ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಆತನನ್ನು ಆಕೆ ಅಸಹನೀಯವಾಗಿ ನೋಡಿದಳು…. ಆದರೆ

ಅದೊಂದು ಏರ್ ಇಂಡಿಯಾದ ವಿಮಾನ. ಎಲ್ಲಾ ವಿಮಾನಗಳಲ್ಲಿ ಇರುವಂತೆ ಅದರಲ್ಲೂ ಎಕ್ಸಿಕ್ಯೂಟಿವ್ ಕ್ಲಾಸ್ ಅಥವಾ ಫಸ್ಟ್ ಕ್ಲಾಸ್, ಎಕನಾಮಿಕ್ ಕ್ಲಾಸ್ ಎಂಬ ವಿಭಾಗಗಳಿವೆ. ಎಕಾನವಿ ಕ್ಲಾಸಿನ ಇಬ್ಬರು ಕುಳಿತುಕೊಳ್ಳಲು ಆಗುವಂತಹ ಆಸನದಲ್ಲಿ ಸುಂದರ ಮಹಿಳೆಯೊಬ್ಬಳು ಅಸೀನಳಾಗಿದ್ದಳು. ತನ್ನ ಬಳಿ ಇದ್ದ ಲ್ಯಾಪ್‌ಟಾಪ್ ನಿಂದ ಕೆಲಸದಲ್ಲಿ ಮಗ್ನಳಾಗಿದ್ದಳು. ಕಿವಿಗೆ ಸಿಕ್ಕಿಸಿಕೊಂಡ ವೈಯರ್ ನಿಂದ ಸುಶ್ರಾವ್ಯ ಸಂಗೀತ ಕೇಳಿಬರುತ್ತಿತ್ತು ಎನಿಸುತ್ತದೆ. ಆ ಸಂಗೀತಕ್ಕೆ ತಕ್ಕಂತೆ ತನ್ನ ತಲೆಯನ್ನು ಅಲ್ಲಾಡಿಸುತ್ತಾ…. ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಳು.

ಅವಳ ಪಕ್ಕದಲ್ಲಿದ್ದ ಇನ್ನೊಂದು ಆಸನದಲ್ಲಿ ಅದೂವರೆಗೂ ಯಾರೂ ಬಂದಿರದ ಕಾರಣ ಅವಳ ಏಕಾಂತಕ್ಕೆ ಯಾವ ಅಡೆತಡೆಯೂ ಇರಲಿಲ್ಲ. ಆಗಾಗ ತನ್ನ ಲ್ಯಾಪ್‌ಟಾಪ್ ನಿಂದ ತಲೆಯೆತ್ತಿ ಪಕ್ಕದ ಸೀಟಿಗೆ ದೃಷ್ಟಿ ಹರಿಸುತ್ತಿದ್ದಳು. ತನ್ನ ಪಕ್ಕದ ಖಾಲಿ ಆಸನಕ್ಕೆ ಬಂದು ಕುಳಿತುಕೊಳ್ಳುವ ವ್ಯಕ್ತಿಯ ಬಗ್ಗೆ ಅವಳಲ್ಲಿ ಇರಬಹುದಾದ ಕುತೂಹಲವನ್ನು ಅವಳ ಈ ನಡೆಯೇ ತೋರಿಸುತ್ತಿತ್ತು. ತನ್ನ ಏಕಾಂತಕ್ಕೆ ಭಂಗ ತರಬಹುದಾದ ಆ ವ್ಯಕ್ತಿಯ ಆಗಮನದ ನಿರೀಕ್ಷೆಯಲ್ಲಿ ಆಕೆ ಇದ್ದಂತೆ ಭಾಸವಾಗುತ್ತಿತ್ತು.

