ತುಂಡು ಇಟ್ಟಿಗೆ ಇಲ್ಲ, ಕಬ್ಬಿಣ ಸಿಮೆಂಟ್‍ನ ಸೋಂಕಿಲ್ಲ ಈ ಪ್ರಕೃತಿ ನಿಸರ್ಗ ಧಾಮದಲ್ಲಿ

ಇದೊಂದು ನಿಸರ್ಗ ಧಾಮ. ಇಲ್ಲಿ ಉಳಿಯುವವರಿಗೆ ಸಿಮೆಂಟ್‍ನ ಕಟ್ಟಡವಿಲ್ಲ, ಸುಸಜ್ಜಿತ= ಹವಾನಿಯಂತ್ರಿತ ಕೊಠಡಿಗಳೂ ಇಲ್ಲ. ಪ್ರಕೃತಿದತ್ತವಾಗಿ ದೊರೆಯುವ ಮರ, ತೆಂಗಿನ ಗರಿ, ನದಿಯಲ್ಲಿ ಬೆಳೆಯುವ ಕಡ್ಡಿಗಳು, ನಾರಿನಿಂದ ತಯಾರಿಸಿದ ಹಗ್ಗ ಇಷ್ಟನ್ನು ಮಾತ್ರ ಬಳಸಿ ನಿರ್ಮಿಸಿರುವ ಕುಠೀರಗಳೇ ಇಲ್ಲಿ ಆಶ್ರಯ ತಾಣಗಳು!

ಹೌದು,…ಕಬ್ಬಿಣ, ಸಿಮೆಂಟ್ ಬಳಸದೇ, ಕನಿಷ್ಠ ಒಂದು ಮೊಳೆಯನ್ನೂ ಉಪಯೋಗಿಸದೇ ಈ ಕುಠೀರಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಈ ಕುಠೀರಗಳಿಗೆ ಇರುವ ಬಾಗಿಲಿಗೆ ಚಿಲಕ (ಬೋಲ್ಟ್)ಗಳೂ ಸಹ ಮರದಿಂದ ತಯಾರಿಸಿದ ಅಗುಳಿಗಳು!
ರಾತ್ರಿ ಮಲಗಿದಾಗ ಕ್ರಿಮಿ ಕೀಟಗಳಿಂದ ಸುರಕ್ಷಿತವಿರಲಿ ಎಂಬ ಕಾರಣಕ್ಕೆ ಕುಟೀರದೊಳಗೆ ಎರಡು ಅಡಿಯಷ್ಟು ಎತ್ತರದ ಅಟ್ಟಣಿಗೆಯನ್ನು (ಹಾಸು ನೆಲ) ನಿರ್ಮಿಸಲಾಗಿದೆ. ವಿಶೇಷವೆಂದರೆ ಪೂರ್ಣವಾಗಿ ಮರದಿಂದಲೇ ತಯಾರಿಸಿರುವ ನಾಲ್ಕು ಗಾಲಿಗಳ ಬಸ್ಸಿನ ಆಕಾರದ ಇಬ್ಬರು ಮಾತ್ರ ಉಳಿಯಬಹುದಾದ ಮತ್ತು ಈ ನಿಸರ್ಗಧಾಮದ ಆವರಣದಲ್ಲಿ ನನಗಿಷ್ಟವಾದ ಕಡೆ ಇದನ್ನು ತಳ್ಳಿಕೊಂಡು ಹೋಗಿ ವಾಸ್ತವ್ಯ ಮಾಡಬಹುದಾಗಿದೆ. ಈ ಪ್ರಕೃತಿ ನಿಸರ್ಗ ಧಾಮದ ಸುತ್ತ ಮರದ ವ್ಯವಸ್ಥಿತ ಬೇಲಿಯನ್ನು ಹಾಕಲಾಗಿದ್ದು ಇದರಿಂದ ಪ್ರಾಣಿಗಳ ಭಯವೂ ಇಲ್ಲ. ಪ್ರವೇಶ ಬಾಗಿಲಿನಲ್ಲಿ ದಿನದ 24 ಗಂಟೆಗಳು ಕಾವಲುಗಾರನೊಬ್ಬ ಇದ್ದೇ ಇರುತ್ತಾನೆ.
ಚಿತ್ರದಲ್ಲಿ ನನ್ನ ಪತ್ರಕರ್ತ ಮಿತ್ರರಾದ (ಎಡದಿಂದ) ದಿ ಹಿಂದೂ ಪತ್ರಿಕೆಯ ಅಂದಿನ ದಾವಣಗೆರೆ ಜಿಲ್ಲಾ ವರದಿಗಾರ ಹೆಚ್.ಎಸ್.ಎನ್.ಕುಮಾರ್, ನಗರವಾಣಿಯ ಸಹ ಸಂಪಾದಕ ಬಿ.ಎನ್. ಮಲ್ಲೇಶ್ (ನಂತರದ ಚಿತ್ರ ನನ್ನದು) ಹಾಗೂ ಮಲ್ನಾಡವಾಣಿ ಸಂಪಾದಕ ಏಕಾಂತಪ್ಪ ಅವರೊಂದಿಗೆ ರಾತ್ರಿಯ ಭೋಜನ ಸವಿಯುತ್ತಿರುವುದನ್ನು ಕಾಣಬಹುದು.

ಇಲ್ಲಿ ಗಮನಿಸಬಹುದಾದದ್ದು ನಾವು ಕುಳಿತಿರುವುದು ಪುಟ್ಟ ಮರದ ದಿಮ್ಮಿಗಳು ಹಾಗೂ ನಮ್ಮ ಡೈನಿಂಗ್ ಟೇಬಲ್ ಎಂದರೆ ಅದಕ್ಕಿಂತ ಸ್ವಲ್ಪ ಎತ್ತರವಾದ ಮರದ ದಿಮ್ಮಿಗಳು.
ಚಿತ್ರದಲ್ಲಿ ನಾನೊಂದು ಉಯ್ಯಾಲೆಯ ಮೇಲೆ ನಿಂತಿದ್ದೇನೆ. ಅದೂ ಸಹ ಕೇವಲ ಹಗ್ಗ ಹಾಗೂ ಮರದ ಹಲಗೆಯೊಂದನ್ನು ಬಳಸಿ ಸಿದ್ಧಪಡಿಸಿರುವುದು. ಇಲ್ಲೂ ಸಹ ಒಂದು ಮೊಳೆಯನ್ನು ಬಳಸಿಲ್ಲ!


ಶ್ರೀ ಕ್ಷೇತ್ರ ಕೊಲ್ಲೂರಿಗೆ ಸಮೀಪ ಇರುವ ಒಂದು ಪ್ರಕೃತಿ ಸಹಜವಾದ ಪುಟ್ಟ ಗ್ರಾಮ ನಿಟ್ಟೂರು. ನಿಟ್ಟೂರಿನಿಂದ ಮೂರ್ನಾಲ್ಕು ಕಿ.ಮೀ.ಗಳಷ್ಟು ಒಳ ಹೋದರೆ ಸಿಗುತ್ತದೆ ಈ ಸುಂದರ ನಿಸರ್ಗಧಾಮ. ಅದಕ್ಕೇ ಇರಬೇಕು ಇದಕ್ಕೆ “ಪ್ರಕೃತಿ ನಿಸರ್ಗಧಾಮ” ಎಂಬ ಹೆಸರು.

ಸುಂದರ ಕೊಡಚಾದ್ರಿ ತಪ್ಪಲಲ್ಲಿರುವ ಈ ನಿಸರ್ಗಧಾಮವನ್ನು ಮಂಜುನಾಥ್ ಎಂಬುವರು ನಿರ್ವಹಿಸುತ್ತಿದ್ದರು. ಯೋಗ, ಪ್ರಕೃತಿ ಚಿಕಿತ್ಸೆಯಲ್ಲಿ ಹೆಚ್ಚು ಆಸಕ್ತಿ ಇದ್ದಂತಹ ಆ ವ್ಯಕ್ತಿ ನಾವು ಅಲ್ಲಿದ್ದ ಒಂದೂವರೆ ದಿನದವರೆಗೂ ಜೊತೆಯಲ್ಲಿ ಇದ್ದು ಎಲ್ಲವನ್ನೂ ವಿವರಿಸಿದರು. ಕೊಡಚಾದ್ರಿ ತಲುಪಲು ಹಾಗೂ
ಕೊಡಚಾದ್ರಿಯಲ್ಲಿ ಉಳಿಯುವ ವ್ಯವಸ್ಥೆಯನ್ನೂ ಅವರೇ ಮಾಡಿಕೊಟ್ಟಿದ್ದರು. ಹಾಗೆಂದು ನೀವು ನೋಡೇ ಇರದಷ್ಟು ಅತ್ಯದ್ಭುತ ಹಾಗು ಮನೋಹರ ತಾಣ ಎಂದು ನಾನು ಹೇಳುತ್ತಿಲ್ಲ. ಆದರೆ ನಮ್ಮ ನಾಡಲ್ಲೇ ಇರುವ ಮತ್ತು ಕಡಿಮೆ ವೆಚ್ಚದಲ್ಲೇ ಒಂದೆರಡು ದಿನ ಕಳೆಯಲು ಅಡ್ಡಿಯಿಲ್ಲ.

ನಿನ್ನೆ ನನ್ನ ಹಳೆಯ ಫೋಟೊಗಳನ್ನು ನೋಡುವಾಗ ಕಣ್ಣಿಗೆ ಬಿದ್ದವು ಈ ಚಿತ್ರಗಳು. ಸುಂದರ ಕ್ಷಣಗಳನ್ನು ಸವಿದ ನೆನಪು ಬಂತು. ಮಿತ್ರರೇ ಅಂದಾಜು ಎಂಟು-ಹತ್ತು ವರ್ಷಗಳ ಹಿಂದಿನ ಚಿತ್ರಗಳಿವು. ಮತ್ತೆ ಅಲ್ಲಿಗೆ ಹೋಗಿ ಬರಲು ಸಾಧ್ಯವಾಗಿಲ್ಲ. ಹತ್ತಿರವೇ ಇರುವ ಈ ಸುಂದರ ತಾಣಕ್ಕೆ ನೀವೇಕೆ ಒಂದೆರಡು ದಿನದ ಪ್ರವಾಸ ಹಮ್ಮಿಕೊಳ್ಳಬಾರದು?

Leave a Reply

Your email address will not be published. Required fields are marked *