ನನ್ನವೇ ಕಣ್ಣು, ಕಿವಿ, ಬಾಯಿ ಹಾಗೂ ಮೂಗು ಜಗಳಕ್ಕೆ ಬಿದ್ದಾಗ…

ಮಿತ್ರರೇ, ಈ “ಸಹಿಷ್ಣುತೆ” ಎಂಬ ಪದ ನನ್ನನ್ನು ಸದಾ ಕಾಡುತ್ತಿರುತ್ತದೆ. ಇದರ ವ್ಯಾಪ್ತಿಯನ್ನು ಅರಿಯುವುದು ಕಷ್ಟ ಸಾಧ್ಯ… ಎಂದೇ ನನ್ನ ಅನಿಸಿಕೆ. ಇನ್ನು ನಾವು ಭಾರತೀಯರಂತೂ, ಅಸಾಧ್ಯ ಸಹಿಷ್ಣುಗಳು ಎಂದೇ ಖ್ಯಾತಿ. ನಮ್ಮ ಸಹಿಷ್ಣತಾ ಮಟ್ಟ ಎಷ್ಟೆಂದರೆ.. ಕೆಲವರು ಜನನಿಬಿಡ ರಸ್ತೆಯಲ್ಲಿ ಬಹಿರ್ದೆಶೆಗೆ ನಿಂತಾಗಲೂ, “ಅಯ್ಯೋ ಪಾಪ.. ತುಂಬಾ ಅರ್ಜೆಂಟ್ ಆಗಿರಬೇಕು!” ಎಂದು ಪಕ್ಕಕ್ಕೆ ಮುಖ ತಿರುಗಿಸಿಕೊಂಡು ಹೋಗುವಷ್ಟು ಸಹಿಷ್ಣುಗಳು.

ಹೋ! ಇವಳಿಗೆ ಇವತ್ತು ಸಹಿಷ್ಣುತೆಯ ಹುಚ್ಚು ಹಿಡಿದಿದೆ. ಅದಕ್ಕೆ ನಮಗೆಲ್ಲ ಸಹಿಷ್ಣುತೆಯ ಬಗ್ಗೆ ಪಿಟೀಲು ಕೊಯ್ಯುತ್ತಿದ್ದಾಳೆ ಎಂದುಕೊಂಡಿರಾ? ಛೆ! ಇಲ್ಲಪ್ಪ… ಮುಖ್ಯ ವಿಷಯ ಇದಲ್ಲವೇ ಅಲ್ಲ. ಸರಿ, ಇನ್ನು ನಿಮ್ಮ ಸಹಿಷ್ಣುತಾ ಮಟ್ಟವನ್ನು ಹೆಚ್ಚು ಪರೀಕ್ಷಿಸದೆ ಸೀದಾ ವಿಷಯಕ್ಕೆ ಜಿಗಿಯುವೆ.

ನಿನ್ನೆ ರಾತ್ರಿ ‘ಗೂಗಲ್ ಬಾಬಾ’ ನ ಬಳಿ ಸಹಿಷ್ಣುತೆ ಬಗ್ಗೆ ಮಾಹಿತಿ ಕೇಳಿದೆ. ನಮ್ಮ ಗೂಗಲ್ ಬಾಬಾ ಬಹಳ ಸಹಿಷ್ಣು. ಕೇಳಿದ್ದೆ ತಡ! ಪುಟಗಟ್ಟಲೆ ಮಾಹಿತಿ ತಂದು ನನ್ನ ಮುಂದೆ ಎಸೆದು.. ನನ್ನ ಸಹಿಷ್ಣುತಾ ಮಟ್ಟ ಪರೀಕ್ಷಿಸಿಯೇ ಬಿಟ್ಟರು. ನಾನೋ.. ತೀರ ಭಂಡ ಸ್ವಭಾವದವಳು. ನೋಡಿಯೇ ಬಿಡೋಣ ಎಂದು, ಓದುತ್ತ ಹೋದೆ. ಅದು ಯಾವಾಗ ನಿದ್ರೆ ಬಂತೋ! ಯಾವಾಗ ಮೊಬೈಲ್ ಕೈಯಿಂದ ಜಾರಿ ಮೈ ಮೇಲೆ ಬಿತ್ತೋ! ನನಗೆ ತಿಳಿಯಲಿಲ್ಲ.

