ನಾನೊಬ್ಬ ಉತ್ತಮ ಎನ್ನಬಹುದಾದ ಸಂಪಾದಕ ಆಗಿದ್ದೇನೆ ಹೊರತು ಒಬ್ಬ ಉತ್ತಮ ಆಡಳಿತಗಾರ ಆಗುವಲ್ಲಿ ಖಂಡಿತಾ ಎಡವಿದೆ…(ಭಾಗ-2)

ಬೆಳ್ಳಿತೆರೆ" ಪುಸ್ತಕ ಬಿಡುಗಡೆಯನ್ನು ವರನಟ, ಪದ್ಮಭೂಷಣ ಡಾ. ರಾಜ್ ಅವರೇ ದಾವಣಗೆರೆಗೆ ಬಂದು ಬಿಡುಗಡೆ ಮಾಡಿದ್ದು ನನಗೆ ಹಾಗೂ ನಮ್ಮ ತಂಡಕ್ಕೆ ಮರೆಯಲಾಗದ ಕ್ಷಣ. ಆದರೆ ಈ ಪುಸ್ತಕ ಬಿಡುಗಡೆಗೆ ನಾವು ಪಟ್ಟ ಶ್ರಮ ನಮ್ಮ ತಂಡದವರಿಗಷ್ಟೇ ಗೊತ್ತು. ಅಂದಿನ ಕಾಲಕ್ಕೆ ಮದನ್‍ಮಲ್ಲು ತಂಡ ಕರ್ನಾಟಕದ ನಂ.1 ಆರ್ಕೆಸ್ಟ್ರಾ ತಂಡವಾಗಿತ್ತು. ನಾವು ಡಾ.ರಾಜ್ ಅವರೂ ಕೂಡ ಹಾಡುತ್ತಾರೆ ಎಂದು ತಿಳಿದಿದ್ದರಿಂದ ಅದೇ ತಂಡವನ್ನು ಕರೆಸಿದ್ದೆವು. ಆಗ ಅವರು ಮೂರುವರೆ ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಅದು ನಮ್ಮ ಕೈಮೀರಿದ ಬಜೆಟ್ ಎಂದು ಗೊತ್ತಿದ್ದರೂ ಏನಾದರಾಗಲಿ ಅವರೇ ಬರಲಿ ಎಂದು ಒಂದು ಲಕ್ಷ ಮುಂಗಡ ಕೊಟ್ಟಿದ್ದೆವು. ಅವರು ಬಂದರು ಯಶಸ್ವಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮ ನಿರ್ವಹಣೆಗೆಂದೇ ಸುಮನ್ ಅಗರ್‍ಕರ್ ಬಂದಿದ್ದರು ಕೂಡ. ಕಾರ್ಯಕ್ರಮ ನಡೆಯುತ್ತಿತ್ತು. ಅದೊಂದು ಟಿಕೆಟ್ ಉಳ್ಳವರಿಗೆ ಮಾತ್ರ ಅವಕಾಶ ಇದ್ದ ಕಾರ್ಯಕ್ರಮವದು. ರೂ. 50 ಹಾಗೂ ರೂ. 100 ನಿಗಧಿಪಡಿಸಿದ್ದೆವು. ಜನ, ಜನ ಎಲ್ಲೆಲ್ಲೂ ಜನ. ನಮಗೆ ಉಳಿದ 2.5 ಲಕ್ಷ ರೂ.ಗಳನ್ನು ಮದನ್ ಮಲ್ಲು ತಂಡಕ್ಕೆ ಕೊಡುವುದು ಕಷ್ಟವಾಗಲಾರದು ಎಂಬ ಭರವಸೆ. ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು. ಡಾ. ರಾಜ್ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’’ ಎಂಬ ಹಾಡು ಹಾಡಿದಾಗ ಇಡೀ ಜನಸ್ತೋಮ ಹುಚ್ಚೆದ್ದು ಕುಣಿಯಿತು.

