ನಾದಮಯ ಈ ಜಗವೆಲ್ಲಾ

ನಾವು ಕೇಳುವ ಎಲ್ಲಾ ಶಬ್ದಗಳು ನಾದವಾಗುವುದಿಲ್ಲಾ, ಕಿವಿಗೆ ಮುದ ನೀಡುವ ಶಬ್ದಗಳು, ದನಿ ನಾದವಾಗುವುದಕ್ಕೆ ಅರ್ಹವಾಗಿರುತ್ತದೆ. ಸೃಷ್ಟಿಯ ಮೂಲದಲ್ಲಿ ಇಂತಹುದೇ ಓಂಕಾರ ನಾದವಿತ್ತೆಂದು ಕಾಣುತ್ತದೆ, ಅದಕ್ಕೆ ಅಲ್ಲವೇ ಬ್ರಹ್ಮನನ್ನು ನಾದಬ್ರಹ್ಮನೆಂದು ಕರೆಯುವುದು…

“ಸಪ್ತಸ್ವರಂ ಸಮಸ್ತಂಯೋ ಜಗದೇತಚ್ಚಾರಚರಂ ಸಂಜೀವಯತೀ ವಿಶ್ವಾತ್ಮ ಸಮೇ ವಿಷ್ಣು ಪ್ರಸೀದತು…” ವಿಶ್ವದ ಎಲ್ಲಾ ಚರಾಚರ ಜೀವಿಗಳನ್ನು ಸಪ್ತ ಸ್ವರಗಳಿಂದ ಸಂಜೀವನಗೊಳಿಸುವ ವಿಶ್ವಾತ್ಮನಿಗೆ ವಂದಿಸುತ್ತೇನೆ ಅನ್ನುವ ಶ್ಲೋಕವೂ ಸಂಗೀತದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ. ಸಂಗೀತಕ್ಕೆ ಗಿಡ ಮರಗಳ ಚೆನ್ನಾಗಿ ಬೆಳೆಯುತ್ತವೆಯಂತೆ. ಇನ್ನು ಮಾನವನ ಸರ್ವಾಂಗೀಣ ಅಭಿವೃದ್ಧಿ ಆಗುವುದಿಲ್ಲವೇ? ಸಂಗೀತ ಅಂದ್ರೆ ಕೇವಲ ಹಾಡುವುದು ಅಂತಾಗಿದೆ ಈಗೀಗ. ಆದರೆ ಗೀತೆ, ವಾದ್ಯ, ನೃತ್ಯಗಳ ಒಟ್ಟು ಮೌಲ್ಯ ಸಂಗೀತವಾಗುತ್ತದೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಸಂಗೀತದ ಮೂರು ಶಾಖೆಗಳು ಅತ್ಯಂತ ವಿಸ್ತಾರವಾಗಿ ಬೆಳೆದು ಪ್ರತ್ಯೇಕವಾಗಿ ತಮ್ಮ ಛಾಪು ಮೂಡಿಸುತ್ತಿವೆ. ಇರಲಿ ಒಳ್ಳೆಯ ಬೆಳವಣಿಗೆಯೇ ಇದು ಸಂಗೀತದ ದೃಷ್ಟಿಯಲ್ಲಿ.

