರೂ ಏನು?

One thought on “ನೀರಿನ ಕಂದಾಯ; ನಾಗರೀಕರ ಪ್ರಶ್ನೆಗಳಿಗೆ ಉತ್ತರಿಸಲು ತತ್ತರಿಸಿದರು ಪಾಲಿಕೆ ನೌಕರರು

  • February 1, 2018 at 12:56 pm
    Permalink

    It is a welcome move on the part of civilians, at the same time it is advsable to calculate tax on the basis of hours, bcause water is given for 3 to 4 hrs in some places & only one hr in other. Why this distinguition? Further they r collecting additional charges as UGD. It said towards underground charges. But it is incorporated in house taxes. I m not clear about it.

    Reply

Leave a Reply

Your email address will not be published. Required fields are marked *