ನಂದಿಗುಡಿಯ ಕಲಾತ್ಮಕ ನಂದಿ

ನಾಡಿನ ದೇವಾಲಯಗಳಲ್ಲಿ ಬಹು ದೊಡ್ಡ ಕೊಡುಗೆ ನೀಡಿದವರು ಕಲ್ಯಾಣ ಚಾಲುಕ್ಯರು ಅವರ ಹಲವು ದೇವಾಲಯಗಳು ದಾವಣಗೆರೆಯ ಪರಿಸರದಲ್ಲಿದ್ದು ಅವುಗಳಲ್ಲಿ ಬೃಹತ್ ನಂದಿ ಇರುವ ಹಲವು ದೇವಾಲಯಗಳಿವೆ. ಅಂತಹ ಸುಂದರ ದೇವಾಲಯಗಳಲ್ಲಿ ಹರಿಹರ ತಾಲ್ಲೂಕಿನ ನಂದಿಗುಡಿಯೂ ಒಂದು.

ಇತಿಹಾಸ ಪುಟದಲ್ಲಿ ಪ್ರಮುಖ ಗ್ರಾಮವಾಗಿ ಗುರುತಿಸಿಕೊಂಡಿದ್ದ ಇಲ್ಲಿ ರಾಷ್ಟ್ರಕೂಟರ ಕಾಲದ ಶಾಸನ ಲಭ್ಯವಿದ್ದು ಅಲ್ಲಿಂದಲೂ ಇದರ ಅಸ್ತಿತ್ವ ನೋಡಬಹುದು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದು ನಂತರ ಕಾಲದಲ್ಲಿಯೂ ಗುರುತಿಸಿಕೊಂಡಿತ್ತು.

ಸಾಕಷ್ಟು ನವೀಕರಣಗೊಂಡಿರುವ ಇಲ್ಲಿನ ಮಲ್ಲಿಕಾರ್ಜುನ ದೇವಾಲಯ ಇಲ್ಲಿನ ಬೃಹತ್ ನಂದಿಯಿಂದ ಬಸವೇಶ್ವರ ದೇವಾಲಯ ಎಂದೇ ಗುರುತಿಸಿಕೊಂಡಿದ್ದು ಗ್ರಾಮವನ್ನು ನಂದಿಗುಡಿ ಎಂದೇ ಕರೆದಿರುವುದು ವಿಷೇಶ. ದೇವಾಲಯದ ಒಳ ಭಾಗದ ಕೆಲ ಭಾಗಗಳು, ಕಂಭಗಳು ಬಾಗಿಲುವಾಡ ಹೊರತು ಪಡಿಸಿ ಸಂಪೂರ್ಣವಾಗಿ ನವೀಕರಣಗೊಂಡಿರುವ ಈ ದೇವಾಲಯದಲ್ಲಿ ಹಳೆಯ ಶಿಲ್ಪಗಳನ್ನು ಮಾತ್ರ ಉಳಿಸಿ ಕೊಳ್ಳಲಾಗಿದೆ. ಮೂಲ ದೇವಾಲಯದ ಕಲ್ಪನೆ ಸಿಗದಿದ್ದರೂ ಹಲವು ಕೆತ್ತೆನೆಯಿಂದ ಇದು ಪ್ರಮುಖ ದೇವಾಲಯ.

ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಮಲ್ಲಿಕಾರ್ಜುನ ಎಂದು ಕರೆಯುವ ಶಿವಲಿಂಗವಿದೆ. ಇನ್ನು ಗರ್ಭಗುಡಿಯ ಬಾಗಿಲುವಾಡ ಸಂಪೂರ್ಣವಾಗಿ ನವೀಕರಣಗೊಂಡಿದ್ದು ಅಂತರಾಳದಲ್ಲಿ ಚಿಕ್ಕ ನಂದಿ ಇದೆ. ಇನ್ನು ಅಂತರಾಳದ ಬಾಗಿಲುವಾಡ ಅತ್ಯಂತ ಕಲಾತ್ಮಕವಾಗಿ ಇದ್ದು ಹಾಗೇ ಹೊಸ ದ್ವಾರಕ್ಕೆ ಹೊಂದಿಸಲಾಗಿದೆ. ಹಾಗಾಗಿ ಲಲಾಟದಲ್ಲಿ ಯಾವುದೇ ಭಾಗ ಇರದೇ ಉಳಿಸಿಕೊಂಡ ಮಕರತೋರಣದಲ್ಲಿ ಬ್ರಹ್ಮ, ನಾಟ್ಯಶಿವ ಹಾಗು ವಿಷ್ಣುವಿನ ಕೆತ್ತೆನೆ ನೋಡಬಹುದು. ಇನ್ನು ಬಾಗಿಲುವಾಡದ ಪಟ್ಟಿಕೆಗಳಲ್ಲಿ ವಜ್ರ ಹಾಗು ಲತಾ ಶಾಖೆ ಇದ್ದು ಅರ್ಧ ಕಂಭಗಳು ಹಾಗು ಪಕ್ಕದಲ್ಲಿ ಸಂದರವಾದ ಜಾಲಂದ್ರವಿದೆ. ಇಲ್ಲಿ ನೃತ್ಯಗಾರರು ಹಾಗು ದೇವತೆಗಳ ಶಿಲ್ಪ ಇದ್ದು ಕೆಲ ಭಾಗಗಳು ನಾಶವಾಗಿದೆ. ಇನ್ನು ಶೈವ ದ್ವಾರಪಾಲಕರ ಕೆತ್ತೆನೆ ಇದೆ. ಇಷ್ಟು ದೊಡ್ಡ ಪ್ರಮಾಣದ ದ್ವಾರಪಾಲಕರು ಈ ಭಾಗದಲ್ಲಿ ಅಪುರೂಪವಾಗಿದ್ದು ಸುಮರು 5 -6 ಅಡಿ ಎತ್ತರದಲ್ಲಿ ನಾಲ್ಕು ಕೈಗಳು ಹಾಗು ತ್ರಿಭಂಗಿಯಲ್ಲಿದ್ದು ಕೈನಲ್ಲಿನ ಭರ್ಜಿ ಹಾಗು ಡಮರುಗದ ಕೆತ್ತೆನೆ ಗಮನ ಸೆಳೆಯುತ್ತದೆ.

