ನಾ ಕಂಡ ದಾದಾ…

ಮಿತ್ರರೇ, ಅದು ನಾನು ಕಾಲೇಜಿಗೆ ಹೋಗುವ ದಿನಗಳು. ನಮ್ಮ ಮನೆಯಲ್ಲಿ ಅದಾಗತಾನೇ ಹೊಸದಾಗಿ ಟಿವಿಯನ್ನು ಖರೀದಿಸಿದ್ದೆವು. ಅಮ್ಮನೋ ಯಾವುದೋ ಕಾರ್ಯಕ್ರಮದ ನಿಮಿತ್ತ ತವರಿನತ್ತ ಪಯಣಿಸಿದರು. ಮನೆಯ ಸರ್ವಾಧಿಕಾರವು ನನ್ನದಾಗಿತ್ತು. ರಾತ್ರಿ ಟಿವಿಯ ಮುಂದೆ ಕುಳಿತಾಗ, ಮರುದಿನ ಬೆಳಗ್ಗೆ 10 ಗಂಟೆಗೆ ಉದಯ ಟಿವಿಯಲ್ಲಿ (ಆಗ ಬರುತ್ತಿದ್ದದ್ದು ಅತಿ ಕಡಿಮೆ ಚಾನಲ್ಗಳು) ಸಾಹಸಸಿಂಹನ “ಕರ್ಣ” ಚಿತ್ರ ಪ್ರದರ್ಶನವಾಗುವುದು ತಿಳಿದುಬಂತು.

ಅದು ಟಿವಿ ಬಂದ ಪ್ರಾರಂಭದ ದಿನಗಳಲ್ಲವೇ.. ಅಷ್ಟಾಗಿ ಟಿವಿಯ ಬಗ್ಗೆ ಆಕರ್ಷಣೆ ಏನು ಬೆಳೆದಿರಲಿಲ್ಲ. ಆದರೆ, ಈ ಚಿತ್ರ ಏಕೋ ಗಮನಸೆಳೆಯಿತು. ಸರಿ, ಮರುದಿನ ಬೆಳಗ್ಗೆ ತಮ್ಮಂದಿರನ್ನು ಶಾಲೆಗೆ ಕಳುಹಿಸಿದ್ದಾಯ್ತು. ಅಪ್ಪ ಶಾಲೆಗೆ ಹೊರಟವರು ನನ್ನತ್ತ ಪ್ರಶ್ನಾರ್ಥಕವಾಗಿ ನೋಡಿದರು. ಕಾಲೇಜಿಗೆ ಹೋಗುವ ಇರಾದೆ ಇಲ್ಲದೆ ನಿಂತ ನಾನು, ಅವರ ನೋಟವನ್ನು ಅರಿತು… ‘ಮೊದಲ ಎರಡು ಪೀರಿಯಡ್ ಇಲ್ಲ ಹನ್ನೊಂದು ಗಂಟೆ ನಂತರ ಹೋಗುವೆ’ ಎಂದು ಹೇಳಿದೆ. ಕಾಲೇಜ್ ಆದ್ದರಿಂದ ಇದೊಂದು ಸದುಪಯೋಗ ಇತ್ತು ಎನ್ನಿ. ಅವರೇನು ಮರು ಪ್ರಶ್ನಿಸದೆ ಹೊರಟರು.

ಹತ್ತು ಗಂಟೆ ಆಗುವುದನ್ನೇ ಕಾದು ಟಿವಿಗೆ ಜೀವಕೊಟ್ಟು ಕುಳಿತೆ. ‘ಕರ್ಣ’ ಚಿತ್ರದಲ್ಲಿನ “ದಾದಾ”ರ ಅಭಿನಯಕ್ಕೆ ಸೋತು, ಅಂದೇ ನಾನು ಅವರ ಅಭಿಮಾನಿಯಾದೆ. ಮುಂದೆ ಅವರ ಚಿತ್ರಗಳು ಪ್ರಸಾರವಾದಾಗಲೆಲ್ಲ ನಾನು ಕಾಲೇಜಿಗೆ ಚಕ್ಕರ್ ಹಾಕುವುದು ಖಾಯಂ ಆಯಿತು. ಜೊತೆಗೆ ಅವರ ಅಭಿನಯ ನನ್ನ ಮನದೊಳಗೆ ಅಚ್ಚೊತ್ತಿತು.