ನಮ್ಮ ಭಾರತೀಯ ಸಂಗೀತವೂ ಶಾಸ್ತ್ರಬದ್ಧವಾಗಿದೆ. ಸಮಯವನ್ನನುಸರಿಸಿ,ಕಾಲವನ್ನು ಅನುಸರಿಸಿ ರಾಗಗಳಿವೆ. ಇಂತಹ ಸಮಯಕ್ಕೆ ಇಂತಹ ಪ್ರಕಾರದ ರಾಗಗಳನ್ನೇ ಪ್ರಸ್ತುತಪಡಿಸಬೇಕೆಂಬ ನಿಯಮವಿದೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಸರೆಗಮಪಧನಿ ಏಳು ಸ್ವರಗಳ ಜೊತೆ ಐದು ವಿಕೃತಿ ಸ್ವರಗಳು ಸೇರಿ ಒಟ್ಟು ೧೨ ಸ್ವರಗಳನ್ನು ನಮ್ಮ ಸಂಗೀತದಲ್ಲಿ ಬಳಸುತ್ತಾರೆ. ಸ – ಷಡ್ಜ್, ರೆ – ಋಷಭ, ಗ- ಗಂಧಾರ, ಮ- ಮಧ್ಯಮ, ಪ-ಪಂಚಮ, ಧ-ದೈವತ, ನಿ- ನಿಸಾದ್ ಹೀಗೆ ಏಳು ಸ್ವರಗಳ ಪೂರ್ಣ ರೂಪವಾಗುತ್ತೆ. ಮತ್ತೆ ರೆ,ಗೆ,ಧ,ನಿ ಎಂಬ ನಾಲ್ಕು ಕೋಮಲ್ ಸ್ವರಗಳು, ಮ ಎಂಬ ತೀವ್ರ ಸ್ವರವೂ ನಮ್ಮ ಭಾರತೀಯ ಸಂಗೀತದಲ್ಲಿ ಉಪಯೋಗಿಸುತ್ತಾರೆ. ನಮ್ಮ ಸಂಗೀತ ಪರಂಪರೆಯೂ ವೇದಗಳ ಕಾಲದಿಂದಲೂ ಇರುವುದಕ್ಕೆ ಸಾಕ್ಷಿ ಸಿಗುತ್ತೆ. ಸಾಮವೇದಕ್ಕೆ ಸಂಗೀತದ ತಾಯಿಯೆನ್ನುತ್ತಾರೆ. “ಗೀತಿಷು ಸಾಮಾಖ್ಯಾ” ಎಂಬ ಜೈಮಿನಿ ಮಹರ್ಷಿಗಳ ವಾಕ್ಯದಂತೆ ಗಾನರೂಪದ ಮಂತ್ರಗಳೇ ಸಾಮವೆಂದು ತಿಳಿಯುತ್ತದೆ. ಸಾಮ ಗಾನಗಳು ಸಪ್ತ ಸ್ವರಗಳನ್ನು ಹೊಂದಿದೆ. ಕ್ರುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಮಂದ್ರ, ಅತಿಸ್ವಾರ್ಯ ಎಂದು ಅವುಗಳಿಗೆ ಹೆಸರು… ಸಾಮಗಾನ ಮಾಡುವಾಗ ಬೆರಳುಗಳಲ್ಲಿ ಸ್ವರ ಸ್ಥಾನಗಳನ್ನು ತೋರಿಸುವುದು ಕಡ್ಡಾಯ. ಇನ್ನು ಋಗ್ವೇದ, ಯಜುರ್ವೇದದಲ್ಲಿಯೂ ಸಂಗೀತದ ಸ್ವರಗಳಿವೆ. ಷಡ್ಜ್, ಕೋಮಲ್ ಋಷಭ, ಕೋಮಲ್ ನಿಷಾದ್ ಇವೇ ಮೂರು ಸ್ವರಗಳು ಋಕ್, ಯಜುಸ್ ಮಂತ್ರಗಳಲ್ಲಿ ಕಂಡು ಬರುತ್ತವೆ‌.

ಈ ಪರಶಿವನನ್ನು ಸಂಗೀತದ ಪಿತಾಮಹನೆಂದರೆ ತಪ್ಪಲ್ಲಾ. ಈ ತಾಂಡವ ನೃತ್ಯ, ತಾಲ ವಾದ್ಯಗಳ ಜನ್ಮಕ್ಕೆ ಪರಶಿವನೇ ಕಾರಣ. ಅವನಿಗೆ “ಸಾಮಗಾನಪ್ರಿಯ” ಎಂಬ ಬಿರುದು ಕೂಡಾ ಇದೆ. ಹಲವು ದೇವತೆಗಳಿಗೆ ಒಂದಿಲ್ಲೊಂದು ವಾದ್ಯದ ಮೇಲೆ ಪ್ರೀತಿ ಇದ್ದೇ ಇದೆ. ಸರಸ್ವತಿ,ನಾರದರಿಗೆ ವೀಣೆ, ಶಿವನಿಗೆ ಡಮರು, ಕೃಷ್ಣನಿಗೆ ಕೊಳಲು ,ಹಾಗೆ ರುದ್ರನ ವೀಣೆ ,ಗಂಧರ್ವರ ಗಾಯನ ಹೀಗೆ ಎಲ್ಲರೂ ಸಂಗೀತ ಪ್ರಿಯರೇ.

