“ದೇವಸ್ಥಾನದ ಪ್ರಸಾದ ತಿಂದು ಬದುಕುವೆ. ಆದರೆ ಬದುಕುವುದಕ್ಕಾಗಿ ಸುಳ್ಳುಗಳ ಕಂತೆ ಪೋಣಿಸುತ್ತ ರಾಷ್ಟ್ರದ ಪ್ರಧಾನಿಯನ್ನು ಯಾವದೇ ಆಧಾರವಿಲ್ಲದೆ ಕ್ಷುಲಕವಾಗಿ ನಿಂದಿಸುವ ಕೊಳಕು ಕೆಲಸ ಮಾಡಲಾರೆ…”

ನನಗೆ ಗೊತ್ತಿರುವ ಕೆಲಸ ಜರ್ನಲಿಸಂ ಮಾತ್ರ. ಇದರಿಂದ ಬರುವ ಸಂಬಳದಲ್ಲೇ ಜೀವನ. ಇದನ್ನು ಬಿಟ್ಟರೆ, ಜೀವನ ನಡೆಸಲು ಮತ್ತೊಂದು ಹಣದ ಮೂಲ ಅಂತಲೂ ನನಗಿಲ್ಲ. ಆದರೆ, ಹಾಗಂತ ಈ ರೀತಿ ವೃತ್ತಿ ಧರ್ಮವನ್ನು ಮರೆತು, ಸುಳ್ಳು,ದ್ವೇಷದ ಬಲೆ ಹೆಣೆಯುತ್ತ ಸಮಾಜಕ್ಕೆ ತಪ್ಪು ಸಂದೇಶ ನೀಡುವಂತ ವಿಧ್ವಂಸಕ ಕೆಲಸವನ್ನು ಸಂಬಳಕ್ಕಾಗಿ ಮಾಡುವ ಬದಲು, ದೇವಸ್ಥಾನದ ಪ್ರಸಾದ ಆದರೂ ತಿಂದು ಬದುಕುತ್ತೇನೆ.

ಯಾವುದೇ ಆಧಾರಗಳಿಲ್ಲದೇ, ಪ್ರತಿ ದಿನ ದೇಶದ ಪ್ರಧಾನಿಯನ್ನು ಬಯ್ಯುತ್ತ ಕೂರಬೇಕು ಎನ್ನುವ ಏಕಮಾತ್ರ ಅಜೆಂಡದ ಒತ್ತಡ, ಬಯ್ಯಲಿಕ್ಕೆಂದೆ ಬ್ರೈನ್ ವಾಷ್ ಸೆಷೆನ್ನುಗಳು. ನ್ಯೂಸ್ ಚಾನೆಲ್ ಒಂದರ ಕಾರ್ಯ ಶೈಲಿಗೂ – ಪ್ರಧಾನಿಯವರನ್ನು ವಿರೋಧಿಸಲೇಬೇಕು ಎಂದು ವಿರೋಧಿಸುವ ವಿರೋಧ ಪಕ್ಷಗಳ ಕಾರ್ಯಶೈಲಿಯ ನಡುವೆ ಅಂತಹದ್ದೇನೂ ವ್ಯತ್ಯಾಸವು ನನಗೆ ಅಲ್ಲಿ ಕಾಣಿಸಲಿಲ್ಲ. ಈ ಕುರಿತ ನನ್ನ ಪ್ರಶ್ನೆಗಳಿಗೂ ಉತ್ತರ ಸಿಗಲಿಲ್ಲ. ಇಂತಹ ಕೆಲಸ ಖಂಡಿತ ಜರ್ನಲಿಸಂ ಅಲ್ಲ. ಜರ್ನಲಿಸಂ ಹೆಸರಿನಲ್ಲಿ ಈ ಅಸಹ್ಯವನ್ನು ಸಹಿಸಿಕೊಳ್ಳಲು ಆತ್ಮ ಸಾಕ್ಷಿ ಒಪ್ಪಲಿಲ್ಲ. ಕೆಲಸವಿಲ್ಲದೇ ಬದುಕು ಕಷ್ಟವಾಗಬಹುದು. ಆದರೆ, ವೃತ್ತಿಧರ್ಮ,ಆತ್ಮಸಾಕ್ಷಿಗೆ ಮೋಸ ಮಾಡಿಕೊಂಡು ನನಗೆ ಇರಲಾಗದು. ಹೀಗಾಗಿ ರಾಜೀನಾಮೆ ನೀಡಿ ಹೊರ ಬಂದೆ.