ನಂತರ, ಮದುವೆಯಾಗಿ ಉಡುಪಿಯಲ್ಲಿ ನೆಲೆಸಿದೆ. ಆಗ ಒಂದು ಬಾರಿ, ದಾದ ಉಡುಪಿಗೆ ಭೇಟಿ ನೀಡುವುದು ತಿಳಿಯಿತು. ನಮ್ಮ ಮನೆಯವರಿಗೆಲ್ಲ ನಾನು ವಿಷ್ಣು ಅಭಿಮಾನಿ ಎಂಬುದು ತಿಳಿದ ವಿಚಾರವೇ. ಹಾಗಾಗಿ ನನ್ನ ಮಾವನವರು ರಾಜಾಂಗಣಕ್ಕೆ ಕರೆದೊಯ್ದು ಅವರನ್ನು ದೂರದಿಂದ ತೋರಿಸಿದರು. ದೂರದಿಂದಲೇ ‘ದಾದಾ’ ಹಾಗೂ ‘ಭಾರತಿ’ ಮೇಡಂನ ಕಂಡು… ಈ ಜನ್ಮಕ್ಕಿಷ್ಟು ಸಾಕೆಂದು ಧನ್ಯತೆ ಪಡೆದು ಬಂದೆ.

ಮಿತ್ರರೇ, ‘ಪುಟ್ಟಣ್ಣ ಕಣಗಾಲ್’ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್ ಅವರದ್ದು ವಿಭಿನ್ನ ರೀತಿಯ ಅಭಿನಯ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆನೋ ಎಂಬಂತೆ ಭಾಸವಾಗುತ್ತದೆ. ಯಾವ ಪಾತ್ರಕ್ಕೆ ಆದರೂ ಜೀವ ತುಂಬುವ ಕಲೆಯಲ್ಲಿ ನಿಷ್ಣಾತರು ಎಂದೇ ಹೇಳಬೇಕು.

‘ಸಂಪತ್ ಕುಮಾರ್’ ಮುಂದೆ ‘ವಿಷ್ಣುವರ್ಧನ’ ನಾಗಿ ಕನ್ನಡ ಚಿತ್ರರಂಗದ ‘ದಾದಾ’ ರಾಗಿ ಮೆರೆದದ್ದು ನಮಗೆಲ್ಲ ತಿಳಿದ ವಿಚಾರವೇ. ನಾಗರ ಹಾವಿನಿಂದ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ದಾದಾ ಮುಂದೆ ಆಪ್ತರಕ್ಷಕದ ವರೆಗೂ ಸುಮಾರು 201 ಚಿತ್ರಗಳಲ್ಲಿ ಅಭಿನಯಿಸಿದರು. ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಚಿತ್ರಗಳಲ್ಲಿ ನಟಿಸಿದರು. ಕೇವಲ ಆಕ್ಷನ್ ಚಿತ್ರಗಳಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಭಾವನಾತ್ಮಕ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು.

ಕನ್ನಡ ಚಿತ್ರರಂಗದ ಸುರದ್ರೂಪಿ ನಟರಲ್ಲಿ ಒಬ್ಬನೆಂಬ ಹೆಗ್ಗಳಿಕೆಗೆ ಪಾತ್ರರಾದ ಇವರು, ಮಗುವಿನಂತಹ ಮನದವರು. ವಯಸ್ಸಿನ ಭೇದವಿಲ್ಲದೆ ಎಲ್ಲರನ್ನು ತನ್ನ ಸ್ನೇಹದ ಪರಿದಿಯೊಳಗೆ ತೆಗೆದುಕೊಳ್ಳುತ್ತಿದ್ದಂತ ಹೃದಯವಂತ. ಸೋತವರಿಗೆ ಹುರಿದುಂಬಿಸುವ ಮನದವರು. ನಾಜೂಕಾಗಿ ಬೈದು ಮುಂದಿನ ದಾರಿ ತೋರಿಸುತ್ತಿದ್ದ ಸಜ್ಜನ ವ್ಯಕ್ತಿ. ಆಧ್ಯಾತ್ಮದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದರು.

