ನಾನು ಗಾಡಿಲಿ ಇಡ್ಲಿ ಹೋಟೆಲ್ ರಾತ್ರಿ ನಡಿಸ್ತಿನಿ ಎಂದರು ಬಾಸ್..?!

ಯಾರೋ ನನಗೊಂದು ಜೋಕ್ ಫಾರ್ವರ್ಡ್ ಮಾಡಿದ್ದರು.ಆ ಸಾಲುಗಳು ಮುಗಿದ ಬಳಿಕ ಗಹಗಹಿಸಿ ನಗುವ ಚಿನ್ಹೆ ಸಹ ಹಾಕಿದ್ದರು.
ಮೊದಲ ಬಾರಿ ಅದನ್ನು ಓದಿದಾಗ ನನಗೂ ನಗುಬಂತು.ಆದರೆ ಇನ್ನೊಮ್ಮೆ..ಮತ್ತೊಮ್ಮೆ ಓದಿದಾಗ ನಗು ಮಾಯವಾಗಿ ನನಗೇ ಅರಿವಿಲ್ಲದಂತೆ ಗಂಭೀರತೆ ಆವರಿಸಿತು.”ಜೀವನದ ಕೆಲ ಸತ್ಯಗಳು ಸಹ ಹಾಸ್ಯ ಆಗಬಲ್ಲವಲ್ಲವೆ” ಎಂಬ ಜಿಗುಪ್ಸೆ ಮೂಡಿತು.

ಆ ಹಾಸ್ಯವಾದರೂ ಏನು ಎಂಬುದು ಕುತೂಹಲ ಅಲ್ಲವೇ?
ಉದ್ಯೋಗಿ: ಬಾಸ್,ನಾಳೆಯಿಂದ ನಾನು ಕಚೇರಿ ಸಮಯ ಮುಗಿದ ಕೂಡಲೇ ಹೊರಡುವ ಅಂದುಕೊಂಡಿದ್ದೇನೆ. ದಯವಿಟ್ಟು ಅವಧಿ ಮುಗಿದ ಬಳಿಕವೂ ಹೆಚ್ಚು ಕೆಲಸ ಹೇಳಬೇಡಿ.
ಬಾಸ್: ಹೌದಾ,ಸರಿ.ಆದರೆ ಏಕೆ?
ಉದ್ಯೋಗಿ: ಖಚೇರಿ ಸಮಯ ಮುಗಿದ ಬಳಿಕ ಇನ್ನಷ್ಟು ಸಂಪಾದನೆಗೆ ಆಟೋ ಓಡಿಸಬೇಕು ಎಂದುಕೊಂಡಿದ್ದೇನೆ.
ಬಾಸ್; ಹೋ..ಗುಡ್.ಹಾಗಾದ್ರೆ ರಾತ್ರಿ 12 ಗಂಟೆ ಹೊತ್ತಿಗೆ ಬಸ್ ಸ್ಟ್ಯಾಂಡ್ ಬಳಿಯ ಸರ್ಕಲ್ಗೆ ಬಾ
ಉದ್ಯೋಗಿ: ಏಕೆ ಬಾಸ್
ಬಾಸ್; ಅಲ್ಲಿ ರಾತ್ರಿ ನಾನು ಇಡ್ಲಿ ಗಾಡಿ ನಡೆಸುತ್ತಿದ್ದೇನೆ.