ಸದ್ಯಕ್ಕೆ ಕೈಯಲ್ಲಿ ಕೆಲಸವಿಲ್ಲ. ದೇವರು ಏನಾದರೂ ದಾರಿ ತೋರಿಸುತ್ತಾನೆ ಬಿಡಿ…”

ಅಬ್ಬಾ! ಎಂತಹ ಕ್ಲಾರಿಟಿಯ ಮಾತುಗಳು. ಸಾಮಾನ್ಯ ವ್ಯಕ್ತಿಯ ಹೃದಯದಲ್ಲಿ ಇಂತಹ ಜ್ವಾಲೆ ಹುಟ್ಟಲು ಸಾಧ್ಯವೆ? ರಾಷ್ಟ್ರವನ್ನು ಆಪ್ತವಾಗಿ ಪ್ರೀತಿಸುವವರ ಹೃದಯದಿಂದ ಮಾತ್ರ ಇಂತಹ ಖಡಕ್ ನಿರ್ಣಯಗಳು ಹುಟ್ಟಲು ಸಾಧ್ಯ.

ಕರ್ನಾಟಕದ ಮಾಧ್ಯಮ ಜಗತ್ತಿನಲ್ಲಿ ತಮ್ಮದೆ ಚಾಪು ಮೂಡಿಸಿರುವ ಶ್ರೀಲಕ್ಷ್ಮಿಯವರ ನುಡಿಗಳಿವು. Tv5 ನಿಂದ ಶ್ರೀಲಕ್ಷ್ಮೀಯವರು ಹೊರಬಂದರು ಎಂಬ ಸುದ್ದಿ ಕೇಳಿ ಅವರಿಗೆ ಪೋನ್ ಮೂಲಕ ಮಾತನಾಡಿದಾಗ ಅವರ ಹೃದಯದಿಂದ ಬಂದ ಮಾತುಗಳಿವು. ನೈತಿಕವಾಗಿ ಕೆಳಮಟ್ಟಕ್ಕೆ ಇಳಿಯಲೊಪ್ಪದೆ, ಚಾನೆಲ್ಲಿಗೆ ರಾಜೀನಾಮೆ ಕೊಟ್ಟು ನೈತಿಕವಾಗಿ ಬಹು ಎತ್ತರಕ್ಕೆ ಏರಿರುವ ಶ್ರೀಲಕ್ಷ್ಮಿಯವರ ಮಾತುಗಳನ್ನು ಕೇಳುತ್ತಲೆ ಶಭಾಷ್ ಅನ್ನಿಸಿತು.ಇಂದಿನ ಮಾಧ್ಯಮಗಳ ವ್ಯಾಪಾರೀಕರಣದ ಯುಗದಲ್ಲೂ ವೃತ್ತಿಧರ್ಮ, ಸತ್ಯಕ್ಕಾಗಿ ಸಂಘರ್ಷ ನಡೆಸುವ ಇಂತಹ ಪತ್ರಕರ್ತರು ನಿಜವಾದ ಪ್ರೇರಣೆ.

ಅವರ ವೃತ್ತಿ ಧರ್ಮದ ಬದ್ಧತೆಯ ಬಗ್ಗೆ ನಿಜಕ್ಕೂ ಹೆಮ್ಮೆಯೆನಿಸಿತು. ಎಷ್ಟೋ ಜನ ಹಣದ ಮುಖ ನೋಡಿಕೊಂಡು ಒಲ್ಲದ ಕೆಲಸ ಮಾಡುವಾಗ, ಈ ಕೆಲಸ ಬಿಟ್ಟರೆ ಮುಂದಿನ ತಿಂಗಳ ಖರ್ಚಿಗೇನು ಮಾಡುವುದು ಎನ್ನುವ ಸ್ಥಿತಿಯಲ್ಲೂ ಇಂತಹ ನಿರ್ಧಾರ ತೆಗೆದುಕೊಳ್ಳಲು ವೃತ್ತಿ ಧರ್ಮದ ಬಗ್ಗೆ ಸೈದ್ಧಾಂತಿಕ ಬದ್ಧತೆ ಇದ್ದವರಿಗೆ ಮಾತ್ರವೇ ಸಾಧ್ಯ.

ನಿಜ ಹೇಳಬೇಕೆಂದರೆ, ಶ್ರೀಲಕ್ಷ್ಮಿಯವರ ರಾಜೀನಾಮೆಯ ಸುದ್ದಿ ನನಗೆ ಆಶ್ಚರ್ಯ ಅನ್ನಿಸಲಿಲ್ಲ. ಅದು ನಿರೀಕ್ಷಿತವೇ ಆಗಿತ್ತು.