वीणावादनतत्वज्ञः श्रुतिजातिविशारदः।
तालश्रह्नाप्रयासेन
मोक्षमार्ग च गच्छति।

ವಾದನ ಹಾಗೂ ಗಾಯನವನ್ನು ತಾಲಬದ್ಧವಾಗಿ ,ಶ್ರುತಿಬದ್ಧವಾಗಿ ಪ್ರಸ್ತುತ ಪಡಿಸುವುದರಿಂದ ಮೋಕ್ಷಕ್ಕೆ ದಾರಿ ಎಂದು ಮೇಲಿನ ಶ್ಲೋಕ ಹೇಳ್ತಾ ಇದೆ.ಪುರಂದರದಾಸರು, ಕನಕದಾಸರು, ಶಿಶುನಾಳ ಶರೀಫ್ ರು,ಕಬೀರದಾಸರು, ತುಳಸಿದಾಸರು,ಹರಿದಾಸರು,ಮೀರಾ ಇವರೆಲ್ಲಾ ಸಂಗೀತದ್ವಾರಾ ಮೋಕ್ಷ ಕಂಡುಕೊಂಡವರು. ದೊಡ್ಡ ದೊಡ್ಡ ರಾಜರುಗಳು ಆಸ್ಥಾನದಲ್ಲಿ ಸಂಗೀತ ವಿದ್ವಾಂಸರನ್ನು ಆಸ್ಥಾನ ಪಂಡಿತರನ್ನಾಗಿ ನೇಮಿಸಿಕೊಳ್ಳುತ್ತಿದ್ದರು. ಹೀಗೆ ರಾಜರಿಂದ ಹಿಡಿದು ಸಾಮಾನ್ಯರವರೆಗೆ ಎಲ್ಲರೂ ಸಂಗೀತಪ್ರಿಯರೇ .

“ಮ್ಯೂಸಿಕ್ ಥೆರಪಿ” ಎಂಬ ವಿಧಾನದಿಂದ ರಕ್ತದೊತ್ತಡ, ಮಾನಸಿಕ ಖಿನ್ನತೆ ಇತ್ಯಾದಿಗಳ ನಿವಾರಣೆಗಾಗಿ ಸಂಗೀತವನ್ನು ಬಳಸುತ್ತಿದ್ದಾರೆ.ನಮ್ಮ ಹಿಂದೂಸ್ತಾನಿ ಸಂಗೀತದ ಹಲವು ರಾಗಗಳನ್ನು ನಿಯಮಿತವಾಗಿ ಆಲಿಸುವುದರಿಂದ ಹಲವಾರು ರೋಗಗಳು ಉಪಶಮನವಾಗುತ್ತವೆ.

ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ಸಂಗೀತ. ಸಂಗೀತಕ್ಕೆ ನವರಸಗಳನ್ನು ಚೆಂದವಾಗಿ ಹೊರ ಹಾಕುವ ಶಕ್ತಿಯಿದೆ. ನೋಡಿ ಬೇಕಿದ್ರೆ ನಾವು ಸುಖ ಹಾಗೂ ದುಃಖ ಎರಡೂ ಸಂದರ್ಭದಲ್ಲಿ ಸಂಗೀತದ ಮೊರೆ ಹೋಗ್ತೇವೆ. ಸಂಗೀತದಿಂದ ಸುಖವನ್ನು ಇಮ್ಮಡಿಗೊಳಿಸೋಣ, ದುಃಖವನ್ನು ಮರೆಯೋಣ..
ಪ್ರತಿದಿನವೂ ಒಳ್ಳೊಳ್ಳೆ ಸಂಗೀತ ಆಲಿಸುವ “ಯೋಗ” ನಿಮ್ಮದಾಗಲಿ

ವಿಶ್ವ ಸಂಗೀತ ದಿನದ ಶುಭಾಶಯಗಳು…

✍️ಸುಮರಂಗ

Leave a Reply

Your email address will not be published. Required fields are marked *