ದಾವಣಗೆರೆಯ ಖ್ಯಾತ ವೈದ್ಯೆ ಡಾ//ಶಾರದಾ ಶೆಟ್ಟಿ ಇನ್ನಿಲ್ಲ

ನಗರದ ಖ್ಯಾತ ಪ್ರಸೂತಿ ತಜ್ಞೆ ಡಾ//ಶಾರದಾ ಶಾಮಸುಂದರ ಶೆಟ್ಟಿ ಅವರು ಇಂದು ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಸಂಜೆ 5:30ರ ಸುಮಾರಿಗೆ ಕೊನೆಯುಸಿರೆಳೆದರು. ಅವರಿಗೆ 85 ವರ್ಷಗಳಾಗಿದ್ದವು.
ಪುತ್ರ ಖ್ಯಾತ ಕೀಲು-ಮೂಳೆ ತಜ್ಞ ಡಾ//ಸುಭೋಧ್ ಶೆಟ್ಟಿ ಹಾಗೂ ಸೊಸೆ ಖ್ಯಾತ ಪ್ರಸೂತಿ ತಜ್ಞೆ ಡಾ//ರಶ್ಮಿ ಶೆಟ್ಟಿ, ಪುತ್ರಿ ಸಹನಾ ಹಾಗೂ ಅಳಿಯ ಹೆಗಡೆ ಸೇರಿದಂತೆ ಅಪಾರ ಬಂಧು- ಬಳಗವನ್ನು ಅವರು ಅಗಲಿದ್ದಾರೆ.
ನಾಳೆ ದಿ. 8 ರ ಮಧ್ಯಾಹ್ನ 12:3೦ಕ್ಕೆ ಶಿರಮಗೊಂಡನ ಹಳ್ಳಿಯಲ್ಲಿರುವ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ..

ಡಾ// ಶಾರದಾ ಶೆಟ್ಟಿ ಕುರಿತು ಒಂದಷ್ಟು:
ಡಾ// ಶಾರದಾ ಶೆಟ್ಟಿ ಎಂದಾಕ್ಷಣ ನೆನಪಿಗೆ ಬರುವುದು “ಸುರಕ್ಷಿತ ಹೆರಿಗೆ ಹಾಗೂ ಸಿಟಿ ಮೆಡಿಕಲ್ ಸೆಂಟರ್” ಆಸ್ಪತ್ರೆ.
ಯಶಸ್ವಿ ವೈದ್ಯರಾಗಿ, ದಕ್ಷ ಆಡಳಿತಗಾರರಾಗಿ, ಸಾಮಾಜಿಕ ಕಳಕಳಿಯ ಸೇವಾಕರ್ತರಾಗಿ, ಮಹಿಳೆಯರ ಆರೋಗ್ಯದ ಕುರಿತ ಕಾಳಜಿಯುಳ್ಳ ಹಿರಿಯ ಜೀವವಾಗಿ ಅವರು ನಗರಕ್ಕೆ ಹಾಗೂ ನಾಡಿಗೆ ಸಲ್ಲಿಸಿರುವ ಸೇವೆ ಗಣನೀಯ ಹಾಗೂ ಯುವ ಪೀಳಿಗೆಗೆ ಆದರ್ಶನೀಯವಾಗಿತ್ತು.
ಸಿಟಿ ಮೆಡಿಕಲ್ ಸೆಂಟರ್ ಆರಂಭಕ್ಕೂ ಮುನ್ನ ಡಾ//ಶಾರದಾ ಶೆಟ್ಟಿಯವರು ಸಲ್ಲಿಸಿರುವ ಸೇವೆ ಹಾಗೂ ಆಸ್ಪತ್ರೆ ಆರಂಭವಾದ ಬಳಿಕ ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಕಡಿಮೆಯೇನಲ್ಲ. ನನಗೆ ಅಚ್ಚರಿಯೇನೆಂದರೆ ಈ ವಯಸ್ಸಿನಲ್ಲಿಯೂ ಯುವ ವೈದ್ಯರುಗಳನ್ನು ನಾಚಿಸುವಷ್ಟರ ಮಟ್ಟಿಗೆ ಅವರು ಉತ್ಸಾಹಿಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. “ವೈದ್ಯರೆಂದರೆ ಹೀಗಿರಬೇಕು” ಎಂಬುದಕ್ಕೆ ನಮ್ಮ ಮುಂದಿರುವ ಅತ್ಯಂತ ನಂಬಲಾರ್ಹ ಇವರಿದ್ದರು.

ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಜನಿಸಿದ ಡಾ//ಶಾರದಾಶೆಟ್ಟಿಯವರು ದ್ವಿತೀಯ ಪಿಯುಸಿಯ ತನಕ ಮಡಿಕೇರಿಯಲ್ಲಿಯೇ ಓದಿದರು. 1962ರಲ್ಲಿ ಹುಬ್ಬಳ್ಳಿಯ ಕೆ. ಎಂ. ಸಿ ಯಲ್ಲಿ ಎಂ. ಬಿ. ಬಿ. ಎಸ್ ಪದವಿಯನ್ನು, 2968 ರಲ್ಲಿ ಲೂದಿಯಾನದ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ (ಪಂಜಾಬ್ ಯೂನಿವರ್ಸಿಟಿ) ಎಂ. ಡಿ. ಪದವಿಯನ್ನು ಪಡೆದು, 1968ರಲ್ಲಿ ನಗರದ ಜೆ. ಜೆ. ಎಂ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಇದೇ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರೊಫೆಸರ್ ಆಗಿ ನಂತರ 1980 ರಿಂದ 2001 ರ ಸುದೀರ್ಘ ಅವಧಿಯ ತನಕ ಓಬಿಜಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 2001 ಹಾಗೂ 2002 ರಲ್ಲಿ ಇದೇ ಕಾಲೇಜಿನ ಮೆಡಿಕಲ್ ಎಜುಕೇಷನ್ ಯುನಿಟ್ ನ ನಿರ್ದೇಶಕರಾಗಿ, 1990 ರಿಂದ 2000 ದ ತನಕ ಕುವೆಂಪು ವಿಶ್ವವಿದ್ಯಾಲಯದ ಡೀನ್ ಆಗಿಯೂ ಸೇವೆ ಸಲ್ಲಿಸಿ 2002 ನಿವೃತ್ತರಾಗಿದ್ದರು.

1976ರಲ್ಲಿ ದಾವಣಗೆರೆಯಲ್ಲಿ ಓಬಿಜಿ ಸೊಸೈಟಿಯನ್ನು ಆರಂಭಿಸಿ, 1980 ರಿಂದ 1998 ರವರೆಗೆ ಇದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ದಾವಣಗೆರೆಯ ಐಎಂಎ ಅಧ್ಯಕ್ಷರಾಗಿ ಹಾಗೂ ಐಎಂಎ ಬಿಲ್ಡಿಂಗ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದರು.
ಭಾರತದಲ್ಲಿ ನಡೆದಿರುವ ಎಫ್ಓಎಸ್ ಜಿಐನ ಬಹುತೇಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ವಿಷಯವನ್ನು ಮಂಡಿಸಿದ್ದಾರೆ. ಟೋಕಿಯೋ ಮತ್ತು ಸಿಂಗಾಪೂರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಓಬಿಜಿ ಕಾನ್ಫರೆನ್ಸ್ ಗಳಲ್ಲಿಯೂ ಅವರು ಪಾಲ್ಗೊಂಡು ನಗರದ ಕೀರ್ತಿಯನ್ನು ಹೆಚ್ಚಿಸಿದರು.

ದಾವಣಗೆರೆಯಲ್ಲಿ ಎರಡು ಬಾರಿ ರಾಜ್ಯಮಟ್ಟದ ಕೆಎಸ್ ಓಜಿಎ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿರುವ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ಮೈಸೂರು, ಕರ್ನಾಟಕ, ಮಹಾರಾಷ್ಟ್ರ, ಮದ್ರಾಸ್‌, ಗೋವಾ, ಆಂಧ್ರಪ್ರದೇಶಗಳ ವಿಶ್ವವಿದ್ಯಾಲಯಗಳೂ ಸೇರಿದಂತೆ ಕುವೆಂಪು ಮತ್ತು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಎಂ. ಬಿ. ಬಿ. ಎಸ್ ಹಾಗೂ ಎಂ. ಡಿ. ವಿದ್ಯಾರ್ಥಿಗಳ ಪರೀಕ್ಷಾ ವೀಕ್ಷಕರಾಗಿಯೂ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ. ಕೇವಲ ವೈದ್ಯಕೀಯ ಕ್ಷೇತ್ರಕ್ಕಷ್ಟೇ ಸೀಮಿತವಾಗಿರದೆ ಸಮಾಜ ಸೇವೆಯಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದಾವಣಗೆರೆ ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷರಾಗಿ, ವನಿತಾ ಸಮಾಜ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, “ಆಶ್ರಯ ವೃದ್ಧಾಲಯ” ದ ಅಧ್ಯಕ್ಷರಾಗಿ ಯೂ ಸೇವೆ ಸಲ್ಲಿಸುತ್ತಿದ್ದ ಡಾ//ಶಾರದಾಶೆಟ್ಟಿಯವರು ಗ್ರಾಮಾಂತರ ಪ್ರದೇಶಗಳೂ ಸೇರಿದಂತೆ ವಿವಿಧೆಡೆ ಆರೋಗ್ಯ ಶಿಬಿರಗಳನ್ನು ಅದರಲ್ಲೂ, ಮಹಿಳೆಯರಿಗೆ ಸಂಬಂಧಿಸಿದ ಹೆಲ್ತ್ ಕ್ಯಾಂಪ್ ಗಳನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿದ್ದರು. ಅವರು ಅತ್ಯಂತ ಆಸಕ್ತಿಯಿಂದ ಹಾಗೂ ಕಳಕಳಿಯಿಂದ ಸ್ಥಾಪಿಸಿರುವ ವನಿತಾ ವೈದ್ಯೆಯರ ವೇದಿಕೆಯಿಂದ ಪ್ರತಿ 2-3 ತಿಂಗಳಿಗೊಮ್ಮೆಯಾದರೂ ಇಂತಹ ಆರೋಗ್ಯ ಶಿಬಿರಗಳು ನಡೆಯುತ್ತಿರುತ್ತದೆ.