ಇನ್ನೇನು ವಿಮಾನ ಹೊರಡಲು ಹತ್ತು ನಿಮಿಷ ಬಾಕಿ ಇರುವಾಗಲೂ ತನ್ನ ಪಕ್ಕದ ಆಸನ ಖಾಲಿಯಾಗಿರುವುದನ್ನೇ ಕಂಡ ಯುವತಿಯ ಮುಖದಲ್ಲಿ ಸಮಾಧಾನವಿತ್ತು. ತನ್ನ ಏಕಾಂತಕ್ಕೆ ಭಂಗ ತರುವ ವ್ಯಕ್ತಿಯ ಆಗಮನ ಬಹುಶಃ ಆಗಲಿಕ್ಕಿಲ್ಲವೆಂದೇ ಆಕೆಯ ಒಳ ಮನಸ್ಸು ನುಡಿದರೂ… ಕಣ್ಣುಗಳು ಮಾತ್ರ ಘಳಿಗೆಗೊಮ್ಮೆ ಪಕ್ಕದ ಸೀಟಿನತ್ತಲೂ, ವಿಮಾನದ ಬಾಗಿಲಿನತ್ತಲೂ ಚಲಿಸುತ್ತಿದ್ದವು.

ಇದೇ ಗೊಂದಲದಲ್ಲಿ ಇದ್ದವಳು ಒಂದೆರಡು ಕ್ಷಣ ತನ್ನ ಕೆಲಸದಲ್ಲಿ ಮಗ್ನಳಾದಾಗ… ಯಾರೋ ಪಕ್ಕದಲ್ಲಿ ಕುಳಿತಂತೆ ಭಾಸವಾಯಿತು. ಆಕೆಯ ನಿರೀಕ್ಷೆ ಅಂತ್ಯಗೊಂಡಿತ್ತು. ಆ ಆಸನಕ್ಕೆ ಬಂದ ವ್ಯಕ್ತಿ ಯಾರಿರಬಹುದು, ಹೇಗಿರಬಹುದು ಎಂದು ಕತ್ತು ಹೊರಳಿಸಿ ನೋಡಿದ ಆಕೆಗೆ ಕೊಂಚ ಅಸಮಾಧಾನ ಮೂಡಿತು.

ಮಾಸಲು ಬಟ್ಟೆ, ಬಟ್ಟೆಯ ಮೇಲೆ ಹೊದ್ದಿದ್ದ ಶಾಲೂ ಸಹ ಕೊಳಕಾಗಿತ್ತು. ಶಾಲಿನ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳು, ಕಾಲಲ್ಲಿ ಕಪ್ಪು ಬಣ್ಣದ ಶೂಗಳು, ಕೆದರಿದ ತಲೆ ಕೂದಲುಗಳನ್ನು ಹೊಂದಿದ್ದ ವ್ಯಕ್ತಿ ಆಕೆಯ ಪಕ್ಕದಲ್ಲಿ ಬಂದು ಕುಳಿತಾಗ ಆಕೆಯ ಅಸಮಧಾನ ಇನ್ನೂ ಹೆಚ್ಚಾಗತೊಡಗಿತು. ಆತನನ್ನೊಮ್ಮೆ ಉದಾಸೀನದಿಂದ ನೋಡಿ ಮತ್ತೆ ಲ್ಯಾಪ್‌ಟಾಪ್ ನಲ್ಲಿ ಮುಳುಗಿದಳು.

ಪ್ರಯಾಣದ ಮಧ್ಯೆ ಆಕೆ ಗಗನಸಖಿಯ ಬಳಿ ತನ್ನ ಮೆಚ್ಚಿನ ಕೋಕ್ ಹಾಗೂ ಬರ್ಗರ್ ಗೆ ಬೇಡಿಕೆಯನ್ನಿಟ್ಟು ತರಿಸಿಕೊಂಡಳು. ಪಕ್ಕದ ವ್ಯಕ್ತಿಯೆಡೆಗೆ, “ಇಂತಹದ್ದನ್ನೆಲ್ಲ ನಿನ್ನ ಜೀವಮಾನದಲ್ಲಿ ತಿಂದಿರುವೆಯಾ?” ಎಂಬಂಥ ನೋಟವನ್ನೆಸೆದು ತಿನ್ನತೊಡಗಿದಳು.