ಅರ್ಧ ರಾತ್ರಿಯಲ್ಲಿ ಸಣ್ಣ ಧ್ವನಿಯಲ್ಲಿ ಕಿವಿಗೆ ಬಿದ್ದ ಮಾತುಕತೆ ಕೇಳಿ, ಗಂಡ ಮಗನ ಮೇಲೆ ಅಸಾಧ್ಯ ಕೋಪ ಬಂತು. ಅರೆ ನಿದ್ರೆಯಲ್ಲೇ.. ‘ಇನ್ನು ಮಲಗಿಲ್ಲವಾ? ಸಾಕು ನಿಮ್ಮ ಸಂಭಾಷಣೆ. ಇಬ್ಬರೂ ತೆಪ್ಪಗೆ ಮಲಗಿ’ ಎಂದು ಗೊಣಗಿದೆ. ಸರಿ, ಸ್ವಲ್ಪ ಹೊತ್ತು ಸುಮ್ಮನಿದ್ದ ಧ್ವನಿ ಮತ್ತೆ ಪ್ರಾರಂಭವಾಗಬೇಕೆ? ಈ ಬಾರಿ ಕೆರಳಿ ಕೆಂಡಾಮಂಡಲವಾಗಿ ಬೈಯಲು ಬಾಯಿ ತೆರೆದು, ಕಣ್ಣು ಬಿಟ್ಟರೆ ಏನು ನೋಡುವುದು! ಅಪ್ಪ-ಮಗ ಇಬ್ಬರೂ ಊರಿಗೆ ಕೇಳಿಸುವ ಹಾಗೆ ಗೊರಕೆ ಹೊಡೆಯುತ್ತಾ… ನಿದ್ರಾದೇವಿಯ ಮಡಿಲಲ್ಲಿ ಪವಡಿಸಿದ್ದಾರೆ.

ಅಯ್ಯೋ, ಈಗ ನನಗೆ ಭಯ ಪ್ರಾರಂಭವಾಯಿತು! ಇದು ಕಳ್ಳರ ಧ್ವನಿಯಾ? ಇಲ್ಲಾ.. ಭೂತ, ಪ್ರೇತ, ಪಿಶಾಚಿ ಎಲ್ಲವೂ ನೆನಪಾಗಿ ಆಂಜನೇಯನ ಮೊರೆ ಹೊಕ್ಕೆ. (ಈ ಧೈರ್ಯ ಇಲ್ಲದವರ ದೇವ ಇವನಲ್ಲವೇ?) ಆದರೂ, ಬಹಳ ಸೂಕ್ಷ್ಮವಾಗಿ ಮಾತನ್ನು ಆಲಿಸಲು ಎರಡೂ ಕಿವಿಗಳನ್ನು ತೆರೆದು ಇನ್ನಷ್ಟು ಅಗಲ ಮಾಡಿಕೊಂಡು ಅಲುಗದೇ ಮಲಗಿದೆ.

ಅರೆರೆ! ಏನು ಆಶ್ಚರ್ಯ? ಈ ಮಾತು ಹೊರಗಿನದಲ್ಲವೇ ಅಲ್ಲ. ನನ್ನೊಳಗಿನದೇ! ನನ್ನ ಕಣ್ಣು, ಮೂಗು, ಬಾಯಿ ಜಗಳಕ್ಕೆ ಬಿದ್ದುಬಿಟ್ಟಿದೆ. ಅವರವರ ಸಹಿಷ್ಣುತಾ ಗುಣದ ಬಗ್ಗೆ ಸ್ವತಃ ಗುಣಗಾನ ಪ್ರಾರಂಭವಾಗಿದೆ. ನನಗೂ ಇದು ಬಲು ಸ್ವಾರಸ್ಯ ಎನಿಸಿತು. ಕೇಳಿಯೇ ಬಿಡೋಣ… ಇವರುಗಳ ಸಹಿಷ್ಣುತಾ ಮಟ್ಟ, ಎಂದು ನಾನು ಕೇಳಲಾರಂಭಿಸಿದೆ.

ಕಣ್ಣು ಅರಚಿತು – ‘ನೋಡ್ರೋ! ಮೊದಲಾದರೆ ಊರೆಲ್ಲಾ ಹಸಿರಿತ್ತು. ಅದು ನನಗೆ ಎಂತಹ ತಂಪು ನೀಡುತ್ತಿತ್ತು. ಮನೆ ಗೋಡೆ ಸೆಗಣಿಯಿಂದ ಮಾಡಿದ್ದು ಅದೆಷ್ಟು ತಂಪಾಗಿತ್ತು. ಈಗ ಅದೆಲ್ಲ ಎಲ್ಲಿದೆ? ಊರ ತುಂಬ ಕಾಂಕ್ರೀಟ್ ಕಾಡು. ಬಿಸಿಲ ಝಳದಲ್ಲಿ ಅದನ್ನು ಕಂಡರೆ ನನಗೆ ಉರಿ ಬರುತ್ತದೆ. ಇನ್ನು ಮನೆಗಳೋ.. ರಂಗು ರಂಗೀಲಾ. ಅದನ್ನು ಕಂಡು ಕಂಡು ಬೇಸತ್ತಿದ್ದೇನೆ. ಟಿವಿ, ಕಂಪ್ಯೂಟರ್… ಅದೊಂದು ಮೊಬೈಲ್ ಬಂದ ಮೇಲಂತೂ.. ಹುಟ್ಟಿದ ಮಕ್ಕಳಿಗೂ ನನ್ನದೇ ಸಮಸ್ಯೆಯಾಗಿ ನನಗೇ ಎರಡು ಕಣ್ಣು ಅಳವಡಿಸಿಕೊಳ್ಳುತ್ತಾರೆ, ಈ ಮಾನವರು. ನನ್ನಷ್ಟು ಸಹಿಷ್ಣುಗಳಾ ನೀವು?’ ಎಂದಿತು.

