ನಿಮಗೂ “ಹಾರ್ಟ್” ಇರೋದು ಗ್ಯಾರಂಟಿ ಆಯ್ತು; ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ಕಾಲೆಳೆದ ಈಶ್ವರಪ್ಪ
ಬೆಂಗಳೂರು, ಡಿ. 12- ರಾಜಕೀಯವೇ ಬೇರೆ, ವೈಯುಕ್ತಿಕ ಸ್ನೇಹವೇ ಬೇರೆ ಎಂಬುದು ಕೆಲವೊಮ್ಮೆ ಸಾಬೀತಾಗುತ್ತದೆ. ವೈಯುಕ್ತಿಕ ಕಷ್ಟಗಳ ಸಮಯದಲ್ಲಿ ರಾಜಕೀಯ ದ್ವೇಷ ದೂರಾಗಿ ನಾವು ನಿಮ್ಮೊಟ್ಟಿಗೆ ಇದ್ದೇವೆ ಎಂದು ಪರಸ್ಪರರು ಹೇಳಿಕೊಳ್ಳುವ ಸಂದರ್ಭ ಗಳನ್ನು ಕಂಡಿದ್ದೇವೆ ಇಂದು ಇಂಥದ್ದೊಂದು ಘಟನೆ ನಡೆಯಿತು.
ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿರುವ ಮಾಜಿ ಸಿಎಂ ಸಿದ್ದ ರಾಮಯ್ಯನವರನ್ನು ಸಿಎಂ ಬಿ. ಎಸ್. ಯಡಿಯೂರಪ್ಪ, ಸಚಿವ ಕೆ. ಎಸ್ ಈಶ್ವರಪ್ಪ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಹಾಸಿಗೆಯಲ್ಲಿದ್ದರೂ ಸಿದ್ರಮಯ್ಯರ ಕಾಲೆಳೆದು ಚಟಾಕಿ ಹಾರಿಸಿದ ಈಶ್ವರಪ್ಪ
ಭೇಟಿ ವೇಳೆ ಸಚಿವ ಕೆ. ಎಸ್ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದ್ದಾರೆ. ನಿಮಗೂ ಹಾರ್ಟ್ ಇರೋದು ಗ್ಯಾರಂಟಿ ಆಯ್ತು, ಎಂದು ಈಶ್ವರಪ್ಪ ನಗೆಚಟಾಕಿ ಹಾರಿಸಿದ್ದಾರೆ.
ಇದಕ್ಕೆ ನಗುತ್ತಲೇ ಉತ್ತರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ನಾನು ಹಾರ್ಟ್ ಇಲ್ಲ ಎಂದು ಯಾವತ್ತಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಯಾಗಿ ಮತ್ತೆ ಕಾಲೆಳೆದ ಈಶ್ವರಪ್ಪ, ಅಯ್ಯೋ ನಾನು ಯಾವತ್ತಾದ್ರೂ ಇಲ್ಲ ಅಂತ ಹೇಳಿದ್ದೀನಾ ಅಂತ ಹೇಳಿ ನಕ್ಕರು.
ನನ್ನ ಹಾಗೂ ಸಿದ್ದರಾಮಯ್ಯರನ್ನು ದೂರ ಮಾಡಲು ಸಾಧ್ಯವಿಲ್ಲ: ಈಶ್ವರಪ್ಪ
ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಬಾಂಧವ್ಯ ತುಂಬಾ ಚೆನ್ನಾಗಿದೆ. ನಾವು ಪಕ್ಷದ ವಿಚಾರದಲ್ಲಿ ಎಷ್ಟೇ ಹೊಡೆದಾಡಬಹುದು. ಆದರೆ, ಸ್ನೇಹದ ವಿಚಾರದಲ್ಲಿ ಮಾತ್ರ ನಮ್ಮನ್ನು ಯಾರೂ ದೂರ ಮಾಡಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಹೇಳಿದರು.
