ನಾಚಿಕೆಯಾಗಬೇಕು ಮತ ಹಾಕದ ಬೆಂಗಳೂರು ನಾಗರಿಕರಿಗೆ: ಇಂದಿನ ಮತದಾನದಲ್ಲಿ ಹೀಗಾಗದಿರಲಿ ಬನ್ನಿ ಮತ ಹಾಕಿ

ನಾಚಿಕೆಯಾಗಬೇಕು ಮತ ಹಾಕದ ಬೆಂಗಳೂರು ನಾಗರಿಕರಿಗೆ: ಇಂದಿನ ಮತದಾನದಲ್ಲಿ ಹೀಗಾಗದಿರಲಿ ಬನ್ನಿ ಮತ ಹಾಕಿ
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಮ ಅಸ್ತ್ರ ಮತದಾನ. ಈ ಕಾರಣಕ್ಕಾಗಿಯೇ ಚುನಾವಣಾ ಆಯೋಗ, ಸರ್ಕಾರ, ಕಳಕಳಿಯ ಸಂಘಸಂಸ್ಥೆಗಳು ಮತದಾನ ಜಾಗೃತಿಯ ಕುರಿತು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಹ ದರಿದ್ರ ಮಹಾನಗರ ವಾಸಿಗಳು ತಮಗೂ ಹಾಗೂ ಮತದಾನಕ್ಕೂ ಸಂಬಂಧವೇ ಇಲ್ಲ ಎಂಬಂತೆ ದೂರ ಉಳಿದಿರುವುದು ನಾಚಿಕೆಗೇಡಿನ ವಿಷಯ. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಮತದಾನ ಸರಾಸರಿ ಶೇ 70 ನ್ನು ಮೀರಿರುವುದು ಸಮಾಧಾನದ ವಿಷಯ.
ಅಂಕಿ ಅಂಶಗಳನ್ನು ಗಮನಿಸುವುದಾದರೆ ಬೆಂಗಳೂರು ಗ್ರಾಮಾಂತರದಲ್ಲಿ ಸ್ವಲ್ಪ ಪರವಾಗಿಲ್ಲ ಎಂಬಷ್ಟು ಅಂದರೆ ಶೇ 64 ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರದಲ್ಲಿ ಶೇಕಡ 50, ಬೆಂಗಳೂರು ಕೇಂದ್ರದಲ್ಲಿ ಶೇ. 49. 75, ಹಾಗೂ ಬೆಂಗಳೂರು ದಕ್ಷಿಣದಲ್ಲಿ ಶೇ54 ರಷ್ಟು ಮಾತ್ರ ಮತ ಮತದಾನ ನಡೆದಿದೆ.