ಈ ಮೂಗೇನು ಕಮ್ಮಿಯೇ? ‘ಹೋಗಲೋ! ನಾನೆಷ್ಟು ಸಹಿಷ್ಣು ಗೊತ್ತೇನು? ಮೊದಲಾದರೆ… ಊರ ತುಂಬಾ ದನ ಕರುಗಳ ಗಂಧ. ಇನ್ನು ಮನೆ ಮನೆಯಲ್ಲೂ ಹೂ ಗಿಡಗಳ ಸೌಗಂಧ. ನನಗೋ ಹಬ್ಬವೋ ಹಬ್ಬ. ಆದರೆ, ಇಂದು ಎಲ್ಲಾ ಕಡೆ ಹೊಳೆತ ದುರ್ನಾಥ. ಕಂಡ ಕಂಡಲ್ಲಿ ಕಸದ ರಾಶಿಯ ವಾಸನೆ. ಪ್ರಾಣಿ-ಪಕ್ಷಿಗಳ ಕೊಳೆತ ಹೆಣಗಳ ವಾಸನೆ. ಅಯ್ಯೋ! ಇಷ್ಟು ಸಾಲದ್ದಕ್ಕೆ ಈಗದೇನೋ.. ಆ ಹೊಸ ರೋಗಕ್ಕೆ ಈ ಮನುಷ್ಯರು ನನ್ನನ್ನೇ ಮುಚ್ಚಿಕೊಂಡು ತಿರುಗಾಡುತ್ತಾರೆ. ಇದನ್ನೆಲ್ಲಾ ನಾನು ಸಹಿಸಲಿಲ್ಲವೇ?’ ಎಂದಿತು.

ಈ ಬಾಯಿಯೊಂದು.. ಮಧ್ಯ ಬಾಯಿ ಹಾಕಿತು. ‘ಹಲೋ ಮಿತ್ರರೇ! ನಾನೆಷ್ಟು ಸಹಿಷ್ಣು ಗೊತ್ತೇನು? ಈ ಮನುಜರು ಮೊದಲೆಲ್ಲ ಬಹಳ ಸಾತ್ವಿಕ ಆಹಾರ ತಿನ್ನುತ್ತಿದ್ದರು. ಕೆಲಸ ಹೆಚ್ಚು – ಮಾತು ಕಮ್ಮಿ.. ಎಂಬಂತೆ ಬದುಕುತ್ತಿದ್ದರು. ಇಂದು ಅದೇನೋ ಪಿಜ್ಜಾ ಅಂತೆ ಅಜ್ಜಾ ಅಂತೆ. ಅದನ್ನು ಎಳೆದೆಳೆದು ತಿನ್ನುವ ನನ್ನ ಪಾಡು ನಾಯಿ ಪಾಡಿಗಿಂತ ಕಡೆ. ಮಾತೆಲ್ಲ ಆಡುವವರು ಮನುಜರು. ಕೊನೆಗೆ ದೂರು ಮಾತ್ರ ನನ್ನ ಮೇಲೆ. ಜೊತೆಗೆ ದೊಡ್ಡ ದೊಡ್ಡ ಜುರುಕಿ ಎಳೆದು ಆ ತಂಬಾಕು ತುಂಬಿದ ಚುಟ್ಟಾ, ಸಿಗರೇಟುಗಳ ಸೇವನೆ ಬೇರೆ! ಅಬ್ಬಬ್ಬಾ… ನಾನೇನಾದರೂ ಮರದಿಂದ ಮಾಡಿದ್ದೇ ಆಗಿದ್ದರೆ, ಈ ಮನುಜನ ಮಾತಿಗೆ ಎಂದೋ ಒಡೆದು ಹೋಗುತ್ತಿದ್ದೆ’ ಎಂದಿತು.