“ಬಲಗೈಯಲ್ಲಿ ನೀಡಿದ ದಾನ ಎಡಗೈಗೆ ತಿಳಿಯಬಾರದು” ಎಂಬುದನ್ನು ಅಕ್ಷರಶಃ ದಾದಾ ಪಾಲಿಸಿಕೊಂಡು ಬಂದಿದ್ದರು. ಶೂಟಿಂಗ್ ಹೋಗುವ ಮೊದಲು ತಮ್ಮ ಮ್ಯಾನೇಜರ್ಗೆ 2 – 3 ಬಣ್ಣದ ಪೇಪರ್ ಕವರ್ಗಳನ್ನು ಕೊಟ್ಟು, ಅವರ ಪಾಕೆಟ್ ನಲ್ಲಿ ಇಟ್ಟುಕೊಳ್ಳಲು ಹೇಳುತ್ತಿದ್ದರಂತೆ. ಶೂಟಿಂಗ್ ನ ಬಿಡುವಿನ ಸಮಯದಲ್ಲಿ ದಾದಾರನ್ನು ಯಾರಾದರೂ ಸಹಾಯಕ್ಕಾಗಿ ಯಾಚಿಸಿದಲ್ಲಿ… ದಾದಾ ತಮ್ಮ ಮ್ಯಾನೇಜರಿಗೆ ಅವರ ಪಾಕೆಟ್ ನಲ್ಲಿರುವ ಫಲಾನ ಬಣ್ಣದ ಕವರನ್ನು ಹಾಗೆ ಯಾಚಿಸಲು ಬಂದವರಿಗೆ ಕೊಡಲು ಹೇಳುತ್ತಿದ್ದರಂತೆ. ಅನೇಕ ದಿನಗಳ ನಂತರ ಮ್ಯಾನೇಜರಿಗೆ ಗೊತ್ತಾಯಿತು.. ದಾದಾ ಆ ಹಲವಾರು ಬಣ್ಣಗಳ ಕವರ್ನಲ್ಲಿ ಪ್ರತಿಯೊಂದರಲ್ಲೂ ಇಂತಿಷ್ಟು ರೂಪಾಯಿಗಳು ಎಂದು ಮೊದಲೇ ಸೇರಿಸಿ ಇಟ್ಟಿರುತ್ತಿದ್ದರಂತೆ! ಹೀಗೆ ಎಷ್ಟೋ ಜನರಿಗೆ ಸಹಾಯ ಹಸ್ತ ಚಾಚಿದರೂ ಯಾರಿಗೂ ತಾವು ಸಹಾಯ ಮಾಡಿದ ಸುಳಿವನ್ನೂ ನೀಡದ ಗುಣದವರು.

ದಾದಾರ ಇಂತಹ ಮೇರು ವ್ಯಕ್ತಿತ್ವಕ್ಕೆ ಮಾರು ಹೋಗದವರೇ ಇಲ್ಲವೇನೋ. ಅಂತೆಯೇ ನಾನು ಕೂಡ ಅವರ ಸರಳ ಸಜ್ಜನಿಕೆ ವ್ಯಕ್ತಿತ್ವಕ್ಕೆ ಮಾರು ಹೋದವಳು. ಮನೆಯ ಗೋಡೆಯ ತುಂಬಾ ಪೋಸ್ಟರ್ ಅಂಟಿಸುವ ಅಭಿಮಾನ ನನ್ನಲ್ಲದಿದ್ದರೂ.. ಗುಪ್ತಗಾಮಿನಿಯಂತೆ ಮನದೊಳಗೆ ಆರಾಧಿಸುವ ಅಭಿಮಾನ ನನ್ನದು.

-ಸುಮಾ ಕಿರಣ್

Leave a Reply

Your email address will not be published. Required fields are marked *