ಕೆಲವರು ಹೇಳುವಂತೆ, ಅವರಿದ್ದ ಚಾನೆಲ್ ತಿಂಗಳಿಗೆ ಕನಿಷ್ಟ 50 ಲಕ್ಷ ಲಾಸ್ ಅನುಭವಿಸುತ್ತಿದೆ. ಆ ನಷ್ಟವನ್ನು ಸರಿದೂಗಿಸಲು ಯಾರು ಪಂಪ್ ಮಾಡುತ್ತಿರಬಹುದು ಎನ್ನುವ ಕುತೂಹಲದ ಚರ್ಚೆ ಮಾಧ್ಯಮ ಲೋಕದಲ್ಲೂ, ಸೋಷಿಯಲ್ ಮೀಡಿಯಾದಲ್ಲೂ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಅವರೂ ಕೂಡ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತ, ನಾವು ಸುಭಗರು ಅಂತೆಲ್ಲ ಕ್ಲಾರಿಫಿಕೇಷನ್ ಕೊಡುತ್ತಿದ್ದಾರೆ.

ಆದರೆ, ಬಲ್ಲ ಮೂಲಗಳ ಪ್ರಕಾರ ಮಧ್ಯಪ್ರದೇಶದ ಮೋದಿ ವಿರೋಧಿಸುವ ವ್ಯಕ್ತಿಯ ಹಿಡಿತದಲ್ಲಿರುವ ಕನ್ನಡದ Tv5 ಗೆ ಸದಾಶಿವನಗರದ ನಲ್ಲಿಯಿಂದ ಹರಿದು ಬರುತ್ತಿರುವ ನೀರು ಸೇರಿ, ಆ ನೀರಿನ ಗುಣವೋ ಏನೋ, ಚಾನೆಲ್ಲಿನ ಆ್ಯಕಂರ್ಗಳು ದೆವ್ವ ಬಂದಂತೆ ಒಂದೇ ಸಮನೆ ಅರಚಿಕೊಳ್ಳುತಿದ್ದಾರೆ. ಪ್ರತಿದಿನ ದೇಶದ ಪ್ರಧಾನಿಯವರ ವಿರುದ್ಧ, ಕೊರೊನಾ ಹೋರಾಟದ ಅಷ್ಟೂ effort ಅನ್ನು ಏನೂ ಅಲ್ಲವೇ ಅಲ್ಲ ಎನ್ನುವಂತೆ ಬಿಂಬಿಸಿ ಬೊಬ್ಬಿಡುತ್ತಿದ್ದಾರೆ.

ದೇಶದ ಕೋಟ್ಯಾಂತರ ಜನರು ಶ್ರದ್ದೆಯಿಂದ ಗೌರವಿಸುವ ಪ್ರಧಾನಿಯನ್ನು “ಏನೋ ಮಾಡ್ತಿದ್ದೀಯಾ?” ಎಂದು ಏಕವಚನದಲ್ಲಿ ದಿನವಿಡಿ ಸಂಭೋದಿಸುವ ಆ್ಯಂಕರ್ ಗಳು ಇರುವ ಚಾನೆಲ್ಲಿನಲ್ಲಿ, ವೃತ್ತಿ ಧರ್ಮವನ್ನು ಗೌರವಿಸುವ ಶ್ರೀಲಕ್ಷ್ಮಿಯವರಂತ ಪತ್ರಕರ್ತರು ಇರಲಿಕ್ಕಾದರೂ ಹೇಗೆ ಸಾಧ್ಯ ಅಲ್ಲವೇ?

ಬದುಕಿಗಾಗಿ ಸಿದ್ಧಾಂತವನ್ನು ಬಲಿ ಕೊಡದೆ, ವ್ಯಾಪಾರಿ ಸಂಸ್ಥೆಯಿಂದ ಹೊರ ಬಂದಿರುವ ಶ್ರೀಲಕ್ಷ್ಮಿಯವರೇ ಹಾಟ್ಸಪ್ ನಿಮಗೆ…

ನಿಮ್ಮ ವೃತ್ತಿಧರ್ಮದ ಬದ್ಧತೆಯ ಕಾರಣಕ್ಕೆ ಅಸಂಖ್ಯಾತ ಅಭಿಮಾನಿಗಳ ಬಳಗವನ್ನು ನೀವು ಸೃಷ್ಟಿಸಿಕೊಳ್ಳಲಿದ್ದಿರಿ. ಅವರೇ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತಾರೆ.

ನಿಮ್ಮಂತ ರಾಷ್ಟ್ರವಾದಿ ಪತ್ರಕರ್ತರ ಸಂಖ್ಯೆ ಸಾವಿರವಾಗಲಿ…

Leave a Reply

Your email address will not be published. Required fields are marked *