ಆತನಿಗೂ ಬಹುಶಃ ಹಸಿವು ಆದಂತೆ ಭಾಸವಾಗಿ ತಾನೂ ಜೊತೆಯಲ್ಲಿ ತಂದಿದ್ದ ಕಿತ್ತಳೆ ಹಣ್ಣುಗಳನ್ನು ಬ್ಯಾಗಿನಿಂದ ತೆಗೆಯುತ್ತಾನೆ.

ಹಣ್ಣನ್ನು ಸುಲಿಯಲು ಸಹ ಆತ ಒದ್ದಾಡುತ್ತಾನೆ‌. ಒಂದೇ ಕೈಯಿಂದ ಸುಲಿಯುವಾಗ ಕಿತ್ತಳೆಯ ರಸ ಆಕೆಗೆ ಒಂದೆರಡು ಬಾರಿ ಸಿಡಿಯುತ್ತದೆ. ಸುಲಿಯುತ್ತಿದ್ದ ಕಿತ್ತಳೆ ಅಪ್ಪಚ್ಚಿಯಾದಂತಾಗಿ ಅದನ್ನು ನೋಡಲೂ ಸಹ ಆಕೆಗೆ ಅಸಹ್ಯವಾಗುತ್ತದೆ.

ಎಷ್ಟು ಹೊತ್ತು ಎಲ್ಲವನ್ನೂ ಸಹಿಸಿಯಾಳು? ಆಕೆಯ ಸಹನೆಯ ಕಟ್ಟೆ ಮೀರಿತು. ಗಗನಸಖಿಯನ್ನು ಕರೆದವಳೇ “ನನ್ನನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಿ” ಎಂದು ಮನವಿ ಮಾಡುತ್ತಾಳೆ. ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯನ್ನು ತೋರಿಸುತ್ತಾ…. “ಇಂತಹ ಅಸಹ್ಯ ಮನುಷ್ಯನನ್ನು ಸಹಿಸಲು ನನ್ನಿಂದ ಸಾಧ್ಯವಿಲ್ಲ” ಎಂದು ದೂರುತ್ತಾಳೆ. ಅವಳ ಬೇಡಿಕೆಗೆ ಮಣಿದ ಗಗನಸಖಿ ಕೇವಲ ಐದು ನಿಮಿಷದ ಸಮಯಾವಕಾಶ ನೀಡುವಂತೆ ವಿನಂತಿಸಿ ತೆರಳುತ್ತಾಳೆ.

ಸರಿಯಾಗಿ ಐದೇ ನಿಮಿಷಕ್ಕೆ ವಿಮಾನದ ಧ್ವನಿವರ್ಧಕದಲ್ಲಿ ಗಗನಸಖಿಯ ಮಾತು ಕೇಳಲಾರಂಭಿಸುತ್ತದೆ. “ದಯಮಾಡಿ ನೀವು ಇತ್ತ ಬನ್ನಿ. ಫಸ್ಟ್ ಕ್ಲಾಸ್ ನಲ್ಲಿ ಒಂದು ಸ್ಥಳ ನೀಡುತ್ತಿದ್ದೇವೆ”. ಎಂದು.