ಸ್ನೇಹಿತರೇ,ನಿಜ..ಮೊದಲಿಗೆ ಇದನ್ನು ಓದಿದಾಗ ನಗು ಬರುತ್ತೆ.ಆದರೆ ವಾಸ್ತವ ಏನೆಂದರೆ ಸಣ್ಣ ಪುಟ್ಟ ಬಾಸ್ ಗಳ ವಾಸ್ತವ ಸತ್ಯ ಇದು.
ನನ್ನ ಸ್ನೇಹಿತರೊಬ್ಬರು ಒಂದು ಶಾಲೆ ನಡೆಸುತ್ತಿದ್ದಾರೆ.ಅಲ್ಲಿ ಹತ್ತು ಮಂದಿ ಶಿಕ್ಷಕರು ಹಾಗೂ ಇತರೆ ಐದು ಮಂದಿ ಉದ್ಯೋಗಿಗಳು ಇರುವರು.ಅವರಿಗೆ ಸಂಬಳ ನೀಡುವುದು ಯಾವಾಗ ಗೊತ್ತೇ?..ಅವರಿಗೆ ಅವರು ಕೆಲಸ ಮಾಡುತ್ತಿರುವ ಕಂಪನಿ ಸಂಬಳ ಕೊಟ್ಟಾಗ.
ಹೌದು,. ಸಿವಿಲ್ ಎಂಜಿನಯರ್ ಆಗಿರುವ ಅವರು ಬೆಂಗಳೂರಿನ ಬೃಹತ್ ಬಿಲ್ಡರ್ಸ್ ಬಳಿ ಕೆಲಸ ಮಾಡುತ್ತಾರೆ.ಉತ್ತಮ ವೇತನ ಇದೆ.ಪ್ರತಿ ತಿಂಗಳು ಅಲ್ಲಿ ಸಂಬಳ ಪಡೆದು ಇಲ್ಲಿ ಬಂದು ವೇತನ ನೀಡುತ್ತಾರೆ.
ಬಾಸ್ ಗಳು ಎಂದರೆ ಎಲ್ಲರೂ ಟಾಟಾ,ಅಂಬಾನಿ,ಬಜಾಜ್,.. ತರ ಇರುವರು ಎಂಬುದು ಸುಳ್ಳು.
ಹೆಚ್ಚಿನ ಸಂಪಾದನೆಗೆ ಉದ್ಯೋಗಿ ಆಟೋ ಓಡಿಸಲು ಮುಂದಾಗಿರುವುದು ಎಷ್ಟು ಸತ್ಯವೋ..ಆತನ ಬಾಸ್ ಇಡ್ಲಿ ಗಾಡಿ ನಡೆಸುತ್ತಿರುವುದು ಅಷ್ಟೆ ಸತ್ಯ ಏಕೆ ಆಗಿರಬಾರದು? ಕೆಲವು ಸಣ್ಣ ಪುಟ್ಟ ಸಂಸ್ಥೆಗಳ ಬಾಸ್ ಗಳದ್ದು ತುಂಬಾ ಐಷಾರಾಮಿ ಜೀವನವೇನು ಆಗಿರುವುದಿಲ್ಲ. ಸಂಸ್ಥೆಯನ್ನ ನಡೆಸಬೇಕೆನ್ನುವ ಹಂಬಲದ ಜೊತೆಗೆ ನಾಲ್ಕು ಜನರಿಗೆ ಉದ್ಯೋಗ ಒದಗಿಸಿಕೊಟ್ಟು ಒಂದಿಷ್ಟು ಪರೋಪಕಾರದ ಮನೋಭಾವನೆ ಹೊಂದಿ, ತೃಪ್ತಿದಾಯಕ ಬದುಕು ನಡೆಸುವವರನ್ನು ನಾವು ಕಾಣಬಹುದು.

ಮೇಲಿನ ಜೋಕ್ ನಲ್ಲಿ ಬರುವ ಆ ಬಾಸ್ ಪಾತ್ರ ನಿಜಕ್ಕೂ ಅಭಿನಂದನೀಯ. ಒಂದು ಕಂಪನಿಯ ಬಾಸ್ ತಾನು ರಸ್ತೆ ಬದಿಯಲ್ಲಿ ಇಡ್ಲಿ ಮಾರಿ ಒಂದು ಸಂಸ್ಥೆಯನ್ನು ಮುನ್ನೆಡೆಸಿಕೊಂಡು ಹೋಗುವ ಆತನ ಭಿನ್ನ ಮನಸ್ಥಿತಿಯನ್ನು ನಾವು ಮೆಚ್ಚಲೇಬೇಕು. ಹಾಗೆಯೇ ತನ್ನ ಸಂಸ್ಥೆಯ ಉದ್ಯೋಗಿ ಆಟೋ ಓಡಿಸುವುದಾಗಿ ಹೇಳಿದಾಗ ಆತ ಅದೆಷ್ಟು ಸಮಾಧಾನವಾಗಿ ಉತ್ತರಿಸಿದ ರೀತಿ ತಾನೊಬ್ಬ ಬಾಸ್ ಅನ್ನುವುದಕ್ಕಿಂತ ಉದ್ಯೋಗಿ ಎನ್ನುವುದು ಆತನ ಕಾಯಕ ನಿಷ್ಠೆಯನ್ನು ಎತ್ತಿ ಹಿಡಿದಂತಿತ್ತು. ಎಷ್ಟು ಜನ ಬಾಸ್ ಗಳು ಈ ರೀತಿಯ ಆತ್ಮ ಗೌರವವನ್ನು ಹೊಂದಿರುತ್ತಾರೆ ಅಲ್ಲವೆ? ಮೇಲಿನ ಜೋಕ್ ಮೇಲ್ನೋಟಕ್ಕೆ ಹಾಸ್ಯ ಎನಿಸಿದರೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವಕೆ ಹಿಡಿದ ಕನ್ನಡಿಯಂತಿದೆ.
ಜೀವನದ ಅನುಭವಗಳೇ ಹಾಗೆ,.ಮೇಲ್ನೋಟಕ್ಕೆ ಅದು ಹಾಸ್ಯವೋ ಅಥವಾ ಗಂಭೀರತೆಯೋ ಎನಿಸಿದರೂ ಅದರ ಒಳಹೊಕ್ಕು ಯೋಚಿಸಿದಾಗ ಮಾತ್ರ ನಾವು ಆ ಘಟನೆಯ ಆಂತರ್ಯವನ್ನು ಅರಿಯಲು ಸಾಧ್ಯ.

ಜಿ. ಎಂ. ಆರ್. ಆರಾಧ್ಯ

Leave a Reply

Your email address will not be published. Required fields are marked *