ಧರ್ಮ ಒಡೆಯುವವರಿಗೆ ತಕ್ಕ ಶಾಸ್ತಿ: ರಂಭಾಪುರಿ ಶ್ರೀ
ವೀರಶೈವ, ಲಿಂಗಾಯಿತ ಎರಡೂ ಒಂದೇ, ಇವೆರಡೂ ಬೇರೆಯಲ್ಲ. ರಾಜಕಾರಣಿಗಳು ಇದನ್ನು ಬೇರ್ಪಡಿಸಲು ಮುಂದಾಗಿದ್ದಾರೆ. ಆದರೆ ಅದು ಯಾವತ್ತೂ ಸಾಧ್ಯವಾಗುವುದಿಲ್ಲ ಎಂದು ರಂಭಾಪುರಿ ಶ್ರೀ ವೀರಸೋಮೇಶ್ವರ ಜಗದ್ಗುರುಗಳು ಭಾನುವಾರ ಹೇಳಿದರು.
ವಿಜಯಪುರ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿ, ಧರ್ಮ ಒಡೆಯಲು ಮುಂದಾಗಿರುವ ರಾಜ್ಯಸರ್ಕಾರಕ್ಕೆ ಜನರೇ ಪಾಠ ಕಲಿಸಲಿದ್ದಾರೆ. ರಾಜಕೀಯ ವ್ಯಕ್ತಿಗಳು ಧರ್ಮ ಪೀಠಗಳ ಜತೆ ಸರಿಯಾಗಿ ನಡೆದುಕೊಳ್ಳದೆ ಇದ್ದರೆ ಪಂಚಪೀಠಗಳು ಏನು ಎಂಬುದನ್ನು ತಿಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈವರೆಗೆ ಪಂಚಪೀಠಗಳು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಒಂದು ವೇಳೆ ಮಾಡಿದರೆ ಅದರ ಪರಿಣಾಮ ಗಾಢವಾಗಿರುತ್ತದೆ. ವಿಜಯಪುರದಿಂದ ಧರ್ಮಯುದ್ಧ ಆರಂಭವಾಗಿದ್ದು ಎಲ್ಲೆಲ್ಲಿ ಸಮಾವೇಶ ಮಾಡಬೇಕೆಂಬುದನ್ನು ಚಿಂತಿಸಲಾಗುತ್ತಿದೆ. ವೀರಶೈವ ಲಿಂಗಾಯಿತಗಳು ಒಂದೇಯಾಗಿದ್ದು, ಗುರುವಿರಕ್ತ ಎಲ್ಲ ಮಠಾಧೀಶರೂ ಈ ನಿರ್ಧಾರಕ್ಕೆ ಬದ್ಧ. ರಾಜಕಾರಣಿಗಳೂ ಕೋರ್ಟಿಗಾದರೂ ಹೋಗಲಿ, ಎಲ್ಲಿಗಾದರೂ ಹೋಗಲಿ ವೀರಶೈವ ಲಿಂಗಾಯಿತ ಸಮಗ್ರತೆಗೆ ಹೋರಾಡುವುದೇ ಪಂಚ ಪೀಠಾಧಿಪತಿಗಳ ಮುಖ್ಯ ಉದ್ದೇಶ ಎಂದು ಹೇಳಿದರು.
ಧರ್ಮ ಒಡೆದರೆ ಸಹಿಸುವುದಿಲ್ಲ: ಶ್ರೀಶೈಲ ಪೀಠದ ಜಗದ್ಗುಗಳು ಮಾತನಾಡಿ, ಹೊತ್ತಿಕೊಂಡಿರುವ ಬೆಂಕಿಯಿಂದ ಧರ್ಮವನ್ನು ಕಾಪಾಡಿಕೊಳ್ಳಬೇಕು. ಸ್ವಾಮೀಜಿಗಳು ಮಠಗಳಿಗೆ ಏನಾದರೂ ಸಹಿಸಿಕೊಳ್ಳುತ್ತೇವೆ. ಆದರೆ ಧರ್ಮ ಒಡೆಯಲು ಬಂದರೆ ಸಹಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಕಾಶಿ ಜಗದ್ಗುರುಗಳು ಮಾತನಾಡಿ, ಲಿಂಗಾಯಿತ ಒಡೆಯಲು ಹೋದವರು ಎರಡು ಭಾಗವಲ್ಲ. ಮೂರು ಭಾಗ ಮಾಡಿದ್ದಾರೆ. ಸರ್ಕಾರಕ್ಕೆ ಲಾಭ ಮಾಡಿಕೊಂಡಿದಾರೆ. ಜನತೆ ಹಾಗೂ ಸ್ವಾಮಿಜಿಗಳು ಅಂಥವರಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಸವನಬಾಗೇವಾಡಿ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿ ಮಾತನಾಡಿ, ಏ.13ರಂದು ಸಿಂಧಗಿ ಸಾರಂಗಮಠದಲ್ಲಿ ಸಮಾವೇಶ ನಡೆಯಲ್ಲಿದ್ದು, ಜು.29ರಂದು ತಾಂಬಾದಲ್ಲಿ ನಡೆಸಲಾಗುವುದು. ಬಂಥನಾಳ, ಬಳ್ಳಾರಿ ಗ್ರಾಮಾಂತರದಲ್ಲಿಯೂ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪಂಚಪೀಠದ ಮಠಾಧೀಶರು ಭಾಗವಹಿಸುವರು ಎಂದು ತಿಳಿಸಿದರು.
ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್ ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯರು, ಜಾಲಹಳ್ಳಿ ಮಠಾಧೀಶರು ಭಾಗವಹಿಸಿದ್ದರು. ಧರ್ಮ ವಿರೋಧಿಗಳನ್ನು ಉಳಿಸುವುದಿಲ್ಲ.
ಎಂ.ಬಿ.ಪಾಟೀಲರಿಗೆ ಬುದ್ಧಿ ಕಲಿಸಲು ಗಂಡಸರು ಬೇಕಿಲ್ಲ, ನಮ್ಮ ಕೈಗೆ ಖಡ್ಗ, ಒನಕೆ ಕೊಡಿ : ಮಹಿಳೆಯರ ಆಕ್ರೋಶ
ದರ್ಬಾರ್ ಹೈಸ್ಕೂಲ್‍ನಲ್ಲಿ ನಡೆದ ಸಮಾವೇಶದಲ್ಲಿ ಮಹಿಳೆಯರು ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಧರ್ಮಕ್ಕೆ ನೀವು ಕೈ ಹಾಕಿದ್ದು ಸರಿಯಲ್ಲ. ಒಂದು ಒನಕೆ, ಖಡ್ಗ ಕೊಟ್ಟರೆ ಸಾಕು ಎಷ್ಟೇ ಧರ್ಮವಿರೋಧಿಗಳು ಬಂದರೂ ಪೀಸ್ ಪೀಸ್ ಮಾಡುತ್ತೇವೆ. ಜೈಲಿಗೆ ಹೋದರೂ ಪರವಾಗಿಲ್ಲ ಎಂದು ಕಲಬುರಗಿ ಜಿಲ್ಲೆಯ ದಿವ್ಯಾ ಹಾವರಗಿ ಸೇರಿದಂತೆ
ಅನೇಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.