ಇದನ್ನು ಕೇಳಿ ಸಂತೋಷಗೊಂಡ ಮಹಿಳೆ ತನ್ನ ಕೈಯಲ್ಲಿದ್ದ ಬ್ಯಾಗ್ ಹಿಡಿದು ಅತ್ತ ತೆರಳಲು ಹತ್ತು ಹೆಜ್ಜೆ ಹಾಕುತ್ತಾಳೆ…. ಅಷ್ಟರಲ್ಲಿ ಧ್ವನಿವರ್ಧಕದಲ್ಲಿ ಮತ್ತೊಂದು ಅನೌನ್ಸಮೆಂಟ್ ಬರುತ್ತದೆ. ” ಮೇಡಂ, ನಾವೂ ಕರೆದದ್ದು ನಿಮ್ಮನ್ನಲ್ಲ. ನಿಮ್ಮ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿಯನ್ನು” ಎಂದು. ಮಹಿಳೆಯ ಜೊತೆಗೆ ವಿಮಾನದಲ್ಲಿ ಕುಳಿತ ಇತರರೆಲ್ಲರೂ ಈ ಹೇಳಿಕೆಯಿಂದ ಚಕಿತರಾಗುತ್ತಾರೆ. ಒಬ್ಬ ಭಿಕ್ಷುಕನಂತೆ ಕಾಣುವ, ಅನಾಗರೀಕನಂತೆ ಹಣ್ಣು ಸುಲಿದ ಹಾಗೂ ಪಕ್ಕದ ಸಹ ಪ್ರಯಾಣಿಕರಿಗೆ ಮುಜುಗರ ಉಂಟು ಮಾಡಿದ ಈ ವ್ಯಕ್ತಿಗೆ ಎಕ್ಸಿಕ್ಯುಟಿವ್ ಕ್ಲಾಸ್ ನಲ್ಲಿ ಸೀಟೇ? ಎಂಬ ಅರ್ಥದಲ್ಲಿ.

ಆಗ ಆ ವ್ಯಕ್ತಿ ಆಸನದಿಂದ ಎದ್ದು ಕಷ್ಟಪಟ್ಟು ತನ್ನ ಒಂದೇ ಕೈಯಿಂದ ಚೀಲವನ್ನು ತೆಗೆದುಕೊಳ್ಳುವಾಗ… ಆತ ಮೈಮೇಲೆ ಹೊದ್ದಿದ್ದ ಶಾಲೂ ಕೆಳಗೆ ಬೀಳುತ್ತದೆ. ಅದನ್ನು ಕಾಣುತ್ತಿದ್ದಂತೆಯೇ, ವಿಮಾನದಲ್ಲಿರುವ ಪ್ರಯಾಣಿಕರೆಲ್ಲರೂ ಆಶ್ಚರ್ಯಗೊಂಡು…. “ಅಯ್ಯೋ ಛೇ!” ಎಂಬ ಉದ್ಗಾರ ತೆಗೆಯುತ್ತಾರೆ. ಏಕೆಂದರೆ, ಆತನಿಗೆ ಇದ್ದುದು ಒಂದೇ ಕೈ. ಅವನು ಇದು ಯಾವುದನ್ನೂ ಗಮನಿಸದೆ ತನ್ನ ಪಾಡಿಗೆ ತಾನೂ ನಡೆದು ಎಕ್ಸಿಕ್ಯುಟಿವ್ ಕ್ಲಾಸ್ ನತ್ತ ಚಲಿಸುತ್ತಾನೆ.

ಆಗ ಗಗನಸಖಿ ಮತ್ತೆ ಧ್ವನಿವರ್ಧಕದಲ್ಲಿ ಹೇಳುತ್ತಾಳೆ. “ಮಿತ್ರರೇ, ಈಗ ನಿಮ್ಮ ಮುಂದೆ ಎಕ್ಸಿಕ್ಯುಟಿವ್ ಕ್ಲಾಸ್ ನತ್ತ ನಡೆದು ಬರುತ್ತಿರುವ ವ್ಯಕ್ತಿ ಯಾರೆಂದು ನಿಮಗೆ ತಿಳಿದಿದೆಯೇ? ಮೊನ್ನೆಯಷ್ಟೆ ನಡೆದ ಕಾರ್ಗಿಲ್ ಯುದ್ಧದಲ್ಲಿ 25 ಶತ್ರು ಸೈನಿಕರನ್ನು ಏಕಾಂಗಿಯಾಗಿ ಕೆಚ್ಚೆದೆಯಿಂದ ಹೊಡೆದುರುಳಿಸಿ, ನಮ್ಮನ್ನು (ದೇಶವನ್ನು) ರಕ್ಷಿಸಿದಾತ. ಗ್ರಾನೈಡ್ ದಾಳಿಯಲ್ಲಿ ತನ್ನ ಒಂದು ಕೈ ಕಳೆದುಕೊಂಡರೂ ಸಹ ಭಾರತೀಯ ಸೈನಿಕರನ್ನು ಈ ಶತ್ರುಗಳಿಂದ ರಕ್ಷಿಸಿ ಜೀವಂತವಾಗಿ ಮರಳಿ ಬಂದ ಭಾರತೀಯ ವೀರ ಯೋಧ. ಆತನಿಗೆ ತಾನೂ ಎಕ್ಸಿಕ್ಯುಟಿವ್ ಕ್ಲಾಸ್ ನಲ್ಲಿ ಪಡೆದ ಸೀಟನ್ನು ಮಹಾನುಭಾವರೊಬ್ಬರು ಬಿಟ್ಟುಕೊಟ್ಟು, ಅವರು ಎಕನಾಮಿಕ್ ಕ್ಲಾಸ್ ಗೆ ಬರುತ್ತಿದ್ದಾರೆ. ಈ ಇಬ್ಬರಿಗೂ ನಿಮ್ಮ ಒಂದು ಕರತಾಡನ ಬೇಕು. ಈ ಮೂಲಕ ಅವರಿಗೆ ನಮ್ಮ ಗೌರವವನ್ನು ಸಮರ್ಪಿಸೋಣ” ಎಂದು.

ವಿಮಾನದಲ್ಲಿ ಚಪ್ಪಾಳೆಗಳ ಸುರಿಮಳೆ, ಇದನ್ನೆಲ್ಲ ನೋಡುತ್ತಾ ನಿಂತ ಆ ಮಹಿಳೆಯ ಕಣ್ಣುಗಳು ಹನಿಗೂಡಿದವು. ಇಂತಹ ವೀರ, ಹೆಮ್ಮೆಯ ಯೋಧನ ಪಕ್ಕದಲ್ಲಿ ಕುಳಿತು ಪ್ರಯಾಣಿಸಲು ತನಗೆ ದೊರಕಿದ ಸದಾವಕಾಶವನ್ನು ತನ್ನ ಮೂರ್ಖತನದಿಂದಾಗಿ ಕಳೆದುಕೊಂಡೆ ಎಂದು ಮರಗುತ್ತಾಳೆ ಆಕೆ.

ವಿಮಾನದಲ್ಲೇ ಆಕೆ ಕಣ್ಣೀರಿಡುತ್ತಾಳೆ. ತಾನು ಈ ರೀತಿಯ ವರ್ತನೆಯಿಂದಾಗಿ ಆ ಯೋಧನಿಗೆ ಅಗೌರವ ತೋರಿಸಿದೆ ಎಂದು ಮೈಕಿನಲ್ಲಿಯೇ ಹೇಳಿ ತನ್ನ ವರ್ತನೆಗೆ ಕ್ಷಮೆಯಾಚಿಸಿತ್ತಾಳೆ.

ಜೈ ಜವಾನ್ ಎಂದು ಆಕೆ ಘೋಷಣೆ ಹಾಕುತ್ತಾಳೆ. ಮತ್ತೊಮ್ಮೆ ವಿಮಾನದಲ್ಲಿ ಈ ಘೊಷಣೆಗಳು ಮೊಳಗುತ್ತವೆ.

✍ ಸಾಧಕರ ಡೈರಿಯಿಂದ…..

Leave a Reply

Your email address will not be published. Required fields are marked *