ನಗರದ ಮತ್ತೊಬ್ಬ ಖ್ಯಾತ ಕೀಲು ಮೂಳೆ ತಜ್ಞರಾಗಿದ್ದ ಡಾ//ಶ್ಯಾಮಸುಂದರ ಶೆಟ್ಟಿ ಅವರನ್ನು ವಿವಾಹವಾಗಿದ್ದ ಶಾರದಾ ಶೆಟ್ಟಿಯವರು ಈಗ ತಮ್ಮ ಪತಿಯ ನೆನಪಿನಲ್ಲೇ ತಮ್ಮ ಪುತ್ರ ನಗರದ ಖ್ಯಾತ ಕೀಲು ಮೂಳೆ ತಜ್ಞರಲೊಬ್ಬರಾಗಿರುವ ಡಾ//ಸುಭೋಧ್ ಶೆಟ್ಟಿ ಹಾಗೂ ಸೊಸೆ ಖ್ಯಾತ ವೈದ್ಯೆ ಶ್ರೀಮತಿ ರಶ್ಮಿ ಎಸ್. ಶೆಟ್ಟಿ ಅವರೊಂದಿಗೆ ಸಿ. ಎಂ. ಸಿ ಯಲ್ಲಿ ಇಂದಿಗೂ ಸಕ್ರೀಯರಾಗಿ ಸೇವೆ ಸಲ್ಲಿಸುತ್ತಿದ್ದರು.

ನಗರದ ಬಂಟರ ಸಂಘದ ಸಮುದಾಯ ಭವನವನ್ನು ನಿರ್ಮಿಸುವಲ್ಲಿ ಕೊಡುಗೆ ನೀಡಿರುವ ಡಾ//ಶಾರದಾ ಶೆಟ್ಟಿಯವರಿಗೆ ಪ್ರಚಾರದ ಗೀಳು ಕಡಿಮೆಯೇ. ಆದರೂ ಅವರ ಸೇವೆಯನ್ನು ಗುರುತಿಸಿ ಕೆಲ ಸಂಘ ಸಂಸ್ಥೆಗಳು ನೀಡಿರುವ ಗೌರವವನ್ನು ವಿನಯ ಪೂರ್ವಕವಾಗಿಯೇ ಅವರು ಸ್ವೀಕರಿಸಿದ್ದಾರೆ.
2004 ರಲ್ಲಿ ರಾಷ್ಟ್ರೀಯ ಗೌರವ ಪ್ರಶಸ್ತಿ ಮಹಿಳೆಯರಿಗೆ ಅವರು ಸಲ್ಲಿಸಿರುವ ನಿಸ್ವಾರ್ಥ ಸೇವೆಗಾಗಿ 2011ರಲ್ಲಿ ವನಿತಾ ಸೇವಾ ಪ್ರಶಸ್ತಿ ಹಾಗೂ 57 ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಮಹಾನಗರ ಪಾಲಿಕೆ 2012 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಅವರ ಅನುಪಮ ಸೇವೆಗಾಗಿ ನಗರದ ಪ್ರತಿಷ್ಟಿತ ಸೋಮೇಶ್ವರ ವಿದ್ಯಾಲಯವು 2018 ರ ಸೋಮೇಶ್ವರೋತ್ಸವ ಕಾರ್ಯಕ್ರಮದಲ್ಲಿ “ಸೋಮೇಶ್ವರ ಸಿರಿ ಪ್ರಶಸ್ತಿ”ಯೊಂದಿಗೆ ಅವರನ್ನು ಗೌರವಿಸಿತ್ತು.
ಉತ್ಸಾಹದ ಚಿಲುಮೆಯಾಗಿದ್ದು ಯುವ ವೈದ್ಯರಿಗೆ ಅದರಲ್ಲೂ ಮಹಿಳೆಯರಿಗೆ ಪ್ರೇರಕ ಶಕ್ತಿಯಾಗಿದ್ದ ಡಾ//ಶಾರದಾ ಶೆಟ್ಟಿ ಯವರ ನಿಧನ ನಿಜಕ್ಕೂ ತುಂಬಲಾರದ ಹಾನಿ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಅವರ ಪುತ್ರ ಡಾ//ಸುಭೋಧ್ ಶೆಟ್ಟಿ ಹಾಗೂ ಪುತ್ರಿ ಸಹನಾ ಹೆಗಡೆ ಮತ್ತು ಸೊಸೆ ಶ್ರೀಮತಿ ರಶ್ಮಿ ಶೆಟ್ಟಿ ಸೇರಿದಂತೆ ಅವರ ಕುಟುಂಬ ವರ್ಗದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

Leave a Reply

Your email address will not be published. Required fields are marked *