ಇನ್ನು ನವರಂಗದಲ್ಲಿ ಸುಂದರವಾದ ತಿರುಗಣೆಯ ಚಾಲುಕ್ಯರ ಕಾಲದ ಕಂಭಗಳಿದ್ದು ಮಧ್ಯದಲ್ಲಿ ಬೄಹತ್ ಗಾತ್ರದ ಕುಳಿತ ಭಂಗಿಯಲ್ಲಿನ ನಂದಿ ಇದೆ. ನಂದಿ ವಿಗ್ರಹ ಸಮಾರು ಆರು ಆಡಿ ಎತ್ತರವಿದ್ದು ೮ ಅಡಿ ಉದ್ದ ಹಾಗು ೪ ಆಡಿ ಅಗಲ ಇದೆ. ಮಲಗಿದ ಭಂಗಿಯಲ್ಲಿರುವ ನಂದಿ ಬಲಗಾಲು ಮಡಚಿಕೊಂಡು ಎಡಗಾಲನ್ನು ಮುಂದೆ ಚಾಚಿದಂತೆ ಕೆತ್ತೆಲಾಗಿದೆ. ದಪ್ಪನೆಯ ಕೊಂಬಗಳು, ವಿಶಾಲವಾದ ಹಣೆ ಹೊಂದಿದ್ದು ಘಂಟಾ ಹಾರ ನಂದಿಯನ್ನ ಬಳಸಿ ಘಂಟೆಯನ್ನು ಸೇರುತ್ತದೆ. ಕೊಂಬಿನ ಸುತ್ತಲಿನ ಹಣೆಪಟ್ಟಿಯು ವಿವಿಧ ಅಲಂಕಾರಗಳಿಂದ ಅಲಂಕೄತಗೊಂಡಿದೆ. ಇಲ್ಲಿ ರಥೋತ್ಸವ ಸಮಯದಲ್ಲಿ ನಂದಿಗೆ ಬಾಸಿಂಗ ಧಾರಣೆ ನಡೆಯಲ್ಲಿದ್ದು ನಂದಿ ದ್ವಜ, ನಂದಿ ಕೋಲು, ನಂದಿ ದ್ವಜಾರೋಹಣ, ಕಂಕಣಧಾರಣೆ ಹಾಗು ಉತ್ಸವ ಮೂರ್ತಿಯ ಮೆರವಣಿಗೆ ಗಮನ ಸೆಳೆಯುತ್ತದೆ. ಇನ್ನು ನವರಂಗದಲ್ಲಿನ ನೂತನವಾಗಿ ನಿರ್ಮಿಸಿದ ಕೋಷ್ಟಕಗಳಲ್ಲಿ ಗಣಪತಿ, ಮಹಿಷಮರ್ದಿನಿ, ನಂದಿ, ಸಪ್ತಮಾತೃಕೆಯರು ಶಿಲ್ಪಗಳನ್ನು ಇರಿಸಲಾಗಿದೆ. ನಂದಿಯ ಹಿಂಭಾಗದಲ್ಲಿನ ಕೋಷ್ಟಕದಲ್ಲಿ ಸೂರ್ಯನ ಶಿಲ್ಪವಿದೆ. ನವರಂಗದ ವಿತಾನದಲ್ಲಿ ಕಮಲದ ರಚನೆಯಿದೆ.

ದೇವಾಲಯದ ಹಲವು ಭಾಗಗಳಲ್ಲಿ ಗ್ರಾನೈಟ್ ಹಾಕಲಾಗಿದ್ದು ಸುಂದರವಾದ ಕಂಭಗಳ ಕೆಳ ಭಾಗಗಳನ್ನು ಮುಚ್ಚಲಾಗಿದೆ. ಹೊರ ಭಿತ್ತಿಯೂ ಸಂಪೂರ್ಣವಾಗಿ ಹೊಸದಾಗಿ ನಿರ್ಮಾಣವಾಗಿದ್ದು ನೂತನವಾಗಿ ಗಾರೆಯಲ್ಲಿ ನಿರ್ಮಿಸಿದ ಶಿಖರವಿದೆ.

ತಲುಪುವ ಬಗ್ಗೆ : ಹರಿಹರ – ಶಿವಮೊಗ್ಗ ರಸ್ತೆಯಲ್ಲಿ ನಂದಿಗುಡಿ ತಿರುವಿನಲ್ಲಿ ಹರಿಹರದಿಂದ ಸುಮಾರು 26 ಕಿ ಮೀ ದೂರದಲ್ಲಿದೆ.

ಶ್ರೀನಿವಾಸ ಮೂರ್ತಿ ಎನ್ ಎಸ್

Leave a Reply

Your email address will not be published. Required fields are marked *