ಈಗ ನಮ್ಮ ದೃಷ್ಟಿಯೆಲ್ಲಾ ಮದನ್ ಮಲ್ಲು ತಂಡಕ್ಕೆ ಹಣ ಜೋಡಿಸಿಕೊಡುವತ್ತ ಹೊರಳಿತು. ಸಂಗ್ರಹವಾದ ಮೊತ್ತ ಒಟ್ಟಾರೆ 1.5 ಲಕ್ಷದಷ್ಟಾಯಿತು. ಉಳಿದ 1 ಲಕ್ಷ ಹೇಗೆ ಎಂದು ಚಿಂತೆ ಶುರುವಾಯಿತು. ಮದನ್ ಮಲ್ಲು ಯಾವ ಕಾರಣಕ್ಕೂ ಒಪ್ಪಲಾರೆ ಎಂದುಬಿಟ್ಟರು. ಆಗ ಆ ಲಕ್ಷ ಹೊಂದಿಸಿದ್ದು ಎಷ್ಟು ಕಷ್ಟವಾಯಿತು ಎಂಬುದು ನಮ್ಮ ತಂಡದವರಿಗೆ ಮಾತ್ರ ಗೊತ್ತು.
ಅಂದು ನಮ್ಮ ತಂಡ 1 ಲಕ್ಷ ರೂ.ಗಳ ಸಾಲಗಾರ ತಂಡವಾಯಿತು. ನಾವೆಲ್ಲಾ ತಲಾ 25 ಸಾವಿರ ಸಾಲ ಹೊತ್ತುಕೊಂಡು ಹೊರಬಂದೆವು.

ನಾನೂ ಸೇರಿದಂತೆ ಕೆ.ಜಿ.ರಾಮ ಚಂದ್ರಾಚಾರ್, ಯರಗುಂಟೆಯ ನಾಯಕ್, ಸಂಧ್ಯಾ ಸುರೇಶ್, ಅರುಂಧತಿ ರಮೇಶ್ ಮುಂತಾದವರು ಕಾರ್ಯಕ್ರಮ ಯಶಸ್ವಿ ಯಾಯಿತು ಎಂಬ ಸಮಾಧಾನ ಹೊಂದಿದ್ದೆವಾದರೂ ಸಾಲದ ಹೊರೆ ನಮ್ಮ ಹೆಗಲಲ್ಲಿತ್ತು.
ನನ್ನೊಬ್ಬನನ್ನು ಹೊರತುಪಡಿಸಿ ಎಲ್ಲರೂ ಸರ್ಕಾರಿ ನೌಕರರೇ ಆಗಿದ್ದರಿಂದ ಆ ಸಾಲವನ್ನು ಹೇಗೋ ತೀರಿಸಿದರು. ಓರ್ವ ಪತ್ರಕರ್ತನಾಗಿದ್ದ ನನಗೆ ಅನೇಕ ತಿಂಗಳು ಇದಕ್ಕೆ ಬಡ್ಡಿ ಕಟ್ಟುವುದರಲ್ಲಿಯೇ ಹೋಯಿತು.

ಕೊಡುಗೈ ದಾನಿಗಳ ನಗರ ಎಂದು ಕರೆಯಲ್ಪಡುವ ಈ ನಗರದಲ್ಲಿ ನಮ್ಮ ಸಹಾಯಕ್ಕೆ ಯಾರೂ ಬರಲಿಲ್ಲ. ಡಾ. ರಾಜ್ ಅವರಿಗೆ ಕೊಡಲು ಉಡುಗೊರೆಯನ್ನು ತರಲು ಮರೆತದ್ದರಿಂದ ನನ್ನ ಕೈಯಲ್ಲಿದ್ದ ನನ್ನ ಮದುವೆಯ ಉಂಗುರವನ್ನೇ ಅವರಿಗೆ ನೀಡಲಾಯಿತು.
ಪುಸ್ತಕ ಬಿಡುಗಡೆಗೆ ಸಾಕಷ್ಟು ಶ್ರಮಿಸಿದವರಲ್ಲಿ ಯರಗುಂಟೆಯ ನಾಯಕ್ ಕೆಲ ವರ್ಷಗಳ ಬಳಿಕ ನಿಧನರಾದರು. ಅವರ ಬಳಿಕ ಅಷ್ಟೇ ಜವಾಬ್ದಾರಿ ಹೊತ್ತುಕೊಂಡಿದ್ದ ಕೆ.ಜಿ. ರಾಮಚಂದ್ರಾಚಾರ್ ಸಹ ನಿಧನ ಹೊಂದಿದರು.
ಮುಂದುವರೆಯುತ್ತದೆ…

-ಜಿ.ಎಂ.ಆರ್. ಆರಾಧ್ಯ

Leave a Reply

Your email address will not be published. Required fields are marked *