ವ್ಯವಸ್ಥೆಯಲ್ಲಿನ ಲೋಪಗಳ ಕುರಿತು ಟೀಕಿಸುವವರು ಐದು ವರ್ಷದಲ್ಲೊಂದು ದಿನ ಬಿಡುವು ಮಾಡಿಕೊಂಡು ತಮ್ಮ ಹಕ್ಕು ಚಲಾಯಿಸಲು ಅರ್ಧಕ್ಕರ್ಧದಷ್ಟು ಮತದಾರರು ನಿರ್ಲಕ್ಷ್ಯ ತೋರಿರುವ ರೆಂದರೆ ಅವರ ಅಸಡ್ಡೆಗೆ ಧಿಕ್ಕಾರವಿರಲಿ. ಕಾರಣ ಏನೇ ಇದ್ದರೂ ಮಹಾನಗರಗಳಲ್ಲಿ ಕನಿಷ್ಠ ಶೇಕಡ 80 ರಷ್ಟಾದರೂ ಆಗಬೇಕಿತ್ತು. ಮತದಾನದ ದಿನದಂದು ಸರ್ಕಾರಿ ರಜೆ ಪ್ರಕಟಿಸಲಾಗುತ್ತದೆ. ಮತದಾನದ ಅವಧಿಯನ್ನು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಮತದಾನದ ಪ್ರಮಾಣದಲ್ಲಿ ಏರಿಕೆಯಾಗದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರ್ದೈವ. ರಾಜ್ಯದಲ್ಲಿ ಎರಡನೇ ಹಂತಕ್ಕೆ ಇಂದು ಮತದಾನ ನಡೆಯುತ್ತಿದೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಇಂದೇ ದಾವಣಗೆರೆ ಅತಿ ಹೆಚ್ಚು ಪ್ರಮಾಣದ ಮತದಾನ ಮಾಡಿ ದಾಖಲೆ ಮಾಡಲಿ ಎಂಬುದು ನಮ್ಮ ಆಶಯ .
ವಾಟ್ಸಪ್ ಗ್ರೂಪ್ಗಳು, ಫೇಸ್ ಬುಕ್ ಗಳು ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಹಾಗೂ ಕಡ್ಡಾಯ ಮತದಾನದ ಕುರಿತು ಸಾಕಷ್ಟು ಪ್ರೇರಕ ವಿಷಯಗಳು ಪ್ರಕಟವಾಗುತ್ತಿದೆ. ಜನ ಮಿಡಿತ ಸಹ ತನ್ನ ವ್ಯಾಪ್ತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಮತದಾನ ಜಾಗೃತಿಯ ಕುರಿತು ವಿಶೇಷ ಪುಟಗಳನ್ನು ಪ್ರಕಟಿಸುವ ಮೂಲಕ ಮತದಾನಕ್ಕೆ ಪ್ರೇರೇಪಿಸಿದೆ. ಸಾಕಷ್ಟು ಕವನಗಳು, ಲೇಖನಗಳು, ಅಂಕಣಗಳು ಮೂರು ವಿಶೇಷ ಸಂಚಿಕೆಗಳಲ್ಲಿ ಪ್ರಕಟಿಸಿದೆ. ಬರಹಗಾರರಿಗೆ ಇದಕ್ಕಾಗಿ “ಜನ ಮಿಡಿತ” ಕೃತಜ್ಞತೆಗಳನ್ನು ಸಲ್ಲಿಸುತ್ತದೆ .

“ವೋಟಿಗಾಗಿ ಕೊಡುವ ನೋಟನ್ನು ತಿರಸ್ಕರಿಸಬೇಡಿ, ಆದರೆ ವಿವೇಚನೆಯಿಂದ ಮತ ಚಲಾಯಿಸಿ” ಎಂಬ ಜನಮಿಡಿತ ಅಂಕಣಗಾರ್ತಿ ಸುನೀತಾ ಪ್ರಕಾಶ್ ಅವರ ಲೇಖನ ಜನ ಮಿಡಿತ ಫೇಸ್ ಬುಕ್ ನಲ್ಲಿ ಅಂದಾಜು 75 ಸಾವಿರದಷ್ಟು ಜನಕ್ಕೆ ತಲುಪಿದೆ. ಚುನಾವಣೆಗೆ ಸಂಬಂಧಿಸಿದಂತೆ ಜನ ಮಿಡಿತ ಫೇಸ್ ಬುಕ್ ನಲ್ಲಿ ಲಕ್ಷಕ್ಕೂ ಅಧಿಕ ಜನರನ್ನು ತಪ್ಪಿದೆ. “ಯಾವುದೇ ಅಭ್ಯರ್ಥಿಯು ಅರ್ಹ ಅಲ್ಲ “ಎಂಬ ಬಟನ್ ಒತ್ತಿ ಬಂದರೂ ಚಿಂತೆಯಿಲ್ಲ. ಆದರೆ ಮತದಾನ ಮಾಡುವುದನ್ನು ಮಾತ್ರ ಮರೆಯಬೇಡಿ. ಒಂದೇ ಒಂದು ದಿನ ಮತದಾನದಿಂದ ದೂರ ಉಳಿದರೆ ಇನ್ನು ಐದು ವರ್ಷಗಳ ಕಾಲ ಅಪರಾಧಿ ಭಾವನೆ ಕಾಡೇ ಕಾಡುತ್ತದೆ. ಭಾರತದ ಪ್ರಜೆ ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲ ವಿಷಯವೇ “ನಾನು ನನ್ನ ಹಕ್ಕು ಚಲಾಯಿಸಿ ಕರ್ತವ್ಯವನ್ನು ಮೆರೆದಿದ್ದೇನೆ “ಎಂಬುದಾಗಿರಲಿ.

✍✍ಜಿ. ಎಂ. ಆರ್. ಆರಾಧ್ಯ

Leave a Reply

Your email address will not be published. Required fields are marked *