ಇದೆಲ್ಲದರ ಮಾತು ಕೇಳುತ್ತಾ ಮೌನವಾಗಿ ಕುಳಿತ ಕಿವಿ ಕಿಸಕ್ಕನೆ ನಕ್ಕು ನುಡಿಯಿತು… ‘ಅಯ್ಯೋ ಹುಚ್ಚಪ್ಪಗಳಿರಾ! ನನಗಿಂತಲೂ ಸಹಿಷ್ಣುಗಳೇ ನೀವು? ಹಿಂದೆ ಎಷ್ಟು ಪ್ರಶಾಂತವಾಗಿದ್ದ ವಾತಾವರಣ ಇಂದೇನಾಗಿದೆ ಎಂದು ನಿಮಗೆ ಗೊತ್ತು. ಕಾರ್ಖಾನೆಗಳ ಕಿವಿಗಡಚಿಕ್ಕುವ ಶಬ್ದ. ಬಸ್ಸು, ಕಾರು, ಲಾರಿ, ಬೈಕ್ಗಳ ಹಾರ್ನ್. ಈ ಮನುಷ್ಯನೋ ಟ್ರಾಫಿಕ್ ಜಾಮ್ ಆದರೆ ಎರಡು ಸೆಕೆಂಡಿಗೆ ಅಸಹನೆಯಿಂದ ಕಠೋರವಾದ ಪಿ…ಪಿ… ಎಂದು ಹಾರ್ನ್ ಬಾರಿಸಲು ಪ್ರಾರಂಭಿಸಿದರೆ, ನನ್ನ ಕಥೆ ಏನಾಗಬೇಡ? ಇದೆಲ್ಲಾ ಹೋಗಲಿ ಎಂದು ಹೇಗೊ ಸಹಿಸಿದರು, ನನ್ನ ಇತ್ತೀಚಿನ ಸ್ಥಿತಿ ಒಳ್ಳೆ ಮನುಷ್ಯ ಬಟ್ಟೆ ಒಣಗಿಸುವ ಹ್ಯಾಂಗರ್ ನಂತಾಗಿದೆ. ಮೊದಲಾದರೆ ಈ ನಾರಿಮಣಿಗಳು ನನ್ನ ಅಂದ ಹೆಚ್ಚಿಸಲು ಒಂದೆರಡು ಕಡೆ ನನಗೆ ಚುಚ್ಚಿ ಚಂದದ ಓಲೆ ಇಡುತ್ತಿದ್ದರು. ಇಂದು ಆ ದೇವಸ್ಥಾನದ ಗಂಟೆಗಿಂತಲೂ ದೊಡ್ಡ ಲೋಲಾಕು ನೇತಾಕಿ ನನ್ನ ಕಿರ್ರೋ.. ಅನಿಸುತ್ತಾರೆ. ಇಷ್ಟಕ್ಕೆ ಮುಗಿಯಿತೇ? ಕನ್ನಡಕಕ್ಕೂ.. ಮಾಸ್ಕಿಗೂ.. ನಾನೇ ಆಧಾರಸ್ತಂಭ. ಸಾಲದ್ದಕ್ಕೆ ಅದೇನೊ ಇಯರ್ ಫೋನ್ ಕೂಡ ನನಗೆ ನೇತು ಬಿದ್ದಿರುತ್ತದೆ. ನೋಡಿ ನನ್ನ ಈ ಪರಿಯ ಸ್ಥಿತಿ! ಭಗವಂತನಲ್ಲಿ ಅನುದಿನ ಮೊರೆಯಿಡುತ್ತಿದ್ದೇನೆ. ಮುಂದಿನ ಜನರೇಷನ್ ಗಾದರೂ ಗಣಪನಂತೆ ಆನೆ ಕಿವಿಯನ್ನು ಕರುಣಿಸೆಂದು…’ ಎಂದಿತು. ಇದರ ಮಾತಿನಲ್ಲಿದ್ದ ಸತ್ಯದ ಅರಿವಾಗಿ ಉಳಿದ ಮೂವರು ಮೌನವಾದರು.

ಇದನ್ನೆಲ್ಲಾ ಕೇಳುತ್ತಿದ್ದ ನನಗೆ, ಅರೆ! ಹೌದಲ್ಲ… ಇತ್ತೀಚಿಗೆ ನಮ್ಮ ದೇಹದ ಉಳಿದೆಲ್ಲಾ ಭಾಗಗಳಿಗಿಂತ ಹೆಚ್ಚು ಕಿವಿಗೆ ಎಂತಹ ದಯನೀಯ ಪರಿಸ್ಥಿತಿ ಬಂತು ಎನಿಸಿದ್ದು ಸುಳ್ಳಲ್ಲ.

ಜನಮಿಡಿತಕ್ಕಾಗಿ…

– ಸುಮಾ ಕಿರಣ್

Leave a Reply

Your email address will not be published. Required fields are marked *