ತಮ್ಮ ಕುಟುಂಬದ ಉದ್ದಾರಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ;ಮೋದಿ ಕಿಡಿ

ಚಿತ್ರದುರ್ಗ : ( ಏ.09) :2019 ರ ಲೋಕಸಭಾ ಚುನಾವಣೆಗೆ  ಇಂದು  ಕರ್ನಾಟಕ  ಅಧಿಕೃತವಾಗಿ ಸಜ್ಜಾದಂತಾಗಿದೆ. 2019 ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಪ್ರಧಾನ ಮಂತ್ರಿ ಮೋದಿ ಮಾತಾನಾಡಿದ್ದಾರೆ. 

ಚಿತ್ರದುರ್ಗದಲ್ಲಿ  ಬಿಜೆಪಿಯ ವಿಜಯ ಸಂಕಲ್ಪ ರ್ಯಾಲಿ  ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ,ಕನ್ನಡದಲ್ಲಿ ಭಾಷಣ ಆರಂಭಿಸುವ  ಮೂಲಕ ಜನರ ಮನಗೆದ್ದರು .ಜನತೆಗೆ ಕನ್ನಡದಲ್ಲೇ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ ಮೋದಿ, ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರನ್ನು  ನೆನೆದು ಭಾಷಣ  ಆರಂಭಿಸಿದರು .

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ‌ಸರ್ಕಾರದ ಕಾರ್ಯ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಮೋದಿ ,ಮೈತ್ರಿ ಸರ್ಕಾರ ಭ್ರಷ್ಟಾಚಾರ ಕುಟುಂಬ  ಹಿತಾಸಕ್ತಿಯಲ್ಲಿ ಮುಳುಗಿ ಹೋಗಿದ್ದು,ರಾಜ್ಯದ ಅಭಿವೃದ್ಧಿಯನ್ನು  ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು .

ಕಾಂಗ್ರೆಸ್ ದೇಶದ ಅಖಂಡತೆಗೆ  
ಅಪಾಯಕಾರಿ ಯಾಗಿದ್ದು  ,ಇಂತಹ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ  ಜೆಡಿಎಸ್ ರಾಜ್ಯದ ಮತ್ತು ದೇಶದ ಜನತೆಗೆ ಮೋಸ ಮಾಡಿದೆ ಎಂದು ಮೋದಿ ಆರೋಪಿಸಿದರು. 

ವಾಯು ಸೇನೆ ದಾಳಿಯಿಂದಾಗಿ ಪಾಕಿಸ್ತಾನಕ್ಕೆ ನೋವಾದರೆ ಕಾಂಗ್ರೆಸ್ ಜೆಡಿಎಸ್ ನಾಯಕರು  ಕಣ್ಣೀರು ಸುರಿಸಿದರು . ಎಂದು ಮೋದಿ ಈ ವೇಳೆ ಲೇವಡಿ  ಮಾಡಿದರು ಕಾಂಗ್ರೆಸ್ – ಜೆಡಿ ಎಸ್  ನಾಯಕರ ವೋಟ್ ಬ್ಯಾಂಕ್ ಕರ್ನಾಟಕದಲ್ಲಿದೆಯೋ  ಅಥವಾ ಪಾಕಿಸ್ತಾನದಲ್ಲಿದೆಯೋ  ಎಂದು ಮೋದಿ ಈ ವೇಳೆ ಪ್ರಶ್ನಿಸಿದರು .

ಇತ್ತೀಚೆಗೆ ನಡೆದ ಐಟಿ ದಾಳಿ ಕುರಿತು 
ಪರೋಕ್ಷವಾಗಿ  ಪ್ರಸ್ತಾಪಿಸಿದ ಪ್ರಧಾನಿ ಮೋದಿ , ತಮ್ಮ ಭ್ರಷ್ಟಾಚಾರವನ್ನು ಮರೆಮಾಚಲು ಸಿ ಎಂ ಆದಿಯಾಗಿ ಮೈತ್ರಿ  ಸರ್ಕಾರದ ನಾಯಕರು  ಪ್ರತಿಭಟನೆ ಮಾಡಿದ್ದು ನಾಚಿಕೆಗೇಡು ಎಂದು ಕಿಡಿಕಾರಿದರು .

ಸಿಕ್ಕ 5 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳಲ್ಲಿ ತಾತ, ಇಬ್ಬರು ಮೊಮ್ಮಕ್ಕಳು ಸ್ವರ್ಧಿಸುತ್ತಿದ್ದು ,ಕುಟುಂಬ ರಾಜಕಾರಣದ ನಗ್ನ ಕುಣಿತವನ್ನು ಕರ್ನಾಟಕದ ಜನ ತಿರಸ್ಕರಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಪ್ರಧಾನಿ ಮೋದಿ ಹೇಳಿದರು . 

ದೇಶದ ಅಭಿವೃದ್ಧಿ ಆಂದೋಲನದಲ್ಲಿ ಕರ್ನಾಟಕದ ಮಹತ್ವದ ಪಾಲುದಾರ ರಾಜ್ಯವಾಗಿ ಹೊರಹೊಮ್ಮಲಿದೆ  ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತ ಪಡಿಸಿದರು .

ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಮೋದಿ , ಸದೃಢ ಕರ್ನಾಟಕ, ಸದೃಢ ಭಾರತಕ್ಕಾಗಿ ಮತ ಚಲಾಯಿಸಿ ಎಂದು ಮನವಿ ಮಾಡಿದರು .

ಚಿತ್ರದುರ್ಗದ ಭಾಷಣದ ಬಳಿಕ ಪ್ರಧಾನಿ ಮೋದಿ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಕರ್ನಾಟಕದಲ್ಲಿ ಏ.18 ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು , ಏ .23 ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ. ಅದರಂತೆ ಮೇ. 23 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

Leave a Reply

Your email address will not be published. Required fields are marked *