ಸಿದ್ದರಾಮಯ್ಯ ಅವರ ಅನಾರೋಗ್ಯದ ಹಿನ್ನಲೆಯಲ್ಲಿ ಮಾಜಿ ಸಿಎಂ ಅವರನ್ನು ಭೇಟಿಯಾದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಕಿತ್ತಾಡುವುದು ನೋಡಿ ಜೀವನ ಪರ್ಯಂತ ನಾವು ಮಾತೇ ಅಡುವುದಿಲ್ಲ ಅಂದುಕೊಳ್ತಾರೆ. ಆದರೆ, ಹಾಗಂದುಕೊಳ್ಳುವವರು ದಡ್ಡರು, ನಾವಿಬ್ಬರು ಬುದ್ಧಿವಂತರು ಎಂದು ಮುಗುಳ್ನಕ್ಕರು.
ನಾವಿಬ್ಬರೂ ವಿಧಾನ ಪರಿಷತ್ತ್ ನಲ್ಲಿ ಜೋರಾಗಿಯೇ ಜಗಳ ಆಡಿದ್ದೇವೆ ಆದರೆ, ನಾವು ಯಾವತ್ತೂ ಸ್ನೇಹದ ವಿಚಾರವಾಗಿ ದೂರವಾಗಿಲ್ಲ ಎಂದ ಅವರು, ನನ್ನ ಕತ್ತು ಸೀಳಿದರೂ ನಾನು ಬಿಜೆಪಿ ಪಕ್ಷ ಬಿಡಲ್ಲ. ನನ್ನ ಪಕ್ಷದ ವಿಚಾರಕ್ಕೆ ಬಂದರೆ ನಾನು ಸುಮ್ಮನಿರುವುದಿಲ್ಲ. ಹಾಗಂತ ನಾನೂ ಬೇರೆ ಪಕ್ಷದ ವಿಚಾರಕ್ಕೆ ಹೋಗುವುದಿಲ್ಲ ಎಂದು ನುಡಿದರು.
ಸಿದ್ದರಾಮಯ್ಯ ನನ್ನ ಜಗಳ ನೋಡಿ ಎಷ್ಟೋ ಸಲ ಸದನವನ್ನು ಮುಂದೂಡಿದರು. ಆದರೆ, ಸದನ ಮುಗಿದ ಬಳಿಕ ನಾವಿಬ್ಬರೂ ಒಟ್ಟಿಗೆ ಮಾತನಾಡುತ್ತಿದ್ದೆವು. ನಾನು ಡಿಸಿಎಂ ಆದ ವೇಳೆಯಲ್ಲಿ ಮಾಜಿ ಸಿಎಂ ನೋಟ್ ಕಳಿಸುತ್ತಿದ್ದರು, ಓಕೆ ಎಂದು ಸನ್ನೆ ಮಾಡುತ್ತಿದ್ದರು. ನಾನು ಅದಕ್ಕೆ ಸಹಿ ಹಾಕುತ್ತಿದ್ದೆ ಎಂದರು.
ಇನ್ನು ಸಿದ್ದರಾಮಯ್ಯ ಅವರು ಸಿಎಂ ಆದ ಸಂದರ್ಭದಲ್ಲಿಯೂ ನಾನು ಏನಾದರೂ ಕೆಲಸ ಕಳಿಸುತ್ತಿದ್ದೆ. ಅವರು ಕಣ್ಣಲ್ಲೇ ಓಕೆ ಎಂದು ಸಹಿ ಹಾಕುತ್ತಿದ್ದರು. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಜೊತೆಗೂ ನಾನು ಹೀಗೆ ಇದ್ದೇನೆ. ಆದರೆ, ದೇವೇಗೌಡರ ಹತ್ತಿರ ಜಾಸ್ತಿ ಹೋಗುವುದಿಲ್ಲ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ ಎಂದು ಬಿಜೆಪಿ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದರು.