ತೀವ್ರಗೊಳ್ಳುತ್ತಿರುವ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕೊಲೆ ಪ್ರಕರಣ ಪ್ರತಿಭಟನೆ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೊಲೆ ಪ್ರಕರಣದ ಅಪರಾಧಿಗಳನ್ನು ಪತ್ತೆ ಮಾಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟ ದಿನ ಕಳೆದಂತೆ ತೀವ್ರ ಸ್ವರೂಪ ಪಡೆಯುತ್ತಿದ್ದು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಕಲ್ಲು ತೂರಾಟ ಘಟನೆ ನಡೆಯಿತು.

ತೀವ್ರತೆ ಪಡೆದ ಪ್ರತಿಭಟನೆ

ಮನವಿ ಸಲ್ಲಿಸಲು ಬಂದವರನ್ನೆಲ್ಲ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರದಲ್ಲಿಯೇ ಪೊಲೀಸರು ತಡೆದು ನಿಲ್ಲಿಸಿದ್ದರು. ಈ ವೇಳೆ ಆಕ್ರೋಶಗೊಂಡ ಕೆಲವರು ಪೊಲೀಸರ ಮೇಲೆ ನೀರಿನ ಪ್ಯಾಕೇಟ್ಗಳನ್ನು, ಕಲ್ಲುಗಳನ್ನು ಹಾಗೂ ಚಪ್ಪಲಿಗಳನ್ನು ತೂರಿದರು. ಪೊಲೀಸರಿಗೆ ಸಣ್ಣ ಪ್ರಮಾಣದ ಗಾಯಗಳಾದವು. ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಗುರು ಅವರ ಕಣ್ಣಿನ ಮೇಲೆ ಪೆಟ್ಟಾಯಿತು. ಮೊದಲೇ ನಿರ್ಧರಿಸಿದಂತೆ ಜಿಲ್ಲಾ ವಿಶ್ವಕರ್ಮ ಸಮಾಜವು ಮಾಣಿಕ ಪ್ರಭು ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿತು. ಇದರೊಂದಿಗೆ ಜೈನ್ ಸಮಾಜದ ಮಹಿಳೆಯರು, ಅಲ್ಪಸಂಖ್ಯಾತರ ಸಮುದಾಯದ ಮಹಿಳೆಯರು, ಎಐಡಿಎಸ್ಒ, ಎಸ್ಎಫ್ಐ, ಎಐಡಿವೈಒ ಹಾಗೂ ಎಬಿವಿಪಿ ಹಾಗೂ ಯುವ ಕಾಂಗ್ರೆಸ್ ಸೇರಿದಂತೆ ಅನೇಕ ಸಂಘಟನೆಗಳು ಮೆರವಣಿಗೆ ನಡೆಸಿದವು .

ಕನ್ನಡ ಚಲನಚಿತ್ರ ನಟ ಭುವನ ಮತ್ತು ಹರ್ಷಿಕಾ ಪೂಣಚ್ಚ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಪರಾಧಿಗಳ ಪತ್ತೆಗೆ ಒತ್ತಾಯಿಸಿದರು. ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ ಅವರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಅಸ್ವಸ್ಥರಾಗಿದ್ದರಿಂದ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಜಿಲ್ಲಾಧಿಕಾರಿ ಶರತ್. ಬಿ ಅವರು ಸ್ಥಳಕ್ಕೆ ಧಾವಿಸಿದ್ದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಪೊಲೀಸರು ಲಘು ಲಾಠಿ ಬೀಸಿ ಗುಂಪನ್ನು ಚದುರಿಸಿದರು. ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
“ಕ್ಯಾಂಡೆಲ್ ಸುಡುವ ಬದಲು
ಕಾಮುಕರನ್ನು ಸುಡಿ”ಲೇಖನವನ್ನು janamiditha fb ಯಲ್ಲಿ ನೋಡಬಹುದು.

Leave a Reply

Your email address will not be published. Required fields are marked *